ಅಫಜಲಪುರ: ವಿದ್ಯಾರ್ಥಿ ಜೀವನ ಅಮೂಲ್ಯವಾದುದ್ದು. ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವಿನ ಸಂಬಂಧ ಹಾಲು ಜೇನಿನಂತಿರಬೇಕು. ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆಯೇ ಗುರಿಯಾಗಿರಬೇಕು ಎಂದು ಡಾ| ಶಿವಾನಂದ ಸ್ವಾಮಿಜಿ ಹೇಳಿದರು.
ಪಟ್ಟಣದ ಸ್ಫೂರ್ತಿ ಪದವಿ ಪೂರ್ವ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು ಆವರಣದಲ್ಲಿ ನಡೆದ ಗುರುವಂದನೆ ಸಮಾರಂಭ ಹಾಗೂ ತಾಲೂಕಿನ ವಿವಿಧ ಪ್ರೌಢಶಾಲೆಗಳಲ್ಲಿ ಬೋಧನೆ ಮಾಡುತ್ತಿರುವ ಮತ್ತು ವಿದ್ಯಾರ್ಥಿಗಳಿಂದ ಉತ್ತಮ ಮೆಚ್ಚುಗೆ ಪಡೆದ 50 ಜನ ಶಿಕ್ಷಕರ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಂಸ್ಥೆ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುತ್ತಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡು ಸನ್ಮಾರ್ಗದೆಡೆಗೆ ಸಾಗಬೇಕು ಎಂದು ಸಲಹೆ ನೀಡಿದರು.
ಪ್ರಾಸ್ತಾವಿಕವಾಗಿ ಮಾಡಿದ ಸಂಸ್ಥೆ ಅಧ್ಯಕ್ಷ ಜಿ.ಎಸ್. ಬಾಳಿಕಾಯಿ, ಸಂಸ್ಥೆ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಒದಗಿಸುತ್ತಿದೆ. ಮುಂಬರುವ ದಿನಗಳಲ್ಲಿ ಶೇ. 100ರಷ್ಟು ಫಲಿತಾಂಶ ನೀಡುವ ಗುರಿ ಹೊಂದಲಾಗಿದೆ ಎಂದು ಹೇಳಿದರು. ವಿಶ್ವಾರಾಧ್ಯ ಮಳೆಂದ್ರ ಶಿವಾಚಾರ್ಯರರು, ಕುಮಾರ ಶಿವಲಿಂಗ ಮಹಾಸ್ವಾಮಿಗಳು, ಆಲಮೇಲ ವಿರಕ್ತ ಮಠದ ಜಗದೇವ ಮಲ್ಲಿಬೊಮ್ಮ ಮಹಾಸ್ವಾಮಿಗಳು, ಶಿವೂರಿನ ಗಂಗಾಧರಾರ್ಯರು ಸಾನ್ನಿಧ್ಯ ವಹಿಸಿದ್ದರು. ಡಾ| ಸಂಜಯ ಪಾಟೀಲ ಕಾರ್ಯಕ್ರಮ ಉದ್ಘಾಟಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಾಂತೇಶ ಪಾಟೀಲ ಅಧ್ಯಕ್ಷತೆ ವಹಿಸಿದ್ದರು.
ಖ್ಯಾತ ವಕೀಲ ಶಂಕರರಾವ ಹುಲ್ಲೂರ ದಿನದರ್ಶಿಕೆ ಬಿಡುಗಡೆ ಮಾಡಿದರು. ಮುಖ್ಯ ಅತಿಥಿಗಳಾಗಿ ಸಿಪಿಐ ಮಹಾಂತೇಶ ಪಾಟೀಲ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ನವೀನ ಎಂ., ಪುರಸಭೆ ಸದಸ್ಯ ಚಂದು ದೇಸಾಯಿ ಹಾಜರಿದ್ದರು.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ ಮೆಚ್ಚುಗೆ ಪಡೆದ 50 ಜನ ಉತ್ತಮ ಶಿಕ್ಷಕರನ್ನು ಗೌರವಿಸಲಾಯಿತು.
ಸಂಸ್ಥೆ ಕಾರ್ಯದರ್ಶಿ ಸುಜಾತಾ ಬಾಳಿಕಾಯಿ, ಕಾಲೇಜಿನ ಉಪನ್ಯಾಸಕರಾದ ಬಸವರಾಜ ರೆಡ್ಡಿ, ಮಲ್ಲಿಕಾರ್ಜುನ, ಶಿವಾನಂದ ಜಮಾದಾರ, ನಾಗೇಶ ಪೂಜಾರಿ, ಶೈತಿ ಕುಲಕರ್ಣಿ, ಸುನಿತಾ ಬಬಲಾದ, ಶೃತಿ, ಅಜೀನಾಥ ಮತ್ತು ಪಾಲಕರು ಇದ್ದರು.