Advertisement

Desi swara:ಜರ್ಮನಿಯ ಸುಂದರ ಪ್ರವಾಸಿ ತಾಣ ಹೈಡೆಲ್‌ ಬರ್ಗ್‌ ಮತ್ತು ರೀನ್‌ ವ್ಯಾಲಿ

04:11 PM Dec 02, 2023 | Team Udayavani |

ನೆಕರ್‌ ನದಿಯ ಮೇಲೆ ವಿಶಾಲವಾಗಿ ವಿಸ್ತರಿಸಿಕೊಂಡಿರುವ ಹೈಡಲ್‌ಬರ್ಗ್‌ ಪುರಾತನ ಸ್ಥಳವೆಂದು ಕರೆಸಿಕೊಂಡರೂ ಜನಜನಿತವಾಗಿರುವುದು ರೊಮ್ಯಾಂಟಿಕ್‌ ನಗರವೆಂದು. ಮಹಾಯುದ್ಧದ ವೇಳೆ ದಾಳಿಯಿಂದ ಬದುಕಿ ಉಳಿದಿದ್ದೇ ಈ ನಗರದ ವಿಧಿ. ವಿಶ್ವ ಪಾರಂಪರಿಕ ತಾಣವಾಗಿರುವ ರೀನ್‌ ಕಣಿವೆ, ರೀನ್‌ ನದಿಯ ಹರಿಯುವಿಕೆಯ ಸುಂದರ ದೃಶ್ಯವನ್ನು ಹೊಂದಿದೆ. ಕಣಿವೆ ಪ್ರದೇಶವಾದರೂ ನಾಗರಿಕತೆಯು ವಿಜೃಂಭಿಸುವ ಜಾಗವಿದು.

Advertisement

ಹೈಡೆಲ್‌ ಬರ್ಗ್‌ ಮತ್ತು ರೀನ್‌ ವ್ಯಾಲಿ ಜರ್ಮನಿಯ ಸುಂದರ ಪ್ರವಾಸಿ ತಾಣಗಳಲ್ಲಿ ಪ್ರಮುಖ ಸ್ಥಾನ ಪಡೆದಿವೆ. ಫ್ರಾಂಕ್‌ಫ‌ರ್ಟ್‌ಗೆ ಭೇಟಿ ನೀಡಿದವರು ಒಂದು ದಿನ ಬಿಡುವು ಮಾಡಿಕೊಂಡು ಈ ಪ್ರದೇಶಗಳಿಗೆ ಹೋಗಿಬರುವುದು ಸಾಮಾನ್ಯ. ಫ್ರಾಂಕ್‌ಫ‌ರ್ಟ್‌ ನಗರದಿಂದ ಸುಮಾರು ಒಂದೂವರೆ ಗಂಟೆಗಳ ಪ್ರಯಾಣ ಅಷ್ಟೇ. ಒಮ್ಮೆ ನಮ್ಮ ಒಮಾನ್‌ ಕಂಪೆನಿಯ ಕೆಲಸದ ನಿಮಿತ್ತ ಜರ್ಮನಿಗೆ ತೆರಳಿದ್ದೆ. ಪ್ರತೀ ಬಾರಿ ಜರ್ಮನಿಯ ಟ್ರಿಪ್‌ನಲ್ಲಿ ಹೊಸ ಸ್ಥಳಗಳಿಗೆ ಭೇಟಿ ನೀಡುವುದು ವಾಡಿಕೆ.

ಫ್ರಾಂಕ್‌ಫ‌ರ್ಟ್‌ನಿಂದ ಒಂದು ದಿನದೊಳಗೆ ಪ್ರವಾಸಕ್ಕಾಗಿ ಹೋಗಿ ಬರುವ ಸ್ಥಳಗಳನ್ನು ಹುಡುಕುತ್ತಿದ್ದಾಗ ಕಂಡಿದ್ದೇ ಈ ಹೈಡೆಲ್ಬರ್ಗ್‌ ಮತ್ತು ರೀನ್‌ವ್ಯಾಲಿ. ಈ ಸ್ಥಳಗಳ ಕುರಿತು ಮಾಹಿತಿ ಪಡೆದಿದ್ದ ನಾನು, ಇವುಗಳನ್ನು ನೋಡುವ ಸಲುವಾಗಿಯೇ ಎರಡು ದಿನ ಹೆಚ್ಚುವರಿಯಾಗಿ ತಂಗಿದ್ದೆ. ಫ್ರಾಂಕ್‌ಫ‌ರ್ಟ್‌ನ ರೈಲ್ವೇ ನಿಲ್ದಾಣದ ಬಳಿ ಬಹಳಷ್ಟು ಟೂರ್‌ ಆಪರೇಟರ್‌ಗಳು ಇದ್ದಾರೆ, ಅವರ ಬಳಿ ಮಾತನಾಡಿ ಹೈಡೆಲ್‌ ಬರ್ಗ್‌ ಮತ್ತು ರೀನ್‌ ವ್ಯಾಲಿ ಟೂರ್‌ಗೆ ಬುಕ್‌ ಮಾಡಿದ್ದೆ. ಮೊದಲ ದಿನ ಹೈಡೆಲ್‌ ಬರ್ಗ್‌ ಟೂರ್‌, ಎರಡನೇ ದಿನ ರೀನ್‌ ವ್ಯಾಲಿ. ಒಂದು ಮಿನಿ ಬಸ್‌ನಲ್ಲಿ ಸುಮಾರು ಹದಿನೈದು ಜನ ವಿವಿಧ ದೇಶಗಳ ಪ್ರವಾಸಿಗರೊಟ್ಟಿಗೆ ಈ ಸ್ಥಳಗಳನ್ನು ನೋಡಿದೆ. ತುಂಬಾ ಸುಂದರವಾದ ಕಣ್ಮನ ಸೆಳೆಯುವ ದೃಶ್ಯಗಳು ಈ ಸ್ಥಳದಲ್ಲಿವೆ.

ಹೈಡೆಲ್ಬರ್ಗ್‌ ಪ್ರದೇಶ ಜರ್ಮನಿಯ ಪುರಾತನವಾದ ಸ್ಥಳ. ನೈಋತ್ಯ ಜರ್ಮನಿಯ ನೆಕರ್‌ ನದಿಯ ಬದಿಯಲ್ಲಿದೆ ಈ ನಗರ. ಈ ನಗರಕ್ಕೆ ರೊಮ್ಯಾಂಟಿಕ್‌ ನಗರ, ಸಾಹಿತ್ಯಿಕ ನಗರ ಎಂದು ಕರೆಯುತ್ತಾರೆ. ಇದಕ್ಕೆ ಪೂರಕವೆಂಬಂತೆ, ನೂರಾರು ಪ್ರೇಮಿಗಳು ಸುಂದರ ಸಂಜೆಯನ್ನು ಇಲ್ಲಿ ಕಳೆಯಲು ಬಯಸುತ್ತಾರೆ. 1386ರಲ್ಲಿ ಪ್ರಾರಂಭವಾದ ಜರ್ಮನಿಯ ಅತ್ಯಂತ ಹಳೆಯ ವಿಶ್ವವಿದ್ಯಾನಿಲಯ ಹಾಗೂ 1421ರಲ್ಲಿ ಪ್ರಾರಂಭವಾದ ಗ್ರಂಥಾಲಯ ಇಲ್ಲಿದೆ. ಶೈಕ್ಷಣಿಕ ನಗರವಾದುದ್ದರಿಂದ ಯುರೋಪಿನ ವಿವಿಧ ನಗರಗಳಿಂದ ಇಲ್ಲಿಗೆ ಉನ್ನತ ವಿದ್ಯಾಭ್ಯಾಸ ಪಡೆಯಲು ಇಂದಿಗೂ ಬರುತ್ತಾರೆ.

Advertisement

ರಮಣೀಯ ಪ್ರದೇಶವಾದ ಈ ಕಣಿವೆ ಜಾಗದಲ್ಲಿ ಹರಿಯುವ ನೆಕ್ಟರ್‌ ನದಿಯ ಮೇಲೆ ನಿರ್ಮಿಸಿರುವ ಹಳೆಯ ಬ್ರಿಡ್ಜ್ ನೋಡಲು ತುಂಬಾ ಸುಂದರವಾಗಿದೆ. ನದಿ ದಂಡೆಯ ಎರಡು ಬದಿಯಿರುವ ನಗರ, ಕ್ಯಾಸೆಲ್‌, ಎರಡು ಕಡೆ ಬೆಟ್ಟಗಳನ್ನು ಮತ್ತು ಈ ನದಿಯಲ್ಲಿ ಸಂಚರಿಸುವ ಬೋಟ್‌ಗಳನ್ನು ನೋಡಬಹುದು. ಈ ಪ್ರದೇಶ ಒಮ್ಮೆಗೆ ನಮ್ಮನ್ನ ನೂರಾರು ವರ್ಷಗಳ ಹಿಂದಕ್ಕೆ ಕರೆದೊಯ್ಯುತ್ತದೆ. ಬ್ರಿಡ್ಜ್ನಿಂದ ಇಳಿದು ನಗರದ ಪುರಾತನ ಹಾಗೂ ಹೃದಯಭಾಗಕ್ಕೆ ಭೇಟಿ ನೀಡಬಹುದು. ಅಲ್ಲಿ ಕ್ಯಾಸೆಲ್‌, ಹಳೆಯ ಚರ್ಚ್‌, ನೂರಾರು ವರ್ಷಗಳ ಪುರಾತನ ಕಟ್ಟಡಗಳು, ಸುಂದರವಾದ ಬೀದಿಗಳು, ಮರದ ಚೌಕಟ್ಟಿನ ಮನೆಗಳು ಹೀಗೆ ಎಲ್ಲವನ್ನು ನೋಡಬಹುದು.

ಈ ನಗರದ ಕಾಲು ಭಾಗ ಜನಸಂಖ್ಯೆ ವಿದ್ಯಾರ್ಥಿಗಳಿಂದ ತುಂಬಿದೆ. ವಿಶ್ವದ ಅತೀ ದೊಡ್ಡ ವೈನ್‌ ಸಂಗ್ರಹಿಸುವ ಬ್ಯಾರೆಲ್‌ ಒಂದು ಇಲ್ಲಿನ ಸಂಗ್ರಹಾಲಯದಲ್ಲಿದ್ದು, 130 ಓಕ್‌ ಮರಗಳಿಂದ ಇದನ್ನು ತಯಾರಿಸಲಾಗಿದೆ. ನಿಖರವಾಗಿ 2,21,726 ಲೀಟರ್‌ ವೈನ್‌ ಅನ್ನು ಸಂಗ್ರಹಿಸುವ ಸಾಮರ್ಥ್ಯವನ್ನು ಹೊಂದಿದೆ.

ಹಿಟ್ಲರ್‌ನ ನಾಜಿ ಪಕ್ಷದ ಕಾರ್ಯ ಚಟುವಟಿಕೆ ಈ ಭಾಗದಲ್ಲಿ ಹೆಚ್ಚಾಗಿತ್ತು ಎಂದು ಹೇಳುತ್ತಾರೆ. ಎರಡನೇ ಪ್ರಪಂಚ ಯುದ್ಧದ ಸಮಯದಲ್ಲಿ ಜರ್ಮನಿಯ ವಿವಿಧ ನಗರಗಳು ಬಾಂಬ್‌ ದಾಳಿಯಿಂದ ಧ್ವಂಸಗೊಂಡರೂ ಇಲ್ಲಿ ಹೆಚ್ಚಿನ ಅನಾಹುತ ಆಗಿರಲಿಲ್ಲ. ಇದು ಕಣಿವೆ ಪ್ರದೇಶವಾಗಿದ್ದು, ಇಲ್ಲಿಂದ ಹೊರ ಹೋಗುವುದು ಮತ್ತು ಬರುವುದು ಅಷ್ಟು ಸುಲಭವಾಗಿರಲಿಲ್ಲ ಎಂದು ಹೇಳುತ್ತಾರೆ. ಈ ನಗರ ಕೇವಲ ಪ್ರವಾಸಿ ತಾಣ ಮತ್ತು ಶೈಕ್ಷಣಿಕ ನಗರವಾಗಿರದೆ, ಕೈಗಾರಿಕ ನಗರವಾಗಿಯೂ ಬೆಳೆದಿದೆ. ಅಂತಾರಾಷ್ಟ್ರೀಯ ಕಂಪೆನಿಗಳು ಇಲ್ಲಿವೆ. ಈ ಸುಂದರವಾದ ನಗರದ ವಿವಿಧ ಸ್ಥಳಗಳನ್ನು ನೋಡಿ ಕಣ್ತುಂಬಿಕೊಂಡು ಸಂಜೆ ವೇಳೆ ವಾಪಾಸ್‌ ಫ್ರಾಂಕ್‌ಫ‌ರ್ಟ್‌ಗೆ ಮರಳಿದೆವು.

ಮರುದಿನ ಮತ್ತೂಂದು ಪ್ರವಾಸಿ ತಾಣ. ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳಲ್ಲಿ ಸ್ಥಾನ ಪಡೆದಿರುವ ವಿಶ್ವಪ್ರಸಿದ್ಧ ರೀನ್‌ ಕಣಿವೆಗೆ ಭೇಟಿ ನೀಡಿದ್ದೇವು. ಈ ಸ್ಥಳವಂತೂ ತುಂಬಾ ಸುಂದರ. ಇಲ್ಲಿ ಬೆಟ್ಟಗಳ ನಡುವೆ ಪ್ರಶಾಂತವಾಗಿ ರೀನ್‌ ನದಿ ಹರಿಯುತ್ತದೆ. ರೀನ್‌ ಅಥವಾ ರೈನ್‌ ನದಿ ಯುರೋಪಿನ ಪ್ರಮುಖ ನದಿಗಳಲ್ಲಿ ಒಂದಾಗಿದೆ. ಆಗ್ನೇಯ ಸ್ವಿರ್ಟ್ಜ್ ಲ್ಯಾಂಡ್‌ನ‌ ಆಲ್ಪ್$Õ ನಲ್ಲಿರುವ ಗ್ರಾಬುಂಡೆನ್ನ ಸ್ವಿಸ್‌ ಕ್ಯಾಂಟನ್ನಲ್ಲಿ ನದಿಯು ಹುಟ್ಟುತ್ತದೆ. ಅದರ ಅನಂತರ ಅದು ಜರ್ಮನಿ, ಬೆಲ್ಜಿಯಂ, ಫ್ರಾನ್ಸ್‌, ನೆದರ್‌ಲ್ಯಾಂಡ್ಸ್‌ ದೇಶಗಳಲ್ಲಿ ಹರಿಯುತ್ತದೆ. ತನ್ನ ಹರಿವಿನ ಗುಂಟ ಹಲವಾರು ನದಿಗಳು ಇದರೊಳಗೆ ಸೇರಿಕೊಳ್ಳುತ್ತವೆ. ತನ್ನ ವ್ಯಾಪ್ತಿ ಮತ್ತು ಪಾತ್ರವು ದೊಡ್ಡದಾಗುತ್ತ ಹೋಗುತ್ತದೆ.

ಸಮುದ್ರ ಮಾರ್ಗದ ಮುಖಾಂತರ ಸರಕು ಸರಂಜಾಮುಗಳನ್ನು ಹೊತ್ತ ಹಡಗುಗಳು ಸಂಚಾರ ಮಾಡುವುದನ್ನು ನಾವು ಕಂಡಿದ್ದೇವೆ, ಆದರೆ ಈ ರೀನ್‌ ನದಿಯಲ್ಲಿ ನೂರಾರು ಮೀಟರ್‌ ಉದ್ದದ ಹಡಗುಗಳಲ್ಲಿ ದೊಡ್ಡ ಪ್ರಮಾಣದ ಕಂಟೈನರ್‌ಗಳು, ಕಲ್ಲಿದ್ದಲು, ಸ್ಟೀಲ್‌ ಮುಂತಾದ ಸರಕು ಸಾಮಗ್ರಿಗಳನ್ನು ಸಾಗಾಣಿಕೆ ಮಾಡಲಾಗುತ್ತಿದೆ. ಈ ನದಿಯಲ್ಲಿ ಸರಕು ಸಾಗಾಣಿಕೆ ನೂರಾರು ವರ್ಷಗಳಿಂದ ನಡೆಯುತ್ತಿದೆ. ಯುರೋಪಿನ ವಾಣಿಜ್ಯ ಚಟುವಟಿಕೆಗಳಿಗೆ ಈ ನದಿ ಪ್ರಮುಖ ಪಾತ್ರವಹಿಸುತ್ತದೆ. ವಿವಿಧ ನಗರಗಳಲ್ಲಿ ದೊಡ್ಡ ದೊಡ್ಡ ಹಡಗುಗಳು ಈ ನದಿಯಲ್ಲಿ ಸಂಚರಿಸುತ್ತವೆ.

ಈ ಕಣಿವೆ ಪ್ರದೇಶದಲ್ಲಿ ನೂರಾರು ದ್ರಾಕ್ಷಿತೋಟಗಳು ಇವೆ, ಸುಂದರವಾದ ಚಿಕ್ಕ ಪಟ್ಟಣಗಳು ಮತ್ತು ಹಳ್ಳಿಗಳು ಇಲ್ಲಿವೆ. ನೂರಾರು ವರ್ಷಗಳ ಹಿಂದಿನ ಕೋಟೆ ಮತ್ತು ಕ್ಯಾಸೆಲ್‌ಗ‌ಳನ್ನು ಇಲ್ಲಿ ನೋಡಬಹುದು. ವೈನ್‌ ಪ್ರಿಯರಿಗೆ ಇದು ಹೇಳಿ ಮಾಡಿಸಿದ ಸ್ಥಳ. ಸ್ಥಳೀಯವಾಗಿ ತಯಾರಾಗುವ ವಿವಿಧ ವೈನ್‌ಗಳ ರುಚಿ ನೋಡಬಹುದು. ಈ ರೀನ್‌ ನದಿಯಲ್ಲಿ ಪ್ರವಾಸಿಗರ ದೋಣಿ ವಿಹಾರಕ್ಕಾಗಿಯೇ ಸಿದ್ಧಪಡಿಸಿದ ಆಧುನಿಕ ಮತ್ತು ಸುಸಜ್ಜಿತ ದೋಣಿಗಳು ಇಲ್ಲಿವೆ. ಸುಮಾರು ಒಂದು ಗಂಟೆಗೂ ಹೆಚ್ಚಿನ ಸಮಯ ದೋಣಿಯಲ್ಲಿ ಸುತ್ತಾಡಿ ಕಣಿವೆಯ ನಯನ ಮನೋಹರ ದೃಶ್ಯಗಳನ್ನು ಸವಿಯಬಹುದು. ನಮ್ಮ ಪ್ರವಾಸಿ ಗೈಡ್‌, ಇಲ್ಲಿನ ಹಲವಾರು ಸ್ಥಳಗಳಿಗೆ ಕರೆದುಕೊಂಡು ಹೋಗಿ ನಮ್ಮನ್ನು ಸುತ್ತಾಡಿಸಿದ. ಎರಡು ದಿನದಲ್ಲಿ, ಎಷ್ಟು ಸಾಧ್ಯವಾಗಬಹುದೋ ಅಷ್ಟು ಸ್ಥಳಗಳನ್ನ ನೋಡಿ, ಸುಂದರವಾದ ನೆನಪುಗಳನ್ನು ಹೊತ್ತು ಜರ್ಮನಿಯಿಂದ ಮರಳಿದೆ.

*ಪಿ.ಎಸ್‌. ರಂಗನಾಥ, ಮಸ್ಕತ್‌

Advertisement

Udayavani is now on Telegram. Click here to join our channel and stay updated with the latest news.

Next