Advertisement

ಬೀಮ್‌ ಲೆಕ್ಕಾಚಾರ

06:00 AM Aug 06, 2018 | |

ಎರಡು ಗೋಡೆಗಳ ಮಧ್ಯೆ ಅಥವಾ ಕಂಬಗಳ ಮಧ್ಯೆ ಬರುವ ತೊಲೆ ಎಂದು ಸಾಮಾನ್ಯವಾಗಿ ಬೀಮ್‌ಗಳನ್ನು ನಾವು ಪರಿಗಣಿಸುವುದು ನಿಜವಾದರೂ ಕಾಲಾಂತರದಲ್ಲಿ ಬೀಮ್‌ಗಳು ವಿವಿಧ ಆಯಾಮಗಳನ್ನು ಪಡೆದುಕೊಳ್ಳುತ್ತಿವೆ. 

Advertisement

ಬರಿ ಭಾರ ಹೊರುವುದೇ ಅಲ್ಲದೆ ಇತರೆ ಕಾರ್ಯಗಳನ್ನೂ ಸಮರ್ಥವಾಗಿ ನಿರ್ವಹಿಸಲು ಬೀಮುಗಳ ಮೊರೆಹೋಗಲಾಗುತ್ತಿದೆ. ಈ ಹಿಂದೆ ಎರಡು ಕಂಬಗಳ ಮಧ್ಯದ ಭಾರವನ್ನು ಹೊತ್ತು ಎರಡೂ ಕಡೆ ಸಮರ್ಥವಾಗಿ ತಲುಪಿಸಿದರೆ ಅವುಗಳ ಜವಾಬ್ದಾರಿ ಮುಗಿಯುತ್ತಿತ್ತು. ಈಗ ಹಾಗಲ್ಲ, ಬೀಮುಗಳು ತಮ್ಮ ಮಾಮೂಲಿ ಕಾಯಕವಾದ ಭಾರ ಹೊರುವ ಕಾರ್ಯ ನಿರ್ವಸುತ್ತಲೇ ಟಾಯ್ಲೆಟ್‌ಗಳಿಗೆ ಸನ್‌ಕನ್‌ ಭಾಗ ದೊರಕಿಸಿ ಕೊಡುವುದರಿಂದ ಹಿಡಿದು ಕ್ಯಾಂಟಿಲಿವರ್‌ ಹೊರಚಾಚುಗಳಿಗೆ ಆಧಾರವನ್ನೂ ಕಲ್ಪಿಸುತ್ತವೆ. ಆದುದರಿಂದ ಬೀಮುಗಳ ಅಗಲ, ಆಳ ಹಾಗೂ ಉದ್ದವನ್ನು ನಿರ್ಧರಿಸುವಾಗ ಈ ತೊಲೆಗಳು ಬೇರೆ ಇನ್ನೇನೇನು ಕೆಲಸಗಳನ್ನು ಮಾಡಬೇಕು ಎಂಬುದನ್ನು ನೋಡಿಕೊಂಡು ಮುಂದುವರೆಯುವುದು ಉತ್ತಮ. 

ಮಾಮೂಲಿ ಬೀಮುಗಳು 
ಮಾಮೂಲಿ ಬೀಮ್‌ಗಳು ಸಾಮಾನ್ಯವಾಗಿ ಎಂಟು ಇಲ್ಲವೇ ಒಂಬತ್ತು ಇಂಚು ಅಗಲ ಇರುತ್ತವೆ.  ಸ್ಪಾನ್‌ ಅಂದರೆ ಕಂಬಗಳ ದೂರ ಆಧರಿಸಿ ಒಂದು ಅಡಿ ಉದ್ದದ ಸ್ಪಾನ್‌ಗೆ ಒಂದು ಇಂಚು ದಪ್ಪದಂತೆ ಲೆಕ್ಕಾಚಾರ ಮಾಡಲಾಗುತ್ತದೆ.  ಹತ್ತು ಅಡಿ ದೂರದಲ್ಲಿರುವ ಕಂಬಗಳನ್ನು ಸೇರಿಸಲು ಹತ್ತು ಇಂಚಿನಷ್ಟು ದಪ್ಪದ ಬೀಮನ್ನು ನೀಡಲಾಗುತ್ತದೆ. ಆರ್‌ ಸಿ ಸಿ ಬೀಮುಗಳಲ್ಲಿ ಕಂಬಿ ಹಾಗೂ ಕಾಂಕ್ರಿಟ್‌ ಅರ್ಧ ಅರ್ಧ ಭಾರಹೊರುವಂತೆ ವಿನ್ಯಾಸ ಮಾಡಲಾಗುತ್ತದೆ. ಬೀಮುಗಳ ದಪ್ಪ ಹೆಚ್ಚಾದಷ್ಟೂ ಕಂಬಿಯ ಬಳಕೆಯನ್ನು ಕಡಿಮೆ ಮಾಡಬಹುದು. ಅಂದರೆ, ಹತ್ತು ಅಡಿ ಅಗಲದ ಸ್ಪಾನ್‌ಗೆ ಮಾಮೂಲಿ ಹತ್ತು ಇಂಚಿನ ಬೀಮಿನ ಬದಲು ಎಂಟು ಇಂಚಿನ ಬೀಮನ್ನು ಹಾಕಬಹುದು. ಆದರೆ, ಕಡಿಮೆ ಆದ ಕಾಂಕ್ರಿಟ್‌ಗೆ ಬದಲು ಹೆಚ್ಚುವರಿಯಾಗಿ ಉಕ್ಕಿನ ಸರಳುಗಳನ್ನು ಹಾಕಬೇಕಾಗುತ್ತದೆ. ಅದೇ ರೀತಿಯಲ್ಲಿ ಕಂಬಿ ಕಡಿಮೆ ಮಾಡಬೇಕೆಂದರೆ, ಮಾಮೂಲಿ ಹತ್ತು ಇಂಚು ದಪ್ಪದ ಬೀಮಿಗೆ ಬದಲು ಹನ್ನೆರಡು ಇಂಚು ದಪ್ಪದ ಬೀಮು ಹಾಕಬಹುದು! ಆದರೆ ಈ ಕಾರ್ಯ ಸ್ವಲ್ಪ ಸಂಕೀರ್ಣ ಆಗಿರುವುದರಿಂದ, ನುರಿತ ಆರ್ಕಿಟೆಕ್ಟ್ ಇಂಜಿನಿಯರ್‌ಗಳ ಸಹಾಯ ಪಡೆಯುವುದು ಉತ್ತಮ.

ಬಿಡಿ ಬೀಮೋ ಇಲ್ಲ ಬಿಡದೇ ಸಾಗುವ ಬೀಮೋ?
ಸಾಮಾನ್ಯವಾಗಿ ತುಂಡು ತುಂಡಾಗಿ ಇರುವ ಬೀಮುಗಳ ಕಾರ್ಯಕ್ಷಮತೆ ಕಡಿಮೆ. ಕಡೇ ಪಕ್ಷ ಮೂರು  ಸ್ಪ್ಯಾನ್‌ ಅಂದರೆ ನಾಲ್ಕು ಕಂಬಗಳ ಮೇಲೆ ನೇರವಾಗಿ ಹಾದುಹೋಗುವ ತೊಲೆಗಳ ಕಾರ್ಯ ಕ್ಷಮತೆ ಹೆಚ್ಚು ಉತ್ತಮವಾಗಿರುತ್ತದೆ. ಆದರೆ, ಕಡೆಯ ಭಾಗದಲ್ಲಿ ತೊಲೆ ತುಂಡು ಆಗಲೇಬೇಕಿರುವುದರಿಂದ, ಇಲ್ಲಿ ಹೆಚ್ಚುವರಿ ಕಂಬಿಗಳನ್ನು ಹಾಕಬೇಕಾಗುತ್ತದೆ. ಮನೆ ವಿನ್ಯಾಸ ಮಾಡುವಾಗ ಆದಷ್ಟೂ ತುಂಡು ತುಂಡಾಗಿ ಇರದಂತೆ ತೊಲೆಗಳನ್ನು ವಿನ್ಯಾಸ ಮಾಡುವುದು ಉತ್ತಮ. ಬೀಮುಗಳು ತುಂಡಾದಷ್ಟೂ ಕಂಬಿಗಳನ್ನೂ ತುಂಡರಿಸಿ ಅಳವಡಿಸಬೇಕಾಗುತ್ತದೆ ಹಾಗೂ ಇದು ದುಬಾರಿ ಸಂಗತಿಯೂ ಹೌದು.  ಪ್ರತಿ ಬಾರಿಯೂ ನಮಗೆ ಬೀಮುಗಳನ್ನು ನೇರವಾಗಿ ಹೊಂದಿಸಲು ಆಗುವುದಿಲ್ಲ. ನಮ್ಮ ಮನೆಯ ವಿನ್ಯಾಸ ಮಾಡುವಾಗ ಸಾಮಾನ್ಯವಾಗಿ ಬೀಮುಗಳ ಲೆಕ್ಕ ನೋಡಿಕೊಂಡು ಮಾಡುವುದಿಲ್ಲ. ಬೀಮುಗಳ ಲೆಕ್ಕ ಬರುವುದು ನಂತರವೇ. ಆದುದರಿಂದ, ಒಮ್ಮೆ ಮನೆಯ ವಿನ್ಯಾಸ ನಿರ್ಧರಿಸಿದ ಮೇಲೆ, ಬೀಮುಗಳನ್ನು ಆದಷ್ಟೂ ನೇರವಾಗಿ ಹಾಕಲು ಪ್ರಯತ್ನಿಸಬೇಕು. ಮನೆಯ ಎಲ್ಲ ಗೋಡೆಗಳೂ ಒಂದೇ ನೇರಕ್ಕೆ ಬಾರದ ಕಾರಣ, ಹೊರಗಿನ ಗೋಡೆಗಳನ್ನು ಬಿಟ್ಟು ಇತರೆ ಗೋಡೆಗಳು ಆಫ್ಸೆಟ್‌ -ಅಕ್ಕ ಪಕ್ಕ ಜರುಗುವ ಸಾಧ್ಯತೆಯೇ ಹೆಚ್ಚಿರುತ್ತದೆ.

ಕ್ಯಾಂಟಿಲಿವರ್‌ ಬೀಮುಗಳು
ಇವು ಹೇಳಿಕೇಳಿ ಒಂದು ಕಡೆಮಾತ್ರ ಆಧಾರ ಹೊಂದಿರುವ “ಹೊರಚಾಚು’ ತೊಲೆಗಳು, ಆದುದರಿಂದ ಇವನ್ನು ಸ್ವಲ್ಪ ಹುಷಾರಾಗಿ ವಿನ್ಯಾಸ ಮಾಡಬೇಕು. ಸಾಮಾನ್ಯ ಬೀಮುಗಳ ದಪ್ಪ ಹಾಗೂ ಉದ್ದದ ಅನುಪಾತ ಒಂದಕ್ಕೆ ಹನ್ನೆರಡರಂತೆ ಇದ್ದರೆ, ಹೊರಚಾಚು ತೊಲೆಗಳ ಅನುಪಾತ ಒಂದಕ್ಕೆ ಆರು ಇಲ್ಲ ಎಂಟರಂತೆ ಇರುತ್ತದೆ. ಕಾಲಾಂತರದಲ್ಲಿ ಹೊರಚಾಚು ಬೀಮುಗಳು ಸ್ವಲ್ಪ ಕೆಳಗೆ ಇಳಿಯುವ ಸಾಧ್ಯತೆ ಇರುವುದರಿಂದ, ಕಟ್ಟುವಾಗಲೇ ಸ್ವಲ್ಪ ಎತ್ತರಿಸಿಕೊಂಡು- ಕ್ಯಾಂಬರ್‌ ಕೊಟ್ಟು ಹಾಕಿದರೆ, ನಂತರ ಒಂದರಡು ಎಮ್‌ ಎಮ್‌ ಇಳಿದರೂ, ಹೆಚ್ಚು ಕಾಣುವುದಿಲ್ಲ. ಇದೇ ರೀತಿಯಲ್ಲಿ ಮಾಮೂಲಿ ಬೀಮುಗಳಿಗೂ ಕ್ಯಾಂಬರ್‌ ಕೊಡಬಹುದು. ಹೊರಚಾಚು ಬೀಮುಗಳಿಗೆ ಆಧಾರವಿಲ್ಲದ ಕೊನೆಯಲ್ಲಿ ಎತ್ತರಿಸಬೇಕು.  ಆದರೆ ಮಾಮೂಲಿ ಬೀಮುಗಳಲ್ಲಿ ಅವುಗಳ ಮಧ್ಯದಲ್ಲಿ ಎತ್ತರಿಸಿ ಕಟ್ಟಬೇಕು. ಏಕೆಂದರೆ, ಈ ಮಾದರಿಯ ಬೀಮು ಇಳಿದರೆ, ಅದು ಮಧ್ಯೆಭಾಗದಲ್ಲೇ ಆಗಿರುತ್ತದೆ.

Advertisement

ಸನ್‌ಕನ್‌ ಸ್ಲಾ$Âಬ್‌ ಲೆಕ್ಕಾಚಾರ
ಟಾಯ್ಲೆಟ್‌ -ಶೌಚಗೃಹಗಳ ನೆಲಹಾಸು, ಮನೆಯ ಮಾಮೂಲಿ ಮಟ್ಟದಿಂದ ಕೆಳಗಿರಬೇಕೆಂದರೆ ಒಂದೆರಡು ಇಂಚಿನ ಸಣ್ಣದೊಂದು ಸ್ಟೆಪ್‌ ಇಡಬೇಕಾಗುತ್ತದೆ. ಹೀಗೆ ಮಾಡುವುದರಿಂದ, ಟಾಯ್ಲೆಟ್‌ ನೀರು ಹೊರಬರುವುದಿಲ್ಲ. ಹಾಗೆಯೇ ನೆಲಹಾಸಿನ ಕೆಳಗೆ ಕೈತೊಳೆಯುವ ಕುಂಡ, ಸ್ನಾನದನೀರು ಹೊರಹೋಗಲು ಕೊಳವೆಗಳನ್ನು ನೀಡಲಾಗುತ್ತದೆ. ಇವುಗಳ ದಪ್ಪ ಎರಡರಿಂದ ಮೂರು ಇಂಚು ಇರುತ್ತದೆ. ಜೊತೆಗೆ ಎಲ್ಲಕ್ಕಿಂತ ಮುಖ್ಯವಾಗಿ ನಾವು ಶೌಚಗೃಹದಲ್ಲಿಂದ ಸೋರಬಹುದಾದ ನೀರು ಕೆಳಗೆ ಇಳಿಯದಂತೆ ತಡೆಯಲು ಕಡ್ಡಾಯವಾಗಿ ನೀರುನಿರೋಧಕ ರಸಾಯನಗಳನ್ನು ಮಿಶ್ರಣಮಾಡಿ ಸೂಕ್ತ ಇಳಿಜಾರು ನೀಡಿ, ಕೊಳವೆಗಳ ಮೂಲಕ ಸೋರಿದ ತ್ಯಾಜ್ಯ ನೀರು ಹೊರಹೋಗುವಂತೆ ಮಾಡಬೇಕು. ಇದೆಲ್ಲದಕ್ಕೂ ಕಡೇ ಪಕ್ಷ ಒಂದು ಅಡಿಯಷ್ಟಾದರೂ ಹಳ್ಳ – ಸನ್‌ಕನ್‌ ಸ್ಲಾ$Âಬ್‌ ಬೇಕಾಗುತ್ತದೆ. ಒಮ್ಮೆ ನಾವು ನಮ್ಮ ಮನೆಯ ಒಂದು ಭಾಗದ ಹಲಗೆಯನ್ನು ಕೆಳಗೆ ಇಳಿಸಬೇಕೆಂದರೆ ಅದಕ್ಕೂ ಸೂಕ್ತ ಆಧಾರವನ್ನು ಕಲ್ಪಿಸಬೇಕಾಗುತ್ತದೆ. ಆದುದರಿಂದ ಸಾಮಾನ್ಯವಾಗಿ ಟಾಯ್ಲೆಟ್‌ ಪಕ್ಕ ಬರುವ ಬೀಮುಗಳು ಒಂದೂವರೆ ಅಡಿಯಷ್ಟು ದಪ್ಪ ಇರುತ್ತದೆ. ಇದರಲ್ಲಿ ಸ್ಲಾ$Âಬ್‌ ದಪ್ಪ ಆರು ಇಂಚೂ ಕೂಡ  ಸೇರಿರುತ್ತದೆ. 

ಕ್ಯಾಂಟಿಲಿವರ್‌ ಬ್ಯಾಲೆನ್ಸಿಂಗ್‌
ಹೊರಚಾಚು ಬೀಮುಗಳನ್ನು ವಿನ್ಯಾಸ ಮಾಡಬೇಕಾದರೆ ಅವುಗಳಿಗೆ ಸೂಕ್ತ ಎದುರು ಭಾರ – ಕೌಂಟರ್‌ವೆàಟ್‌ ಇದೆಯೇ ಎಂದು ನೋಡಬೇಕು. ಸಾಮಾನ್ಯವಾಗಿ ಹೊರಚಾಚು ಎಷ್ಟು ಉದ್ದ ಇರುತ್ತದೋ ಅಷ್ಟು ಉದ್ದ ಒಳಗೂ ಇದ್ದರೆ, ಭಾರದ ಲೆಕ್ಕ ಸರಿದೂಗಿದಂತೆ ಆಗುತ್ತದೆ. ಸರಿದೂಗಿಸುವ ಭಾರ ಹೆಚ್ಚಿದ್ದರೂ ಪರವಾಗಿಲ್ಲ. ಆದರೆ, ಕಡಿಮೆ ಇರಬಾರದು. ತಕ್ಕಡಿಯಲ್ಲಿ ಸರಿತೂಗಿಸುವಂತೆಯೇ ಲೆಕ್ಕಾಚಾರ ಮಾಡಿ, ಹೊರಚಾಚು ಕಡಿಮೆ ಭಾರದ್ದಾಗಿರುವಂತೆಯೂ, ಅದನ್ನು ಹಿಡಿದಿಡುವ ಭಾರ ಅದಕ್ಕಿಂತ ಹೆಚ್ಚಿರುವಂತೆಯೂ ನೋಡಿಕೊಳ್ಳಬೇಕು.

– ಆರ್ಕಿಟೆಕ್ಟ್ ಕೆ ಜಯರಾಮ್‌
ಹೆಚ್ಚಿನ ಮಾತಿಗೆ ಫೋನ್‌ 98441 32826

Advertisement

Udayavani is now on Telegram. Click here to join our channel and stay updated with the latest news.

Next