ಮಂಗಳೂರು: ವೈದ್ಯಕೀಯ ವೃತ್ತಿ ತನ್ನದೇ ಆದ ಘನತೆ, ಮೌಲ್ಯಗಳನ್ನು ಹೊಂದಿದೆ. ವೈದ್ಯರು ಇದಕ್ಕೆ ಪೂರಕವಾಗಿ ಬದ್ಧತೆಯಿಂದ ಕಾರ್ಯನಿರ್ವಹಿಸುವ ಮೂಲಕ ವೃತ್ತಿ ಶ್ರೇಷ್ಠತೆಯನ್ನು ಸಂರಕ್ಷಿಸಬೇಕು ಎಂದು ಆಸ್ಟ್ರೇಲಿಯಾದ ವೈದ್ಯಕೀಯ ಮಂಡಳಿ ಅಧ್ಯಕ್ಷೆ ಡಾ| ಜೋನಾ ಪ್ಲಿನ್ ಹೇಳಿದರು.
ನಗರದ ಡಾ| ಟಿ.ಎಂ.ಎ. ಪೈ ಇಂಟರ್‌ನ್ಯಾಶನಲ್ ಕನ್ವೆನೆÏನ್ ಸೆಂಟರ್‌ನಲ್ಲಿ ಶನಿವಾರ ಜರಗಿದ ಮಣಿಪಾಲ ವಿಶ್ವವಿದ್ಯಾನಿಲಯದ 24ನೇ ಘಟಿಕೋತ್ಸವದಲ್ಲಿ ಅವರು ಘಟಿಕೋತ್ಸವ ಭಾಷಣ ಮಾಡಿದರು.
ವೈದ್ಯರು ವೃತ್ತಿಯಲ್ಲಿ ಅತಿ ಮಹತ್ವದ್ದಾಗಿರುವ 5 ಮೌಲ್ಯಗಳನ್ನು ಸದಾ ಪಾಲಿಸುವುದು ಅವಶ್ಯ. ವಿಶ್ವಾಸ, ಉತ್ಕೃಷ್ಟತೆ, ಉತ್ತರದಾಯಿತ್ವ ಗೌರವ ಹಾಗೂ ಸೌಜನ್ಯ ಈ 5 ಮೌಲ್ಯಗಳಾಗಿವೆ. ವೈದ್ಯಕೀಯ ವೃತ್ತಿಯನ್ನು ಪ್ರೀತಿಸುತ್ತಾ ಬದ್ಧತೆ
ಯಿಂದ ನಿರ್ವಹಿಸಿದಾಗ ವೃತ್ತಿಯಲ್ಲಿ ತೃಪ್ತಿ, ಉತ್ಕೃಷ್ಟತೆ ಮತ್ತು ಧನ್ಯತೆಯನ್ನು ಪಡೆಯಲು ಸಾಧ್ಯವಾಗುತ್ತದೆ ಎಂದರು.
ಜಗತ್ತು ತ್ವರಿತಗತಿಯಲ್ಲಿ ಬದಲಾಗುತ್ತಿದೆ. ಸಮಾಜ, ತಂತ್ರಜ್ಞಾನ, ಹವಾಮಾನ, ಪರಿಸರ ಹೀಗೆ ಪ್ರತಿಯೊಂದರಲ್ಲೂ ಪರಿವರ್ತನೆಗಳಾಗುತ್ತಿವೆ. ವೈದ್ಯಕೀಯ ಕ್ಷೇತ್ರವೂ ಇದಕ್ಕೆ ಹೊರತಾಗಿಲ್ಲ. ವೈದ್ಯರಲ್ಲಿ ರೋಗಿಗಳ ನಿರೀಕ್ಷೆಗಳು ಬದಲಾಗುತ್ತಿವೆ. ಈ ನಿರೀಕ್ಷೆಗಳಿಗೆ ಸ್ಪಂದಿಸುವುದು ವೈದ್ಯರಿಗೆ ಒಂದು ಪ್ರಮುಖ ಸವಾಲು ಎಂದರು.
ಇಂದು ಪದವಿ ಪಡೆದ ವೈದ್ಯ ಕೀಯ ಪದವೀಧರರು ಉನ್ನತ ಸಾಧನೆಯ ಪಥದಲ್ಲಿ ಸಾಗಿ ಸಾರ್ಥಕತೆ ಪಡೆಯಲಿ ಎಂದವರು ಹಾರೈಸಿದರು. ಮಣಿಪಾಲ ವಿವಿ ಸಹಕುಲಾಧಿಪತಿ ಡಾ| ಎಚ್.ಎಸ್ . ಬಳ್ಳಾಲ್ ಘಟಿಕೋತ್ಸವ ಘೋಷಿಸಿದರು. ವಿ.ವಿ. ಕುಲಪತಿ ಡಾ| ಎಚ್. ವಿನೋದ್ ಭಟ್ ವಿಶ್ವವಿದ್ಯಾನಿಲಯದ ಸಾಧನೆಗಳನ್ನು ವಿವರಿಸಿದರು. ಸಹ ಕುಲಪತಿ ಡಾ | ವಿ. ಸುರೇಂದ್ರ ಶೆಟ್ಟಿ ಸ್ವಾಗತಿಸಿದರು. ಮಂಗಳೂರು ಕೆಎಂಸಿ ಡೀನ್ ಡಾ| ಎಂ.ವಿ. ಪ್ರಭು ಅತಿಥಿಯನ್ನು ಪರಿಚಯಿಸಿದರು. ರಿಜಿಸ್ಟ್ರಾರ್ ಡಾ| ನಾರಾಯಣ ಸಭಾಹಿತ್ ಪ್ರತಿಜ್ಞಾ ವಿಧಿ ಬೋಧಿಸಿದರು.
ಸಹ ಕುಲಪತಿಗಳಾದ ಡಾ| ಪೂರ್ಣಿಮಾ ಬಾಳಿಗ, ಡಾ| ಜಿ.ಕೆ.ಪ್ರಭು, ಪರೀಕ್ಷಾಂಗ ಕುಲಸಚಿವ ಡಾ| ವಿನೋದ್ ಥೋಮಸ್ ಉಪಸ್ಥಿತರಿದ್ದರು. ಉಪ ರಿಜಿಸ್ಟ್ರಾರ್‌ಗಳಾದ ಡಾ| ಸುಮಾ ನಾಯರ್ ಹಾಗೂ ಡಾ| ಶ್ಯಾಮಲಾ ಹಂದೆ ಚಿನ್ನದ ಪದಕ ಪುರಸ್ಕೃತರು ಹಾಗೂ ಪಿಎಚ್‌ಡಿ ಪದವಿ ಪಡೆದವರ ವಿವರ ನೀಡಿದರು. ಮಣಿಪಾಲ ದಂತವೈದ್ಯಕೀಯ ಕಾಲೇಜು ಮಂಗಳೂರು ಡೀನ್ ಡಾ| ದಿಲೀಪ್ ನಾೖಕ್ ವಂದಿಸಿದರು. ಡಾ| ನಂದಿತಾ ಶೆಣೈ ಹಾಗೂ ಡಾ| ಅಶ್ವಿನಿ ಆರ್. ರೈ ನಿರೂಪಿಸಿದರು.
ವಿಶ್ವಮನ್ನಣೆ
ಮಣಿಪಾಲ ವಿ.ವಿ. ಅಂತಾರಾಷ್ಟ್ರೀಯ ಮನ್ನಣೆ ಪಡೆದಿದೆ. ವಿಶ್ವಾದ್ಯಂತದಿಂದ ವಿದ್ಯಾರ್ಥಿಗಳನ್ನು ವಿ.ವಿ. ಆಕರ್ಷಿಸುತ್ತಿದೆ. ಇಲ್ಲಿ ಶಿಕ್ಷಣ ಪಡೆದಿರುವ ವಿದ್ಯಾರ್ಥಿಗಳು ವಿಶ್ವದ ಎಲ್ಲೆಡೆ ಉನ್ನತಸ್ಥಾನಗಳಲ್ಲಿ ವ್ಯಾಪಿಸಿಕೊಂಡಿದ್ದಾರೆ ಎಂದು ಡಾ| ಜೋನಾ ಪ್ಲಿನ್ ಪ್ರಶಂಶಿಸಿದರು.