ಬಂಟ್ವಾಳ: ಬಿ.ಸಿ.ರೋಡ್ ನಗರ ಸೌಂದಯೀಕರಣ ಯೋಜನೆಯ ಸೆಮಿ ಫೈನಲ್ ಸಮಾಲೋಚನೆ ಸಭೆ ಸಂಸದ ನಳಿನ್ ಕುಮಾರ್ ಕಟೀಲು, ಬಂಟ್ವಾಳ ಶಾಸಕ ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು ನೇತೃತ್ವದಲ್ಲಿ ಮಂಗಳ ವಾರ ಬಿ.ಸಿ.ರೋಡ್ ಸಾಮರ್ಥ್ಯ ಸೌಧ ದಲ್ಲಿ ಮಂಗಳೂರು ಸಹಾಯಕ ಆಯುಕ್ತ ರವಿಚಂದ್ರ ನಾಯಕ್ ಉಪಸ್ಥಿತಿಯಲ್ಲಿ ನಡೆಯಿತು.
ಡಿವೈಡರ್, ವೃತ್ತ ನಿರ್ಮಾಣ
ಬಿ.ಸಿ.ರೋಡ್ ಬ್ರಹ್ಮಶ್ರೀ ನಾರಾಯಣ ಗುರುವೃತ್ತದಿಂದ ಕೈಕಂಬದ ತನಕ ಹೆದ್ದಾರಿ ಡಿವೈಡರ್ ನಿರ್ಮಾಣ ಮತ್ತು ಹೈಮಾಸ್ಟ್ ಲೈಟ್ ಅಳವಡಿಕೆ, ಬಿ.ಸಿ. ರೋಡ್ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಎದುರು ವೃತ್ತ ನಿರ್ಮಿಸುವುದು, ಮಂಗಳೂರಿಂದ ಬರುವ ಸರಕಾರಿ ಬಸ್‌ಗಳು ನೇರವಾಗಿ ಬಸ್ ನಿಲ್ದಾಣಕ್ಕೆ ಬಂದು ಹೋಗುವಂತೆ ವ್ಯವಸ್ಥೆಯನ್ನು ಕಲ್ಪಿಸುವುದು. ಫ್ಲೆ$çಒವರ್ ತಳದಲ್ಲಿ ದ್ವಿಚಕ್ರ ವಾಹನ, ಆಟೋರಿಕ್ಷಾಗಳಿಗೆ ನಿಲು ಗಡೆಗೆ ಪಾರ್ಕಿಂಗ್, ಉಳಿಕೆ ಸ್ಥಳದಲ್ಲಿ ಗಾರ್ಡನ್ ನಿರ್ಮಾಣ, ಸಿಸಿ ಕೆಮರಾ ಅಳವಡಿಕೆ ಕುರಿತು ಚರ್ಚೆ ನಡೆಯಿತು.
ಬಿ.ಸಿ.ರೋಡ್ ಕೈಕುಂಜೆ ರಸ್ತೆಯಲ್ಲಿ ಸಾರ್ವಜನಿಕ ವಾಹನ ನಿಲುಗಡೆಗೆ ಸ್ಥಳವನ್ನು ಸಜ್ಜು ಗೊಳಿಸುವುದು, ನಗರ ಕೇಂದ್ರದಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಾಣ ವಿಚಾರವಾಗಿ ಅಧಿಕಾರಿಗಳ ಜತೆ ಚರ್ಚಿಸ ಲಾಯಿತು. ಕೆಲವೊಂದು ಬದಲಾವಣೆ ಬಗ್ಗೆ ಅಧಿಕಾರಿಗಳು ಸೂಚಿಸಿದ ವಿವರವನ್ನು ದಾಖಲಿಸಿಕೊಂಡು ಹಾಲಿ ರೂಪಿಸಿದ ಯೋಜನೆಗಳ ಬಗ್ಗೆ, ಅದಕ್ಕೆ ಬೇಕಾದ ವ್ಯವಸ್ಥೆ, ಅನುಷ್ಠಾನದ ಬಗೆ ಎಂದು ಖ್ಯಾತ ವಿನ್ಯಾಸಕಾರ ಧರ್ಮರಾಜ್ ವಿವರಿಸಿದರು.
ಬಿ.ಸಿ. ರೋಡ್‌ನಲ್ಲಿ ಅಡ್ಡಾದಿಡ್ಡಿ ವಾಹನ ನಿಲುಗಡೆ, ಸಿಕ್ಕಸಿಕ್ಕಲ್ಲಿ ಕಸದ ರಾಶಿ, ಸಮರ್ಪಕ ರೀತಿಯಲ್ಲಿ ಬಸ್ ನಿಲ್ದಾಣ ವನ್ನು ಉಪಯೋಗಿಸಲು ಸಾಧ್ಯವಾಗದೇ ಇರುವುದು. ಪುರಸಭೆಯ ಪೈಪ್‌ಲೈನ್ ಒಡೆದು ಆಗಾಗ ನೀರು ಹರಿದು ಕೃತಕ ನೆರೆ ಸೃಷ್ಟಿ, ಇದರಿಂದ ಕಾಂಕ್ರೀಟ್ ರಸ್ತೆ ಒಡೆದು ಪೈಪ್ ದುರಸ್ತಿ, ಯಾವುದೇ ಅನುಮತಿ ಇಲ್ಲದೆ ನಗರ ಕೇಂದ್ರದಲ್ಲಿ ಫ್ಲೆಕ್ಸ್ ಅಳವಡಿಸುವುದು, ಬೇಕಾಬಿಟ್ಟಿ ಪ್ರಚಾರ ಬಂಟಿಂಗ್‌ಗಳನ್ನು ಹಚ್ಚುವುದು ಎಂಬಿತ್ಯಾದಿ ಹಲವು ಸಮಸ್ಯೆಗಳಿಗೆ ಈ ಮೂಲಕ ಪರಿಹಾರ ಸಾಧ್ಯ ಎಂದು ಅಭಿಪ್ರಾಯ ವ್ಯಕ್ತವಾಯಿತು.
ಸಮಾಲೋಚನೆ ಸಭೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಸಾಮ್ಸನ್ ವಿಜಯ ಕುಮಾರ್, ಬಂಟ್ವಾಳ ಉಪವಿಭಾಗ ಎಎಸ್ಪಿ ಸೈದುಲ್ ಅಡಾವತ್, ಲೋಕೋಪಯೋಗಿ ಇಲಾಖೆಯ ಸ.ಕಾ.ನಿ. ಎಂಜಿನಿಯರ್ ಉಮೇಶ್ ಭಟ್, ಬಂಟ್ವಾಳ ನಗರ ಠಾಣಾಧಿಕಾರಿ ಚಂದ್ರಶೇಖರ್, ಸಾರಿಗೆ ಇಲಾಖೆ, ಪುರಸಭೆ ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಸಮಸ್ಯೆಗಳಿಗೆ ಪರಿಹಾರ
ಬಿ.ಸಿ. ರೋಡ್ ನಗರ ಸೌಂದಯೀìಕರಣ ಯೋಜನೆ ಬಂಟ್ವಾಳ ಶಾಸಕರ ಪ್ರಗತಿಪರ ಚಿಂತನೆಯ ಯೋಜನೆ. ಇದರ ಅನುಷ್ಠಾನದಿಂದ ನಗರದ ಚಿತ್ರಣ ಬದಲಾಗಲಿದೆ. ಪ್ರಸ್ತುತ ಎದುರಾಗಿರುವ ಅನೇಕ ಸಮಸ್ಯೆಗಳಿಗೆ ಪರಿಹಾರ ಕಾಣಬೇಕು ಎಂಬುದು ಇದರ ಉದ್ದೇಶವಾಗಿದೆ. ಶೀಘ್ರ ಕಾರ್ಯಗತಗೊಳಿಸುವ ಮೂಲಕ ಜನತೆಗೆ ಅದರ ಪ್ರಯೋಜನ ಸಿಗುವಂತೆ ಕ್ರಮಕೈಗೊಳ್ಳಲಾಗುತ್ತದೆ.
-ನಳಿನ್ ಕುಮಾರ್ ಕಟೀಲು, ಸಂಸದರು, ದ.ಕ.ಲೋಕಸಭಾ ಕ್ಷೇತ್ರ
ಅನುಷ್ಠಾನಕ್ಕೆ ಕ್ರಮ
ನಗರ ಸೌಂದಯೀಕರಣ ಯೋಜನೆ ಬಹುತೇಕ ಅಂತಿಮ ಹಂತದಲ್ಲಿದೆ. ಸಿಎಸ್‌ಆರ್ ನಿಧಿಯಲ್ಲಿ ಇದನ್ನು ಅನುಷ್ಠಾನಕ್ಕೆ ತರಲಾಗುತ್ತದೆ. ಅಧಿಕಾರಿ ವರ್ಗದಿಂದ ಮತ್ತು ಸಾರ್ವಜನಿಕರ ಸಲಹೆ ಸೂಚನೆಯನ್ನು ಕೂಡ ಪಡೆದು ಯೋಜನೆ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ.
-ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು, ಶಾಸಕರು, ಬಂಟ್ವಾಳ