Advertisement

ಅಪಾಯಕಾರಿಯಾದ ಜಿಎಂಆರ್‌ ಪಳೆಯುಳಿಕೆ!

10:31 AM Oct 27, 2018 | Team Udayavani |

ಪಣಂಬೂರು: ತಣ್ಣೀರುಬಾವಿ ಬೀಚ್‌ನಲ್ಲಿ ಸ್ಥಳೀಯ ವಿದ್ಯುತ್‌ ಕಂಪೆನಿಯೊಂದು ತನ್ನ ಅವಶೇಷವನ್ನು ತೆರವುಗೊಳಿಸದೆ ಜಾಗ ಖಾಲಿ ಮಾಡಿದ್ದು ಬೀಚ್‌ನ ಸೌಂದರ್ಯವನ್ನು ಮಸುಕಾಗಿಸಿದೆ. ಈ ಭಾಗದಲ್ಲಿ ಜಿಎಂಆರ್‌ ವಿದ್ಯುತ್‌ ಕಂಪೆನಿ ತನ್ನ ಉಪಯೋಗಕ್ಕಾಗಿ ಬೀಚ್‌ ದಡದಲ್ಲಿ ಬೃಹತ್‌ ಕಲ್ಲುಗಳನ್ನು ಹಾಕಿ ಕಾಂಕ್ರೀಟ್‌ ಪಿಲ್ಲರ್‌ ಬಳಸಿ ಕಂಬಗಳನ್ನು ನಿರ್ಮಿಸಿತ್ತು. ಆ ಬಳಿಕ ಪೈಪ್‌ಲೈನ್‌ ಸಮುದ್ರದೊಳಗೆ ಅಳವಡಿಸಿತ್ತು. ಆದರೆ 8 ವರ್ಷಗಳ ಹಿಂದೆ ಸಂಸ್ಥೆ ಈ ಭಾಗದಿಂದ ತನ್ನ ತೇಲುವ ವಿದ್ಯುತ್‌ ಯೋಜನೆಯನ್ನು ದೂರದ ಹೈದರಬಾದ್‌ಗೆ ಸ್ಥಳಾಂತರಿಸಿತ್ತು. ಆದರೆ ಸಮುದ್ರದೊಳಗೆ ಹಾಕಲಾದ ಕಾಂಕ್ರೀಟ್‌ ಪಿಲ್ಲರ್‌, ಪೈಪ್‌ಲೈನ್‌ ತೆರವುಗೊಳಿಸಿಲ್ಲ. ಲೋ ಟೈಡ್‌ ಸಂದರ್ಭ ಈ ಕಂಬಗಳು ಕಾಣಸಿಗುತ್ತಿದ್ದು, ಇದೀಗ ತಣ್ಣೀರುಬಾವಿ ಬೀಚ್‌ನಲ್ಲಿ ಅವಶೇಷಗಳಂತೆ ಕಂಡು ಬರುತ್ತಿವೆ. ಕಬ್ಬಿಣಗಳು ತುಕ್ಕು ಹಿಡಿದಿವೆ. ಬೃಹತ್‌ ಬಂಡೆ ಕಲ್ಲುಗಳು ಜಾರುತ್ತಿವೆ.

Advertisement

ಈಜಲು ತೆರಳಿದರೆ ಅಪಾಯ
ಈ ಭಾಗದಲ್ಲಿ ಕಬ್ಬಿಣದ ಪಿಲ್ಲರ್‌ಗಳು ಇರುವ ಮಾಹಿತಿಯಿಲ್ಲದ ಪ್ರವಾಸಿಗರು ಈಜಲು ತೆರಳಿದರೆ ಅಪಾಯ ಖಚಿತ. ಹೆಚ್ಚಿನ ಸಂದರ್ಭ ಸುರಕ್ಷಾ ಸಿಬಂದಿಯಿದ್ದರೂ ಕೆಲವು ಬಾರಿ ಕಣ್ತಪ್ಪಿ ಇಳಿಯುವ ಪ್ರವಾಸಿಗರೂ ಇರುತ್ತಾರೆ. ಈ ಅವಶೇಷ ತೆರವುಗೊಳಿಸಲು ಸಂಬಂಧಪಟ್ಟ ಸಂಸ್ಥೆಗೆ ಈ ಹಿಂದೆಯೇ ಸ್ಥಳೀಯಾಡಳಿತ ತಿಳಿಸಿದ್ದರೂ ತೆರವುಗೊಳಿಸಿಲ್ಲ. ಕೆಲವು ಬಾರಿ ಇದು ಮರಳಿನಲ್ಲಿ ಮುಚ್ಚಿ ಹೋದರೆ, ಇನ್ನು ಕೆಲವು ಬಾರಿ ಕಾಣಸಿಗುತ್ತದೆ. ಹೀಗಾಗಿ ಈ ಅವಶೇಷಗಳನ್ನು ತತ್‌ಕ್ಷಣ ತೆರವುಗೊಳಿಸಿದಲ್ಲಿ ಅಪಾಯ ತಪ್ಪಿಸಬಹುದು.

ಗುತ್ತಿಗೆ ನೀಡಿತ್ತು
ಜಿಎಂಆರ್‌ ಸಂಸ್ಥೆ ಈ ಹಿಂದೆ ಸಮುದ್ರ ತೀರದಲ್ಲಿ ಹಾಕಲಾಗಿದ್ದ ಪಿಲ್ಲರ್‌ ತೆರವಿಗೆ ಗುತ್ತಿಗೆ ನೀಡಿತ್ತು. ಸಮುದ್ರದ ಮೇಲಿನ ಪಿಲ್ಲರ್‌ ತೆರವಾಗಿದ್ದರು ಆಳದವರೆಗೆ ತೆಗೆಯದೆ ಹಾಗೆಯೇ ಬಿಡಲಾಗಿದ್ದು, ಆದರೆ ಈಗ ಬೀಚ್‌ ಸೌಂದರ್ಯಕ್ಕೆ ಕುತ್ತು ತಂದಿದೆ. 

ಹಾನಿ ಉಂಟಾಗುವ ಸಾಧ್ಯತೆ 
ಪಣಂಬೂರು, ಸೋಮೇಶ್ವರ, ಸುರತ್ಕಲ್‌, ತಣ್ಣೀರುಬಾವಿ ಬೀಚ್‌ ಹೆಚ್ಚಿನ ಪ್ರವಾಸಿಗರನ್ನು ಸೆಳೆಯುವ ಜಿಲ್ಲೆಯ ಕಡಲತಡಿಯಾಗಿದ್ದು ಶನಿವಾರ, ರವಿವಾರ ಸ್ಥಳೀಯ ಹಾಗೂ ದೂರದ ಪ್ರವಾಸಿಗರಿಂದ ತುಂಬಿರುತ್ತದೆ. ಬಂದವರು ಈಜಲು ಹೋಗುವುದರಿಂದ ಕೈಗಾರಿಕೆಗಳ ಅವಶೇಷಗಳು ಹಾನಿಗೀಡು ಮಾಡುವ ಸಾಧ್ಯತೆಯಿದೆ. ಯೋಜಕ ಸಂಸ್ಥೆ ಈ ಜಾಗದಲ್ಲಿ ನಿಷೇಧ ಹೇರಿದ್ದರೂ ಕೆಲವು ಬಾರಿ ಪ್ರವಾಸಿಗರಿಂದ ಸಮಸ್ಯೆ ಉಂಟಾಗುತ್ತಿದೆ.

ಪರಿಶೀಲಿಸುವೆ
ತಣ್ಣೀರುಬಾವಿ ಬೀಚ್‌ನಲ್ಲಿ ಈ ಹಿಂದೆ ಜಿಎಂಆರ್‌ ವಿದ್ಯುತ್‌ ಕಂಪೆನಿ ಇದ್ದಾಗ ಬೀಚ್‌ ಬಳಿ ಹಾಕಲಾದ ಕಾಂಕ್ರೀಟ್‌ ಕಂಬಗಳ ಬಗ್ಗೆ ಗಮನಕ್ಕೆ ಬಂದಿಲ್ಲ. ಸಾರ್ವಜನಿಕರಿಗೆ, ಪ್ರವಾಸಿಗರಿಗೆ ಅನನುಕೂಲವಾಗುತ್ತಿದ್ದರೆ ಇದನ್ನು ತೆರೆವುಗೊಳಿಸುವ ಬಗ್ಗೆ ಪರಿಶೀಲಿಸುತ್ತೇನೆ.
 – ಶಶಿಕಾಂತ್‌ ಸೆಂಥಿಲ್‌, ಜಿಲ್ಲಾಧಿಕಾರಿ

Advertisement

‡ಲಕ್ಷ್ಮೀನಾರಾಯಣ ರಾವ್‌

Advertisement

Udayavani is now on Telegram. Click here to join our channel and stay updated with the latest news.

Next