ಕೆ.ಆರ್.ನಗರ: ಮಹಿಳೆಯರು ಸಿಲಿಂಡರ್ ಬಳಕೆಯ ಸಮಯದಲ್ಲಿ ಸುರಕ್ಷತೆ ಮತ್ತು ಅನಿಲ ಸೋರಿಕೆಯಾಗದಂತೆ ಎಚ್ಚರ ವಹಿಸಬೇಕು ಎಂದು ಶ್ರೀಕಾಂತ್ ಗ್ಯಾಸ್ ಮಾಲೀಕ ಶ್ರೀಕಾಂತ್ ಸಲಹೆ ನೀಡಿದರು.
ಪಟ್ಟಣದ ಮಧುವನಹಳ್ಳಿ ಬಡಾವಣೆಯಲ್ಲಿ ಹಿಂದೂಸ್ಥಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್‌ನ ವತಿಯಿಂದ ನಡೆದ ಎಲ್‌ಪಿಜಿ ಪಂಚಾಯತ್ ಕಾರ್ಯಕ್ರಮದಡಿಯಲ್ಲಿ ಗ್ರಾಹಕರು ಮತ್ತು ಮಹಿಳೆಯರಿಗೆ ಗ್ಯಾಸ್ ಬಳಕೆ ಮತ್ತು ಅದರ ಸುರಕ್ಷತೆ ಕುರಿತು ನಡೆದ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶವನ್ನು ಹೊಗೆ ಮುಕ್ತವನ್ನಾಗಿ ಮಾಡಲು ಸರ್ಕಾರಗಳು ಶ್ರಮಿಸುತ್ತಿದ್ದು, ಪ್ರತಿ ಕುಟುಂಬದ ಸದಸ್ಯರು ಅಡುಗೆ ತಯಾರಿಕೆಗೆ ಎಲ್‌ಪಿಜಿ ಅನಿಲ ಬಳಸಬೇಕು ಎಂದರು.
ಮನೆಯಲ್ಲಿ ಗೃಹಿಣಿಯರು ಕೇವಲ ಗ್ಯಾಸ್ ಬಳಕೆ ಮಾಡಿದರೆ ಸಾಲದು ಸರಬರಾಜುದಾರರಿಂದ ಅನಿಲ ತುಂಬಿದ ಸಿಲಿಂಡರ್ ಪಡೆಯುವಾಗ ನಿಗದಿತ ತೂಕ, ಮುಚ್ಚಳದ ಪ್ಲಾಸ್ಟಿಕ್ ಕೋಟ್, ರೆಗ್ಯುಲೇಟರ್ ಮತ್ತು ಸಿಲಿಂಡರಿನಿಂದ ಒಲೆಗೆ ಸಂಪರ್ಕ ಕಲ್ಪಿಸುವ ಕೊಳವೆ ಮತ್ತಿತರ ಅಂಶಗಳ ಬಗ್ಗೆ ಸದಾ ಎಚ್ಚರ ವಹಿಸಬೇಕು. ಜೊತೆಗೆ ಬಳಸಿದ ನಂತರ ಒಲೆ ಮತ್ತು ಸಿಲಿಂಡರ್ ಆಫ್ ಮಾಡುವುದನ್ನು ಮರೆಯಬಾರದು ಎಂದು ಸಲಹೆ ನೀಡಿದರು.
ಅಡುಗೆ ಮನೆಯಲ್ಲಿ ಒಲೆ ಹಚ್ಚುವ ಮೊದಲು ಕಿಟಕಿ ಬಾಗಿಲು ತೆರೆದು ಗಾಳಿ ಪ್ರವೇಶಿಸುವಂತೆ ಮಾಡಿ ಅಲ್ಲಿಯವರೆಗೆ ವಿದ್ಯುತ್ ಸ್ವಿಚ್ ಆನ್ ಮಾಡುವುದು, ಮೊಬೈಲ್ ಮತ್ತು ಬ್ಯಾಟರಿ, ದೀಪಗಳನ್ನು ಹಚ್ಚಬಾರದು. ನಿಮ್ಮ ಮನೆಗೆ ಅನಿಲ ಸಿಲಿಂಡರ್ ಸರಬರಾಜುದಾರ ಬಂದಾಗ ಅವರ ಮುಂದಯೇ ಪರಿಶೀಲಿಸಿ, ಏನಾದರೂ ದೋಷಗಳು ಕಂಡು ಬಂದರೆ ತಕ್ಷಣ ಅವರ ಬಳಿಯಲ್ಲಿಯೇ ಬದಲಾಯಿಸಿಕೊಳ್ಳಬೇಕು. ಸರ್ಕಾರ ನಿಗದಿಪಡಿಸಿದ ಹಣಕ್ಕಿಂತ ಹೆಚ್ಚು ವಸೂಲಿ ಮಾಡಿದರೆ ಮಾಲೀಕರ ಗಮನಕ್ಕೆ ತರಬೇಕು. ಇದರಿಂದ ಯಾವುದೇ ಅನಾಹುತಗಳಾಗದಂತೆ ತಡೆಯಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಉಪವ್ಯವಸ್ಥಾಪಕ ಎಚ್.ಎಸ್.ಸುಬ್ಬೇಗೌಡ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಎಚ್.ಕೆ.ಮಂಜೇಗೌಡ ಮಾತನಾಡಿದರು. ಪುರಸಭಾ ಸದಸ್ಯೆ ಸರೋಜಾ ಮಾದಯ್ಯ, ತಾಲೂಕು ಮಾದಿಗ ಮಹಾಸಭಾದ ಅಧ್ಯಕ್ಷ ಮಧುವನಹಳ್ಳಿ ರವಿಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್.ಮಹದೇವ್, ಮುಖಂಡರಾದ ರವಿ, ಸಿದ್ದನಾಯಕ, ಶಿಕ್ಷಕಿಯರಾದ ಬಿ.ಎಸ್.ರಾಧಾಮಣಿ, ಮಂಜುಳಾ, ವ್ಯವಸ್ಥಾಪಕ ಮಹೇಶ್ ಮತ್ತಿತರರು ಹಾಜರಿದ್ದರು.
5 ಕೇಜಿ ಸಿಲಿಂಡರ್ ವಿತರಣೆ: ಆರ್ಥಿಕವಾಗಿ ಹಿಂದುಳಿದವರಿಗಾಗಿ ಸರ್ಕಾರ ಉಚಿತ ಅನಿಲ ಸಂಪರ್ಕ ಯೋಜನೆಯಡಿಯಲ್ಲಿ ಬಡಾವಣೆಗೆ 300 ಸಂಪರ್ಕಗಳನ್ನು ಉಚಿತವಾಗಿ ನೀಡಲಾಗಿದೆ. ಆದರೆ ಉಚಿತವಾಗಿ ಪಡೆದವುಗಳನ್ನು ಕೆಲವೇ ಮಂದಿ ಮಾತ್ರ ಬಳಸುತ್ತಿದ್ದು, ಉಳಿದವರು ಹಣದ ಕೊರತೆ ಅಥವಾ ಸಬ್ಸಿಡಿ ಹಣ ಕಡಿತವಾಗಲಿದೆ ಎಂಬ ಭಯದಿಂದಲೋ ಗ್ಯಾಸ್ ಬದಲಿಗೆ ಸೌದೆಯನ್ನೇ ಬಳಕೆ ಮಾಡುತ್ತಿದ್ದಾರೆ. ಅಂತಹವರನ್ನು ಗಮನದಲ್ಲಿಟ್ಟುಕೊಂಡು 14 ಕೇಜಿ ಸಿಲಿಂಡರ್ ಬದಲಾಗಿ ಕಡಿಮೆ ಹಣಕ್ಕೆ 5 ಕೇಜಿ ಸಿಲಿಂಡರ್‌ಗಳನ್ನು ವಿತರಿಸಲಾಗುತ್ತಿದೆ. ಗ್ರಾಹಕರು ಇದರ ಅನುಕೂಲ ಪಡೆದುಕೊಳ್ಳಬೇಕು ಎಂದು ಶ್ರೀಕಾಂತ್ ಗ್ಯಾಸ್ ಮಾಲೀಕ ಶ್ರೀಕಾಂತ್ ಮನವಿ ಮಾಡಿದರು.