“ನನ್ನೆಲ್ಲ ಗೆಲುವುಗಳ ಬೆನ್ನ ಹಿಂದೆ ನಿನ್ನ ದೊಡ್ಡ ನಗೆಯ ಕೈವಾಡ ಇತ್ತು’ ಎಂದು ಒಂದೇ ಉಸಿರಲ್ಲಿ ನಿನ್ನೆದುರು ಹೇಳಬೇಕೆಂಬ ಹಪಹಪಿ ಕಾಡುತ್ತಿದೆ. ಆ ಒಂದು ನಗೆ ನನಗೆ ದಕ್ಕದೇ ಹೋಗಿದ್ದರೆ ನಾನು ನಿಂತ ನೆಲದ ಹುಡಿಯಾಗಿ ಬಿಡುತ್ತಿದ್ದೆನೇನೋ?
ಆದ ಅವಮಾನಗಳನ್ನೆಲ್ಲ ಬೆನ್ನಿಗೆ ಕಟ್ಟಿಕೊಂಡು ಉಮ್ಮಳಿಸಿ ಬರುತ್ತಿದ್ದ ದುಃಖಕ್ಕೆ ಸಾಂತ್ವನದ ಅಡ್ಡಗೋಡೆ ಕಟ್ಟಿ, ಎಲ್ಲ ಮೇರೆಗಳ ಮೀರಿ ಇಣುಕುತ್ತಿದ್ದ ಕಣ್ಣೀರನ್ನು ನೆಲಕ್ಕೆ ಕೆಡವಿ ಸಾಧಿಸಿಯೇ ತೀರುತ್ತೇನೆಂದು ಶಪಥಗೈದು, ಬರಿಗೈಯಲ್ಲಿ ಬಿರಬಿರನೆ ಮನೆಯಿಂದ ನಡೆದು ಬಂದಿದ್ದೆ. ಜೇಬಿನಲ್ಲಿ ಚಿಲ್ಲರೆ ಬಿಟ್ಟರೆ ಏನೆಂದರೆ ಏನೂ ಇರಲಿಲ್ಲ; ಆತ್ಮವಿಶ್ವಾಸ ಎದೆಯುಬ್ಬಿಸಿ ನಗುತ್ತಿತ್ತು. ಹೀಗೆ ಸಾಗಿತ್ತು ಯಾರಿಗೂ ಬೇಡವಾದವನ ಹೊಸತೊಂದು ಪಯಣ.
ಬಸ್ಸಿನಲ್ಲಿ ಕೂತವನಿಗೆ ಆದ ಘಟನೆಯ ನೆನಪು ಬೇಡಬೇಡವೆಂದರೂ ನುಗ್ಗಿ ಬರುತ್ತಿತ್ತು. ಅಂದು ಅಣ್ಣ ತರಾಟೆಗೆ ತೆಗೆದುಕೊಂಡಿದ್ದ. “ಹೀಗೆ ಉಡಾಫೆಯಿಂದ ಪಡ್ಡೆ ಹುಡುಗರ ಬೆನ್ನತ್ತಿ ಎಷ್ಟು ದಿನ ತಿರುಗಾಡುತ್ತೀಯಾ? ಅಪ್ಪ-ಅಮ್ಮ ಇಲ್ಲ ಅಂತ ಇಷ್ಟು ಮುದ್ದಿನಿಂದ ಸಾಕಿದ್ದೇ ತಪ್ಪಾಯ್ತು. ಒಂಚೂರೂ ಜವಾಬ್ದಾರಿ ಇಲ್ಲ ನಿಂಗೆ. ವಿದ್ಯೆಯಂತೂ ತಲೆಗೆ ಹತ್ತಲಿಲ್ಲ, ಯಾವುದಾದರೂ ಕೆಲಸ ಮಾಡಿ ಜೀವನ ಮಾಡಿಕೋ ಅಂತ ಬುದ್ಧಿ ಹೇಳಿದರೂ ನೀನು ಕೇರೇ ಮಾಡಲಿಲ್ಲ. ನನಗೂ ಸಂಸಾರ ಇದೆ. ಎಷ್ಟು ದಿನ ನಿನ್ನನ್ನು ತೆಪ್ಪಗೆ ಸಹಿಸಿಕೊಂಡಿರಲಿ? ಇನ್ನು ಮೇಲೆ ನೀನು ಒಂದರೆಕ್ಷಣ ಮನೇಲಿರಬೇಡ. ಎಲ್ಲಾದ್ರೂ ದುಡಿದು ತಿನ್ನು ಹೋಗು’ ಎಂದು ಮುಖಕ್ಕೆ ಹೊಡೆದಂತೆ ಹೇಳಿ ಬಾಗಿಲಿಕ್ಕಿಕೊಂಡು ಬಿಟ್ಟಿದ್ದ. ಆಗಲೇ ನಾನಂದುಕೊಂಡೆ, ಎಲ್ಲಾದ್ರೂ ಕೆಲಸ ಮಾಡಿ ಏನಾದ್ರೂ ಸಾಧಿಸಬೇಕು ಅಂತ. ಸಿಟ್ಟಿನಿಂದ ಮನೆ ಬಿಟ್ಟು ಬಂದಿದ್ದೆ. ಎಲ್ಲಿಗೆ ಹೋಗಬೇಕು ಅಂತ ಕೂಡ ಗೊತ್ತಿರಲಿಲ್ಲ.
ಬಸ್ಸಿನ ಮೂಲೆಗೆ ಕೂತು ಶೂನ್ಯವನ್ನೇ ದಿಟ್ಟಿಸುತ್ತಿದ್ದವನಿಗೆ ನಿನ್ನ ದೊಡ್ಡ ನಗೆ ಕಿರಿಕಿರಿ ಉಂಟು ಮಾಡುತ್ತಿತ್ತು. ಗೆಳತಿಯರ ಮಧ್ಯೆ ತಮಾಷೆ ಮಾಡುತ್ತಾ ಕಿಲಕಿಲನೆ ನಗುತ್ತಿದ್ದವಳ ಮೋಹಕ ಸೆಳೆತ ಮನಸಿಗೆ ಗಾಳ ಹಾಕಿತ್ತು. ತುಂಬು ಚಂದಿರನಂಥ ಮುಖ, ನೀಳ ಕೇಶರಾಶಿ, ನಕ್ಕರೆ ಸುತ್ತ ಬೆಳದಿಂಗಳು. ಎಲ್ಲ ಸೋತವನಂತೆ ಹ್ಯಾಪು ಮೋರೆ ಹಾಕಿ ಕೆದರಿದ ಕೂದಲಲ್ಲಿ ಬೆರಳಾಡಿಸುತ್ತಿದ್ದ ನನಗೆ ನಿನ್ನ ಓರೆನೋಟ, ದೊಡ್ಡ ನಗೆ ತೆಕ್ಕೆಗಟ್ಟಲೆ ಆತ್ಮಬಲ ತುಂಬಿತ್ತು. ಬದುಕು ಇಷ್ಟು ಸುಂದರ ಎಂದು ಗೊತ್ತೇ ಇರಲಿಲ್ಲ.
ಅಂದಿನಿಂದ ಇಂದಿನವರೆಗೆ ಕೆಲಸ ಬಿಟ್ಟು ಬೇರೇನೂ ಗೊತ್ತಿರಲಿಲ್ಲ ನನಗೆ. ಹಾಲು ಮಾರಿದೆ, ಪೇಪರ್ ಹಂಚಿದೆ, ಕಾವಲು ಕಾದೆ, ಸಿಮೆಂಟು ಕಲಸಿದೆ, ಕಲ್ಲು ಹೊತ್ತೆ, ಫ್ಯಾಕ್ಟರಿಗಳಲ್ಲಿ ದುಡಿದೆ. ಒಂದಾ… ಎರಡಾ..? ಕೆಲಸಗಳಿಗೇ ನಾಚಿಕೆಯಾಗಿರಬೇಕು ಬಿಡು. ಬಿದ್ದವ ಧೂಳು ಕೊಡವಿ, ಎಲ್ಲರೂ ಅಚ್ಚರಿಪಡುವಂತೆ ಮೇಲೆದ್ದು ನಿಂತುಬಿಟ್ಟೆ.
ಅಣ್ಣ ಆಶ್ಚರ್ಯಪಟ್ಟಿದ್ದ. ಇದೆಲ್ಲಾ ಹೇಗೆ ಸಾಧ್ಯ ಅಂತ ನನಗೇ ಒಂದೊದಾÕರಿ ಅನ್ನಿಸಿದ್ದಿದೆ. ಆದರೆ ನಿನ್ನ ನಗೆ, ಅದರೊಳಗಿನ ಉತ್ಸಾಹದ ಸೆಲೆ ಇಷ್ಟು ದಿನ ನನ್ನೊಳಗೆ ಗಟ್ಟಿಯಾಗಿ ನಿಂತು, ಯಶಸ್ಸಿನ ತುತ್ತತುದಿ ಏರಲು ಕಾರಣವಾಯಿತು ಎಂಬುದಷ್ಟೇ ಸತ್ಯ. ಆ ದಿನದಿಂದ ಎಲ್ಲ ಕಡೆ ನನ್ನ ನಗೆಯೊಡತಿಯನ್ನು ಅರಸಿ ಅರಸಿ ದಣಿದಿದ್ದೇನೆ. ಎಷ್ಟೋ ಬಸ್ಸುಗಳ ಹತ್ತಿ ಇಳಿದು ನಿನ್ನ ತುಂಬುನಗೆ ಎಲ್ಲಿಯಾದರೂ ಕಂಡೀತಾ ಎಂದು ಕಾತರಿಸಿದ್ದೇನೆ.
“ನನ್ನೆಲ್ಲ ಗೆಲುವುಗಳ ಬೆನ್ನ ಹಿಂದೆ ನಿನ್ನ ದೊಡ್ಡ ನಗೆಯ ಕೈವಾಡ ಇತ್ತು’ ಎಂದು ಒಂದೇ ಉಸಿರಲ್ಲಿ ನಿನ್ನೆದುರು ಹೇಳಬೇಕೆಂಬ ಹಪಹಪಿ ಕಾಡುತ್ತಿದೆ. ಆ ಒಂದು ನಗೆ ನನಗೆ ದಕ್ಕದೇ ಹೋಗಿದ್ದರೆ ನಾನು ನಿಂತ ನೆಲದ ಹುಡಿಯಾಗಿ ಬಿಡುತ್ತಿದ್ದೆನೇನೋ? ಕಣ್ಣೊಳಗೆ ಆಸೆಯ ನಕ್ಷತ್ರಗಳು ಮಿನುಗಿ, ಎದೆಯ ಬಾನಲ್ಲಿ ಭರವಸೆಯ ಬೆಳಕು ಸುರಿದು, ಬದುಕಿನ ದಾರಿಯಲ್ಲೀಗ ನೂರೆಂಟು ಬಣ್ಣಗಳ ಕಾಮನಬಿಲ್ಲಿನ ಕಾವಲು. ಕನಸುಗಳ ಕೈಹಿಡಿದು ಜತನದಿ ಪೊರೆಯಲು ನಿನ್ನ ದೊಡ್ಡನಗೆಯ ನಿರೀಕ್ಷೆಯಲ್ಲಿ ನಾನಿದ್ದೇನೆ. ಸಿಗುತ್ತೀಯಲ್ಲವೆ…?
ನಾಗೇಶ್ ಜೆ. ನಾಯಕ