ದಾಂಡೇಲಿ: ನಾವು ಹುಟ್ಟುವಾಗ ಅರ್ಜಿ ಹಾಕಿಲ್ಲ. ಧರ್ಮ, ಜಾತಿಗಳ ನಡುವೆ ಸಂಘರ್ಷ ಸಲ್ಲದು. ಜಾತಿ, ಧರ್ಮದ ನಡುವೆ ವಿಷಬೀಜ ಬಿತ್ತುವವರು ಕ್ರಿಮಿನಲ್‌ಗಳು. ಅಂಥವರಿಂದ ಸಮಾಜದ ಸ್ವಾಸ್ಥ್ಯ ರಕ್ಷಣೆ ಅಸಾಧ್ಯ. ಬಂದ್/ ಹೋರಾಟಗಳಿಂದ ಬದಲಾವಣೆಯಾಗದು. ಈ ನಿಟ್ಟಿನಲ್ಲಿ ಮಾನವ ಮಾನವನಾಗಿ ಬಾಳಬೇಕು. ಆಗ ಮಾತ್ರ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ
ಆರ್.ವಿ. ದೇಶಪಾಂಡೆ ಹೇಳಿದರು.
ಅವರು ನಗರದ ರಂಗನಾಥ ಸಭಾಭವನದಲ್ಲಿ ನಡೆದ ವಿವಿಧ ಕಾರ್ಯಕ್ರಮಗಳ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಿಕ್ಷಣ ಮತ್ತು ಆರೋಗ್ಯಕ್ಕೆ ಎಲ್ಲಿ ಒತ್ತನ್ನು ಕೊಡಲಾಗುತ್ತದೋ ಅಲ್ಲಿ ಅಭಿವೃದ್ಧಿ ಸಾಧ್ಯ. ಈ ನಿಟ್ಟಿನಲ್ಲಿ ಮನೆಬಾಗಿಲಿಗೆ ಸರಸ್ವತಿಯನ್ನು ಮುಟ್ಟಿಸಿದ
ಹೆಗ್ಗಳಿಕೆ ರಾಜ್ಯ ಸರಕಾರಕ್ಕಿದೆ. ವಿವಿಧ ಕಾರ್ಖಾನೆಗಳು, ಕಂಪೆನಿಗಳು ಕಾರ್ಪೋರೇಟ್ ಸಾಮಾಜಿಕ ಜವಾಬ್ದಾರಿಯಡಿ ಜಿಲ್ಲೆಗೆ ಸಾಕಷ್ಟು ಕೊಡುಗೆಗಳನ್ನು ನೀಡಿದೆ. ದಾಂಡೇಲಿಯ ಕಾಗದ ಕಾರ್ಖಾನೆಯು ಶಿಕ್ಷಣ ಕ್ಷೇತ್ರಕ್ಕೆ ಉಪಯುಕ್ತ ನೆರವು ನೀಡುವುದರ
ಮೂಲಕ ತನ್ನ ಬದ್ಧತೆಯನ್ನು ಮೆರೆದಿದೆ. ರಾಜ್ಯ ಸರಕಾರದಿಂದ ಹಳಿಯಾಳ ತಾಲೂಕಿನ ಶಾಲಾ/ ಕಾಲೇಜುಗಳಿಗೆ 600 ಕಂಪ್ಯೂಟರ್‌ಗಳನ್ನು ಮಂಜೂರು ಮಡಲಾಗಿದೆ. ಶಿಕ್ಷಣ ಕ್ಷೇತ್ರದ ಬಲವರ್ಧನೆಗೆ ರಾಜ್ಯ ಸರಕಾರ ಕಂಕಣಬದ್ಧವಾಗಿದೆ ಎಂದರು.
ಮುಖ್ಯ ಅತಿಥಿ ನಗರಸಭೆ ಅಧ್ಯಕ್ಷ ಎನ್.ಜಿ. ಸಾಳುಂಕೆ, ಕಾಗದ ಕಾರ್ಖಾನೆ ಕಾರ್ಯನಿರ್ವಾಹಕ ನಿರ್ದೇಶಕ ರಾಜೇಂದ್ರ ಜೈನ್, ಜಿಪಂ ಸದಸ್ಯ ಕೃಷ್ಣ ಪಾಟೀಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೈಯದ ತಂಗಳ ಉಪಸ್ಥಿತರಿದ್ದರು. ಕಾಗದ ಕಾರ್ಖಾನೆಯ ಕಾರ್ಯನಿರ್ವಾಹಕ ನಿರ್ದೇಶಕ ರಾಜೇಂದ್ರ ಜೈನ್‌ರನ್ನು ಸನ್ಮಾನಿಸಲಾಯಿತು. ಸಚಿವ ದೇಶಪಾಂಡೆಯವರನ್ನು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಸನ್ಮಾನಿಸಿದರು. ಸ್ಥಳೀಯ ವಿವಿಧ ಶಾಲಾ/ ಕಾಲೇಜುಗಳಿಗೆ ಪಿಠೊಪಕರಣಗಳನ್ನು ಹಾಗೂ ಎಸ್.ಸಿ/ಎಸ್.ಟಿ ವಿದ್ಯಾರ್ಥಿಯನಿಗೆ ಲ್ಯಾಪ್‌ಟಾಪ್‌ಗ್ಳನ್ನು ವಿತರಿಸಲಾಯಿತು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ| ಎಂ.ಡಿ. ಒಕ್ಕುಂದ ಪ್ರಾಸ್ತಾವಿಕ ಮಾತನಾಡಿದರು. ಕಾಗದ ಕಾರ್ಖಾನೆಯ ಸಾರ್ವಜನಿಕ ಸಂಪರ್ಕಾ ಕಾರಿ ಕೆ.ಜಿ.ಗಿರಿರಾಜ ಸ್ವಾಗತಿಸಿದರು. ಉಪನ್ಯಾಸಕ ಡಾ| ನಾಸೀರ್ ಖಾನ್ ಜಂಗುಬಾಯಿ ವಂದಿಸಿದರು.
ಉಚಿತ ವೈಫೈ ಸೇವೆ
ಹಳಿಯಾಳ, ದಾಂಡೇಲಿ, ರಾಮನಗರ ಮೊದಲಾದ ಕಡೆಗಳಿಗೆ ಉಚಿತ ವೈಫೈ ವ್ಯವಸ್ಥೆ ಆಳವಡಿಸಲಾಗಿದ್ದು, ವಿದ್ಯಾರ್ಥಿಗಳು
ಕಲಿಕೆಯ ಹಿತದೃಷ್ಟಿಯಿಂದ ಇದರ ಲಾಭ ಪಡೆದುಕೊಳ್ಳುವಂತೆ ಸಚಿವ ದೇಶಪಾಂಡೆ ಹೇಳಿದರು.