Advertisement

ಹಿಂಸಾದೃಶ್ಯಗಳನ್ನು ಹಸಿಹಸಿಯಾಗಿ ತೋರುವ ಟೀವಿವಾಹಿನಿಗಳಿಗೆ ಎಚ್ಚರಿಕೆ

07:58 PM Jan 09, 2023 | Team Udayavani |

ನವದೆಹಲಿ: ದೇಶದ ಎಲ್ಲ ಟೀವಿ ವಾಹಿನಿಗಳಿಗೂ ಕೇಂದ್ರ ವಾರ್ತಾ ಇಲಾಖೆ ಸ್ಪಷ್ಟ ಎಚ್ಚರಿಕೆ ನೀಡಿದೆ. ಹಿಂಸಾತ್ಮಕ ಘಟನೆಗಳನ್ನು ಸ್ವಲ್ಪವೂ ಪರಿಷ್ಕರಣೆಗೊಳಿಸದೇ, ನೇರಾನೇರವಾಗಿ ಹಸಿಹಸಿಯಾಗಿ ತೋರಿಸುವ, ವಿಜೃಂಭಿಸುವ ಪ್ರವೃತ್ತಿಯಿಂದ ಜನರ ಮನಸ್ಸಿನ ಮೇಲೆ ಆಘಾತಕಾರಿ ಪರಿಣಾಮ ಬೀರುತ್ತಿದೆ ಎಂದು ಹೇಳಿದೆ.

Advertisement

ಸಾವು, ಅಪಘಾತ, ಮಹಿಳೆ, ಮಕ್ಕಳ ಮೇಲಿನ ಹಲ್ಲೆಯನ್ನು ಯಥಾರೀತಿಯಲ್ಲಿ ತೋರಿಸಿದ್ದನ್ನು ಉದಾಹರಣೆಯಾಗಿ ನೀಡಿರುವ ಅದು; ಈ ಮೂಲಕ ಟೀವಿ ವಾಹಿನಿಗಳು ಸದಭಿರುಚಿ ಮತ್ತು ಶಿಸ್ತಿನ ಪರಿಮಿತಿಯನ್ನು ಮೀರಿವೆ ಎಂದು ಕಿಡಿಕಾರಿದೆ.

ರಕ್ತಸಿಕ್ತ ದೇಹ, ಮೃತದೇಹಗಳು, ದೈಹಿಕ ಹಲ್ಲೆಗಳನ್ನು ಹಸಿಹಸಿಯಾಗಿ ತೋರಿಸುವುದು ನೀತಿಸಂಹಿತೆಗೆ ವಿರುದ್ಧ. ಸಾಮಾಜಿಕ ತಾಣಗಳಿಂದ ಪಡೆದುಕೊಂಡ ವಿಡಿಯೊಗಳನ್ನು ಸ್ವಲ್ಪವೂ ಪರಿಷ್ಕರಣೆಗೊಳಪಡಿಸದೇ ತೋರಿಸಲಾಗುತ್ತಿದೆ. ಇದು ಮಕ್ಕಳ ಮೇಲೆ, ಬಾಧಿತರ ಮೇಲೆ ಪರಿಣಾಮ ಬೀರುತ್ತಿದೆ ಎಂದು ವಾರ್ತಾ ಇಲಾಖೆ ಹೇಳಿದೆ. ಜತೆಗೆ, ಕಾನೂನಿನ ನಿಯಮಗಳನ್ನು ಪಾಲಿಸುವಂತೆಯೂ ಸೂಚಿಸಿದೆ. ಹಾಗೆಯೇ ಟೀವಿ ವಾಹಿನಿಗಳು ಹಸಿಹಸಿಯಾಗಿ ತೋರಿದ ಹಲವು ದೃಶ್ಯಾವಳಿಗಳ ಉದಾಹರಣೆಯನ್ನು ಪಟ್ಟಿ ಮಾಡಿದೆ. ಅವು ಹೀಗಿವೆ…

1. 2022 ಡಿ.30ರಂದು ಕ್ರಿಕೆಟಿಗ ರಿಷಭ್‌ ಪಂತ್‌ ಅಪಘಾತಕ್ಕೊಳಗಾಗಿದ್ದು.
2. 2022, ಆ.28ರಂದು ವ್ಯಕ್ತಿಯೊಬ್ಬ ರಕ್ತಸಿಕ್ತ ಮೃತದೇಹವನ್ನು ಎಳೆದೊಯ್ಯತ್ತಿದ್ದದ್ದು.
3. 2022 ಜು.6ರಂದು ಬಿಹಾರದ ಪಾಟ್ನಾದಲ್ಲಿ ಶಿಕ್ಷಕನೊಬ್ಬ 5 ವರ್ಷದ ಹುಡುಗನನ್ನು ಕ್ರೂರವಾಗಿ ದಂಡಿಸಿದ್ದು.
4. 2022, ಜೂ.4ರಂದು ಪಂಜಾಬಿ ಗಾಯಕನೊಬ್ಬನ ರಕ್ತಸಿಕ್ತ ಶವವನ್ನು ತೋರಿಸಿದ್ದು.
5. 2022 ಮೇ 25ರಂದು ಅಸ್ಸಾಂ ಚಿರಾಂಗ್‌ನಲ್ಲಿ ವ್ಯಕ್ತಿಯೊಬ್ಬ ಇಬ್ಬರು ಅಪ್ರಾಪ್ತ ವಯಸ್ಕ ಹುಡುಗರನ್ನು ಕೋಲಿನಿಂದ ತೀವ್ರವಾಗಿ ದಂಡಿಸಿದ್ದು.

Advertisement

Udayavani is now on Telegram. Click here to join our channel and stay updated with the latest news.

Next