Advertisement

ಗಡ್ಡದ ಭೂತ! ಸಾಕ್ರಟೀಸ್‌ ಮಾತ್ರ ಗಡ್ಡ ಬಿಡೋದಾ?

06:15 AM Aug 08, 2017 | |

ಗಡ್ಡದ ಟ್ರೆಂಡ್‌ ಜಾಸ್ತಿಯಾದ ಮೇಲೆ, ಅದರ ಬಗ್ಗೆ ಭರಪೂರ ಅಧ್ಯಯನಗಳು ಶುರುವಾದವು. ಗಡ್ಡದ ಜತೆಗೆ ಅದನ್ನು ಪೋಷಿಸಲು, ಮಾರುಕಟ್ಟೆ ಕೂಡ ವೇಗದಲ್ಲಿ ಬೆಳೆಯುತ್ತಿದೆ…

Advertisement

ಈಗ ಗಡ್ಡಕ್ಕೂ ಬೆಲೆ ಬಂದುಬಿಟ್ಟಿದೆ. ಗಡ್ಡ ಬಿಡದ ಯುವಕನನ್ನು ಯಾವುದೋ ಕಾಲದ ಪಳೆಯುಳಿಕೆ ಎಂಬಂತೆ ನೋಡುವ ಜಮಾನವಿದು. ಇದಕ್ಕೇನು ಕಾರಣ ಅಂತ ಹುಡುಕಿದರೆ, ಕಾಲದೊಂದಿಗೆ ಬದಲಾಗಿರುವ ಮನಃಸ್ಥಿತಿ ಮತ್ತು ತಿಳಿವಳಿಕೆ. ಗಡ್ಡದ ಟ್ರೆಂಡ್‌ ಜಾಸ್ತಿಯಾದ ಮೇಲೆ, ಅದರ ಬಗ್ಗೆ ಭರಪೂರ ಅಧ್ಯಯನಗಳು ಶುರುವಾದವು.

ಒಂದು ಅಧ್ಯಯನ ಪ್ರಕಾರ, ನಿತ್ಯ ಗಡ್ಡ ಶೇವ್‌ ಮಾಡಿಕೊಳ್ಳುವವರು ಸ್ವತ್ಛತೆಯ ಪ್ರಜ್ಞರು ಮತ್ತು ಆರೋಗ್ಯದ ಬಗ್ಗೆ ಅತೀವ ಕಾಳಜಿಯುಳ್ಳವರು, ಶಿಸ್ತು ಬಯಸುವವರು. ಗಡ್ಡ ಬಿಡುವವರು ಆಕ್ರಮಣಶೀಲತೆ, ಒಂಚೂರು ದಬ್ಟಾಳಿಕೆ ಗುಣ ಮತ್ತು ಪಕ್ವತೆ ಹೊಂದಿರುತ್ತಾರಂತೆ. ಅಲ್ಲದೆ, ಸಾಕ್ರಟೀಸ್‌ನಂತೆ ತತ್ವಜ್ಞಾನ ಮನಸ್ಸುಗಳೂ ಗಡ್ಡಬಿಡಲು ಮನಸ್ಸು ಮಾಡುತ್ತವಂತೆ.

ಇನ್ನೊಂದು ಸಂಶೋಧನೆ ಹೀಗೆ ಹೇಳುತ್ತದೆ; ಹುಡುಗಿಯರು ಹೆಚ್ಚಾಗಿ ಗಡ್ಡ ಇರುವ ಯುವಕನನ್ನೇ ಇಷ್ಟಪಡುತ್ತಾರಂತೆ! ಗಡ್ಡವಿರುವ ತನ್ನ ತಂದೆ, ತಾತ ಅವರಂತೆಯೇ ಆಪ್ತತೆ ಈ ಗಡ್ಡದ ಹುಡುಗನಲ್ಲೂ ಇವೆ ಎಂದು ಆಕೆ ಭಾವಿಸುತ್ತಾಳಂತೆ. ತನ್ನ ಮೃದು ತ್ವಚೆಗೆ ಕುರುಚಲು ಗಡ್ಡ ಸ್ಪರ್ಶಸುವುದನ್ನು ಆಕೆ ಇಷ್ಟಪಡುತ್ತಾಳೆ. 

ಗಡ್ಡವು ಪ್ರಬುದ್ಧತೆಯ ಸಂಕೇತ ಅಂತಲೂ ಕೆಲವು ಸಂಶೋಧನೆಗಳು ಹೇಳುತ್ತವೆ. ಗಡ್ಡಬಿಟ್ಟ ಹುಡುಗ ಕೂಡ ಪ್ರಬುದ್ಧ ಎಂದುಕೊಂಡು, ಆಕೆ ಅವನ ನೋಟಕ್ಕೆ ಶರಣಾಗುತ್ತಾಳಂತೆ. ಅವನ ತೆಕ್ಕೆಯಲ್ಲಿ ತಾನು ಸುರಕ್ಷಿತ ಎಂಬ ಫೀಲ್‌ ಆಕೆಗೆ ಹುಟ್ಟುತ್ತದಂತೆ. ಇವೆಲ್ಲವನ್ನು ತಿಳಿದುಕೊಂಡು ಹುಡುಗಿಯ ಮನಸ್ಸನ್ನು ಗೆಲ್ಲಲು ಒಬ್ಬ ಯುವಕ ಗಡ್ಡ ಬಿಡುತ್ತಾನೆ ಎಂಬುದು ಸುಳ್ಳು. ಮೊದಲೇ ಹೇಳಿದಂತೆ, ಈಗ ಯುವಕರ ಮನಃಸ್ಥಿತಿ ಬದಲಾಗಿದೆ. 

Advertisement

ಹಾಗೆ ಬಿಡುವ ಗಡ್ಡದಿಂದ ಅವನಿಗೆ ಗೊತ್ತಿಲ್ಲದಂತೆ ಅನೇಕ ಲಾಭಗಳೂ ಇವೆ. ಗಡ್ಡ ಒತ್ತೂತ್ತಾಗಿ ಬೆಳೆಯುವುದರಿಂದ ಅಲ್ಟ್ರಾವೈಲೆಟ್‌ ಕಿರಣಗಳು ಚರ್ಮಕ್ಕೆ ತಾಕಲಾರದು. ಅದರಿಂದ ಚರ್ಮ ಸಂಬಂಧಿ ಕಾಯಿಲೆಗಳು ಬರುವ ಸಾಧ್ಯತೆ ಕಡಿಮೆ. ಗಡ್ಡದ ಒಳಗೆ ಮೊಡವೆಗಳು ಮೂಡಿದರೆ, ಅದು ಯಾರಿಗೂ ಕಾಣುವುದಿಲ್ಲ. ಗಡ್ಡ ಬಿಡುವವರು ಕೇವಲ ಹೆಣ್ಮಕ್ಕಳಿಗೆ ಅಲ್ಲದೆ, ಬೇರೆಯವರಿಗೂ ಇಷ್ಟವಾಗುತ್ತಾರೆ.

ವಿವಿಧ ತೆರನಾದ ಶೇವ್‌ ಕ್ರೀಮ್‌ಗಳು, ಬ್ಲೇಡ್‌ಗಳ ಕಾಟ ಇಲ್ಲದಿರುವುದರಿಂದ, ಮುಖದ ಚರ್ಮ ಅಲರ್ಜಿಯಿಂದ ಬಚಾವಾಗುತ್ತದೆ. ಬಿಸಿಲ ತಾಪದಿಂದ ಬಚಾವಾಗಿ, ಮುಖ ಬೇಗನೆ ಸುಕ್ಕಾಗುವುದಿಲ್ಲ. ಅಲ್ಲದೆ, ಮುಖದಲ್ಲಿನ ತೇವಾಂಶ ಉಳಿದುಕೊಂಡು, ಗಡ್ಡವು ಚರ್ಮ ಒಣಗದಂತೆ ರಕ್ಷಣೆ ನೀಡುತ್ತದೆ.

ಈ ಕಾಲ ಎಲ್ಲದಕ್ಕೂ ಒಂದು ಮಾರ್ಕೆಟ್‌ ಅನ್ನು ಸೃಷ್ಟಿಸುತ್ತದೆ. ಇದಕ್ಕೆ ಗಡ್ಡವೂ ಹೊರತಲ್ಲ. ಗಡ್ಡಕ್ಕೆ ಬಳಸುವ ಶಾಂಪೂವಿನಿಂದ ಹಿಡಿದು, ಗಡ್ಡವನ್ನು ಪೋಷಿಸಲು ಬೇಕಾದ ಎಣ್ಣೆ, ಕಲರ್‌ಗಳೂ ಬಂದುಬಿಟ್ಟಿವೆ. ಗಡ್ಡವನ್ನು ಇಷ್ಟಬಂದಂತೆ ಟ್ರಿಮ್‌ ಮಾಡುವ, ಟ್ರಿಮ್ಮರ್‌ಗಳೂ ಸದ್ದು ಮಾಡುತ್ತಿವೆ. ಗಡ್ಡಕ್ಕಾಗಿಯೇ ಪಾರ್ಲರ್‌ಗಳು ತಲೆಯೆತ್ತಿವೆ. ಅಂದು ಕೇವಲ ಹುಡುಗಿ ಕೈಕೊಟ್ಟಿದ್ದಕ್ಕೆ ಗಡ್ಡ ಬಿಟ್ಟ ಎಂದು ಆರೋಪಿಸುತ್ತಿದ್ದರು. ಒಟ್ಟಿನಲ್ಲಿ ಈ ಯುವ ಸಮುದಾಯಕ್ಕೆ ಗಡ್ಡವೆಂಬ ಭೂತ ಮೆತ್ತಿಕೊಂಡಿರುವುದಂತೂ ನಿಜ.

– ಸದಾಶಿವ್‌ ಸೊರಟೂರು

Advertisement

Udayavani is now on Telegram. Click here to join our channel and stay updated with the latest news.

Next