Advertisement
ವಸ್ತ್ರವಿನ್ಯಾಸಕ್ಕೆ ಒಂದು ಚರಿತ್ರೆಯಿದೆ. ಮನುಷ್ಯ ಕಾಡಿನಿಂದ ನಾಡಿಗೆ ಬರುತ್ತಿದ್ದಂತೆ ಆತನ ಜೀವನ ಶೈಲಿ ಬದಲಾಗುತ್ತ ಬಂದಿತು. ಮೊದಲು ಬಟ್ಟೆ ಧರಿಸುವುದು ಆತನ/ಆಕೆಯ ಮೂಲಭೂತ ಆವಶ್ಯಕತೆಯಾಗಿತ್ತು. ಆದರೆ, ನಿಧಾನಕ್ಕೆ ಇದು ಪ್ರತಿಷ್ಠೆಯ ಅಥವಾ ಸೌಂದರ್ಯದ ಪ್ರತೀಕವಾಗಲಾರಂಭಿಸಿತು. ನಾನೂ “ಬದಲಾವಣೆಯೇ ಸತ್ಯ’ ಎಂದು ನಂಬಿದವಳು. ಹಾಗಾಗಿಯೇ ಜೀವನದ ರೀತಿನೀತಿಗಳು ಬದಲಾದಂತೆ ಧರಿಸುವ ಬಟ್ಟೆಯ ಸ್ವರೂಪಗಳೂ ಬದಲಾಗಬೇಕೆಂಬ ಮಾತನ್ನು ಒಪ್ಪುತ್ತೇನೆ. ಇಂಥ ಬದಲಾವಣೆಯನ್ನು ತಡೆಯುವುದು ಅಸಾಧ್ಯ. ಈ ಬದಲಾವಣೆಯ ಫಲಿತವನ್ನು ಇಂದು ನಾವು ವೈವಿಧ್ಯಮಯ ವಿನ್ಯಾಸದ ಬಟ್ಟೆಗಳಲ್ಲಿ ಕಾಣುತ್ತೇವೆ.
Related Articles
ಹೆಣ್ಣು ಧರಿಸುವ ಬಟ್ಟೆಗಳೇ ಆಕೆಯ ನಡವಳಿಕೆಯನ್ನು ತಿಳಿಸುತ್ತವೆ ಅಂತ ಅಥವಾ ಆಕೆ ಧರಿಸುವ ದಿರಿಸು ಗಂಡುಗಳನ್ನು ಪ್ರಚೋದಿಸುತ್ತದೆ ಎಂಬುದು ಮುಖ್ಯವಾದ ಒಂದು ಆರೋಪ. ಹೆಣ್ಣಿನ ಉಡುಪಿನಲ್ಲಿ ಸಮಾಜದ ಮಾನ-ಮರ್ಯಾದೆಗಳ ಚೌಕಟ್ಟನ್ನು ಹುಡುಕುವ ಎಲ್ಲರಿಗೂ ನನ್ನದೊಂದು ಚಿಕ್ಕ ಪ್ರಶ್ನೆ- ಮನುಷ್ಯರೆಲ್ಲರನ್ನು ಆವರಿಸಿರುವ ಚರ್ಮ ಒಂದೇ ಅಲ್ಲವೆ? ಅದರಲ್ಲಿ ಗಂಡು-ಹೆಣ್ಣೆಂಬ ಭೇದ ಯಾಕೆ? ಗಂಡಿನ ಸಂದರ್ಭದಲ್ಲಿ ಇಲ್ಲದ ಪ್ರಚೋದನೆ ಹೆಣ್ಣಿನ ಸಂದರ್ಭಕ್ಕಾಗುವಾಗ ಯಾಕೆ ಉಂಟಾಗುತ್ತದೆ? ನಿಜವಾದ ಪ್ರಚೋದನೆ ಇರುವುದು ಧರಿಸುವ ದಿರಿಸಿನಲ್ಲಿಯೋ ಅಥವಾ ನೋಡುವ ಕಣ್ಣಿನಲ್ಲಿಯೊ?
Advertisement
ಈ “ಪ್ರಚೋದನಾಕಾರಿ’ ಎಂಬುದು ಆಯಾಯ ಕಾಲಘಟ್ಟಕ್ಕೆ, ಮಾನಸಿಕ ಸ್ಥಿತಿಗೆ ಸಂಬಂಧಿಸಿದ ಪದವೆಂದು ನನ್ನ ಅನಿಸಿಕೆ. ಆದಿಮಾನವನ ಕಾಲದಿಂದ ಬದಲಾದ ವಸ್ತ್ರ ವಿನ್ಯಾಸದ ಬಗ್ಗೆ ತಿಳಿದಿರುವ ನಮಗೆ “ಪ್ರಚೋದನಾಕಾರಿ’ ಪದವು ತುಂಬ ಬಾಲಿಶ ಎನ್ನಿಸಬೇಕಲ್ಲವೆ? ತನ್ನ “ಅನ್ನಿಸುವಿಕೆ’ಯನ್ನು ಇನ್ನೊಬ್ಬರ ಮೇಲೆ ಹೊರಿಸುವ ಮಾಧ್ಯಮಗಳಾಗಿ “ಪ್ರಚೋದನಕಾರಿ’, “ನಡವಳಿಕೆ’ ಮುಂತಾದ ಪದಗಳನ್ನು ಬಳಸುತ್ತಾರೆ. ಒಂದು ಪ್ರದೇಶದಲ್ಲಿ ಒಂದು ಸಂದರ್ಭದಲ್ಲಿ ತಪ್ಪಾಗಿ ಕಾಣಿಸಿದ ವಸ್ತ್ರವಿನ್ಯಾಸ ಬೇರೊಂದು ಸಂದರ್ಭದಲ್ಲಿ ಸಹಜವಾದ ವಸ್ತ್ರವಾಗಿರುವುದು ನಮಗೆಲ್ಲ ತಿಳಿದಿದೆ. ಹಾಗಾದರೆ, ಇದು ನೋಡುವವನ ಮನಸ್ಥಿತಿ ಮತ್ತು ಸಂದರ್ಭವನ್ನು ಸೂಚಿಸುತ್ತದೆಯೇ ಹೊರತು ಧರಿಸುವವರು ಅದಕ್ಕೆ ಹೊಣೆಗಾರರಲ್ಲ.
ಆಂಗ್ಲ ಭಾಷೆಯಲ್ಲೊಂದು ಗಾದೆಯಿದೆ: “ನೋಡುಗನ ಕಣ್ಣಿನಲ್ಲಿದೆ ಸೌಂದರ್ಯ. ಅಂತೆಯೇ ನೋಡುಗನ ಮನಸ್ಸಿನಲ್ಲಿದೆ ಕಲ್ಮಶ. ಧರಿಸುವ ದಿರಿಸಿನಿಂದ ವ್ಯಕ್ತಿಯ ನೈತಿಕ ಮೌಲ್ಯಗಳನ್ನು, ಸಮಾಜದ ಸಾಂಸ್ಕೃತಿಕ ಮೌಲ್ಯವನ್ನು ಅಳೆಯುವುದು ಸರಿಯಲ್ಲವೆಂದು ನನ್ನ ಅಭಿಪ್ರಾಯ. ವಿಶೇಷವಾಗಿ ಹೆಣ್ಣಿನ ಉಡುಪಿನ ನಮ್ಮ ದೃಷ್ಟಿಕೋನದ ಬಗ್ಗೆ ಮತ್ತೆ ಯೋಚಿಸಬೇಕಾಗಿದೆ. ರಶ್ಮಿ ಕುಂದಾಪುರ
(ಲೇಖಕಿ ಎಂ. ಡಿ. ಪದವೀಧರೆ. ಮಂಗಳೂರಿನ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿಯಲ್ಲಿ ಪ್ರೊಫೆಸರ್)