ವಿಟ್ಲ : ಲಾಕ್‌ಡೌನ್ ಸಂದರ್ಭ ಕೋವಿಡ್ ಪರೀಕ್ಷೆಗೆ ಹೋಗುವವರ ಮೇಲೆಗಮನ ಹರಿಸಬೇಕು. ಈ ಸಂದರ್ಭ ಜನ ದಟ್ಟಣೆಯಾಗದಂತೆ ನೋಡಬೇಕು. ಈ ಬಗ್ಗೆ ಆರೋಗ್ಯ ಇಲಾಖೆ, ಕಂದಾಯ ಇಲಾಖೆ ಜತೆ ಚರ್ಚಿಸಿ ಕ್ರಮ ಕೈಗೊಳ್ಳಬೇಕು ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ಹೇಳಿದರು.
ವಿಟ್ಲ ಅತಿಥಿಗೃಹದಲ್ಲಿ ಅಧಿಕಾರಿಗಳೊಂದಿಗೆ ನಡೆದ ಕೋವಿಡ್ ಜಾಗೃತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜನರ ಆರೋಗ್ಯದ ಬಗ್ಗೆ ಸರಕಾರ ವಿಶೇಷ ಕಾಳಜಿ ವಹಿಸುತ್ತಿದ್ದು, ಕೊರೊನಾ ನಿಯಂತ್ರಿಸಲು ವಿವಿಧ ನಿಯಮಗಳನ್ನು ಜಾರಿಗೊಳಿಸುತ್ತಿದೆ. ಅವುಗಳನ್ನು ಪಾಲಿ ಸುವುದು ಪ್ರತಿಯೊಬ್ಬರ ಕರ್ತವ್ಯ. ಲಾಕ್‌ಡೌನ್ ಸಂದರ್ಭ ಜನರಿಗೆ ತೊಂದರೆಯಾಗದಂತೆ ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ಹೇಳಿದರು.
ತಾಲೂಕು ಆರೋಗ್ಯಾಧಿಕಾರಿ ಡಾ| ದೀಪಾ ಪ್ರಭು ಮಾತನಾಡಿ, ತಾಲೂಕಿನಲ್ಲಿ ಕೊರೊನಾ ತೀವ್ರತೆ ಹೆಚ್ಚಾಗಿದೆ. ಕಳೆದ ಬಾರಿ ಸೋಂಕು ಹೆಚ್ಚಾಗಿ ವಯಸ್ಕರಲ್ಲಿ ಪತ್ತೆಯಾಗುತ್ತಿತ್ತು. ಈ ಬಾರಿಯ ಎರಡನೇ ಅಲೆ ಯುವಕರಲ್ಲಿ ಕಾಣಿಸಿಕೊಳ್ಳುತ್ತಿದೆ. ಯುವಕರು ನಿರ್ಲಕ್ಷ್ಯ ವಹಿಸಬಾರದು. ಇದೊಂದು ರೂಪಾಂತರಿತ ವೈರಸ್ ಆಗಿದ್ದು, ಗಂಭೀರ ಸ್ವರೂಪ ಹೊಂದಿದೆ. ಪುತ್ತೂರು ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಇದುವರೆಗೂ 50 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ವಿಟ್ಲ ವ್ಯಾಪ್ತಿಯಲ್ಲಿ 28 ಸಕ್ರಿಯ ಪ್ರಕರಣಗಳಿವೆ.
34 ಮಂದಿ ಹೋಂ ಐಸೋಲೇಶನ್‌ನಲ್ಲಿದ್ದು, ಇಬ್ಬರು ನಿಧನ ಹೊಂದಿದ್ದಾರೆ ಎಂದು ಮಾಹಿತಿ ನೀಡಿದರು. ವಿಟ್ಲ ಪೇಟೆ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕು ಹರಡುತ್ತಿದೆ. ಈ ಬಗ್ಗೆ ಜಾಗರೂಕರಾಗಿರಬೇಕು ಎಂದರು.
ಪಟ್ಟಣ ಪಂಚಾಯತ್ ಅಧ್ಯಕ್ಷೆ ಚಂದ್ರಕಾಂತಿ ಶೆಟ್ಟಿ, ಉಪಾಧ್ಯಕ್ಷೆ ಉಷಾ ಕೃಷ್ಣಪ್ಪ, ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್.ಆರ್., ತಾಲೂಕು ಪಂಚಾಯತ್ ಇಒ ರಾಜಣ್ಣ, ವಿಟ್ಲ ಮುಖ್ಯಾಧಿಕಾರಿ ಮಾಲಿನಿ ಉಪಸ್ಥಿತರಿದ್ದರು. ಕಂದಾಯ ನಿರೀಕ್ಷ ದಿವಾಕರ ಮುಗುಳ್ಯ ಸ್ವಾಗತಿಸಿದರು. ಪ್ರಕಾಶ್ ವಂದಿಸಿದರು.