ತಾಳಿಕೋಟೆ: ವಿದ್ಯಾರ್ಥಿಯಾದವರು ತಮ್ಮ ವಿದ್ಯಾಭ್ಯಾಸದೊಂದಿಗೆ ಯಶಸ್ವಿಯಾಗಿ ಸಾಧನೆ ಮಾಡುತ್ತ ಮಹತ್ವದ ಗುರಿಯೊಂದನ್ನು ಇಟ್ಟುಕೊಂಡು ಹಿಂದೆ ಗುರಿವಿನ ಆಶೀರ್ವಾದದೊಂದಿಗೆ ಮುನ್ನಡೆದರೆ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯವೆಂದು ಬಸವನಬಾಗೇವಾಡಿ ಡಿಎಸ್‌ಪಿ ಅರುಣಕುಮಾರ ಕೋಳೂರ ಹೇಳಿದರು.
ಸ್ಥಳೀಯ ಎಸ್.ಎಸ್.ವಿದ್ಯಾ ಸಂಸ್ಥೆ ವತಿಯಿಂದ ನಡೆಸಿಕೊಂಡು ಬರಲಾಗುತ್ತಿರುವ 2021-22ನೇ ಸಾಲಿನ ಪ್ರಾಥಮಿಕ, ಪ್ರೌಢ, ಪಪೂ, ಬಿಪಿಎಡ್, ಡಿಎಚ್‌ಐ ಹಾಗೂ ಐಟಿಐ ಶಾಲಾ ಕಾಲೇಜುಗಳ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಶುಭ ಕೋರುವ ಹಾಗೂ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಯಾವುದೇ ಆಸರೆ ಇಲ್ಲದೇ ಎಚ್.ಎಸ್. ಪಾಟೀಲರು ಬೃಹತ್ ಆಕಾರದ ಸಂಗಮಾರ್ಯ ವಿದ್ಯಾ ಸಂಸ್ಥೆಯನ್ನು ಕಟ್ಟಿಕೊಂಡು ಮುನ್ನಡೆದಿದ್ದಲ್ಲದೇ ಬಡ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುತ್ತಾ ಸಾಗಿರುವುದು ಶ್ಲಾಘನೀಯ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಯಾದವನು ಗುರಿ ಎಂಬುದನ್ನು ಇಟ್ಟುಕೊಂಡು ಮುನ್ನಡೆಯಬೇಕು. ಯಾವ ಗುರಿ ಇಟ್ಟುಕೊಂಡಿದ್ದೇವೆ ಎಂಬುದರ ಕುರಿತು ಕನಸನ್ನು ಕಾಣುತ್ತಿದ್ದರೆ ಅದು ನನಸಾಗುವದರಲ್ಲಿ ಯಾವ ಸಂಶಯವಿಲ್ಲವೆಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಜಿ. ಮಿರ್ಜಿ ಮಾತನಾಡಿ, ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿರುವ ಎಚ್. ಎಸ್.ಪಾಟೀಲರ ವಿದ್ಯಾ ಸಂಸ್ಥೆಯು ಜನ ಮೆಚ್ಚುಗೆಗೆ ಪಾತ್ರವಾಗಿದೆ. ಇಲ್ಲಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿ ಗಳು ತಮ್ಮ ಮುಂದಿನ ಏಳಿಗೆಯ ಕನಸ್ಸನ್ನು ಕಾಣಬೇಕು ಇಲ್ಲದಿದ್ದರೆ ಮುಂದೆ ಬರಲು ಸಾಧ್ಯವಿಲ್ಲವೆಂದರು.
ಫೀರಾಪುರ ಸರ್ಕಾರಿ ಪ್ರೌಢ ಶಾಲೆ ಮುಖ್ಯಗುರು ಆರ್.ಬಿ. ದಮ್ಮೂರಮಠ ಮಾತನಾಡಿ, ಎಚ್.ಎಸ್. ಪಾಟೀಲ ಅವರ ಸಂಸ್ಥೆಯಲ್ಲಿ ಈ ಹಿಂದೆ ನನಗೆ ಕಲಿಯಲು ಅವಕಾಶ ಸಿಗಲಿಲ್ಲ. ಆದರೆ 4 ವರ್ಷ ವಿದ್ಯಾರ್ಥಿಗಳಿಗೆ ಕಲಿಸುವ ಅವಕಾಶ ಸಿಕ್ಕಿತ್ತೆಂದು ಹಿಂದಿನ ತಮ್ಮ ಸೇವೆ ಕುರಿತು ವಿವರಿಸಿದ ಅವರು, ಎಚ್.ಎಸ್. ಪಾಟೀಲ ಅವರ ತ್ಯಾಗ ಅವರಲ್ಲಿ ಅಡಗಿದೆ ಎಂದರೆ ತಪ್ಪಾಗಲಾರದು. ಕೊರೊನಾ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಉಚಿತ ನೋಟಬುಕ್ ವಿತರಿಸಿದ್ದಲ್ಲದೇ ಆಹಾರ ಕಿಟ್‌ಗಳನ್ನು ವಿತರಿಸಿ ಮಾನವೀಯತೆ ತೋರಿದ್ದಾರೆಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಎಸ್.ಎಸ್. ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಎಚ್.ಎಸ್. ಪಾಟೀಲ ಮಾತನಾಡಿ, ವಿದ್ಯಾರ್ಥಿಗಳು ಒಳ್ಳೆಯ ವಿದ್ಯಾವಂತರಾಗಿ ಬಾಳಿ ಬೆಳಗಬೇಕು. ಈ ಸಂಸ್ಥೆಯ ಶಾಲೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಾಗಿ ಪ್ರಥಮ ಸ್ಥಾನ, ದ್ವಿತೀಯ ಸ್ಥಾನ, ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನವನ್ನು ತಮ್ಮ ಸಂಸ್ಥೆಯ ವತಿಯಿಂದ ನೀಡುವುದಾಗಿ ವಾಗ್ಧಾನ ಮಾಡಿದರು.
ಹಿರಿಯ ಪತ್ರಕರ್ತ ಜಿ.ಟಿ. ಘೋರ್ಪಡೆ, ಶಿಕ್ಷಕ ಎಸ್ .ವಿ. ಜಾಮಗೊಂಡಿ ಮಾತನಾಡಿದರು. ಖಾಸ್ಗೇತೇಶ್ವರ ಮಠದ ಉಸ್ತುವಾರಿ ವೇ.ಮುರುಘೇಶ ವಿರಕ್ತಮಠ ಅವರು ಸಾನ್ನಿದ್ಯ ವಹಿಸಿ ಆಶೀರ್ವಚನ ನೀಡಿದರು.
ಎಸ್.ಎಸ್.ವಿದ್ಯಾ ಸಂಸ್ಥೆ ಕಾರ್ಯದರ್ಶಿ ಸಂತೋಷ ಪಾಟೀಲ, ಸರ್ವಜ್ಞ ವಿದ್ಯಾ ಪೀಠ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸಿದ್ದನಗೌಡ ಮಂಗಳೂರ, ಮಾರುತಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎನ್.ಬಿ.ನಡುವಿನಮನಿ, ತಾಳಿಕೋಟೆ ಇಸಿಓ ಪಿ.ಎ.ಮುಲ್ಲಾ, ಬಿಆರ್‌ಸಿ ಕಾಶಿನಾಥ ಸಜ್ಜನ, ಸಿಆರ್‌ಸಿ ಸುರೇಶ ವಾಲಿಕಾರ, ಉರ್ದು ಸಿಆರ್‌ಸಿ ಎಚ್.ಬಿ.ಕೆಂಭಾವಿ, ವೈ.ಜೆ. ರಾಠೊಡ, ಅಶೋಕ ಕಟ್ಟಿ ಇದ್ದರು.