Advertisement

ಕೊರೊನಾ ಸೋಂಕು ಹರಡದಂತೆ ಕಟ್ಟೆಚ್ಚರವಹಿಸಿ

08:53 PM Mar 14, 2020 | Lakshmi GovindaRaj |

ಕೆ.ಆರ್‌.ನಗರ: ಕೊರೊನಾ ಹರಡುವ ಭೀತಿ ಎದುರಾಗಿರುವುದರಿಂದ ಎಲ್ಲಾ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ತಮ್ಮ ಜವಾಬ್ದಾರಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ತಹಶೀಲ್ದಾರ್‌ ಎಂ.ಮಂಜುಳಾ ತಾಕೀತು ಮಾಡಿದರು.

Advertisement

ಪಟ್ಟಣದ ಮಿನಿವಿಧಾನಸೌಧ ಸಭಾಂಗಣದಲ್ಲಿ ಶನಿವಾರ ನಡೆದ ಕೊರೊನಾ ವೈರಸ್‌ ಕುರಿತು ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಕೊರೊನಾ ವೈರಸ್‌ ಅತಿ ವೇಗವಾಗಿ ಹರಡುವ ಸಾಂಕ್ರಾಮಿಕ ರೋಗವಾಗಿದ್ದು ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಾಗೂ ವಿಶ್ವ ಆರೋಗ್ಯ ಸಂಸ್ಥೆ ಸೂಚನೆಗಳನ್ನು ನೀಡುತ್ತಿದ್ದು, ಅದನ್ನು ಎಲ್ಲರೂ ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸೂಚಿಸಿದರು.

ರಾಜ್ಯದಲ್ಲಿ ಐದು ಕೊರೊನಾ ಸೋಂಕು ಪ್ರಕರಣಗಳು ಕಂಡು ಬಂದಿದ್ದು, ನಮ್ಮ ತಾಲೂಕಿನಲ್ಲಿ ಯಾವುದೇ ಪ್ರಕರಣಗಳು ಕಂಡು ಬಂದಿಲ್ಲವಾದರೂ ವದಂತಿಯಿಂದ ಜನರಲ್ಲಿ ಆತಂಕ ಮನೆ ಮಾಡಿದೆ. ಅವರಿಗೆ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವಂತೆ ಅರಿವು ಮೂಡಿಸುವ ಜತೆಗೆ ರೋಗ ಲಕ್ಷಣಗಳು, ಪರೀಕ್ಷೆ ಮತ್ತು ಚಿಕಿತ್ಸಾ ವಿಧಾನಗಳನ್ನು ತಿಳಿಸಿಕೊಡಬೇಕು ಎಂದು ಹೇಳಿದರು.

ಸಹಾಯವಾಣಿ: ರೋಗದ ಲಕ್ಷಣಗಳು ಕಂಡು ಬಂದರೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಟೋಲ್‌ ಫ್ರೀ ನಂ 104, ಜಿಲ್ಲಾ ಸಹಾಯವಾಣಿ 1077 ಹಾಗೂ ಮಿನಿ ವಿಧಾನಸೌಧ ನಿಯಂತ್ರಣ ಕೊಠಡಿ ಸಂಖ್ಯೆ 08223262234, 08223262371 ಸಂಪರ್ಕಿಸಬಹುದು. ಸಾರ್ವಜನಿಕರಲ್ಲಿ ಅನಗತ್ಯವಾಗಿ ಯಾವುದೇ ರೀತಿಯ ಸುಳ್ಳು ಸುದ್ದಿ ಪ್ರಚಾರ ಮಾಡಿದಲ್ಲಿ ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗುವುದು. ತಾಲೂಕು ಮತ್ತು ಜಿಲ್ಲಾಡಳಿತ ನೀಡುವ ಸೂಚನೆಗಳನ್ನು ಸಾರ್ವಜನಿಕರು ಪಾಲಿಸಿ ಸಹಕರಿಸಬೇಕು ಎಂದು ಮನವಿ ಮಾಡಿದರು.

ಜಾಗೃತಿ ಜಾಥಾ: ತಾಪಂ ಕಾರ್ಯನಿರ್ವಹಣಾಧಿಕಾರಿ ಎಂ.ಎಸ್‌.ರಮೇಶ್‌ ಮಾತನಾಡಿ, ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳು ಅಧಿಕಾರಿಗಳ ಸಭೆ ಕರೆದು ರೋಗ ಹರಡವಿಕೆ ಮತ್ತು ಸ್ವತ್ಛತೆ ಹಾಗೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಎಲ್ಲಾ ಗ್ರಾಮಗಳು ಜಾಥಾ ನಡೆಸಿ ಅರಿವು ಮೂಡಿಸುವಂತೆ ಸೂಚನೆ ನೀಡಲಾಗುವುದು ಎಂದು ತಿಳಿಸಿದರು. ಸಭೆಯಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ.ಕೆ.ಆರ್‌.ಮಹೇಂದ್ರಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ರಾಜು, ಶಿರಸ್ತೇದಾರ್‌ ಷಣ್ಮುಖ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

ರೋಗ ಪೀಡಿತ ಪ್ರದೇಶ ಬಂದ್‌ಗೆ ಅವಕಾಶ: ಆರೋಗ್ಯ ಇಲಾಖೆ, ಪುರಸಭೆ ಮತ್ತು ಗ್ರಾಮ ಪಂಚಾಯಿತಿಗಳು ಹೆಚ್ಚು ಗಮನ ಹರಿಸಿ ಸ್ವತ್ಛತೆ ಕಾಪಾಡುವ ಮೂಲಕ ಯಾವುದೇ ರೋಗ ಹರಡದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ತುರ್ತು ಸನ್ನಿವೇಶದಲ್ಲಿ ಜಿಲ್ಲಾಡಳಿತ ಸೂಚಿಸುವ ಕ್ರಮಗಳನ್ನು ಸಾರ್ವಜನಿಕರು ಬದ್ಧರಾಗುವಂತೆ ಮನವೊಲಿಸಬೇಕು. ಜೊತೆಗೆ ರೋಗ ಪೀಡಿತ ಪ್ರದೇಶವನ್ನು ಬಂದ್‌ ಮಾಡುವ, ರೋಗ ನಿಯಂತ್ರಣಕ್ಕೆ ಯಾವುದೇ ಖಾಸಗಿ ಅಥವಾ ಸರ್ಕಾರಿ ಕಟ್ಟಡಗಳನ್ನು ವಶಕ್ಕೆ ಪಡೆದು ಹಾಗೂ ಯಾವುದೇ ಇಲಾಖೆಯ ಅಧಿಕಾರಿಗಳನ್ನು ತುರ್ತು ಸೇವೆಗೆ ಬಳಸಿಕೊಳ್ಳಬಹುದಾಗಿದೆ ಎಂದು ತಹಶೀಲ್ದಾರ್‌ ಮಂಜುಳಾ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next