ಬೆಂಗಳೂರು: ವಿವಿಧ ರಾಜಕೀಯ ಪಕ್ಷಗಳು ಭರವಸೆಗಳ ಮಹಾಪೂರವನ್ನೇ ಹರಿಸುತ್ತವೆ. ಆದರೆ, ಅವರೆಲ್ಲರನ್ನೂ ನಂಬಬೇಡಿ. ಸಾಮಾಜಿಕನ್ಯಾಯದ ಪರ ಇರುವವರನ್ನು ಮಾತ್ರ ಬೆಂಬಲಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಉಪ್ಪಾರ ಸಮಾಜಕ್ಕೆ ಮನವಿ ಮಾಡಿದರು. ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಮಂಗಳವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಮ್ಮಿಕೊಂಡಿದ್ದ ಭಗೀರಥ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.
ನಂಜನಗೂಡು ಮತ್ತು ಗುಂಡ್ಲುಪೇಟೆ ಉಪಚುನಾವಣೆ ಗೆಲುವಿನ ಹಿಂದೆ ಉಪ್ಪಾರರ ಪಾತ್ರ ದೊಡ್ಡದು. ಹೊಸದುರ್ಗದ ಮದುರೆ ಪುರುಷೋತ್ತಮಾನಂದಪುರಿ ಸ್ವಾಮೀಜಿ ಕೂಡ ಸಾಮಾಜಿಕನ್ಯಾಯದ ಪರ ಇದ್ದವರನ್ನು ಬೆಂಬಲಿಸುವಂತೆ ಸಮುದಾಯಕ್ಕೆ ಕರೆ ನೀಡಿದರು. ಹಾಗಾಗಿ, ಗೆಲ್ಲಲು ಸಾಧ್ಯವಾಯಿತು. ಮುಂದಿನ ದಿನಗಳಲ್ಲೂ ಬೇರೆ ಬೇರೆ ಪಕ್ಷಗಳು ಸಮುದಾಯಕ್ಕೆ ಎಲ್ಲವನ್ನೂ ಮಾಡುವುದಾಗಿ ಹೇಳುತ್ತವೆ.
ಆದರೆ, ಸಾಮಾಜಿಕನ್ಯಾಯದ ಪರ ಇದ್ದವರನ್ನು ಮಾತ್ರ ಬೆಂಬಲಿಸಿ ಎಂದು ಪರೋಕ್ಷವಾಗಿ ಹೇಳಿದರು. ಉದ್ದೇಶಪೂರ್ವಕವಾಗಿ ಸೋಲುವ ಕಡೆಯೇ ಉಪ್ಪಾರರಿಗೆ ಟಿಕೆಟ್ ಕೊಡುವವರ ಬಗ್ಗೆ ಹುಷಾರು ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ್ಪಾರ ಸಮುದಾಯದ ಮುಖಂಡರು ಗೆಲ್ಲುವ ಕಡೆ ಟಿಕೆಟ್ ಕೊಡಿಸುವುದಾಗಿ ಭರವಸೆ ನೀಡಿದರು.
ಶೀಘ್ರ ಕೆಪಿಎಸ್ಸಿ ಸದಸ್ಯ ನೇಮಕ: ಶೀಘ್ರದಲ್ಲೇ ಕರ್ನಾಟಕ ಲೋಕಸೇವಾ ಆಯೋಗಕ್ಕೆ ಉಪ್ಪಾರ ಸಮುದಾಯದವರನ್ನು ಸದಸ್ಯರನ್ನಾಗಿ ನೇಮಿಸಿ, ಆದೇಶ ಹೊರಡಿಸಲಾಗುವುದು ಎಂದು ಇದೇ ವೇಳೆ ಮುಖ್ಯಮಂತ್ರಿ ಭರವಸೆ ನೀಡಿದರು. ಹೊಸದುರ್ಗದ ಪುರುಷೋತ್ತಮಾನಂದಪುರಿ ಸ್ವಾಮೀಜಿ, ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ, ನಿವೃತ್ತ ತಹಶೀಲ್ದಾರ್ ಚನ್ನಬಸಪ್ಪ ಮಾತನಾಡಿದರು. ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ ಇತರರು ಹಾಜರಿದ್ದರು.
ಆಶೀರ್ವಾದ ಇದ್ರೆ ಎಲ್ಲಾ ಆಗ್ತಿàನಿ
ನಿಮ್ಮ (ಉಪ್ಪಾರ ಸಮುದಾಯ) ಹಾಗೂ ರಾಜ್ಯದ ಜನರ ಆಶೀರ್ವಾದ ಇದ್ದರೆ, ಸಿಎಂ ಆಗುತ್ತೇನೆ… ಭಗೀರಥ ಜಯಂತಿಯಲ್ಲಿ “ಮುಂದಿನ ಮುಖ್ಯಮಂತ್ರಿ ನೀವೇ ಆಗಬೇಕು’ ಎಂಬ ಕೂಗು ಸಭಿಕರಿಂದ ಕೇಳಿಬಂತು. ಆಗ, ಮುಖ್ಯಮಂತ್ರಿ ಸಿದ್ದರಾಮಯ್ಯ, “ನಿಮ್ಮ ಮತ್ತು ಜನರ ಆಶೀರ್ವಾದ ಇದ್ರೆ, ಅದೆಲ್ಲಾ ಆಗ್ತಿàನಿ ಬಿಡಿ’ ಎಂದರು.
ಉಪ್ಪಾರ ಸಮುದಾಯದವರಿಗೆ ಸಚಿವ ಸ್ಥಾನ ನೀಡಬೇಕು ಎಂಬ ಒತ್ತಾಯವೂ ಕೇಳಿಬಂತು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, “ಈ ಸಲ ಮಂತ್ರಿ ಸ್ಥಾನ ನೀಡಬೇಕಿತ್ತು. ಆದರೆ, ಕೆಲವು ಕಾರಣಗಳಿಂದ ಆಗಿಲ್ಲ. ಮುಂದಿನ ಬಾರಿ ನಮ್ಮದೇ ಸರ್ಕಾರ ಇರುತ್ತದೆ. ಆಗ ಕೊಡೋಣ’ ಎಂದರು.