ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ ಜಾರಿಯಲ್ಲಿರುವ ಬೀಟ್ ವ್ಯವಸ್ಥೆಯಲ್ಲಿ ಇನ್ನಷ್ಟು ಪಾರದರ್ಶಕತೆ ತರುವ ಹಾಗೂ ಜನಸ್ನೇಹಿ ಮಾಡುವ ಉದ್ದೇಶದಿಂದ ಆಗ್ನೇಯ ವಿಭಾಗದ ಪೊಲೀಸರು “ಇ-ಬೀಟ್’ (ಡಿಜಿಟಲ್ ಬಿಟ್ ಬುಕ್ ಸಿಸ್ಟಂ) ವ್ಯವಸ್ಥೆಗೆ ಆಧುನಿಕ ಸ್ಪರ್ಶ ನೀಡಿದ್ದು, “ಸುಬಾಹು’ ಎಂಬ ಆ್ಯಪ್ ಮೂಲಕ ಪೊಲೀಸ್ ಸಿಬ್ಬಂದಿ ಕಾರ್ಯವೈಖರಿ ಬಗ್ಗೆಯೂ ನಿಗಾವಹಿಸಬಹುದಾಗಿದೆ.
ಹೊಸ ವ್ಯವಸ್ಥೆಯಿಂದ ಪೊಲೀಸ್ ಸಿಬ್ಬಂದಿಯ ಕಾರ್ಯದಕ್ಷತೆ ಉತ್ತಮಪಡಿಸುವ ಜತೆಗೆ ಸಾರ್ವಜನಿಕರಲ್ಲಿ ಧೈರ್ಯ ತುಂಬುವುದು. ಹಾಗೇ ಅಕ್ರಮ ಚಟುವಟಿಕೆಯಲ್ಲಿ ತೊಡಗುವವರಿಗೂ ಎಚ್ಚರಿಕೆ ನೀಡಲಾಗುತ್ತದೆ. ಜತೆಗೆ, ಬೀಟ್ ಸಿಬ್ಬಂದಿಯ ಚಲನವಲನಗಳ ಕುರಿತು ಆ್ಯಪ್ ಮೂಲಕ ಹಿರಿಯ ಅಧಿಕಾರಿಗಳು ಕೂತಲ್ಲೇ ಮಾಹಿತಿ ಪಡೆಯಬಹುದು. ಈ ಮೊದಲು ಬೀಟ್ ಸಿಬ್ಬಂದಿ ಸೂಚಿಸಿದ ಪಾಯಿಂಟ್‌ಗಳಿಗೆ ಹೋಗಿ ಅಲ್ಲಿರುವ ಪುಸ್ತಕದಲ್ಲಿ ಸಹಿ ಮಾಡಬೇಕಿತ್ತು. ಆದರೆ, ಕೆಲ ಸಿಬ್ಬಂದಿ ಪ್ರಮಾಣಿಕವಾಗಿ ಕಾರ್ಯನಿರ್ವಹಿ ಸುತ್ತಿರಲಿಲ್ಲ. ಜತೆಗೆ ಮಳೆ, ಗಾಳಿಗೆ ಪಾಯಿಂಟ್ ಪುಸ್ತಕಗಳು ಹಾಳಾಗುತ್ತಿದ್ದವು.
ಆದರೆ, ಸುಬಾಹು ಇ-ಬೀಟ್ ವ್ಯವಸ್ಥೆಯಲ್ಲಿ ಈ ರೀತಿ ತೊಡಕುಗಳಿರುವುದಿಲ್ಲ. ಏಕೆಂದರೆ ಬೀಟ್ ಸಿಬ್ಬಂದಿ ಠಾಣೆಯಿಂದ ಹೊರಡುವ ಸಮಯದಿಂದ ಆರಂಭವಾಗಿ ಪಾಳಿ ಮುಗಿಸಿ ಮನೆಗೆ ಹೋಗುವವರೆಗೂ ಅವರು ಎಲ್ಲಿದ್ದಾರೆ, ಯಾವ ಮಾರ್ಗದಲ್ಲಿ ಸಂಚರಿಸುತ್ತಿದ್ದಾರೆ ಎಂಬೆಲ್ಲ ಮಾಹಿತಿಯನ್ನು ಇನ್‌ಸ್ಪೆಕ್ಟರ್, ಎಸಿಪಿ ಹಾಗೂ ಡಿಸಿಪಿ ಸರ್ವರ್ ನೆರವಿನಿಂದ ಗಮನಿಸಬಹುದು. ಸದ್ಯ ಆಗ್ನೇಯ ವಿಭಾಗದಲ್ಲಿ ಮಾತ್ರ ಈ ವ್ಯವಸ್ಥೆ ಜಾರಿಯಲ್ಲಿದ್ದು, ಯಶಸ್ವಿಯಾದರೆ ಮುಂದಿನ ದಿನಗಳಲ್ಲಿ ಎಲ್ಲ ವಿಭಾಗಗಳಿಗೂ ವಿಸ್ತರಿಸುವ ಉದ್ದೇಶವಿದೆ ಎಂದು ಹಿರಿಯ ಅಧಿಕಾರಿ ಮಾಹಿತಿ ನೀಡಿದರು.
ಏನಿದು ಸುಬಾಹು ಆ್ಯಪ್?: ಸಿಬ್ಬಂದಿಯ ಕಾರ್ಯದಕ್ಷತೆ ಉತ್ತಮಪಡಿಸಲು ಆಗ್ನೇಯ ವಿಭಾಗದ ಡಿಸಿಪಿ ಇಶಾ ಪಂಥ್, ಈ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಜಾರಿಗೆ ತಂದಿದ್ದಾರೆ. ಇದಕ್ಕಾಗಿ ಸ್ವಆಸಕ್ತಿ ವಹಿಸಿ “ಸುಬಾಹು’ ಆ್ಯಪ್ ಅಭಿವೃದ್ಧಿ ಪಡಿಸಿಕೊಂಡಿದ್ದಾರೆ. ಈ ಆ್ಯಪ್ ಅನ್ನು ಪೊಲೀಸ್ ಸಿಬ್ಬಂದಿ ಹೊರತು ಪಡಿಸಿ (ಸದ್ಯ ಆಗ್ನೇಯ ವಿಭಾಗದ ಸಿಬ್ಬಂದಿ ಮಾತ್ರ, ಸರ್ಕಾರಿ ಹಾಗೂ ನಿರ್ದಿಷ್ಟ ಮೊಬೈಲ್ ನಂಬರ್‌ಗಳು) ಸಾರ್ವಜನಿಕರು ಡೌನ್‌ಲೋಡ್ ಮಾಡಿಕೊಳ್ಳಲು ಸಾಧ್ಯವಿಲ್ಲ. ಆಗ್ನೇಯ ವಿಭಾಗದ ಎಲ್ಲ ಹಂತದ ಅಧಿಕಾರಿ ಮತ್ತು ಸಿಬ್ಬಂದಿ ತಮ್ಮ ಆ್ಯಂಡ್ರಾಯ್ಡ ಮೊಬೈಲ್‌ನಲ್ಲಿ ಈ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ತಮ್ಮ ಪೋಟೋಗಳನ್ನು ಅಪ್‌ಲೋಡ್ ಮಾಡಬೇಕು. ಬಳಿಕ ಬೀಟ್ ಸ್ಥಳಕ್ಕೆ ಹೋಗಿ ಅಲ್ಲಿರುವ ಕ್ಯುಆರ್ ಕೊಡ್ ಅನ್ನು ತಮ್ಮ ಮೊಬೈಲ್‌ನಿಂದಲೇ ಸ್ಕ್ಯಾನ್ ಮಾಡಬೇಕು. ಆಗ ಸರ್ವರ್ ಮೂಲಕ ಸಿಬ್ಬಂದಿಯ ಹಾಜರಾತಿ ಸಂದೇಶ ಮೇಲಾಧಿಕಾರಿಗಳಿಗೆ ರವಾನೆಯಾಗುತ್ತದೆ.
ಆರೋಪಿಯ ಮಾಹಿತಿ ಕೂಡ ಲಭ್ಯ: ಬೀಟ್ ಸಿಬ್ಬಂದಿ ತಮ್ಮ ಪಾಳಿಯಲ್ಲಿ ಯಾವುದಾದರೂ ಅಪಘಡ ಅಥವಾ ಘಟನೆ ನಡೆದಾಗ ಸಂಬಂಧಿಸಿದ ಆರೋಪಿತ ವ್ಯಕ್ತಿಯ ಫೋಟೋ, ಸ್ಥಳ ಮತ್ತು ತರ ಅಗತ್ಯ ಮಾಹಿತಿಯನ್ನು ಆ್ಯಪ್‌ನಲ್ಲಿ ಅಪ್‌ಲೋಡ್ ಮಾಡಬೇಕು. ಅದು ಆಗ್ನೇಯ ವಿಭಾಗದ ಎಲ್ಲ ಹಂತದ ಅಧಿಕಾರಿ ಮತ್ತು ಸಿಬ್ಬಂದಿಗೆ ರವಾನೆಯಾಗುತ್ತದೆ. ಕೂಡಲೇ ಆಯೋಪಿಯ ಹಿನ್ನೆಲೆ ಪತ್ತೆ ಹಚ್ಚಬಹುದು. ಹಳೇ ರೌಡಿಶೀಟರ್‌ಗಳು, ಆರೋಪಿತ ವ್ಯಕ್ತಿಗಳ ಫೋಟೋಗಳನ್ನು ಅದರಲ್ಲಿ ನಮೂದಿಸಿ ಆತನ ಹಿನ್ನೆಲೆ ದಾಖಲಿಸಬಹುದು. ಜತೆಗೆ ಹೊಸದಾಗಿ ಬಂದಿರುವ ಪೊಲೀಸ್ ಅಧಿಕಾರಿಗಳಿಗೂ ತಮ್ಮ ವ್ಯಾಪ್ತಿಯ ಸ್ಥಳಗಳನ್ನು ಬೀಟ್ ಮ್ಯಾಪ್ ಮೂಲಕವೇ ಹೋಗಬಹುದು ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದರು.
ಕ್ಯುಆರ್ ಕೋಡ್ ಸ್ಕ್ಯಾನ್ ಮಾಡಿದರೆ ಪ್ರಸೆಂಟ್: ಆಗ್ನೇಯ ವಿಭಾಗದಲ್ಲಿ ಸುಮಾರು 1,300 ಬೀಟ್ ಪಾಯಿಂಟ್‌ಗಳಿವೆ. ಪ್ರತಿ ಪೊಲೀಸ್ ಠಾಣೆ ವ್ಯಾಪ್ತಿಯ ನಿರ್ದಿಷ್ಟ ಪ್ರದೇಶಗಳ ಬೀಟ್ ಹೊಣೆಯನ್ನು ಆಯಾ ಸಿಬ್ಬಂದಿಗೆ ವಹಿಸಲಾಗಿದೆ. ನಿತ್ಯ ಠಾಣೆಯಲ್ಲಿರುವ ಹಿರಿಯ ಅಧಿಕಾರಿಗಳು ಬೀಟ್‌ಗೆ ಹೊರಡುವ ಸಿಬ್ಬಂದಿಯ ಫೋಟೋವನ್ನು ಅವರ ಮೊಬೈಲ್‌ನಿಂದಲೇ ತೆಗೆದು, ಜಿಪಿಎಸ್ ಆನ್ ಮಾಡಿ ಆ್ಯಪ್ ಮೂಲಕ ಬೀಟ್ ನಿಗದಿಪಡಿಸುತ್ತಾರೆ. ಆ ಸಿಬ್ಬಂದಿ ನಿರ್ದಿಷ್ಟ ಸ್ಥಳಕ್ಕೆ ಹೋಗಿ “ಕ್ಯುಆರ್ ಕೊಡ್’ ಸ್ಕ್ಯಾನ್ ಮಾಡುವ ಮೂಲಕ ಹಾಜರಾತಿ ಖಚಿತ ಪಡಿಸಬೇಕು. ಈ ಮಾಹಿತಿ ಸರ್ವರ್ ಮೂಲಕ ಹಿರಿಯ ಅಧಿಕಾರಿಗಳಿಗೆ ರವಾನೆಯಾಗುತ್ತದೆ.
ಜತೆಗೆ ಕ್ಯುಆರ್ ಕೊಡ್ ಅಳವಡಿಸಿರುವ ಮನೆ ಅಥವಾ ಕಟ್ಟಡದ ಮಾಲೀಕರ ಮೊಬೈಲ್‌ಗೂ ಸಂದೇಶ ಹೋಗುತ್ತದೆ. ಈ ಸಿಬ್ಬಂದಿಯ ಮೊಬೈಲ್ ಅನ್ನು ಬೇರೆ ಯಾರಾದರೂ ಕೊಂಡೊಯ್ದು ಸ್ಕ್ಯಾನ್ ಮಾಡಲು ಸಾಧ್ಯವಿಲ್ಲ. ಏಕೆಂದರೆ ಸ್ಕ್ಯಾನ್ ಮಾಡುವಾಗ ಸಿಬ್ಬಂದಿ ಫೋಟೋ ಸಹ ಪರಿಗಣಿಸಲಾಗುತ್ತದೆ. ಒಂದು ವೇಳೆ ಸಿಬ್ಬಂದಿ ಸರಿಯಾಗಿ ಕರ್ತವ್ಯ ನಿರ್ವಹಿಸಿಲ್ಲ ಎಂದರೆ, ಈ ಸಾಕ್ಷ್ಯ ಮೂಲಕ ಪ್ರಶ್ನಿಸಬಹುದು. ಜತೆಗೆ ಹಿರಿಯ ಅಧಿಕಾರಿಗಳು ಯಾವುದೇ ಮಾಹಿತಿ ನೀಡದೆ ದಿಢೀರನೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬಹುದಾದ ತಂತ್ರಾಂಶ ಹೊಂದಿದೆ ಎಂದು ಪೊಲೀ ಸರು ಮಾಹಿತಿ ನೀಡಿದರು.
ಸುಬಾಹು ಇ-ಬೀಟ್ ವ್ಯವಸ್ಥೆ ಈ ಹಿಂದಿನ ಗಸ್ತು ವ್ಯವಸ್ಥೆಗಿಂತ ಉತ್ತಮವಾಗಿದೆ. ಎಲ್ಲ ಬೀಟ್‌ನಲ್ಲೂ ಜಿಪಿಎಸ್ ಸಂಪರ್ಕ ಇರುವುದರಿಂದ ಸಿಬ್ಬಂದಿ ಬಗ್ಗೆ ಮಾಹಿತಿ ಸಿಗುತ್ತದೆ. ಜತೆಗೆ ಆರೋಪಿತ ವ್ಯಕ್ತಿಗಳ ಹಿನ್ನೆಲೆಯನ್ನು ಕ್ಷಣಾರ್ಥದಲ್ಲಿ ಪಡೆಯಬಹುದು. ಈ ಮೂಲಕ ಆಗ್ನೇಯ ವಿಭಾಗದ ಬೀಟ್ ನಿರ್ವಹಣೆ ಮತ್ತು ಪೆಟ್ರೋಲಿಂಗ್ ಅನ್ನು ಪಾರದರ್ಶಕವಾಗಿ ಮಾಡಲಾಗುತ್ತಿದೆ.
-ಇಶಾ ಪಂಥ್, ಆಗ್ನೇಯ ವಿಭಾಗದ ಡಿಸಿಪಿ
* ಮೋಹನ್ ಭದ್ರಾವತಿ