Advertisement

ಎಟಿಎಂ ಸ್ಕಿಮ್ಮಿಂಗ್‌ ಇರಲಿ ಎಚ್ಚರ

03:11 PM Sep 10, 2018 | |

ಕೆಲವು ಸಮಯದ ಹಿಂದೆ ಮುಂಚೂಣಿ ಬ್ಯಾಂಕ್‌ಗಳ ಹಲವಾರು ಗ್ರಾಹಕರು ಎಟಿಎಂನಲ್ಲಿ ವಂಚನೆಗೊಳಗಾಗಿ ಲಕ್ಷಾಂತರ ಹಣ ಕಳೆದುಕೊಂಡ ಕುರಿತು ವರದಿಯಾಗಿತ್ತು. ತನಿಖೆ ನಡೆಸಿದಾಗ ಎಟಿಎಂನಲ್ಲಿ ಕಾರ್ಡ್‌ ಸ್ಕಿಮ್ಮಿಂಗ್‌ ತಂತ್ರಜ್ಞಾನ ಬಳಸಿರುವುದು ತಿಳಿದು ಬಂತು. ಇದೊಂದು ಹೈಟೆಕ್‌ ವಂಚನೆಯಾಗಿದ್ದು, ಈ ಕುರಿತು ತಿಳಿದುಕೊಂಡಿರುವುದು ಅಗತ್ಯ.

Advertisement

ಏನಿದು ಎಟಿಎಂ ಸ್ಕಿಮ್ಮಿಂಗ್‌?
ಯಂತ್ರವೊಂದನ್ನು ಬಳಸಿ ಎಟಿಎಂ ಕಾರ್ಡ್‌ನ ಮಾಹಿತಿಯನ್ನು ಕದ್ದು ನಡೆಸುವ ವಂಚನೆ ಇದಾಗಿದೆ. ಸ್ಕಿಮ್ಮರ್‌ ಎಂಬ ಹೆಸರಿನ ಚಿಕ್ಕ ಯಂತ್ರವೊಂದನ್ನು ಎಟಿಎಂ ಯಂತ್ರಕ್ಕೆ ಅಳವಡಿಸಲಾಗುತ್ತದೆ. ಇದು ಗ್ರಾಹಕರು ಎಟಿಎಂ ಕಾರ್ಡ್‌ನ್ನು ಸ್ಕೈಪ್‌ ಮಾಡುವಾಗ ಕಾರ್ಡ್‌ನ ಮ್ಯಾಗ್ನೆಟಿಕ್‌ ಸ್ಟ್ರಿಪ್‌ನಲ್ಲಿನ ಮಾಹಿತಿಯನ್ನು ಕದಿಯುತ್ತದೆ.

ಹಾಗೆಂದು ಕೇವಲ ಸ್ಕಿಮ್ಮರ್‌ ಮಾತ್ರ ಸಾಲುವುದಿಲ್ಲ. ವಂಚಕರು ಗ್ರಾಹಕರ ಎಟಿಎಂ ಪಿನ್‌ ನಂಬರ್‌ ತಿಳಿಯಲು ಎಟಿಎಂ ಗೆ ಕೆಮರಾ ಅಳವಡಿಸುತ್ತಾರೆ ಅಥವಾ ಬ್ಯಾಂಕ್‌ನ ಕೆಮರಾ ಹ್ಯಾಕ್‌ ಮಾಡುತ್ತಾರೆ. ಇದಾದ ಬಳಿಕ ಪಿನ್‌ ನಂಬರ್‌ ತಿಳಿದುಕೊಂಡು ಆನ್‌ಲೈನ್‌ ಖರೀದಿಗಳನ್ನು ನಡೆಸುತ್ತಾರೆ ಅಥವಾ ತದ್ರೂಪಿ ಕಾರ್ಡ್‌ ತಯಾರಿಸುತ್ತಾರೆ.

ಸ್ಕಿಮ್ಮಿಂಗ್‌: ಪತ್ತೆ ಹೇಗೆ?
ಎಟಿಎಂ ಬಳಸುವ ಮುನ್ನ ಯಂತ್ರವನ್ನೊಮ್ಮೆ ಪರಿಶೀಲಿಸುವುದು ಅಗತ್ಯ. ಕಾರ್ಡ್‌ ರೀಡರ್‌ ಸೆಕ್ಷನ್‌ (ಸ್ಕೈಪ್‌ ಮಾಡುವ ಜಾಗ) ಸಾಮಾನ್ಯಕ್ಕಿಂತ ಸ್ವಲ್ಪ ಭಿನ್ನವಾಗಿ ಮುಂಚಾಚಿಕೊಂಡಿದ್ದರೆ, ಕೀಪ್ಯಾಡ್‌ ಮೇಲೆ ಬಂದಂತಿದ್ದರೆ, ಕಾರ್ಡ್‌ ರೀಡರ್‌ ಸಡಿಲವಾಗಿದ್ದರೆ, ವಂಚನೆಗೊಳಗಾಗುವ ಅಪಾಯ ಇದೆ ಎಂದು ಭಾವಿಸಬಹುದು.

ಪಾರಾಗುವುದು ಹೇಗೆ?
ಇವೆಲ್ಲ ಮುಂಜಾಗರೂಕತೆಗಳ ಹೊರತಾಗಿಯೂ ಗ್ರಾಹಕರು ಮೋಸ ಹೋಗುವ ಸಂಭಾವ್ಯತೆ ಅಲ್ಲಗಳೆಯಲಾಗದು. ಹಿಡನ್‌ ಕೆಮರಾ ಗ್ರಾಹಕರ ಪಿನ್‌ ನಂಬರ್‌ ನೋಟ್‌ ಮಾಡಿಕೊಂಡಿದ್ದರೆ, ದೋಚುವವರಿಗೆ ಬಲುದೊಡ್ಡ ಉಪಕಾರ ಆದೀತು. ಆದ್ದರಿಂದ ಪಿನ್‌ ನಂಬರ್‌ ಬದಲಾ ಯಿಸಲು ಪಿನ್‌ ನಂಬರ್‌ ಎಂಟರ್‌ ಮಾಡುವಾಗ ಇನ್ನೊಂದು ಕೈಯಿಂದ ಮರೆ ಮಾಡಿಕೊಳ್ಳುವುದು ಉತ್ತಮ ಎನ್ನುವುದು ಬಲ್ಲವರ ಸಲಹೆ.

Advertisement

ಜತೆಗೆ ಬ್ಯಾಂಕ್‌ ಟ್ರಾನ್ಸಾಕ್ಷ್ಯನ್‌ ಸಂಬಂಧಿ ಎಸ್‌ ಎಂಎಸ್‌ ಅಲರ್ಟ್‌ ವ್ಯವಸ್ಥೆಗೆ ನೋಂದಣಿ ಮಾಡಿಕೊಳ್ಳುವುದು ಅಗತ್ಯ. ಬ್ಯಾಂಕ್‌ಗಳಲ್ಲಿ ಈಗ ಹೊಸ ಖಾತೆ ತೆರೆಯುವಾಗ ಈ ಆಯ್ಕೆ ಕೊಡುತ್ತಾರೆ. ಇಲ್ಲದೇ ಇದ್ದಲ್ಲಿ ಬ್ಯಾಂಕ್‌ನಲ್ಲಿ ಈ ಕುರಿತು ಮನವಿ ಸಲ್ಲಿಸಬಹುದು. ಇದರಿಂದ ಪ್ರತಿ ಬಾರಿ ಎಟಿಎಂನಿಂದ ದುಡ್ಡು ತೆಗೆದಾಗ ಅಥವಾ ಖಾತೆಗೆ ಹಣ ಬಂದಾಗ ಎಸ್‌ಎಂಎಸ್‌ ಬರುತ್ತದೆ. ಎಟಿಎಂ ನಲ್ಲಿ ಒಂದು ವೇಳೆ ಸ್ಲಿಪ್‌ ಬರದೇ ಇದ್ದರೂ, ಬ್ಯಾಂಕ್‌ ಮೆಸೇಜ್‌ ಶಾಶ್ವತವಾಗಿರುವುದರಿಂದ ಗ್ರಾಹಕರಿಗೆ ಬಲು ಉಪಯುಕ್ತವಾಗುತ್ತದೆ.

ಮೋಸ ಹೋದರೆ?
ಒಂದು ವೇಳೆ ಸ್ಕಿಮ್ಮಿಂಗ್‌ ಯಂತ್ರದಿಂದ ಮೋಸ ಹೋದರೆ? ಆದಷ್ಟು ಬೇಗ ಬ್ಯಾಂಕ್‌ಗೆ ವಿಷಯ ತಿಳಿಸಬೇಕು. ಒಂದು ವೇಳೆ ಗ್ರಾಹಕರು ಬೇರೊಂದು ಬ್ಯಾಂಕ್‌ನ ಎಟಿಎಂ ಯಂತ್ರದಲ್ಲಿ ಹಣ ಕಳೆದುಕೊಂಡರೆ, ಆಗ ತಮ್ಮ ಖಾತೆ ಇರುವ ಬ್ಯಾಂಕ್‌ಗೆ ಮಾಹಿತಿ ನೀಡಬೇಕು. ಆರ್‌ಬಿಐ ಪ್ರಕಾರ, ತಡವಾದಷ್ಟು ರಿಸ್ಕ್ ಹೆಚ್ಚು. ಆದ್ದರಿಂದ ಮೋಸ ಹೋಗದಂತೆ ಎಚ್ಚರ ವಹಿಸಿ ವ್ಯಾವಹಾರ ನಡೆಸುವುದು ಉತ್ತಮ.

 ಎಸ್ಕೆ

Advertisement

Udayavani is now on Telegram. Click here to join our channel and stay updated with the latest news.

Next