ಬೆಂಗಳೂರು: ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಬಿಜೆಪಿ ಸೇರಲು ಮುಂದಾಗಿರುವ ಶಾಸಕರು ಗೋವಾ ಪ್ರಕರಣವನ್ನು ಗಮನದಲ್ಲಿಟ್ಟುಕೊಂಡು ಮುನ್ನಡೆಯುವಂತೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅತೃಪ್ತರಿಗೆ ಪರೋಕ್ಷ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗುರುವಾರ ವಿಶ್ವಾಸ ಮತ ತೆಗೆದುಕೊಳ್ಳಬೇಕೆಂಬ ತೀರ್ಮಾನ ಆಗಿದೆ. ಮಂಗಳವಾರ ಸುಪ್ರೀಂ ಕೋರ್ಟ್ ತೀರ್ಪು ಕೂಡ ಇದೆ. ಸುಪ್ರೀಂ ಕೋರ್ಟ್ ಸಭಾಧ್ಯಕ್ಷರಿಗೆ ಯಾವುದೇ ಆದೇಶ ಕೊಡಲು ಆಗುವುದಿಲ್ಲ. ಹೀಗಾಗಿ ಗುರುವಾರ ನಮಗೆ ಸ್ಪಷ್ಟ ಬಹುಮತ ದೊರೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಶಾಸಕರು ನಮ್ಮನ್ನ ಬಿಟ್ಟು ಹೋಗಬಾರದೆಂದು ನಮ್ಮ ಪ್ರಯತ್ನ ನಡೆಯುತ್ತಿದೆ. ಏಕೆಂದರೆ, ಮೂವತ್ತು ವರ್ಷಗಳಿಂದ ಅವರೆಲ್ಲರೂ ಪಕ್ಷ ಕಟ್ಟಿ ಬೆಳೆಸಿದ್ದಾರೆ. ಅವರೆಲ್ಲ ನಮ್ಮ ಪಕ್ಷದಲ್ಲಿ ಬಹಳ ವರ್ಷದಿಂದ ಇರುವ ನಾಯಕರು. ಹಾಗಾಗಿ ರಾಜೀನಾಮೆ ನೀಡಿರುವವರ ಮನವೊಲಿಸುವ ಪ್ರಯತ್ನ ಮಾಡುತ್ತಿದ್ದೇವೆ.
ಆದರೆ, ರಾಜೀನಾಮೆ ಕೊಟ್ಟಿರುವ ಶಾಸಕರೆಲ್ಲರೂ ಅನರ್ಹರಾಗಬೇಕು ಎಂಬುದೇ ಬಿಜೆಪಿಯ ಉದ್ದೇಶ. ಅತೃಪ್ತರೆಲ್ಲರೂ ಅನರ್ಹರಾದರೆ ಬಿಜೆಪಿ ಸರ್ಕಾರ ರಚನೆಗೆ ಅನುಕೂಲವಾಗುತ್ತದೆ. ಆಗ ಅವರ್ಯಾರಿಗೂ ಮಂತ್ರಿಗಳಾಗಲು ಅವಕಾಶ ಸಿಗುವುದಿಲ್ಲ. ರಾಜೀನಾಮೆ ನೀಡಿರುವವರನ್ನು ಬಿಜೆಪಿ ಬಲಿ ತೆಗೆದುಕೊಳ್ಳುತ್ತಿದೆ.
ಅವರನ್ನೆಲ್ಲಾ ಗುಲಾಮರಾನ್ನಾಗಿ ಮಾಡಿ ಬಿಜೆಪಿ ಕಚೇರಿ ಮುಂದೆ ಬಿ ಫಾರಂಗಾಗಿ ಕಾಯುವಂತೆ ಮಾಡುತ್ತದೆ ಎಂದು ಹೇಳಿದರು. ನಮಗೆ ಯಾರೂ ಅನರ್ಹರಾಗಬೇಕೆಂಬ ಆಸೆ ಇಲ್ಲ. ಈಗಲಾದರೂ ಅವರು ಅರ್ಥ ಮಾಡಿಕೊಳ್ಳಬೇಕು. ಗೋವಾದಲ್ಲಿ ಮೊದಲು ಒಂದು ಟೀಂ ಜತೆ ಸೇರಿ ಸರ್ಕಾರ ಮಾಡಿದ್ದರು.
ನಂತರ ಅವರನ್ನು ಕೈ ಬಿಟ್ಟು ಇನ್ನೊಂದು ಟೀಂ ಜತೆ ಸೇರಿ ಸರ್ಕಾರ ಮಾಡಿದ್ದಾರೆ. ಅಧಿಕಾರ ಹಿಡಿಯುವುದೇ ಬಿಜೆಪಿ ಗುರಿ. ರಾಜೀನಾಮೆ ನೀಡಿರುವ ಯಾರನ್ನು ಬಿಜೆಪಿ ಉದ್ದಾರ ಮಾಡುವುದಿಲ್ಲ. ಬಿಜೆಪಿ ದೊಡ್ಡ ಸಂಚು ರೂಪಿಸಿದ್ದು, ರಾಜೀನಾಮೆ ನೀಡಿರುವ ಶಾಸಕರು ಎಚ್ಚರದಿಂದ ಇರುವಂತೆ ಸಲಹೆ ನೀಡಿದ್ದಾರೆ.