Advertisement

ಸ್ವಯಂ ಉದ್ಯೋಗ ಕೈಗೊಳ್ಳಿ: ಗುತ್ತೇದಾರ

11:59 AM Oct 18, 2021 | Team Udayavani |

ಆಳಂದ: ಯುವಕ, ಯುವತಿಯರು ಸರ್ಕಾರಿ ನೌಕರಿ ಮೇಲೆ ಅವಲಂಬಿತರಾಗದೇ ಇಲಾಖೆ ಸೌಲಭ್ಯ ಪಡೆದು ಸ್ವಯಂ ಉದ್ಯೋಗ ಕೈಗೊಳ್ಳುವ ಮೂಲಕ ಸಮಾಜದಲ್ಲಿನ ನಿರುದ್ಯೋಗ ಪಿಡುಗು ನಿವಾರಿಸಲು ಮುಂದಾಗಬೇಕು ಎಂದು ಶಾಸಕ ಸುಭಾಷ ಗುತ್ತೇದಾರ ಹೇಳಿದರು.

Advertisement

ಪಟ್ಟಣದ ಗುರುಭವನದಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಜಿಲ್ಲಾ ಪಂಚಾಯಿತಿ ಆಶ್ರಯದಲ್ಲಿ ಉದ್ಯಮ ಶೀಲತಾ ಜಾಗೃತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಎಲ್ಲರಿಗೂ ಸರ್ಕಾರಿ ನೌಕರಿ ಸಿಗುವುದು ಅಸಾಧ್ಯ. ಕೈಗಾರಿಕೆ ಇಲಾಖೆ ಸೇರಿದಂತೆ ಇನ್ನಿತರ ಇಲಾಖೆಗಳಲ್ಲಿನ ಸಾಲ ಸೌಲಭ್ಯ ಪಡೆದುಕೊಂಡು ಉದ್ಯೋಗದಲ್ಲಿ ತೊಡಗಿ, ಆರ್ಥಿಕ ಅಭಿವೃದ್ಧಿ ಸಾಧಿಸಬೇಕು. ನಿರುದ್ಯೋಗ ನಿವಾರಣೆಗಾಗಿ ಕೇಂದ್ರ ಸರ್ಕಾರ ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ. ಇದರ ಲಾಭವನ್ನು ಪ್ರತಿಯೊಬ್ಬ ನಿರುದ್ಯೋಗಿಗಳೂ ಪಡೆಯಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಕೈಗಾರಿಕೆ ಇಲಾಖೆಯ ಕಲಬುರಗಿ ಜಂಟಿ ನಿರ್ದೇಶಕ ಮಾಣಿಕ ವಿ. ರಘೋಜಿ ಮಾತನಾಡಿ, ಉದ್ಯೋಗಕ್ಕೆ ಆನ್‌ಲೈನ್‌ ಅರ್ಜಿಗಳ ಸಲ್ಲಿಕೆ ಮೊದಲು ಸಂಪೂರ್ಣ ಯೋಜನೆಗಳ ಕುರಿತು ಕಚೇರಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬೇಕು. ಮೊದಲು ಉದ್ಯೋಗಕ್ಕಾಗಿ ಯೋಜನೆ ರೂಪಿಸಿ ನಂತರ ಅರ್ಜಿ ಸಲ್ಲಿಸಬೇಕು ಎಂದು ಸಲಹೆ ನೀಡಿದರು.

ಹೋಟೆಲ್‌, ಹಣ್ಣು, ತರಕಾರಿ, ಸಸಿ ಮಾರಾಟ, ಅಲಂಕಾರಿಕ ಸಾಮಗ್ರಿ ಸೇರಿದಂತೆ ಇತರೆ ವ್ಯಾಪಾರ, ಉದ್ಯೋಗಕ್ಕೂ ಒಲವು ತೋರಬೇಕು. ಇದಕ್ಕಾಗಿ ಸುಮಾರು 40 ಲಕ್ಷ ರೂ. ವರೆಗೂ ಸಾಲಸೌಲಭ್ಯ ನೀಡಲಾಗುತ್ತದೆ ಎಂದರು.

Advertisement

ಎಸ್‌ಬಿಐ ಪ್ರಧಾನ ವ್ಯವಸ್ಥಾಪಕ ಇಂತೇಸಾರ ಹುಸೇನ ಮಾತನಾಡಿ, ಯೋಜನೆ ಮಾಡುವ ಮೊದಲು ಮಾಹಿತಿ ಪಡೆದು ನಂತರ ಬ್ಯಾಂಕಿಗೆ ಸಾಲಕ್ಕಾಗಿ ಪ್ರಸ್ತಾವನೆ ಸಲ್ಲಿಸಿ, ವ್ಯವಹಾರ ಮಾಡುವ ಕುರಿತು ಮಾರುಕಟ್ಟೆಯಲ್ಲಿ ಕೈಗೊಳ್ಳುವ ಉದ್ಯೋಗದ ಪ್ರಗತಿ, ಅದರ ಸಾಧನೆ ಕುರಿತು ತಿಳಿದುಕೊಳ್ಳಿ ಎಂದು ಹೇಳಿದರು.

ಉದ್ಯೋಗಕ್ಕಾಗಿ ಸಾಲ ಪಡೆದಂತೆ ಸಮಯಕ್ಕೆ ಸಾಲ ಮರುಪವಾತಿಸಿ ಸಾಲ ನವೀಕರಿಸಬೇಕು. ಬ್ಯಾಂಕ್‌ಗಳು ನೀಡುವ ಹಣ ಸರ್ಕಾರದ್ದಲ್ಲ. ಜನ ಸಾಮಾನ್ಯರದ್ದಾಗಿದೆ. ನಿಮ್ಮ ಉದ್ಯೋಗಕ್ಕೆ ಸರ್ಕಾರ ಸಬ್ಸಿಡಿ ಮಾತ್ರ ನೀಡುತ್ತದೆ. ಏಕಕಾಲಕ್ಕೆ ಸಾಲದ ಪೂರ್ಣ ಮೊತ್ತದ ಬೇಡಿಕೆ ಇಡದೇ ಹಂತ, ಹಂತವಾಗಿ ಸಣ್ಣ ಪ್ರಮಾಣದಿಂದ ಆರಂಭಿಸಿ ದೊಡ್ಡ ಸಾಲದ ಬೇಡಿಕೆಗೆ ಮುಂದಾಗಬೇಕು ಎಂದರು.

ಸಾರಿಗೆ ಸಂಸ್ಥೆ ನಿರ್ದೇಶಕ ಮಲ್ಲಿಕಾರ್ಜುನ ತಡಕಲ್‌, ಇಲಾಖೆ ಸಹಾಯಕ ನಿರ್ದೇಶಕ ಮುಕುಂದ ರೆಡ್ಡಿ ಅವರು ಸ್ಕ್ರೀನ್‌ ಮೂಲಕ ಪರದೆ ಮೇಲೆ ಫಲಾನುಭವಿಗಳಿಗೆ ಕೈಗಾರಿಕೆ ಯೋಜನೆಗಳ ಮಾಹಿತಿ ನೀಡಿದರು. ಗ್ರಾಮೀಣ ಕೈಗಾರಿಕೆ ಉಪನಿರ್ದೇಶಕ ಅಬ್ದುಲ್‌ ಅಜೀಂ, ಸೈಯದ್‌ ಆಶಾಕ್‌ ಅಹ್ಮೆದ್‌, ರೇವಣಸಿದ್ಧಪ್ಪ ಘಂಟಿ, ಡಾ| ಚಂದ್ರಕಾಂತ ಚಂದಾಪುರ ಉಪನ್ಯಾಸ ನೀಡುವರು. ತಾಲೂಕು ಕೈಗಾರಿಕೆ ವಿಸ್ತರಣಾಧಿಕಾರಿ ಜಾಫರ್‌ ಖಾಸೀಂ ಅನ್ಸಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next