Advertisement

ನೆರೆ ಸಂತ್ರಸ್ತರಿಗೆ ಸ್ಪಂದಿಸುವ ಕೆಲಸವಾಗಲಿ

12:29 AM Oct 27, 2019 | Team Udayavani |

ಬೆಂಗಳೂರು: ರಾಷ್ಟ್ರಪಿತ ಮಹಾತ್ಮಾಗಾಂಧೀಜಿ, ಸುಭಾಷ್‌ ಚಂದ್ರಬೋಸ್‌, ವೀರ್‌ ಸಾವರ್ಕರ್‌ ಸೇರಿದಂತೆ ಯಾರ ಬಗ್ಗೆಯೂ ಟೀಕೆ-ಟಿಪ್ಪಣಿ ಸರಿಯಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅಭಿಪ್ರಾಯ ಪಟ್ಟಿದ್ದಾರೆ.

Advertisement

ಬಹುರೂಪಿ ಪ್ರಕಾಶನ ಪ್ರಸ್‌ ಕ್ಲಬ್‌ನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪತ್ರಕರ್ತ ಆರ್‌.ಟಿ.ವಿಠuಲಮೂರ್ತಿ ಅವರ “ಇದೊಂಥರಾ ಆತ್ಮಕಥೆ’ ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು ಇವತ್ತು ರಾಜ್ಯದ ಜನತೆ ಪ್ರವಾಹ ಸಂಕಷ್ಟದಿಂದ ನರಳುತ್ತಿರುವಾಗ ನಾವು ಅನಗತ್ಯ ವಿಚಾರ ಪ್ರಸ್ತಾಪ ಮಾಡಿಕೊಂಡು ಟೀಕೆ-ಟಿಪ್ಪಣಿಗಳಲ್ಲಿ ಕಾಲ ಕಳೆಯುವುದು ಎಷ್ಟು ಸರಿ.

ಜನತೆಯ ನೋವು ನಿವಾರಿಸಬೇಕಾದ ಕೆಲಸ ಜನಪ್ರತಿನಿಧಿಗಳಾದ ನಮ್ಮ ಮೇಲಿದೆ. ಅದು ಇಂದಿನ ಅಗತ್ಯ ಸಹ ಎಂದು ಪ್ರತಿಪಾದಿಸಿದರು. ನಮ್ಮ ದೇಶದ ಇತಿಹಾಸ ನೋಡಿದಾಗ ಯಾರು ಏನೇನು ಕೊಡುಗೆ ಕೊಟ್ಟಿದ್ದಾರೆ ಎಂಬುವುದು ಅರಿವಾಗುತ್ತದೆ. ಬರೀ ಟೀಕೆ ಮಾಡುವುದರಿಂದ ಈ ದೇಶದ ಜ್ವಲಂತ ಸಮಸ್ಯೆಗಳು ಬಗೆಹರಿಯುವುದಿಲ್ಲ ಎಂದು ಹೇಳಿದರು.

ದೇಶದ ಇವತ್ತಿನ ಪರಿಸ್ಥಿತಿ ನೋಡಿದಾಗ ಎತ್ತ ಸಾಗುತ್ತಿದೆ ಎಂಬುವುದೇ ಅರಿವಿಗೆ ಬರುತ್ತಿಲ್ಲ. ಪಾಕಿಸ್ತಾನ-ಭಾರತ ವಿಭಜನೆ ವೇಳೆ ತೆಗೆದುಕೊಂಡ ತೀರ್ಮಾನಗಳು ಇನ್ನೂ ಬಗೆಹರಿದಿಲ್ಲ. ಕಾಶ್ಮೀರದಲ್ಲಿನ 370 ವಿಧಿ ರದ್ದುಪಡಿಸಿದ ಮೇಲೆ ಅಲ್ಲಿ ಯಾವ ಸ್ಥಿತಿ ನಿರ್ಮಾಣವಾಗಿದೆ. ಜನರು ಯಾವ ರೀತಿಯ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ ಎಂಬುವುದು ನಮ್ಮ ಕಣ್ಮುಂದೆ ಇದೆ ಎಂದರು.

ಈ ಹಿಂದೆ ದೇಶದಲ್ಲಿರುವ ಗುಡಿ ಕೈಗಾರಿಕೆಗಳಿಗೆ ಜೀವನೀಡಿ ಬಡವರ ಕೈಗೆ ಉದ್ಯೋಗ ನೀಡುವ ಹಿನ್ನೆಲೆಯಲ್ಲಿ ಗಾಂಧೀಜಿಯವರು ಸ್ವದೇಶಿ ಚಳುವಳಿಗೆ ಕರೆ ನೀಡಿದರು. ಆದರೆ ಈಗ ಕೇಂದ್ರ ಸರ್ಕಾರ ತನ್ನ ನೀತಿಗಳ ಮೂಲಕ ನಿರುದ್ಯೋಗ, ಉದ್ಯೋಗ ಕಡಿತ, ಆರ್ಥಿಕ ಸಂಕಷ್ಟ ತಂದೊಡ್ಡಿದೆ. ಯಾರಾದರೂ ಮಾತನಾಡಿದರೆ ಅವರ ವಿರುದ್ಧ ಎಫ್ಐಆರ್‌ ಹಾಕಿ , ಐಟಿ, ಇಡಿ, ಆದಾಯ ತೆರಿಗೆ ದಾಳಿ ಮಾಡಿಸಲಾಗುತ್ತಿದೆ. ಇದರ ವಿರುದ್ಧ ಧ್ವನಿ ಎತ್ತದಂತ ಸ್ಥಿತಿ ನಿರ್ಮಾಣವಾಗಿವೆ ಎಂದು ಹೇಳಿದರು.

Advertisement

ದೇಶದ ಸ್ವಾತಂತ್ರ್ಯಕ್ಕಾಗಿ ಪತ್ರಿಕೆಗಳ ಕೊಡುಗೆಯನ್ನು ಮರೆಯುವಂತಿಲ್ಲ.ಆದರೆ ಇಂದು ಮಾಧ್ಯಮ ಕ್ಷೇತ್ರ ಯಾವ ದಿಕ್ಕಿನಲ್ಲಿ ಹೋಗಬೇಕಿತ್ತೋ ಹೋಗುತ್ತಿಲ್ಲ. ಮಾಧ್ಯಮಗಳು ಯಾವ ವಿಚಾರಕ್ಕೆ ಒತ್ತು ಕೊಡಬೇಕು, ಯಾವ ವಿಚಾರಕ್ಕೆ ಒತ್ತು ಕೊಡಬಾರದು ಎಂಬುದರ ಬಗ್ಗೆ ಯೋಚಿಸಬೇಕಾಗಿದೆ ಎಂದು ಹೇಳಿದರು. ಮೌಲ್ಯಾಧಾರಿತ, ವಸ್ತು ನಿಷ್ಠ, ವರದಿಗಳು ಇತ್ತೀಚೆಗೆ ಕಣ್ಮರೆಯಾಗುತ್ತಿವೆ. ಈಗಿನ ಸ್ಥಿತಿಯಲ್ಲಿ ಪತ್ರಿಕಾರಂಗ ಎಚ್ಚರಿಕೆಯಿಂದ ಕೆಲಸ ಮಾಡಬೇಕು.

ಏಕೆಂದರೆ, ದೇಶದಲ್ಲಿ ಭಯದ ವಾತಾವರಣ ಸೃಷ್ಟಿಸಿರುವಾಗ ಮಾಧ್ಯಮಗಳ ಪಾತ್ರ ದೊಡ್ಡದು ಎಂದು ತಿಳಿಸಿದರು. ಸಾಹಿತಿ ಡಾ.ವಿಜಯಮ್ಮ ಪುಸ್ತಕದ ಕುರಿತು ಮಾತನಾಡಿದರು. ಆರ್‌.ಟಿ.ವಿಠಲಮೂರ್ತಿ ಸ್ವಾಗತ ಕೋರಿದರು. ಬಹುರೂಪಿ ಪ್ರಕಾಶನದ ಜಿ.ಎನ್‌.ಮೋಹನ್‌ ಪ್ರಸ್ತಾವಿಕ ಭಾಷಣ ಮಾಡಿದರು. ಹಿರಿಯ ಪತ್ರಕರ್ತ ಎಸ್‌.ರಾಜಶೇಖರ್‌ ಕಾರ್ಯಕ್ರಮ ನಿರೂಪಿಸಿದರು.

ಐಟಿ ದಾಳಿ ನಿಮ್ಮ ಮೇಲೆ ಆಗುತ್ತಂತೆ ಎಂದು ಮಾಧ್ಯಮದವರು ಕೇಳುತ್ತಾರೆ. ನಾನು ಆದರೆ ಆಗಲಿ. ನನಗೇನು ಭಯ ಇಲ್ಲ. ನನ್ನ ಮನೆಯ ಮೇಲೆ ದಾಳಿ ನಡೆದರೆ ಯಡಿಯೂರಪ್ಪ ಅವರ ದಾಖಲೆ ಸಿಗುತ್ತದೆ ಎಂದು ಹೇಳಿದ್ದೇನೆ. ಇನ್ನೇನು ಹೇಳಲಿ. ನನಗೇನು ಭಯ ಇಲ್ಲ.
-ಎಚ್‌.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next