Advertisement

ಹಾಲುಣಿಸಿದರೆ ಸೌಂದರ್ಯ ಹಾಳಾಗದು

12:29 PM Aug 03, 2017 | |

ಮೈಸೂರು: ಮಗುವಿಗೆ ಎದೆಹಾಲು ಉಣಿಸುವುದರಿಂದ ತಮ್ಮ ಸೌಂದರ್ಯ ಹಾಳಾಗುತ್ತದೆ ಎಂಬ ಕೀಳು ಮನೋಭಾವನೆಯನ್ನು ಮಹಿಳೆಯರು ಬಿಡಬೇಕೆಂದು ಶಿಶುವೈದ್ಯೆ ಡಾ. ಸಾರಿಕಾ ಹೇಳಿದರು.

Advertisement

ಭಾರತೀಯ ವೈದ್ಯ ಶಿಶು ಅಕಾಡೆಮಿ ಮೈಸೂರು ಶಾಖೆ, ಶಿಶು ವೈದ್ಯಶಾಸ್ತ್ರ ವಿಬಾಗ, ಜೆಎಸ್‌ಎಸ್‌ ವೈದ್ಯಕೀಯ ಕಾಲೇಜು, ಶಿಶುವೈದ್ಯ ಶಾಸ್ತ್ರ ವಿಭಾಗ, ಎಂಎಂಸಿ ಮತ್ತು ಸಂಶೋಧನಾ ಕೇಂದ್ರ, ಇನ್ನರ್‌ ವ್ಹೀಲ್‌ ಕ್ಲಬ್‌ ಮೈಸೂರ್‌ ಸೆಂಟ್ರಲ್‌ ಸಂಸ್ಥೆಗಳ ವತಿಯಿಂದ ಬುಧವಾರ ನಗರದ ಮಹಾರಾಣಿ ಕಾಲೇಜಿನಲ್ಲಿ ಆಯೋಜಿಸಿದ್ದ ವಿಶ್ವ ಸ್ತನ್ಯಪಾನ ಸಪ್ತಾಹದಲ್ಲಿ ಮಾತನಾಡಿದರು.

ಬಹುತೇಕ ಮಹಿಳೆಯರು ಮಗುವಿಗೆ ಎದೆಹಾಲು ಉಣಿಸುವುದರಿಂದ ತಮ್ಮ ಸೌಂದರ್ಯ ಹಾಳಾಗಲಿದೆ ಎಂಬ ಕೀಳರಿಮೆ ಹೊಂದಿರುತ್ತಾರೆ. ಆದರೆ ಮಗುವಿಗೆ ಎದೆಹಾಲು ಉಣಿಸುವುದರಿಂದ ನವಜಾತ ಶಿಶುವಿನ ಮೆದುಳು ಉತ್ತಮವಾಗಿ ಬೆಳವಣಿಗೆಯಾಗುವ ಜತೆಗೆ ಮಕ್ಕಳ ಬೌದ್ಧಿಕ ಶಕ್ತಿಯೂ ಹೆಚ್ಚುತ್ತದೆ. ಜತೆಗೆ ಶಿಶುಗಳ ಹಲ್ಲು, ವಸಡುಗಳು ಶಕ್ತಿಯುತವಾಗಲಿದ್ದು, ಮಹಿಳೆಯರು ಸ್ತನ ಕ್ಯಾನ್ಸರ್‌ನಿಂದಲೂ ಪಾರಾಗಬಹುದು.

ಅಲ್ಲದೆ ಸ್ವಾಭಾವಿಕ ಕುಟುಂಬ ಯೋಜನೆ ಅನುಸರಿಸಿದಂತಾಗುತ್ತದೆ. ಆದರೆ ಬಾಟಲಿ ಹಾಲು ಕುಡಿಯುವ ಮಕ್ಕಳ ಬೆಳವಣಿಗೆ ಕುಂಠಿತವಾಗುವುದಲ್ಲದೆ, ಮಕ್ಕಳಲ್ಲಿ ಹೊಟ್ಟೆನೋವು, ಇನ್ನಿತರ ಬೇನೆಗಳು ಕಾಣಿಸಿಕೊಳ್ಳುತ್ತದೆ. ಆದ್ದರಿಂದ ಮಹಿಳೆಯರು ಮಕ್ಕಳಿಗೆ ಎದೆಹಾಲು ನೀಡುವುದನ್ನು ಎಂದಿಗೂ ಮರೆಯಬಾರದು ಎಂದು ಸಲಹೆ ನೀಡಿದರು. ಡಾ.ರಾಜೇಶ್ವರಿ, ಡಾ.ತಿಬ್ಬೇಗೌಡ, ಕಾಲೇಜು ಪ್ರಾಂಶುಪಾಲ ಡಾ.ನಾಗರಾಜು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next