ಯಾವುದೇ ಸಿನಿಮಾವಿರಲಿ ಅದಕ್ಕೊಂದು ಕಥೆ ಇರುತ್ತದೆ. ಆ ಕಥೆಗೆ ಚಿತ್ರಕಥೆ, ಸಂಭಾಷಣೆ ಸೇರಿಸಿ ದೃಶ್ಯರೂಪ ಕೊಟ್ಟು ಅಂತಿಮವಾಗಿ ಅದನ್ನು ಸಿನಿಮಾವಾಗಿ ತೆರೆಗೆ ತರಲಾಗುತ್ತಿದೆ. ಚಿತ್ರದ ಕಥಾವಸ್ತು ಅದರ ಹಿನ್ನೆಲೆ, ಪಾತ್ರಗಳು, ಸನ್ನಿವೇಶಗಳು ಹೀಗೆ ಪ್ರತಿಯೊಂದು ಅಂಶಗಳನ್ನೂ ಅಳೆದು-ತೂಗಿ ಕೊನೆಗೆ ಸಿನಿಮಾಕ್ಕೆ ತಕ್ಕುದಾದ ಶೀರ್ಷಿಕೆ ಇಡುವುದು ಚಿತ್ರರಂಗದಲ್ಲಿ ಇಲ್ಲಿಯ ವರೆಗೂ ನಡೆದು ಕೊಂಡು ಬಂದಿರುವ ರೂಢಿ.
ಇನ್ನು ಕೆಲವೊಂದು ಸಂದರ್ಭ ಗಳಲ್ಲಿ ಟೈಟಲ್ ಕ್ಯಾಚಿ ಆಗಿದೆ ಅಥವಾ ಜನಪ್ರಿಯವಾಗಿದೆ ಎನ್ನುವ ಕಾರಣಕ್ಕಾಗಿಯೇ ಮೊದಲೇ ಟೈಟಲ್ ಇಟ್ಟುಕೊಂಡು, ಆ ನಂತರ ಅದಕ್ಕೆ ಹೊಂದಾಣಿಕೆಯಾಗುವಂಥ ಕಥೆ ರಚಿಸಿ, ಚಿತ್ರಕಥೆ, ಸಂಭಾಷಣೆ ಬರೆದು ಕೊನೆಗೆ ಸಿನಿಮಾ ರೂಪ ಕೊಟ್ಟು ತೆರೆಗೆ ತಂದ ಉದಾಹರಣೆಗಳೂ ಚಿತ್ರರಂಗದ ಇತಿಹಾಸದಲ್ಲಿ ಅಲ್ಲಲ್ಲಿ ಕಾಣ ಸಿಗುತ್ತದೆ. ಅದೇನೆಯಿರಲಿ, ಯಾವುದೇ ಸಿನಿಮಾಕ್ಕಾದರೂ ಕಥೆ ಮತ್ತು ಟೈಟಲ್ ಎರಡೂ ಕೂಡ ತುಂಬ ಮುಖ್ಯ ಅನ್ನೋದರಲ್ಲಿ ಎರಡು ಮಾತಿಲ್ಲ. ಸದ್ಯ ಕನ್ನಡ ಚಿತ್ರರಂಗದಲ್ಲಿ ಒಂದಷ್ಟು ಸಿನಿಮಾಗಳ ಶೀರ್ಷಿಕೆಗಳು ಸುಂದರ ಪದಗಳಿಂದ ಕೂಡಿದ್ದು ಗಮನ ಸೆಳೆಯುತ್ತಿದೆ. ಅದರಲ್ಲೂ ಅಚ್ಚ ಕನ್ನಡದ ಸ್ವತ್ಛ ಪದಗಳನ್ನೇ ಶೀರ್ಷಿಕೆಯನ್ನಾಗಿ ಬಳಸುವ ಮೂಲಕ ಸಿನಿಮಾಕ್ಕೊಂದು ಸಕರಾತ್ಮಕತೆಯನ್ನು ನೀಡಲು ಪ್ರಯತ್ನಿಸುತ್ತಿದ್ದಾರೆ. ಇಂತಹ ಶೀರ್ಷಿಕೆಗಳು ಚಿತ್ರರಂಗದಲ್ಲಿ ಗಮನ ಸೆಳೆಯುತ್ತಿರುವುದು ಸುಳ್ಳಲ್ಲ. ಅಂತಹ ಒಂದಷ್ಟು ಶೀರ್ಷಿಕೆಗಳನ್ನು ಉದಾಹರಿಸುವುದಾದರೆ, “ದೂರ ತೀರ ಯಾನ’, “ತೀರ್ಥ ರೂಪ ತಂದೆಯವರಿಗೆ’, “ಈ ಪಾದ ಪುಣ್ಯ ಪಾದ’, “ಭೈರವನ ಕೊನೆ ಪಾಠ’, “ವೈಕುಂಠ ಸಮಾರಾಧನೆ’, “ವಿಕಾಸ ಪರ್ವ’, “ಸ್ವಪ್ನ ಮಂಟಪ’, “ರುದ್ರ ಗರುಡ ಪುರಾಣ’, “ಧ್ರುವ ತಾರೆ’, “ದೇವರು ರುಜು ಹಾಕಿದನು’, “ವಿದ್ಯಾಪತಿ’, “ರಕ್ಕಸಪುರದೋಳ್’, “ಇಬ್ಬನಿ ತಬ್ಬಿದ ಇಳೆಯಲಿ’ ಸೇರಿದಂತೆ ಅನೇಕ ಶೀರ್ಷಿಕೆಗಳು ಗಮನ ಸೆಳೆಯುತಿವೆ.
ಇವೆಲ್ಲವೂ ಇನ್ನಷ್ಟೇ ಬಿಡುಗಡೆಯಾಗ ಬೇಕಾದ ಸಿನಿಮಾಗಳಾದರೆ, ಈ ವರ್ಷ ಈಗಾಗಲೇ ಬಿಡುಗಡೆಯಾಗಿ ರುವ ಕೆಲವು ಸಿನಿಮಾಗಳ ಶೀರ್ಷಿಕೆಗಳು ಕೂಡಾ ಗಮನ ಸೆಳೆದಿವೆ. “ಕೃಷ್ಣಂ ಪ್ರಣಯ ಸಖೀ’, “ರೂಪಾಂತರ’, “ಒಂದು ಸರಳ ಪ್ರೇಮಕಥೆ’, “ನಗುವಿನ ಹೂಗಳ ಮೇಲೆ’, “ಕಪ್ಪು ಬಿಳುಪಿನ ನಡುವೆ’, “ಧೈರ್ಯಂ ಸರ್ವತ್ರ ಸಾಧನಂ’, “ಕೊಲೆಯಾದವನೇ ಕೊಲೆಗಾರ’… ಹೀಗೆ ಲೆಕ್ಕ ಹಾಕುತ್ತಾ ಹೋದರೆ ಪಟ್ಟಿ ಬೆಳೆಯುತ್ತದೆ.
ಕಥೆಯ ಹಾದಿ ಸೂಚಿಸುವ ಪ್ರಯತ್ನ
ಸಿನಿಮಾಕ್ಕೆ ಸುಂದರ, ಆಕರ್ಷಕವಾದ ಟೈಟಲ್ ಇಡುವ ಮುನ್ನ ಅನೇಕ ನಿರ್ದೇಶಕರು ಆ ಟೈಟಲ್ ಏನನ್ನು ಧ್ವನಿಸುತ್ತದೆ ಎಂಬ ಯೋಚನೆ ಮಾಡುತ್ತಾರೆ. ಸಿನಿಮಾಕ್ಕೂ ಟೈಟಲ್‌ಗೂ ಸಂಬಂಧವೇ ಇಲ್ಲದೇ ಶೀರ್ಷಿಕೆ ಇಟ್ಟರೆ ಮಾತಿಗೂ, ನಡತೆಗೂ ಸಂಬಂಧವೇ ಇಲ್ಲದಂತೆ ಆಗುತ್ತದೆ. ಇತ್ತೀಚೆಗೆ “ದೂರ ತೀರ ಯಾನ’ ಎಂಬ ಶೀರ್ಷಿಕೆ ಅನಾವರಣ ಮಾಡಿದ ನಿರ್ದೇಶಕ ಮಂಸೋರೆ, ಇದೊಂದು ದಾರಿಯಲ್ಲಿ ಸಾಗುತ್ತಾ ನಡೆಯುವ ಪ್ರೇಮಕಥೆ.ಚಿತ್ರದ ಮೊದಲ ಹತ್ತು ನಿಮಿಷ ಮಾತ್ರ ಬೆಂಗಳೂರಿನಲ್ಲಿ ನಡೆಯುತ್ತದೆ. ಉಳಿದೆಲ್ಲಾ ದಾರಿಯಲ್ಲಿ ಸಾಗುತ್ತದೆ ಎಂದಿದ್ದರು. ಅಲ್ಲಿಗೆ ಅವರ ಟೈಟಲ್ ಚಿತ್ರಕ್ಕೆ ಚೆನ್ನಾಗಿ ಹೊಂದುತ್ತದೆ ಎಂದು ಹೇಳುವ ಅಗತ್ಯವಿಲ್ಲ. ಇನ್ನು, “ರಕ್ಕಸಪುರದೋಳ್’ ಟೈಟಲ್ ಕೂಡಾ ಕಥೆ ಸುತ್ತವೇ ಇದೆ. “ಮನುಷ್ಯನಲ್ಲಿ ಎರಡು ಗುಣಗಳಿರುತ್ತದೆ. ಒಂದು ಒಳ್ಳೆಯದು. ಮತ್ತೂಂದು ಕೆಟ್ಟದ್ದು. ಆ ಕೆಟ್ಟ ಗುಣಗಳನ್ನು ರಕ್ಕಸ ಎನ್ನಬಹುದು. ಅಂಥದ್ದೇ ಜನ ತುಂಬಿರುವ ಊರಿನ ಸುತ್ತ ನಡೆಯುವ ಕಥೆ’ ಎಂದಿದ್ದರು ನಿರ್ದೇಶಕರು. ಹೀಗೆ ಟೈಟಲ್ ಕಥೆಗೆ ಪೂರಕವಾಗಿದ್ದರೆ ಅಥವಾ ಕೇಳಿದ ಕೂಡಲೇ ಒಂದು ಪಾಸಿಟಿವ್ ಫೀಲ್ ಬಂದರೆ ಶ್ರಮಕ್ಕೊಂದು ಸಾರ್ಥಕತೆ.
ನಿರ್ದೇಶಕರ ಶೀರ್ಷಿಕೆ ಆಯ್ಕೆ
ಕನ್ನಡದಲ್ಲಿ ಒಂದಷ್ಟು ಮಂದಿ ನಿರ್ದೇಶಕರು ಅಚ್ಚ ಕನ್ನಡ ಶೀರ್ಷಿಕೆಗಳನ್ನೇ ಇಟ್ಟುಕೊಂಡು ಬಂದಿದ್ದಾರೆ. ಅದರಲ್ಲಿ ಇತ್ತೀಚಿನ ವರ್ಷಗಳ ಸಿನಿಮಾಗಳನ್ನು ಹಾಗೂ ನಿರ್ದೇಶಕರನ್ನು ಉದಾಹರಿಸುವುದಾದರೆ ಯೋಗರಾಜ್ ಭಟ್, ಹೇಮಂತ್ ರಾವ್, ಅನೂಪ್, ಶಶಾಂಕ್, ಸಿಂಪಲ್ ಸುನಿ.. ಹೀಗೆ ಅನೇಕರು ಸಿಗುತ್ತಾರೆ. “ಮುಂಗಾರು ಮಳೆ’, “ಗಾಳಿಪಟ’, “ವಾಸ್ತು ಪ್ರಕಾರ’, “ಪಂಚತಂತ್ರ’, “ಮನಸಾರೆ’, “ಪರಮಾತ್ಮ’, “ದನ ಕಾಯೋನು’, “ಮುಗುಳು ನಗೆ’.. ಇಂತಹ ಶೀರ್ಷಿಕೆಗಳ ಮೂಲಕ ಯೋಗರಾಜ್ ಭಟ್ ಗಮನ ಸೆಳೆದಿದ್ದರು. ನಿರ್ದೇ ಶಕ ಹೇಮಂತ್ ರಾವ್ ಕೂಡಾ ತಮ್ಮ ಮೊದಲ ಚಿತ್ರದಿಂದಲೂ ಕನ್ನಡ ಪ್ರೀತಿ ಮೆರೆಯುತ್ತಲೇ ಇದ್ದಾರೆ.
“ಗೋಧಿ ಬಣ್ಣ ಸಾಧಾರಣ ಮೈ ಕಟ್ಟು’, “ಕವಲುದಾರಿ’, “ಸಪ್ತಸಾಗರದಾಚೆ ಎಲ್ಲೋ’ ಈಗ “ಭೈರವನ ಕೊನೆ ಪಾಠ’… ಈ ಹಿಂದೆ ತಮ್ಮ ಸಿನಿಮಾಗಳ ಟೈಟಲ್ ಬಗ್ಗೆ ಮಾತನಾಡಿದ್ದ ನಿರ್ದೇಶಕ ಹೇಮಂತ್ ರಾವ್, “ನಮ್ಮ ಆಡುಭಾಷೆಗೆ ಹತ್ತಿರವಾದ ಶೀರ್ಷಿಕೆಗಳು ನನಗೆ ಇಷ್ಟವಾಗುತ್ತವೆ. ಈ ಹಿಂದೆ ಕನ್ನಡ ಸಿನಿಮಾ ಶೀರ್ಷಿಕೆಗಳು ಕೇಳಲಿಕ್ಕೂ ಮಧುರವಾಗಿದ್ದು ಕುತೂಹಲ ಕೆರಳಿಸುವಂತೆ ಇರುತ್ತಿದ್ದವು. ನನ್ನ ನಿರ್ದೇಶನದ ಸಿನಿಮಾ ಶೀರ್ಷಿಕೆಗಳು ಸಾಕಷ್ಟು ಜನ ಮೆಚ್ಚುಗೆಗೆ ಪಾತ್ರವಾದವು. ಕನ್ನಡ ಸಿನಿಮಾ ಜಗತ್ತಿನ ವಿಶಿಷ್ಟ ಶೀರ್ಷಿಕೆಗಳ ಪರಂಪರೆಯನ್ನು ಮುಂದಿನ ತಲೆಮಾರುಗಳಿಗೂ ತಲುಪಿಸುವ ಉದ್ದೇಶ ನಮ್ಮದು’ ಎಂದಿದ್ದರು.
ಬದಲಾದ ಟ್ರೆಂಡ್‌ಗೆ ತಕ್ಕಂತೆ ಟೈಟಲ್ಸ್
ಚಿತ್ರರಂಗವೇ ಹಾಗೇ.. ಇಲ್ಲಿ ಎಲ್ಲವೂ ಬದಲಾಗುತ್ತಾ ಇರುತ್ತದೆ. ಪ್ರೇಕ್ಷಕರ ಅಭಿರುಚಿಗೆ ತಕ್ಕಂತೆ ಸಿನಿಮಾ ಮೇಕಿಂಗ್ ಹೇಗೆ ಬದಲಾಗುತ್ತಾ ಹೋಯಿತೋ, ರೀಮೇಕ್ ಬದಲು ಸ್ವಮೇಕ್, ಡಬ್ಬಿಂಗ್ ಬದಲು ಪ್ಯಾನ್ ಇಂಡಿಯಾ ಆದಂತೆ ಸ್ಟೈಲಿಶ್ ಇಂಗ್ಲೀಷ್ ಶೀರ್ಷಿಕೆಗಳಿಗಿಂತ ಕನ್ನಡ ಪದಗಳನ್ನೇ ಜೋಡಿಸಿ ಶೀರ್ಷಿಕೆಯನ್ನಾಗಿಸುವ ಟ್ರೆಂಡ್ ಈಗ ನಡೆಯುತ್ತಿದೆ. ಅದೇ ಕಾರಣದಿಂದ ಇಂತಹ ಸುಂದರ ಶೀರ್ಷಿಕೆಗಳು ಸಿಗುತ್ತವೆ. ಈ ತರಹ ಶೀರ್ಷಿಕೆ ಇಡುವುದರಿಂದ ಸಿನಿಮಾಕ್ಕೇನಾದರೂ ಲಾಭವಿದೆಯೇ ಎಂದರೆ ಖಂಡಿತಾ ಇಲ್ಲ. ಸಿನಿಮಾದ ಕಥೆ ಚೆನ್ನಾಗಿದ್ದರಷ್ಟೇ ಟೈಟಲ್‌ನಲ್ಲಿರುವ ಕಥೆ ವಕೌìಟ್ ಆಗುತ್ತದೆಯಷ್ಟೇ. ಆ ನಿಟ್ಟಿನಲ್ಲಿ ನಿರ್ದೇಶಕರ ಗಮನ ಹರಿಸಬೇಕು.
ರವಿಪ್ರಕಾಶ್ ರೈ