ಕುಂದಾಪುರ ತಾಲೂಕಿನ ಶಿರೂರು ಸಮೀಪದಲ್ಲಿರುವ ಈ ಕೊಸಳ್ಳಿ ಜಲಪಾತ ಆಕರ್ಷಕವಾಗಿದೆ. ಕಣ್ಣು ಹಾಯಿಸಿದಷ್ಟು ದೂರಕ್ಕೆ ಕಾಣುವ ಹಚ್ಚ ಹಸುರಿನ ಕಾಡು, ಜಲಪಾತದಿಂದ ಚಿಮ್ಮುವ ಹನಿಗಳು, ಜಲಪಾತ ದಾರಿ ಮಧ್ಯೆ ಸಿಗುವ ಹತ್ತಾರು ತೊರೆಗಳು ಪ್ರಕೃತಿ ಪ್ರಿಯರನ್ನು ಮೈಮರೆಸುತ್ತದೆ.
Advertisement
ಎಲ್ಲಿದೆ ಜಲಪಾತಉಡುಪಿಯಿಂದ 80 ಕಿ.ಮೀ. ದೂರದಲ್ಲಿ ಶಿರೂರು ಎಂಬ ಗ್ರಾಮ ಸಿಗುತ್ತದೆ. ಇಲ್ಲಿಂದ ತೂದಳ್ಳಿ ರಸ್ತೆಯಲ್ಲಿ 8 ಕಿ.ಮೀ. ಪೂರ್ವಾಭಿಮುಖವಾಗಿ ಸಾಗಬೇಕು. ಬಳಿಕ 4 ಕಿ.ಮೀ. ಕಾಲ್ನಡಿಗೆಯ ಕಾಡುದಾರಿಯಲ್ಲಿ ಸಾಗಿದಾಗ ಕೊಸಳ್ಳಿ ಜಲಪಾತ ಕಾಣಸಿಗುತ್ತದೆ. ನೀರವ ಕಾಡಿನ ನಡುವೆ ಭೋರ್ಗರೆವ ಜಲರಾಶಿ, ಪಕ್ಷಿಗಳ ಕಲರವ ಆನಂದ ಮೂಡಿಸುತ್ತವೆ.
ಕಳೆದೊಂದು ವಾರದಿಂದ ಈ ಭಾಗದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಈ ಕಾರಣ ಜಲಪಾತ ಸೌಂದರ್ಯ ಇನ್ನಷ್ಟು ವೃದ್ಧಿಸಿದೆ. ನೂರಾರು ಅಡಿ ಎತ್ತರದಿಂದ ಧುಮುಕುವ ಕೊಸಳ್ಳಿ ಅಬ್ಬಿ ಜಲಪಾತ ಎರಡು ಹಂತದಲ್ಲಿ ಕಾಣಿಸುತ್ತದೆ. ಜಲಪಾತ ಮೂಲಕ ಹರಿಯುವ ನೀರು ಸಾವಿರಾರು ಎಕರೆ ಕೃಷಿ ಭೂಮಿಗೆ ಆಸರೆಯೂ ಹೌದು. ಬಳಿಕ ಅದು ಸಂಕದಗುಂಡಿ ಮೂಲಕ ಅರಬ್ಬಿ ಸಮುದ್ರ ಸೇರುತ್ತದೆ.
Related Articles
ಮಳೆಗಾಲದಲ್ಲಿ ಜಲಪಾತ ಸನಿಹಕ್ಕೆ ಹೋಗುವುದು ಸಾಧ್ಯವಿಲ್ಲ. ಜಲಪಾತಕ್ಕೆ ಸಾಗುವ ಕಲ್ಲುಗಳು ಜಾರುವುದರಿಂದ ತೀರಾ ಅಪಾಯಕಾರಿಯಾಗಿವೆ. ಈ ಹಿಂದೆ ದುರ್ಘಟನೆಗಳೂ ನಡೆದಿದ್ದು ಮೂವರು ಪ್ರಾಣ ಕಳೆದುಕೊಂಡಿದ್ದರು. ಕಾಲೇಜು ವಿದ್ಯಾರ್ಥಿಗಳು ಗುಂಪುಗುಂಪಾಗಿ ಬರುವುದರಿಂದ ಜಾಗ್ರತೆ ಬೇಕು. ಅರಣ್ಯ ಇಲಾಖೆಯ ವತಿಯಿಂದ ಹಾಗೂ ಜೆಸಿಐ ವತಿಯಿಂದ ಪ್ರವಾಸಿಗರಿಗೆ ಎಚ್ಚರಿಕೆಯ ಫಲಕಗಳನ್ನು ಅಳವಡಿಸಲಾಗಿದೆ.
Advertisement
– ಅರುಣಕುಮಾರ್ ಶಿರೂರು