Advertisement

ಪೋಲಿಯೋ ಮರುಕಳಿಸದಿರಲಿ ಎಚ್ಚರ

01:59 AM Jan 31, 2021 | Team Udayavani |

ಪೋಲಿಯೋ ಸೋಂಕು 3 ವಿಧದ ಪೋಲಿಯೋ ವೈರಾಣುಗಳಿಂದ (ಟೈಪ್‌ 1, ಟೈಪ್‌ 2, ಟೈಪ್‌ 3) ಕಲುಷಿತ ನೀರು ಮತ್ತು ಆಹಾರದ ಮೂಲಕ ದೇಹವನ್ನು ಪ್ರವೇಶಿಸಿ ಮಕ್ಕಳ ಕರುಳಿನಲ್ಲಿ ದ್ವಿಗುಣಗೊಂಡು ರಕ್ತದ ಮೂಲಕ ಬೆನ್ನುಹುರಿ ಮತ್ತು ನರಮಂಡಲಕ್ಕೆ ಸೇರಿ ಶಾಶ್ವತವಾಗಿ ಅಂಗವೈಕಲ್ಯವನ್ನು ಉಂಟುಮಾಡುತ್ತದೆ. ಪೋಲಿಯೋ ಲಸಿಕೆಯು ಮಕ್ಕಳನ್ನು ಶಾಶ್ವತ ಅಂಗವೈಕಲ್ಯದಿಂದ ರಕ್ಷಿಸುತ್ತದೆ.

Advertisement

ಜಗತ್ತಿನ ಬಹುತೇಕ ರಾಷ್ಟ್ರಗಳು ಪೋಲಿಯೋ ಮುಕ್ತವಾಗಿದ್ದು ನಮ್ಮ ನೆರೆಯ ರಾಷ್ಟ್ರಗಳಾದ ಪಾಕಿಸ್ಥಾನ ಮತ್ತು ಅಫ್ಘಾನಿಸ್ಥಾನದಲ್ಲಿ ಕಳೆದ ವರ್ಷ ತಲಾ 84 ಹಾಗೂ 56 ಪ್ರಕರಣಗಳು ವರದಿಯಾಗಿವೆ.

ಭಾರತವನ್ನು ಪೋಲಿಯೋ ಮುಕ್ತವನ್ನಾಗಿಸಲು 1995ರಲ್ಲಿ ಪ್ರಾರಂಭವಾದ ಪಲ್ಸ್‌ ಪೋಲಿಯೋ ಅಭಿಯಾನ ಬಹಳಷ್ಟು ಪ್ರಗತಿಯನ್ನು ಕಂಡಿದ್ದು ವಿಶ್ವ ಆರೋಗ್ಯ ಸಂಸ್ಥೆಯು 2014ರ ಮಾರ್ಚ್‌ 27ರಂದು ಭಾರತವನ್ನು ಪೋಲಿಯೋ ಮುಕ್ತ ರಾಷ್ಟ್ರವೆಂದು ಘೋಷಿಸಿತು. ಭಾರತದಲ್ಲಿ ಕೊನೆಯ ಪೋಲಿಯೋ ಪ್ರಕರಣ 2011ರಲ್ಲಿ ಹಾಗೂ ಕರ್ನಾಟಕದಲ್ಲಿ 2005ರಲ್ಲಿ ವರದಿಯಾಗಿತ್ತು. ದೇಶದಲ್ಲಿ ಹಾಗೂ ರಾಜ್ಯದಲ್ಲಿ ಕಳೆದ 10 ವರ್ಷಗಳಿಂದ ಯಾವುದೇ ಪೋಲಿಯೋ ವೈರಾಣು ಪತ್ತೆಯಾಗದಿರುವುದು ಬಹಳ ಸಂತಸದ ವಿಷಯ.

ಜ. 31ರ ರವಿವಾರದಂದು ಈ ಅಭಿಯಾನ ನಡೆಯಲಿದ್ದು 5 ವರ್ಷದ ಒಳಗಿನ ಎಲ್ಲ ಮಕ್ಕಳಿಗೂ 2 ಹನಿ ಪಲ್ಸ್‌ ಪೋಲಿಯೋ ಲಸಿಕೆಯನ್ನು ಹಾಕಿಸಬೇಕು. ಈ ಲಸಿಕೆಯನ್ನು ಎಲ್ಲ ಆರೋಗ್ಯ ಕೇಂದ್ರ, ಅಂಗನವಾಡಿ, ಶಾಲೆ, ಆಸ್ಪತ್ರೆ, ಬಸ್‌ ನಿಲ್ದಾಣ, ವಿಮಾನ ನಿಲ್ದಾಣ, ಗ್ರಾಮ ಪಂಚಾಯತ್‌ ಹಾಗೂ ಸಂಚಾರಿ ಘಟಕಗಳಲ್ಲಿ ಅಂದು ಬೆಳಿಗ್ಗೆ ಗಂಟೆ 8 ರಿಂದ ಸಂಜೆ 5ರ ವರೆಗೆ ನೀಡಲಾಗುವುದು. ಇದಾದ ಬಳಿಕ ಗ್ರಾಮೀಣ ಪ್ರದೇಶಗಳಲ್ಲಿ 2 ದಿನ ಮತ್ತು ನಗರ ಪ್ರದೇಶಗಳಲ್ಲಿ 3 ದಿನಗಳ ಕಾಲ ಸ್ವಯಂಸೇವಕರು ಪ್ರತೀ ಮನೆಗೆ ಭೇಟಿ ನೀಡಿ ಎಲ್ಲ ಮಕ್ಕಳಿಗೂ ಪೋಲಿಯೋ ಹನಿ ಹಾಕಿಸಲಾಗಿರುವುದನ್ನು ಖಚಿತಪಡಿಸಿಕೊಳ್ಳಲಿದ್ದಾರೆ. ಒಂದು ವೇಳೆ ಯಾವುದೇ ಮಕ್ಕಳು ಲಸಿಕೆ ಹಾಕಿಸಿಕೊಳ್ಳದೇ ಇದ್ದಲ್ಲಿ ಮಕ್ಕಳಿಗೆ ಸ್ಥಳದಲ್ಲಿಯೇ ಲಸಿಕೆ ನೀಡಲಿದ್ದಾರೆ.

ದೇಶದಲ್ಲಿ ಕೋವಿಡ್‌ ಆತಂಕ ಕಡಿಮೆಯಾಗುತ್ತಿದೆಯಾದರೂ ಸರಕಾರ ರೂಪಿಸಿರುವ ಮಾರ್ಗಸೂಚಿಗಳ ಪಾಲನೆ ಅತ್ಯವಶ್ಯಕ. ಈ ಹಿನ್ನೆಲೆಯಲ್ಲಿ ಪೋಲಿಯೋ ಲಸಿಕೆ ಕೇಂದ್ರಗಳಲ್ಲಿ ಕೋವಿಡ್‌ ಮುನ್ನೆಚ್ಚರಿಕೆ ಕ್ರಮ (ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು, ಸ್ಯಾನಿಟೈಸರ್‌ ಬಳಕೆ)ಗಳನ್ನು ಅನುಸರಿಸಲಾಗುವುದು. ಹೀಗಾಗಿ ಮಕ್ಕಳಿಗೆ ಪಲ್ಸ್‌ ಪೋಲಿಯೋ ಲಸಿಕೆ ಹಾಕಿಸಲು ಯಾವುದೇ ಭಯ ಬೇಡ. ಹೆತ್ತವರು ಯಾವುದೇ ಆತಂಕವಿಲ್ಲದೆ ತಮ್ಮ 5 ವರ್ಷಗಳ ಒಳಗಿನ ಮಕ್ಕಳಿಗೆ ಲಸಿಕೆಯನ್ನು ಕಡ್ಡಾಯವಾಗಿ ಹಾಕಿಸಿ ಪೋಲಿಯೋ ವೈರಾಣುವಿನ ಹರಡುವಿಕೆಯನ್ನು ತಡೆಗಟ್ಟಲು ಸರಕಾರದೊಂದಿಗೆ ಕೈಜೋಡಿಸಬೇಕು.

Advertisement

ಲಸಿಕೆ ಪಡೆದ ಅನಂತರ ಮಕ್ಕಳ ಎಡಗೈ ಕಿರುಬೆರಳಿಗೆ ನೀಲಿ ಬಣ್ಣದ ಗುರುತನ್ನು ಹಾಕಲಾಗುವುದು. ಇದು ಲಸಿಕೆ ಪಡೆಯದ ಮಕ್ಕಳನ್ನು ಪತ್ತೆಹಚ್ಚಲು ಸಹಕಾರಿಯಾಗುವುದು. ವಲಸೆಗಾರ ಕುಟುಂಬಗಳನ್ನು ಗುರುತಿಸಿ ಅವರ ಮಕ್ಕಳಿಗೆ ಲಸಿಕೆಯನ್ನು ತಪ್ಪದೇ ಹಾಕಿಸಲು ಸರಕಾರ ವಿಶೇಷ ಕಾಳಜಿ ವಹಿಸಿದ್ದು ಅಗತ್ಯ ವ್ಯವಸ್ಥೆಗಳನ್ನು ಮಾಡಿದೆ. ಮಕ್ಕಳಿಗೆ ಲಸಿಕೆ ಹಾಕಿಸುವ ವಿಚಾರದಲ್ಲಿ ಯಾವುದೇ ಅಸಡ್ಡೆ ಬೇಡ. ಎಂದೆಂದಿಗೂ ದೇಶದಲ್ಲಿ ಪೋಲಿಯೋ ಮರುಕಳಿಸದಂತೆ ಎಚ್ಚರವಾಗಿರೋಣ.
ಪೋಲಿಯೋ ಲಸಿಕೆ ಸಂಪೂರ್ಣ ಸುರಕ್ಷಿತವಾಗಿದ್ದು ಜೀವ ರಕ್ಷಕ ಎರಡು ಹನಿಗಳಿಂದ ಮಕ್ಕಳನ್ನು ಪೋಲಿಯೋದಿಂದ ರಕ್ಷಿಸೋಣ. ಆ ಮೂಲಕ ಸಶಕ್ತ ಭಾರತ ನಿರ್ಮಾಣದ ಸಂಕಲ್ಪ ನಮ್ಮದಾಗಲಿ.

ಆರೋಗ್ಯ ಇಲಾಖೆ, ಆರೋಗ್ಯ ಕಾರ್ಯಕರ್ತರು, ಮಕ್ಕಳ ಹೆತ್ತವರು, ರೋಟರಿ ಇಂಟರ್‌ನ್ಯಾಶನಲ್‌ ಹಾಗೂ ಇತರ ಸಂಘ ಸಂಸ್ಥೆಗಳ ಸತತ ಪರಿಶ್ರಮದಿಂದ ಇಂದು ಭಾರತ ಪೋಲಿಯೋ ಮುಕ್ತ ರಾಷ್ಟ್ರವಾಗಿದೆ. ಆದರೂ ಪಾಕಿಸ್ಥಾನ, ಅಫ್ಘಾನಿಸ್ಥಾನ ಹಾಗೂ ಆಫ್ರಿಕ ದೇಶಗಳಲ್ಲಿ ಪೋಲಿಯೋ ಪ್ರಕರಣಗಳು ವರದಿಯಾಗುತ್ತಿರುವುದರಿಂದ ನಾವು ಜಾಗ್ರತೆ ವಹಿಸಲೇಬೇಕಿದೆ. ಈ ಬಾರಿ ದೇಶದಲ್ಲಿ ಒಂದೇ ಸುತ್ತಿನ ಪಲ್ಸ್‌ ಪೋಲಿಯೋ ಲಸಿಕಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.

– ಡಾ| ರಾಮಚಂದ್ರ ಕಾಮತ್‌, ಮಣಿಪಾಲ

Advertisement

Udayavani is now on Telegram. Click here to join our channel and stay updated with the latest news.

Next