Advertisement

ನೋಡಬನ್ನಿ ಪ್ರಕೃತಿ ಸೌಂದರ್ಯದ ಕುಂದಾದ್ರಿ ಬೆಟ್ಟ

03:15 PM Apr 13, 2018 | Harsha Rao |

ಚುಮು ಚುಮು ಚಳಿ ಸುತ್ತಲೂ ಹಚ್ಚಹಸಿರಿನ ಬಯಲು, ದಟ್ಟಕಾನನದ ನಡುವೆ ಕಿರುದಾರಿಯಲ್ಲಿ ಸಂಚರಿಸಿದರೆ ಸಿಗುವುದೇ ಕಣ್ಣಿಗೆ ಮುದನೀಡುವ ಗಿರಿಶಿಖರ ಕುಂದಾದ್ರಿ ಬೆಟ್ಟ ಇದು ಪ್ರವಾಸಿಗರಿಗೆ ಪ್ರವಾಸಿಸ್ಥಳವೂ ಹೌದು ಯಾತ್ರಾರ್ಥಿಗಳಿಗೆ ಯಾತ್ರಾ ಸ್ಥಳವಾಗಿರುವ ಕುಂದಾದ್ರಿ ಬೆಟ್ಟ ತನ್ನದೇ ಆದ ಛಾಪನ್ನುಹೊಂದಿದೆ. ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯು ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ಇಲ್ಲಿಯ ವಿಶೇಷತೆಯನ್ನು ತೋರಿಸುತ್ತದೆ. 

Advertisement

ಬೆಟ್ಟದಹಿನ್ನೆಲೆ :

ಕುಂದಾದ್ರಿ ಬೆಟ್ಟದ ಮೇಲೆ ಜೈನಮಂದಿರವಿದೆ ಇದು ಪಾರ್ಶ್ವನಾಥ ದಿಗಂಬರ ಜೈನಮಂದಿರವಾಗಿದ್ದು ಇದು ಸುಮಾರು ಮೂರು ಸಾವಿರ ವರುಷಗಳಷ್ಟು ಇತಿಹಾಸವಿರುವ ಜೈನಮಂದಿರವಾಗಿದೆ.  ಇಲ್ಲಿ ಮೂಲನಾಯಕನಾಗಿರುವ ಭಗವಾನ್ಪಾರ್ಶ್ವನಾಥ ತೀರ್ಥಂಕರ ವಿಗ್ರಹ ಸುಮಾರು ಎರಡು ಸಾವಿರದ ಎಂಟುನೂರು ವರುಷಗಳ ಇತಿಹಾಸವಿರುವ ಏಕಶಿಲಾ ವಿಗ್ರಹವಾಗಿದೆ.

ಹೊಂಬುಜ ಜೈನಮಠದ ಆಶ್ರಯದಲ್ಲಿ ನಿರ್ಮಾಣಗೊಂಡಿರುವ ಬಸದಿ ಇದಾಗಿದ್ದು ಸೂರ್ಯೋದಯದ ಸಮಯ ಸೂರ್ಯನ ಮೊದಲ ಕಿರಣ ನೇರವಾಗಿ ಶ್ರೀಪಾರ್ಶ್ವನಾಥ ವಿಗ್ರಹದ ಪಾದದ ಮೇಲೆ ಬೀಳುವುದು ಇಲ್ಲಿಯ ವಿಶೇಷ.

ಶತಮಾನಗಳ ಹಿಂದೆ ಇಲ್ಲಿ ಆಚಾರ್ಯ ಕುಂದಕುಂದ ಮುನಿಗಳು ಆಂಧ್ರಪ್ರದೇಶದಿಂದ ಕಾಲ್ನಡಿಗೆಯಲ್ಲಿ ಈ ಬೆಟ್ಟಕ್ಕೆ ಬಂದು ತಪಸ್ಸನ್ನು ಮಾಡಿದ್ದರು ಹಾಗಾಗಿ ಈ ಬೆಟ್ಟಕ್ಕೆ ಕುಂದಾದ್ರಿ ಬೆಟ್ಟ ಎಂಬ ಹೆಸರು ಬಂತು ಎಂಬ ಪ್ರತೀತಿ ಇದೆ. ಕುಂದಪುಷ್ಪ ರೀತಿ ಎಂದರೆ ಬೆಟ್ಟವು ದುಂಡುಮಲ್ಲಿಗೆಯಂತೆ ನೋಡಲು ದುಂಡಾಕಾರವಾಗಿದೆ ಎಂದೂ ಹೋಲಿಕೆ ಮಾಡಲಾಗಿದೆ . ಇಲ್ಲಿ ವರ್ಷಾವಧಿ ಉತ್ಸವವು ಬಹಳ ವಿಜೃಂಭಣೆಯಿಂದ ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ನಡೆಸಲಾಗುತ್ತಿದೆ.

Advertisement

ಪುಣ್ಯಸರೋವರಗಳು  ;

ಜೈನಮಂದಿರದ ಎಡ ಮತ್ತು ಬಲಭಾಗದಲ್ಲಿ ವರ್ಷವಿಡೀ ತುಂಬಿರುವ ಎರಡು ಸರೋವರವಿದ್ದು ಅದನ್ನು ಪಾಪವಿಮೋಚನಾ ಸರೋವರ ಹಾಗೂ ತಾವರೆಕೆರೆ ಎಂದು ಕರೆಯುತ್ತಾರೆ, ಪಾಪ ವಿಮೋಚನಾ ಕೆರೆಗೆ ಭಕ್ತಿಯಿಂದ ದೇವರಲ್ಲಿ ಬೇಡಿ ನಿಂಬೆಹಣ್ಣನ್ನು ನೀರಿಗೆ ಹಾಕಿದರೆ ನಿಂಬೆಹಣ್ಣು ನೀರಿನಲ್ಲಿ ಮುಳುಗುತ್ತದೆ ಅದೇ ರೀತಿ ಮನಸಿನಲ್ಲಿ ಚಂಚಲತೆ ಇದ್ದರೆ ನಿಂಬೆ ಹಣ್ಣು ನೀರಿನಲ್ಲಿ ತೇಲುತ್ತದೆ ಎಂಬ ನಂಬಿಕೆ ಇಂದಿಗೂ ಇದೆ, ಅದೇ ರೀತಿ ಉತ್ತರಾಯಣ ಪುಣ್ಯಕಾಲದ ದಿನ ಈ ಸರೋವರದ ನೀರನ್ನು ಪ್ರೋಕ್ಷಣೆ ಮಾಡಿದರೆ ಮನುಷ್ಯ ಜನ್ಮಪಾವನವಾಗುತ್ತದೆ ಎಂಬ ಪ್ರತೀತಿಯೂ ಇದೆ.

ಸಮುದ್ರ ಮಟ್ಟದಿಂದ 3200 ಅಡಿ ಎತ್ತರ :

ಕುಂದಾದ್ರಿ ಬೆಟ್ಟ ಸಮುದ್ರ ಮಟ್ಟದಿಂದ ಸುಮಾರು 3200ಅಡಿಗಳಷ್ಟು ಎತ್ತರದಲ್ಲಿ ಇದ್ದು ಪ್ರವಾಸಿಗರು ಬೆಟ್ಟದ ಮೇಲೆ ನಿಂತರೆ ಸೂರ್ಯೋದಯ ಹಾಗೂ ಸೂರ್ಯಾಸ್ತವನ್ನು ಕಣ್ತುಂಬಿಕೊಳ್ಳಬಹುದು, ಸುತ್ತಲೂ ಕಣ್ಣು ಹಾಯಿಸಿದರೆ ಹಚ್ಚ ಹಸುರಿನ ಬಯಲು ಹಸಿರು ಹೊದಿಕೆ ಹೊದಿಸಿದಂತೆ ಭಾಸವಾಗುತ್ತದೆ. 

ಪ್ರವಾಸಿಗರ ಆಕರ್ಷಣೀಯ ಕೇಂದ್ರ:

ಕುಂದಾದ್ರಿಬೆಟ್ಟಕ್ಕೆ ಭೇಟಿಕೊಡುವ ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ಇಲ್ಲಿನ ಆಕರ್ಷಣೆಗೆ ಸಾಕ್ಷಿಯಾಗಿದೆ ವರ್ಷದ ಎಲ್ಲಾ ದಿನಗಳಲ್ಲಿಯೂ ಪ್ರವಾಸಿಗರು, ಚಾರಣಿಗರನ್ನು ಕಾಣುತ್ತೇವೆ ಎನ್ನುತ್ತಾರೆ ಇಲ್ಲಿನ ಅರ್ಚಕರು, ಮಳೆಗಾಲದಲ್ಲಿ ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆ ಗಣನೀಯ ಪ್ರಮಾಣದಲ್ಲಿರುತ್ತದೆ ಎಲ್ಲರೂ ತಮ್ಮ ತಮ್ಮ ಮೊಬೈಲ್ಗಳಲ್ಲಿ ಪ್ರಕೃತಿ ಸೌಂದರ್ಯವನ್ನು ಸೆರೆಹಿಡಿಯುವುದರಲ್ಲಿ ಮಗ್ನರಾಗಿರುತ್ತಾರೆ, ಬೀಸುವ ತಂಪಾದ ಗಾಳಿಯನ್ನು ಆಸ್ವಾದಿಸುವುದೇ ಒಂದು ಆನಂದ. ಸುತ್ತಲೂ ಆವರಿಸಿರುವ ಮೋಡಗಳಿಂದ ಮಳೆಗಾಲದಲ್ಲಿ ಕೆಲವೊಮ್ಮೆ ಪ್ರವಾಸಿಗರಿಗೆ ನಿರಾಸೆಯಾಗುವುದು ಉಂಟು.  ಇಲ್ಲಿನ ಸುತ್ತಮುತ್ತಲಿನ ಪ್ರದೇಶದ ಜನರು ತಮ್ಮ ಬಿಡುವಿನ ಸಮಯದಲ್ಲಿ ಬೆಟ್ಟಕ್ಕೆ ಬಂದು ತಮ್ಮ ಹೆಚ್ಚಿನ ಕಾಲಕಳೆಯುತ್ತಾರೆ.

ಸುರಕ್ಷತೆಗಾಗಿ ತಡೆಬೇಲಿ ನಿರ್ಮಾಣ:

ಕುಂದಾದ್ರಿ ಬೆಟ್ಟಕ್ಕೆ ಭೇಟಿ ನೀಡುವ ಪ್ರವಾಸಿಗರು ಪ್ರಕೃತಿಯ ಸೌಂದರ್ಯವನ್ನು ಸವಿಯುತ್ತಾ ಪ್ರಪಾತದ ತಪ್ಪಲಿನಲ್ಲಿ ನಿಂತು ಫೋಟೋ ತೆಗೆದುಕೊಳ್ಳುವುದು, ತುಂಬಾ ಅಪಾಯಕಾರಿ ಸ್ಥಳಗಳಿಗೆ ಪ್ರವೇಶಿಸುವುದು ಕಂಡುಬಂದಿದ್ದು ಇದಕ್ಕಾಗಿ ರಾಜ್ಯ ಸರಕಾರದ ಮೂಲಕ ಬೆಟ್ಟದ ಸುತ್ತಲೂ ತಡೆಬೇಲಿಯನ್ನು ನಿರ್ಮಿಸಲಾಗಿದೆ.

ಆದರೆ ಕೆಲವು ಪ್ರವಾಸಿಗರು ಅಪಾಯದ ತಡೆಬೇಲಿಯನ್ನು ತುಂಡರಿಸಿ ದಾಟಿಹೋಗುತ್ತಾರೆ ಎಂದು ಅರ್ಚಕರು ಬೇಸರ ವ್ಯಕ್ತಪಡಿಸುತ್ತಾರೆ. ಅದೇ ರೀತಿ ಇಲ್ಲಿರುವ ಸರೋವರಗಳಿಗೂ ಯಾವುದೇ ರೀತಿಯ ಕಸಕಡ್ಡಿಗಳನ್ನು ಎಸೆಯದಂತೆ ತಡೆಬೇಲಿಯನ್ನು ನಿರ್ಮಿಸಲಾಗಿದೆ.

ತಲುಪುವ ದಾರಿ ಹೇಗೆ:

ಮಂಗಳೂರು ಕಡೆಯಿಂದ ಬರುವವರು ಆಗುಂಬೆ ದಾಟಿ ತೀರ್ಥಹಳ್ಳಿ ದಾರಿಯಲ್ಲಿ ಸಂಚರಿಸಿದರೆ ಗುಡ್ಡೇಕೇರಿ ತಲುಪಿ ಅಲ್ಲಿಂದ ಬಲಕ್ಕೆ 8ಕಿಮೀ ತೆರಳಿದರೆ ಕುಂದಾದ್ರಿ ಬೆಟ್ಟದ ದ್ವಾರ ಸಿಗುತ್ತದೆ. ಅದೇ ರೀತಿ ಶಿವಮೊಗ್ಗ, ತೀರ್ಥಹಳ್ಳಿ ಕಡೆಯಿಂದ ಬರುವವರು ಆಗುಂಬೆ ಮಾರ್ಗದಲ್ಲಿ 20ಕಿ.ಮೀ. ಸಂಚರಿಸಿದರೆ ಗುಡ್ಡೇಕೇರಿಯಲ್ಲಿ ಎಡಕ್ಕೆ ತಿರುಗಿ 8ಕಿಮೀ. ಸಂಚರಿಸಬೇಕು.

ಕೊಪ್ಪ ಚಿಕ್ಕಮಗಳೂರು ಕಡೆಯಿಂದ ಬರುವವರು ಆಗುಂಬೆ ಮಾರ್ಗವಾಗಿ ಬಂದರೆ ಹೊಸಗದ್ದೆಯಲ್ಲಿ  ಬಲಕ್ಕೆ ತಿರುವು ಪಡೆದು 7 ಕಿಮೀ. ಚಲಿಸಬೇಕು.

ಕುಂದಾದ್ರಿ ಬೆಟ್ಟದ ದ್ವಾರದಿಂದ ಸುಮಾರು ನಾಲ್ಕು ಕಿಲೋಮೀಟರ್ ಕಡಿದಾದ ತಿರುವಿನಿಂದ ಕೂಡಿರುವ ಕಿರುದಾರಿ, ಕಾರುಬೈಕುಗಳಲ್ಲಿ ಸಂಚರಿಸಲು ಸುಗಮ ಘನವಾಹನಗಳು ಸಂಚಾರಕ್ಕೆ ಕಷ್ಟಸಾಧ್ಯ, ಕಿರಿದಾದ ರಸ್ತೆಯುದ್ದಕ್ಕೂ ಔಷದೀಯ ಗಿಡಮರಗಳು ನಮ್ಮನ್ನು ಸ್ವಾಗತಿಸುತ್ತವೆ. ಬನ್ನಿ ಕುಂದಾದ್ರಿ ಬೆಟ್ಟದ ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಕೊಳ್ಳಿ ಜೊತೆಗೆ ಪರಿಸರದ ನೈರ್ಮಲ್ಯವನ್ನು ಕಾಪಾಡಿ….

Advertisement

Udayavani is now on Telegram. Click here to join our channel and stay updated with the latest news.

Next