ಮುಂಡಗೋಡ: ವ್ಯಕ್ತಿಯೊಬ್ಬರ ಮೇಲೆ ಕರಡಿ ದಾಳಿ ಮಾಡಿದ್ದು, ಅದೃಷ್ಟವಶಾತ್ ಆತ ಕರಡಿ ಹಿಂಡಿನಿಂದ ಪಾರಾದ ಘಟನೆ ತಾಲೂಕಿನ ಪಾಳಾ ಅರಣ್ಯದಲ್ಲಿ ಆ.20ರ ಭಾನುವಾರ ನಡೆದಿದೆ.
ಪಾಳಾ ಗ್ರಾಮದ ಚಿಕ್ಕಪ್ಪ ನಿಂಗಪ್ಪ ಮಾವುರ ಕರಡಿ ದಾಳಿಯಿಂದ ಗಾಯಗೊಂಡ ವ್ಯಕ್ತಿ.
ಪಾಳಾ ಅರಣ್ಯದಲ್ಲಿ ದನ ಮೇಯಿಸಲು ಹೋದಾಗ ಎರಡು ಮರಿ ಜೊತೆ ದೊಡ್ಡ ಕರಡಿ ಪ್ರತ್ಯಕ್ಷವಾಗಿ ಏಕಾಏಕಿ ಚಿಕ್ಕಪ್ಪನ ಮೇಲೆ ದಾಳಿ ಮಾಡಿದ್ದು, ಗಾಬರಿಗೊಂಡು ಚಿಕ್ಕಪ್ಪ ಕೂಗಾಡಿದಾಗ ಅಲ್ಲೇ ಪಕ್ಕದಲ್ಲಿ ದನ ಮೇಯಿಸುತ್ತಿದ್ದ ಸುರೇಶ ಎಂಬವರು ಚಿಕ್ಕಪ್ಪನ ಧ್ವನಿ ಕೇಳಿ ಸ್ಥಳಕ್ಕೆ ಬಂದಾಗ ಕರಡಿ ದಾಳಿ ಮಾಡುತ್ತಿರುವುದು ನೋಡಿ ಕಟ್ಟಿಗೆಯ ದೊಣ್ಣೆಯಿಂದ ಅವುಗಳನ್ನು ಓಡಿಸಿದ್ದಾನೆ.
ಈ ಘಟನೆಯ ಪರಿಣಾಮ ಚಿಕ್ಕಪ್ಪನಿಗೆ ಕೈ ಮತ್ತು ಎದೆಯ ಮೇಲೆ ಗಾಯಗಳಾಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಗಾಯಾಳು ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಪ್ರತಿದಿನದಂತೆ ತಮ್ಮ ಗದ್ದೆ ಬಳಿಯಿರುವ ಪ್ರದೇಶದಲ್ಲಿ ದನಗಳನ್ನು ಮೇಯಿಸಲು ಹೋಗಿದ್ದೆ. ಆ ವೇಳೆ ಕರಡಿ ತನ್ನೆರಡು ಮರಿಗಳ ಜೊತೆ ಬಂದು ತನ್ನ ಮೇಲೆ ದಾಳಿ ಮಾಡಿ ಎದೆಯ ಮೇಲೆ ಕೈ ಮೇಲೆ ಉಗುರಿನಿಂದ ಗಾಯ ಮಾಡಿದ್ದು, ತಾನು ಹೆದರಿ ಚೀರಾಡತೊಡಗಿದೆ. ಅಲ್ಲಿ ಪಕ್ಕದಲ್ಲಿ ದನ ಮೇಯಿಸುತ್ತಿದ್ದ ಸುರೇಶ ಎಂಬಾತ ತನ್ನ ಧ್ವನಿ ಕೇಳಿ ಓಡಿ ಬಂದನು.
ಬಳಿಕ ಬಡಿಗೆಯಿಂದ ಅದಕ್ಕೆ ಹೊಡೆದಾಗ ಅವು ಓಡಿ ಹೋದವು. ಆತ ಬರದಿದ್ದರೆ ನನ್ನ ಜೀವವನ್ನೇ ತೆಗೆಯುತ್ತಿತ್ತು. ದೇವರ ರೂಪದಲ್ಲಿ ಬಂದು ಸುರೇಶ್ ನನ್ನನ್ನು ಬದುಕಿಸಿದನು ಎಂದು ಕರಡಿ ದಾಳಿಯಿಂದ ಗಾಯಗೊಂಡ ಚಿಕ್ಕಪ್ಪ ಮಾವುರ ತನ್ನ ಕಹಿ ಘಟನೆಯನ್ನು ವಿವರಿಸಿದನು.