ಹಚ್ಚ ಹಸಿರಿನ ಪಶ್ಚಿಮ ಘಟ್ಟಗಳ ಸಾಲು. ಎತ್ತ ನೋಡಿದರು ಕಣ್ಣೀಗೆ ಕಾಣುವ ದಟ್ಟವಾದ ಅರಣ್ಯ. ಕಾನನದ ಮಡಿಲಿನಲ್ಲಿ ಪ್ರಕೃತಿಯ ವಿಸ್ಮಯ, ಕೌತುಕ ತುಂಬಿಕೊಂಡಿರುವ ನಾಡು ದಾಂಡೇಲಿ.
ದಾಂಡೇಲಿ ಹೆಸರು ಕೇಳಿದ ಕೂಡಲೇ ಎಲ್ಲರಿಗೂ ಕಣ್ಣ ಮುಂದೆ ಬರುವುದು ಅಲ್ಲಿಯ ಹಸಿರು ಕಾಡು. ಪ್ರಕೃತಿಯ ಸೊಬಗು. ಪ್ರವಾಸಿಗರಿಗೆ ಹೇಳಿ ಮಾಡಿಸಿದ ಸುಂದರ ತಾಣ. ಮಳೆಗಾಲದಲ್ಲಂತೂ ದಾಂಡೇಲಿ ಸೊಬಗು ಬಣ್ಣಿಸಲು ಸಾಧ್ಯವಾಗದಷ್ಟು ಅಂದವಾಗಿರುತ್ತೆ.
ಕರಾವಳಿ ನಾಡು ಉತ್ತರ ಕನ್ನಡ ಜಿಲ್ಲೆಯಲ್ಲಿ ಬರುವ ದಾಂಡೇಲಿಗೆ ನೀವು ಒಮ್ಮೆ ಕಾಲಿಟ್ಟರೆ ಸಾಕು ತಿರುಗಿ ಹೋಗಲು ಮನಸ್ಸು ಒಪ್ಪುದಿಲ್ಲ. ಅದರಲ್ಲೂ ಚಾರಣಿಗರ ನೆಚ್ಚಿನ ತಾಣ ಶಿರೋಲಿ ಬೆಟ್ಟಗಳ ಸೊಬಗು ಕಣ್ತುಂಬಿಕೊಳ್ಳಲು ಎರಡು ಕಣ್ಣುಗಳು ಸಾಲದು.
ಸಹ್ಯಾದ್ರಿ ಬೆಟ್ಟಗಳ ಸಾಲನ್ನು ಶಿರೋಲಿ ಶಿಖರದ ತುದಿಯಲ್ಲಿ ನೋಡಬಹುದು. ಉತ್ತರ ಕನ್ನಡ ಜಿಲ್ಲೆಯಲ್ಲೇ ಅತೀ ಹೆಚ್ಚಿನ ಎತ್ತರ ಪ್ರದೇಶವೆಂದು ಶಿರೋಲಿ ಶಿಖರ ಹೆಸರಾಗಿದೆ. ಚಾರಣಿಗರಿಗೆ ಮನಮೆಚ್ಚುವ ತಾಣವಾಗಿದೆ. ಶಿರೋಲಿ ಶಿಖರದಿಂದ ಸೂರ್ಯಾಸ್ತದ ಮನಮೋಹಕ ದೃಶ್ಯ ನೋಡುವುದೇ ಕಣ್ಣುಗಳಿಗೆ ಹಬ್ಬ.
ದಾಂಡೇಲಿ ದಂಡಕಾರಣ್ಯ, ಆಗಾಗ ದರ್ಶನ ನೀಡುವ ಜಿಂಕೆ, ಮೊಲ, ಪಕ್ಷಿಗಳ ಚಿಲಿಪಿಲಿ ಚಾರಣಿಗರಿಗೆ ಮಹದಾನಂದ ನೀಡುತ್ತವೆ. ಅದರ ಜತೆಗೆ ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಜುಳು ಜುಳು ಹರಿಯುವ ಕಾಳಿ ನದಿಯ ಸೌಂದರ್ಯ ಪ್ರವಾಸಿಗರಿಗೆ ಮತ್ತೊಂದು ಸುಂದರ ಅನುಭವ ಒದಗಿಸುತ್ತವೆ.
ಶಿರೋಲಿ ತಲುಪುದು ಹೇಗೆ ?
ಶಿರೋಲಿ ಶಿಖರವು ದಾಂಡೇಲಿಯಿಂದ 25 ಕಿ.ಮೀ.ದೂರದಲ್ಲಿದೆ. ಕರ್ನಾಟಕ ರಾಜ್ಯದ ಪ್ರಮುಖ ಜಿಲ್ಲೆಗಳು, ನಗರಗಳಿಂದ ದಾಂಡೇಲಿಗೆ ನೇರ ಬಸ್ಸಿನ ಸೌಕರ್ಯ ಇದೆ. ಇಲ್ಲವಾದರೆ ಉತ್ತರ ಕನ್ನಡ ಜಿಲ್ಲೆಗೆ ತಲುಪಿ ಅಲ್ಲಿಂದ ದಾಂಡೇಲಿಗೆ ಬರಬಹುದು. ಧಾರವಾಡ ಜಿಲ್ಲೆಯಿಂದ 56 ಕಿ.ಮೀ ಕ್ರಮಿಸಿದರೆ ದಾಂಡೇಲಿ ತಲುಪಬಹುದು. ದಾಂಡೇಲಿಗೆ ಬರಲು ಬಸ್ ಸೌಲಭ್ಯ ಉತ್ತಮವಾಗಿದೆ.
ವಾಸಕ್ಕೆ ಸೌಲಭ್ಯ :
ಪ್ರವಾಸೋದ್ಯಮಕ್ಕೆ ತನ್ನನ್ನು ತೆರೆದುಕೊಂಡಿರುವ ದಾಂಡೇಲಿ ಸಾಕಷ್ಟು ಅಭಿವೃದ್ಧಿ ಕಂಡಿದೆ. ದೂರದೂರಿಂದ ಬರುವ ಪ್ರವಾಸಿಗರಿಗೆ ಇಲ್ಲಿ ಯಾವ ತೊಂದರೆಯಾಗದು. ನಗರಕ್ಕೆ ಹೊಂದಿಕೊಂಡು ಹಾಗೂ ಕಾಡಿನ ಮಧ್ಯ ಸಾಕಷ್ಟು ರೆಸಾರ್ಟ್, ಹೋಂ ಸ್ಟೇಗಳಿವೆ. ಕಡಿಮೆ ದರದಲ್ಲಿ ರೂಂಗಳ ಸೌಲಭ್ಯ ಇಲ್ಲಿ ದೊರೆಯಲಿದೆ.
ಚಾರಣಕ್ಕೆ ರೆಡಿಯಾಗಿ :
ಸ್ನೇಹಿತರ ಜತೆ ಚಾರಣಕ್ಕೆ ನೀವು ಸಿದ್ಧತೆ ನಡೆಸಿದ್ದರೆ ನಿಮಗೆ ಶಿರೋಲಿ ಒಳ್ಳೆಯ ಆಯ್ಕೆ. ಇದರ ಜತೆಗೆ ದಾಂಡೇಲಿಯ ಇನ್ನಿತರ ಪ್ರವಾಸಿ ತಾಣಗಳನ್ನೂ ನೋಡುವ ಭಾಗ್ಯ ನಿಮಗೆ ದೊರೆಯಲಿದೆ.