Advertisement

ಪ್ರವೇಶ ಪರೀಕ್ಷೆಗೆ ಸಾಮಾನ್ಯ ಜ್ಞಾನವಿರಲಿ

07:39 AM Mar 14, 2019 | |

ದ್ವಿತೀಯ ಪಿಯುಸಿ ಬಳಿಕ ಮುಂದೇನು ಎಂಬ ಚಿಂತೆ ಹಲವರದ್ದು. ಪಿಯುಸಿ ಬಳಿಕ ಪದವಿ ಶಿಕ್ಷಣ ಪಡೆದರೆ, ನೇರ ಕಾಲೇಜು ಸೇರಿದರಾಯಿತು. ಆದರೆ ವೃತ್ತಿಪರ ಶಿಕ್ಷಣಕ್ಕೆ ಪ್ರವೇಶ ಪಡೆಯಲು ಸಿಇಟಿ ಪರೀಕ್ಷೆಯನ್ನು ಎದುರಿಸಲೇಬೇಕು. ಆನಂತರವಷ್ಟೇ ರಾಜ್ಯದ ಸರಕಾರಿ/ವಿವಿ/ ಖಾಸಗಿ ಅನುದಾನಿತ/ ಖಾಸಗಿ ಅನುದಾನ ರಹಿತ ಕಾಲೇಜುಗಳಲ್ಲಿರುವ ವೈದ್ಯಕೀಯ, ಎಂಜಿನಿಯರಿಂಗ್‌, ತಂತ್ರಜ್ಞಾನ, ಬಿ-ಫಾರ್ಮಾ, ಫಾರ್ಮಾ- ಡಿ, ಕೃಷಿ ವಿಜ್ಞಾನ ಸಹಿತ ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶ ಪಡೆಯಬಹುದು.  ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಈ ಸಾಮಾನ್ಯ ಪ್ರವೇಶ ಪರೀಕ್ಷೆಗೆ ಹಾಜರಾಗಬೇಕಾದರೆ ಒಂದಷ್ಟು ವಿಧಾನಗಳಿವೆ.

Advertisement

ಸಿಇಟಿ ಪರೀಕ್ಷೆಗಾಗಿ ಆನ್‌ಲೈನ್‌ ಮುಖಾಂತರ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ಮಾ. 20ರವರೆಗೆ ಇದು ಚಾಲ್ತಿಯಲ್ಲಿರುತ್ತದೆ. ಪ್ರಾಧಿಕಾರದ ವೆಬ್‌ಸೈಟ್‌ ಲಿಂಕ್‌ ಕ್ಲಿಕ್‌ ಮಾಡಿ ಅರ್ಜಿ ಭರ್ತಿ ಮಾಡಿ ಅಲ್ಲೇ ಅರ್ಜಿಯನ್ನು ಸಲ್ಲಿಸಬೇಕು. ಬಳಿಕ ಬ್ಯಾಂಕಿನಲ್ಲಿ ಶುಲ್ಕ ಪಾವತಿ ಮಾಡಬೇಕು. ಸಲ್ಲಿಕೆ ಮಾಡಿದ ಅರ್ಜಿಯ ಮೂರು ಪ್ರತಿಗಳು, ಅರ್ಜಿ ಶುಲ್ಕ ಪಾವತಿ ರಶೀದಿಯನ್ನು ಕಡ್ಡಾಯವಾಗಿ ಜತೆಗಿರಿಸಿಕೊಳ್ಳಬೇಕು.

ಪರೀಕ್ಷಾ ವಿಧಾನ
ಸಿಇಟಿಗೆ ಒಂದೇ ದಿನದಲ್ಲಿ ಎರಡು ಪರೀಕ್ಷೆ ನಡೆಯುತ್ತದೆ. ಪ್ರಶ್ನೆ ಪತ್ರಿಕೆಯು ಆಬ್ಜೆಕ್ಟಿವ್‌ ಮಾದರಿಯಲ್ಲಿ ಇದ್ದು, ಒಂದು ಪ್ರಶ್ನೆಗೆ ನಾಲ್ಕು ಉತ್ತರಗಳನ್ನು ನೀಡಲಾಗುತ್ತದೆ. ನಾಲ್ಕು ಉತ್ತರ ಪೈಕಿ ಸರಿಯಾಗಿರುವುದನ್ನು ಟಿಕ್‌ ಮಾಡಿದರಾಯಿತು.

ಪಿಸಿಎಂಬಿ ಪಠ್ಯಪುಸ್ತಕದೊಳಗಿನ ಪ್ರಶ್ನೆಗಳನ್ನೇ ಸಿಇಟಿಯಲ್ಲಿ ಕೇಳಲಾಗುತ್ತದೆ. ಪಿಯುಸಿಯಲ್ಲಿ ಐದಾರು ವರ್ಷಗಳ ಹಿಂದೆ ಕೇಳಲಾದ ಪ್ರಶ್ನೆಗಳೇ ಮತ್ತೊಮ್ಮೆ ಕೇಳುವ ಸಾಧ್ಯತೆ ಅಧಿಕ. ಆದರೆ ಸಿಇಟಿಯಲ್ಲಿ ಪ್ರತಿ ವರ್ಷ ಹೊಸ ಪ್ರಶ್ನೆಗಳನ್ನೇ ಕೇಳಲಾಗುವುದರಿಂದ ವಿದ್ಯಾರ್ಥಿಗಳ ಓದು ಅಷ್ಟೇ ಪ್ರಾಮುಖ್ಯವಾಗಿರುತ್ತದೆ.

ಕೃಷಿ ವಿಜ್ಞಾನ, ಆಯುರ್ವೇದಿಕ್‌, ವೈದ್ಯಕೀಯ, ಎಂಜಿನಿಯರಿಂಗ್‌, ಫಾರ್ಮೆಸಿ ಮುಂತಾದ ಕ್ಷೇತ್ರಗಳಲ್ಲಿ ಭವಿಷ್ಯ ಕಂಡುಕೊಳ್ಳಬೇಕಾದರೆ ಸಿಇಟಿ ಪರೀಕ್ಷೆ ಬರೆಯುವುದು ಅನಿವಾರ್ಯ ಮತ್ತು ಅವಶ್ಯ. ಉತ್ತಮ ರ್‍ಯಾಂಕ್‌ ಪಡೆದುಕೊಂಡಲ್ಲಿ ಈ ಕ್ಷೇತ್ರಗಳ ಅವಕಾಶಗಳ ಬಾಗಿಲು ತೆರೆಯುತ್ತದೆ. ಕರ್ನಾಟಕ ಬಿಟ್ಟು ಹೊರ ರಾಜ್ಯದಲ್ಲಿ, ರಾಷ್ಟ್ರೀಯ ಮಟ್ಟದ ಕಾಲೇಜುಗಳಲ್ಲಿ ಕಲಿಯುವ ಆಸಕ್ತಿಯುಳ್ಳವರಿಗೆ ಸಿಇಟಿ ಅರ್ಹತೆ ಸಾಕಾಗುವುದಿಲ್ಲ. ಅವರು ಜೆಇಇ ಮೈನ್ಸ್‌ ಪರೀಕ್ಷೆ ಬರೆಯಬೇಕಾಗುತ್ತದೆ.

Advertisement

ಅರ್ಹತೆ
ವೃತ್ತಿಪರ ಶಿಕ್ಷಣ ಬಯಸುವ ಕರ್ನಾಟಕದ ಯಾವುದೇ ವಿದ್ಯಾರ್ಥಿ ಕೆಸಿಇಟಿ ಪರೀಕ್ಷೆ ಬರೆಯಬಹುದು. ಹೊರ ರಾಜ್ಯದವರಾದರೆ ಕನಿಷ್ಠ ಹತ್ತು ವರ್ಷಗಳಿಂದ ಕರ್ನಾಟಕದಲ್ಲಿ ವಿದ್ಯಾಭ್ಯಾಸ ಮಾಡಿದರೆ, ಕೆಸಿಇಟಿ ಬರೆಯಲು ಅರ್ಹರಾಗಿರುತ್ತಾರೆ.

ಉತ್ತಮ ಭವಿಷ್ಯಕ್ಕೆ ದಾರಿ
ವೃತ್ತಿಪರ ಶಿಕ್ಷಣ ಪಡೆಯಲು ಸಿಇಟಿ ಪರೀಕ್ಷೆ ಬರೆಯುವುದು ಅವಶ್ಯವಾಗಿರುತ್ತದೆ. ಈಗಾಗಲೇ ಸಿಇಟಿ ಪರೀಕ್ಷೆಗೆ ಆನ್‌ ಲೈನ್‌ ಅರ್ಜಿ ಸಲ್ಲಿಕೆ ಪ್ರಕ್ರಿಯೆ ನಡೆಯುತ್ತಿದೆ. ವಿದ್ಯಾರ್ಥಿಗಳು ಈ ಅವಕಾಶವನ್ನು ಬಳಸಿಕೊಂಡು ತಮ್ಮಿಷ್ಟದ ಕ್ಷೇತ್ರದಲ್ಲಿ ಭವಿಷ್ಯ ಕಂಡುಕೊಳ್ಳಬಹುದು.
– ಡಾ| ಬಿಂದುಸಾರ ಶೆಟ್ಟಿ ,
ಸಿಇಟಿ ವಿಷಯ ತಜ್ಞರು

ಧನ್ಯಾ ಬಾಳೆಕಜೆ 

Advertisement

Udayavani is now on Telegram. Click here to join our channel and stay updated with the latest news.

Next