Advertisement

ಅನಗತ್ಯ ವಿವಾದ ಮಾತನಾಡುವಾಗ ಎಚ್ಚರಿಕೆಯಿರಲಿ

06:00 AM Feb 20, 2018 | |

ಸಂವೇದನಾ ರಹಿತ ಹೇಳಿಕೆಗಳನ್ನು ನೀಡುವುದರಲ್ಲಿ ಭಾರತದ ರಾಜಕಾರಣಿಗಳನ್ನು ಸರಿಗಟ್ಟುವವರು ಬೇರೆಲ್ಲೂ ಸಿಗಲಿಕ್ಕಿಲ್ಲ. ಎದುರಿಗೆ ಮೈಕ್‌ ಇದ್ದರೆ ಸಾಕು ಏನು ಹೇಳುತ್ತಿದ್ದೇವೆ ಎಂಬ ಪರಿಜ್ಞಾನ ಅವರಿಗಿರುವುದಿಲ್ಲ. ಹೀಗೆ ಎಡವಟ್ಟು ಹೇಳಿಕೆಗಳನ್ನು ನೀಡಿ ವಿವಾದವನ್ನು ಮೈಮೇಲೆ ಎಳೆದುಕೊಂಡ ರಾಜಕೀಯ ನಾಯಕರ ದೀರ್ಘ‌ ಪರಂಪರೆಯೇ ಇದೆ. ಇಂತಹ ಹೇಳಿಕೆಗಳು ಮಾಧ್ಯಮಗಳಿಗೆ ರಸಗವಳ ಇದ್ದಂತೆ. ಇನ್ನೊಂದು ಹೊಸ ವಿವಾದ ಸೃಷ್ಟಿಯಾಗುವ ತನಕ ಈ ವಿವಾದವನ್ನು ಜಗಿಯುತ್ತಾ ಇರುಬಹುದು. ಮಾಧ್ಯಮಗಳಲ್ಲಿ ಪ್ರಚಾರ ಗಿಟ್ಟಿಸಬೇಕೆಂಬ ಉದ್ದೇಶದಿಂದಲೇ ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಮುಖಂಡರೂ ಇದ್ದಾರೆ.
 
ಹಿಂದೆ ಆಗೊಮ್ಮೆ ಈಗೊಮ್ಮೆ ಕೇಳಿ ಬರುತ್ತಿದ್ದ ವಿವಾದಾತ್ಮಕ ಹೇಳಿಕೆಗಳು ಈಗ ನಿತ್ಯ ಎಂಬಂತೆ ಕೇಳಿ ಬರುತ್ತಿದೆ. ರಾಷ್ಟ್ರೀಯ ನಾಯಕರು ಮಾತ್ರವಲ್ಲದೆ ಚಿಕ್ಕಪುಟ್ಟ ಪುಡಾರಿಗಳಿಗೂ ಇದು ಸುಲಭವಾಗಿ ಪ್ರಚಾರ ಪಡೆಯುವ ತಂತ್ರ ಎಂದು ತಿಳಿದಿದೆ. ಕೆಲವರು ಬಾಯ್ತಪ್ಪಿ ಹೇಳಿದರೆ ಕೆಲವರು ಉದ್ದೇಶಪೂರ್ವಕವಾಗಿ ಹೇಳುತ್ತಾರೆ. ಇದೀಗ ಕೇಂದ್ರ ಸಚಿವ ಅನಂತ ಕುಮಾರ್‌ ಹೆಗಡೆ ಈ ರೀತಿ ಮಾತನಾಡಿ ಪದೇ ಪದೆ ವಿವಾದಗಳನ್ನು ಸೃಷ್ಟಿಸುತ್ತಿದ್ದಾರೆ. 

Advertisement

ಹೆಗಡೆಗೂ ವಿವಾದಗಳಿಗೂ ಹಳೇ ನಂಟು. ಕೆಲ ಸಮಯದ ಹಿಂದೆ ಅವರು ವೈದ್ಯರ ಮೇಲೆ ಹಲ್ಲೆ ಮಾಡಿ ಸುದ್ದಿಯಾಗಿದ್ದರು. ಆಗ ವೈದ್ಯರು ತಾಯಿಗೆ ಸರಿಯಾಗಿ ಚಿಕಿತ್ಸೆ ನೀಡಿಲ್ಲ ಎಂಬ ಸಮರ್ಥನೆಯಾದರೂ ಇತ್ತು. ಆದರೆ ಕೇಂದ್ರ ಕೌಶಲಾಭಿವೃದ್ಧಿ ಸಚಿವರಾದ ಬಳಿಕ ಅವರು ವಿವಾದ ಸೃಷ್ಟಿಯಾಗಬೇಕೆಂದೇ ಮಾತನಾಡುತ್ತಿದ್ದಾರೆಯೇ ಎಂಬ ಅನುಮಾನ ಬರುತ್ತದೆ. ಬರೇ ಆರು ತಿಂಗಳಲ್ಲಿ ಅನಂತ ಕುಮಾರ್‌ ಹೆಗಡೆ ಸೃಷ್ಟಿಸಿರುವ ವಿವಾದಗಳನ್ನು ನೋಡುವಾಗ ಈ ಮಾತುಗಳು ಬಾಯ್ತಪ್ಪಿ ಬಂದಿವೆ ಎನ್ನಲು ಸಾಧ್ಯವಿಲ್ಲ.
 
ಸಂವಿಧಾನ ಬದಲಿಸುತ್ತೇವೆ ಎಂಬ ಹೇಳಿಕೆ ಇಡೀ ದೇಶದಲ್ಲಿ ತೀವ್ರ ಟೀಕೆಗೆ ಗುರಿಯಾಗಿತ್ತು. ಸದನದಲ್ಲೂ ಪ್ರತಿಧ್ವನಿಸಿದ ಬಳಿಕ ಹೆಗಡೆ ಕ್ಷಮೆ ಯಾಚಿಸುವುದರೊಂದಿಗೆ ಈ ವಿವಾದ ತಣ್ಣಗಾಯಿತು. ಇದಾದ ಬೆನ್ನಿಗೆ ಅವರು ಬುದ್ಧಿಜೀವಿಗಳೆಂದು ಕರೆಸಿಕೊಳ್ಳುವವರ ಜನ್ಮಜಾಲಾಡಿ ಮತ್ತೂಂದು ವಿವಾದಕ್ಕೆ ನಾಂದಿ ಹಾಡಿದರು. ಈ ಎಲ್ಲ ಹೇಳಿಕೆಗಳನ್ನು ಸಮರ್ಥಿಸಿಕೊಳ್ಳುವ ಕೆಲವು ಅಂಶಗಳಾದರೂ ಇದ್ದವು. ಇವುಗಳಿಂದಾಗಿ ಹೆಗಡೆಯವರಿಗೆ ಕೆಲವು ಹೊಸ ಅಭಿಮಾನಿಗಳೂ ಹುಟ್ಟಿಕೊಂಡಿರಬಹುದು. ಆದರೆ ಈಗ ಅವರು ಕನ್ನಡದ ಕುರಿತು ನೀಡಿರುವ ಹೇಳಿಕೆಯನ್ನು ಮಾತ್ರ ಯಾವ ರೀತಿಯಲ್ಲೂ ಸಮರ್ಥಿಸಲು ಸಾಧ್ಯವಿಲ್ಲ. ಸ್ವತಹ ಅವರ ಪಕ್ಷದವರಿಗೇ ಈ ಹೇಳಿಕೆಯಿಂದ ಮುಜುಗರವಾಗಿದೆ. 

ಕಾಲೇಜಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹೆಗಡೆ ಕರಾವಳಿಯ ಮೂರು ಜಿಲ್ಲೆಗಳ ಜನರು ಮಾತ್ರ ಶುದ್ಧವಾದ ಕನ್ನಡ ಮಾತನಾಡುತ್ತಾರೆ. ಉಳಿದವರದ್ದೆಲ್ಲ ಕಲಬೆರಕೆ ಕನ್ನಡ ಎಂಬರ್ಥದಲ್ಲಿ ಮಾತನಾಡಿದ್ದಾರೆ. ಪ್ರಚಲಿತ ರಾಜಕೀಯ ಸಂದರ್ಭದಲ್ಲಿ ಭಾಷೆ ಎನ್ನುವುದು ಬಹಳ ಸೂಕ್ಷ್ಮ ವಿಷಯವಾಗಿದೆ. ಭಾಷೆಯೂ ರಾಜಕೀಯ ದಾಳವಾಗಿ ಬಳಕೆಯಾಗುತ್ತಿದೆ. ಹೀಗಾಗಿ ಭಾಷೆಯ ಬಗ್ಗೆ ಏನೇ ಹೇಳಿಕೆ ನೀಡುವುದಿದ್ದರೂ ಎರಡೆರಡು ಬಾರಿ ಆಲೋಚಿಸಬೇಕಾಗುತ್ತದೆ. 

ಹೆಗಡೆಯವರಿಗೆ ಈ ವಿಷಯ ತಿಳಿದಿಲ್ಲ ಎಂದಲ್ಲ. ಆದರೆ ತಿಳಿದೂ ಅವರು ರಾಜ್ಯದ ಉಳಿದ ಭಾಗಗಳ ಜನರ ಕನ್ನಡ ಸರಿಯಿಲ್ಲ ಎಂದಿರುವುದು ಯಾವ ಅರ್ಥದಲ್ಲಿ? ಇದಕ್ಕಾಗಿ ಅವರು ಕ್ಷಮೆ ಕೇಳಿರಬಹುದು. ಆದರೆ ಚುನಾವಣೆ ಸಂದರ್ಭದಲ್ಲಿ ಈ ರೀತಿಯ ಸೂಕ್ಷ್ಮ ವಿಚಾರದ ಬಗ್ಗೆ ಮಾತನಾಡುವ ಅಗತ್ಯವಿತ್ತೆ? ಇದರಿಂದ ಅವರಿಗಾಗಲಿ ಅವರ ಪಕ್ಷಕ್ಕಾಗಲಿ ಏನಾದರೂ ಪ್ರಯೋಜನವಿದೆಯೇ? ಏಕೋ ಸಚಿವರಾದ ಬಳಿಕ ಹೆಗಡೆಯವರ ನಡೆ ಪೂರ್ಣವಾಗಿ ಬದಲಾಗಿರುವಂತೆ ಕಾಣಿಸುತ್ತದೆ. ನಿತ್ಯ ಸುದ್ದಿಯಲ್ಲಿರಬೇಕೆಂಬ ಹಪಾಹಪಿ ಏನಾದರೂ ಅವರಿಗೆ ಇದೆಯೇ? 

ಅನಿರೀಕ್ಷಿತವಾಗಿ ಸಚಿವ ಪಟ್ಟ ದೊರಕಿದ ಬಳಿಕ ಅವರೇ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂಬ ಮಾತುಗಳೂ ಕೇಳಿ ಬರುತ್ತಿವೆ. ಅವರು ಮುಖ್ಯಮಂತ್ರಿಯಾಗುತ್ತಾರೋ ಇಲ್ಲವೋ ಎನ್ನುವುದು ಕಾಲಕ್ಕೆ ಬಿಟ್ಟ ವಿಚಾರ. ಆದರೆ ಮುಖ್ಯಮಂತ್ರಿ ಪಟ್ಟ ಲಭಿಸಬೇಕಿದ್ದರೆ ನಿತ್ಯ ಪ್ರಚಾರ ದಲ್ಲಿರಬೇಕು ಮತ್ತು ಅದಕ್ಕಾಗಿ ವಿವಾದಕ್ಕೆಡೆಯಾಗುವ ಏನಾದರೂ ಮಾಡುತ್ತಿರಬೇಕು ಎಂದು ಅವರು ಭಾವಿಸಿದ್ದರೆ ಅದು ತಪ್ಪು. ವಿವಾದಗಳಿಂದಾಗಿ ಸ್ವಲ್ಪ ಕಾಲ ಬಿಟ್ಟಿ ಪ್ರಚಾರ ಪಡೆದುಕೊಳ್ಳಬಹುದು. ಆದರೆ ರಾಜಕೀಯದಲ್ಲಿ ಬಹುಕಾಲ ಉಳಿಯಬೇಕಾದರೆ ಕೆಲಸ ಮಾಡಿ ತೋರಿಸಬೇಕು.

Advertisement
Advertisement

Udayavani is now on Telegram. Click here to join our channel and stay updated with the latest news.

Next