Advertisement

ಕಲ್ಯಾಣ ಆಯ್ತು, ಈಗ ಕಿತ್ತೂರು ಕರ್ನಾಟಕ?

11:13 PM Oct 09, 2019 | Lakshmi GovindaRaju |

ಧಾರವಾಡ: ಹೈದ್ರಾಬಾದ್‌ ಕರ್ನಾಟಕವನ್ನು “ಕಲ್ಯಾಣ ಕರ್ನಾಟಕ’ ಎಂದು ಸಿಎಂ ಯಡಿಯೂರಪ್ಪ ಸರ್ಕಾರ ಘೋಷಣೆ ಮಾಡಿ ಆ ಭಾಗಕ್ಕೆ ಕನ್ನಡದ ದೇಶಿತನದ ಸ್ಪರ್ಶ ನೀಡಿ ತಿಂಗಳಾಯಿತು. ಇದೀಗ ಮುಂಬೈ ಪ್ರಾಂತ್ಯಕ್ಕೆ ಸೇರಿದ, ಕನ್ನಡಿಗರ ಪ್ರದೇಶವಾಗಿರುವ ಉತ್ತರ ಕರ್ನಾಟಕ ಎಂದು ಕರೆಸಿಕೊಳ್ಳುವ ಬೆಳಗಾವಿ ಪ್ರಾದೇಶಿಕ ವಿಭಾಗವನ್ನು “ಕಿತ್ತೂರು ಕರ್ನಾಟಕ’ ಎಂದು ನಾಮಕರಣ ಮಾಡಬೇಕು ಎನ್ನುವ ಕೂಗು ಜೋರಾಗಿದೆ.

Advertisement

ಸರ್ಕಾರ ಈ ಬೇಡಿಕೆಗೆ ಕೂಡಲೇ ಸ್ಪಂದಿಸಬೇಕೆಂದು ಈ ಭಾಗದ ಸ್ವಾಮೀಜಿಗಳು, ಸಾಹಿತಿಗಳು, ರೈತ ಮುಖಂಡರು, ಸ್ವಾತಂತ್ರ ಹೋರಾಟಗಾರರು ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರುತ್ತಿದ್ದಾರೆ. ಹೈ-ಕ ಪ್ರದೇಶ 12ನೇ ಶತಮಾನದ ಕಲ್ಯಾಣ ರಾಜ್ಯದ ಭಾಗವಾಗಿದ್ದರಿಂದ ಶರಣ ಸಂಸ್ಕೃತಿಯ ಪ್ರತೀಕವೂ ಕಲ್ಯಾಣ ರಾಜ್ಯದ ಪರಿಕಲ್ಪನೆಯಾಗಿದ್ದರಿಂದ ಆ ಪ್ರದೇಶಕ್ಕೆ ಕಲ್ಯಾಣ ಕರ್ನಾಟಕ ಎಂದೇ ಕರೆಯಬೇಕು ಎನ್ನುವ ಹಕ್ಕೊತ್ತಾಯ ಕೇಳಿ ಬಂದಿತ್ತು.

ಹೀಗಾಗಿ, ಸೆ.17 ಹೈ- ಕ ವಿಮೋಚನಾ ದಿನಾಚರಣೆಯಂದೇ ಈ ಭಾಗವನ್ನು ಕಲ್ಯಾಣ ಕರ್ನಾಟಕ ಎಂದು ಯಡಿಯೂರಪ್ಪ ಸರ್ಕಾರ ಅಧಿಕೃತವಾಗಿ ಘೋಷಣೆ ಮಾಡಿತು.ಇದೀಗ ಮುಂಬೈ ಕರ್ನಾಟಕ ಅಥವಾ ಉತ್ತರ ಕರ್ನಾಟಕ ಎಂದು ಕರೆಯಲ್ಪಡುವ 7 ಜಿಲ್ಲೆ ಗಳಾದ ಬೆಳಗಾವಿ, ವಿಜಯಪುರ, ಬಾಗಲಕೋಟೆ, ಧಾರವಾಡ, ಗದಗ, ಹಾವೇರಿ ಮತ್ತು ಉತ್ತರ ಕನ್ನಡ ಜಿಲ್ಲೆಯನ್ನೊಳಗೊಂಡ ಭೂಪ್ರದೇಶವನ್ನು ಕಿತ್ತೂರು ಕರ್ನಾಟಕವೆಂದು ಕರೆಯ ಬೇಕೆಂದು ಈ ಭಾಗದ ಹಿರಿಯ ಸಾಹಿತಿಗಳು ಮತ್ತು ಸಾಂಸ್ಕೃತಿಕ ದಿಗ್ಗಜರು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

ಕಿತ್ತೂರು ಕರ್ನಾಟಕವೇ ಏಕೆ?: ಬೆಳಗಾವಿ ಗಡಿ ವಿವಾದ ಮೇಲಿಂದ ಮೇಲೆ ಸದ್ದು ಮಾಡುತ್ತಲೇ ಇರುತ್ತದೆ. ಆದರೆ, ಕನ್ನಡಿಗರು ಮತ್ತು ಕನ್ನಡತನದ ದಾಸ್ಯದ ಸಂಕೇತ ಎನ್ನುವಂತೆ ಈ ಭಾಗದಲ್ಲಿನ ಅನೇಕ ಸರ್ಕಾರಿ ಕಾಗದ ಪತ್ರಗಳು, ಖಾಸಗಿ ಸಂಸ್ಥೆಗಳಲ್ಲಿನ ವ್ಯವಹಾರಗಳು, ದಾಖಲೆಗಳು ಈಗಲೂ ಕೂಡ ಮುಂಬೈ ಕರ್ನಾಟಕ ಎನ್ನುವ ಹೆಸರಿನಲ್ಲಿಯೇ ಪ್ರಚಲಿತದಲ್ಲಿವೆ. ಹೈದ್ರಾಬಾದ್‌ ಸಂಸ್ಥಾನಕ್ಕೆ ಸೇರಿದ್ದ ಮತ್ತು ಸ್ವಾತಂತ್ರದ ನಂತರ ಮಹಾರಾಷ್ಟ್ರ ರಾಜ್ಯಕ್ಕೆ ಸೇರ್ಪಡೆಗೊಂಡ ಪ್ರದೇಶಕ್ಕೆ ಅಂದಿನ ಮುಂಬೈ ಪ್ರಾಂತ್ಯ ಸರ್ಕಾರವೇ ತಮ್ಮ ಅಪ್ಪಟ ಮರಾಠಾ ಸಂಸ್ಕೃತಿಯ ಪ್ರತೀಕ ಎನ್ನುವಂತೆ ಈ ಭಾಗಕ್ಕೆ ಮರಾಠವಾಡಾ ಎಂದು ಹೆಸರಿಟ್ಟರು.

ಈ ಪ್ರಾಂತ್ಯದಲ್ಲಿ ಔರಂಗಾಬಾದ, ಬೀಡ, ಹಿಂಗೋಲಿ, ಜಲನಾ, ನಾಂದೇಡ, ಲಾತೂರ್‌, ಓಸ್ಮನಾಬಾದ ಮತ್ತು ಪ್ರಭಾನಿ ಎಂದು ಎಂಟು ಜಿಲ್ಲೆಗಳಿದ್ದು ಔರಾಂಗಾಬಾದ ವಿಭಾಗಕ್ಕೆ ಸೇರಿವೆ. 1950ರ ದಶಕದಿಂದಲೂ ತಮ್ಮ ಭಾಷಾ ಅಸ್ಮಿತೆ ಸಲುವಾಗಿ ಅಲ್ಲಿನ ಸರ್ಕಾರ ಈ ಭಾಗದಲ್ಲಿ ಸ್ಥಾಪಿಸಿದ ಅನೇಕ ವಿಶ್ವವಿದ್ಯಾಲ ಯಗಳು, ಸಂಶೋಧನಾ ಸಂಸ್ಥೆಗಳು, ಅಭಿವೃದ್ಧಿ ಯೋಜನೆಗಳಿಗೆ ಮರಾಠವಾಡಾ ಯೋಜನೆ ಎಂದೇ ಹೆಸರಿಸುತ್ತ ಬಂದಿದೆ. ಹೀಗಾಗಿ, ಇದೀಗ ಯಾರೂ ಕೂಡ ಈ ಪ್ರದೇಶ ವನ್ನು ಹೈದ್ರಾಬಾದ್‌ ಮಹಾರಾಷ್ಟ್ರ ಎಂದು ಕರೆಯುತ್ತಿಲ್ಲ. ಇದೇ ಮಾದರಿ ಕಲ್ಯಾಣ ಕರ್ನಾಟಕಕ್ಕೆ ಅನ್ವಯವಾಗಿದ್ದು, ಇದನ್ನು ಕಿತ್ತೂರು ಕರ್ನಾಟಕಕ್ಕೂ ವಿಸ್ತರಿಸಬೇಕು ಎಂಬುದು ಈ ಭಾಗದ ಜನರ ಹಕ್ಕೊತ್ತಾಯ ಆಗಿದೆ.

Advertisement

ಗಂಡು ಮೆಟ್ಟಿದ ನಾಡು: ಕಿತ್ತೂರಿನ ಸ್ವಾತಂತ್ರ್ಯ ಸಂಗ್ರಾಮ ಮತ್ತು ನಂತರ ನಡೆದ ಸ್ವಾತಂತ್ರ ಚಳವಳಿಗಳು ಈ ಪ್ರದೇಶವನ್ನು ಗಂಡು ಮೆಟ್ಟಿದ ನಾಡು ಎಂದು ಕರೆಯು ವಂತೆ ಮಾಡಿವೆ. ಸ್ವಾತಂತ್ರ್ಯ ಚಳವಳಿಗೆ ಇಡೀ ಕರ್ನಾಟಕ ದ ಲ್ಲಿಯೇ ಮೊದಲು ಸ್ಪಂದಿಸಿದ್ದು ಇದೇ ಭಾಗ. ಕರ್ನಾಟಕ ಏಕೀಕರಣ ಚಳವಳಿ, ರೈತ ಚಳವಳಿ, ಬಂಡಾಯ, ದಲಿತ ಚಳವಳಿ, ಗೋಕಾಕ ಚಳವಳಿ, ಕಳಸಾ- ಬಂಡೂರಿ ಹೋರಾಟ… ಹೀಗೆ ಎಲ್ಲಾ ಚಳವಳಿಗಳಿಗೂ ಇಲ್ಲಿ ಸ್ಫೂರ್ತಿ ಯಾಗಿ ನಿಂತಿರುವಂತದ್ದು ಕಿತ್ತೂರಿನ ಕ್ರಾಂತಿ. ಹೀಗಾಗಿ, ಈ ಪ್ರದೇಶಕ್ಕೆ ಕಿತ್ತೂರು ಕರ್ನಾಟಕವೇ ಸೂಕ್ತ ಎನ್ನುತ್ತಾರೆ ಇತಿಹಾಸಕಾರರು ಮತ್ತು ಸಂಶೋಧಕರು.

ಕಿತ್ತೂರು ಉತ್ಸವದಲ್ಲೇ ಘೋಷಿಸಲಿ?: ಕಲ್ಯಾಣ ಕರ್ನಾಟಕ ನಾಮಕರಣಕ್ಕಾಗಿ ಸೆ.17ರ ಹೈದ್ರಬಾದ್‌ ಕರ್ನಾಟಕ ವಿಮೋಚನಾ ದಿನವನ್ನು ಸರ್ಕಾರ ಅಧಿಕೃತವಾಗಿ ಬಳಸಿಕೊಂಡಿತ್ತು. ಇದೀಗ ಪ್ರತಿವರ್ಷ ಅ.23ರಂದು ರಾಣಿ ಚೆನ್ನಮ್ಮ ತನ್ನ ಸೈನ್ಯದೊಂದಿಗೆ ಥ್ಯಾಕರೆಯನ್ನು ಕೊಂದ ದಿನವನ್ನು ಕಿತ್ತೂರು ಯುದ್ಧದ ವಿಜಯೋತ್ಸವ ದಿನವಾಗಿ ಆಚರಿಸಲಾಗುತ್ತದೆ. ಇದೇ ದಿನವೇ ಕಿತ್ತೂರು ಉತ್ಸವ ನಡೆಯುತ್ತದೆ. ಈ ಸಂದರ್ಭದಲ್ಲಿ ಸರ್ಕಾರ ಈ ಭಾಗಕ್ಕೆ ಕಿತ್ತೂರು ಕರ್ನಾಟಕ ಎಂದು ಘೋಷಣೆ ಮಾಡಲು ಈ ಭಾಗದ ಜನಪ್ರತಿನಿಧಿಗಳು ತೆರೆಮರೆಯಲ್ಲಿ ಪ್ರಯತ್ನ ನಡೆಸಿದ್ದಾರೆ.

ಈ ಪ್ರದೇಶಕ್ಕೆ ಕಿತ್ತೂರು ಕರ್ನಾಟಕ ಎಂದೇ ನಾಮಕರಣ ಮಾಡಬೇಕು. ಇದರಿಂದ ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಸೇರಿದಂತೆ ಬ್ರಿಟಿಷರ ವಿರುದ್ಧ ಹೋರಾಡಿದ ಈ ಭಾಗದ ಎಲ್ಲ ವೀರ ಕನ್ನಡಿಗರಿಗೂ ಗೌರವ ಕೊಟ್ಟಂತಾಗುತ್ತದೆ.
-ಡಾ.ಎಂ.ಚಿದಾನಂದಮೂರ್ತಿ, ಹಿರಿಯ ಸಂಶೋಧಕರು

ಈಗಲೂ ಸರ್ಕಾರಿ ಅಧಿಕಾರಿಗಳು, ಜನರೂಢಿಯಲ್ಲಿ ಈ ಭಾಗವನ್ನು ಮುಂಬೈ ಕರ್ನಾಟಕ ಎಂದೇ ಕರೆಯಲಾಗುತ್ತಿದೆ. ಕನ್ನಡತನ ಬಿಂಬಿಸುವುದಕ್ಕಾಗಿಯಾದರೂ ಸರಿ ಈ ಭಾಗವನ್ನು ಕಲ್ಯಾಣ ಕರ್ನಾಟಕ ಮಾದರಿಯಲ್ಲಿ ಕಿತ್ತೂರು ಕರ್ನಾಟಕ ಎಂದೇ ಅಧಿಕೃತವಾಗಿ ಘೋಷಣೆ ಮಾಡಬೇಕು.
-ಡಾ.ಚೆನ್ನವೀರ ಕಣವಿ, ನಾಡೋಜ ಕವಿ

* ಬಸವರಾಜ ಹೊಂಗಲ್‌

Advertisement

Udayavani is now on Telegram. Click here to join our channel and stay updated with the latest news.

Next