Advertisement

ಪೌರಕಾರ್ಮಿಕರಿಂದ ದಸರಾ ಬಹಿಷ್ಕರಿಸುವ ಎಚ್ಚರಿಕೆ

11:29 AM Sep 18, 2018 | |

ಮೈಸೂರು: ಕಾಂಗ್ರೆಸ್‌ ಸರ್ಕಾರದ ಆದೇಶದಂತೆ ಮೈಸೂರು ಮಹಾನಗರ ಪಾಲಿಕೆಯಲ್ಲಿ ಗುತ್ತಿಗೆ ಪೌರಕಾರ್ಮಿಕ ಪದ್ಧತಿಯನ್ನು ರದ್ದುಗೊಳಿಸಿ, ಪಾಲಿಕೆ ವತಿಯಿಂದಲೇ ನೇರ ವೇತನ ನೀಡಲು ಕ್ರಮವಹಿಸಬೇಕು. ಇಲ್ಲವಾದಲ್ಲಿ ನಾಡಹಬ್ಬ ದಸರಾ ಬಹಿಷ್ಕರಿಸಿ ಹೋರಾಟ ನಡೆಸುವುದಾಗಿ ಕರ್ನಾಟಕ ರಾಜ್ಯ  ನಗರ ಪಾಲಿಕೆ, ನಗರಸಭೆ, ಪುರಸಭೆಗಳ ಪೌರಕಾರ್ಮಿಕರ ಮಹಾಸಂಘ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ. 

Advertisement

ರಾಜ್ಯದಲ್ಲಿ ಈ ಹಿಂದೆ ಆಡಳಿತ ನಡೆಸಿದ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಸಿಎಂ ಸಿದ್ದರಾಮಯ್ಯ ಸ್ಥಳೀಯ ಸಂಸ್ಥೆಗಳಲ್ಲಿ ಕೆಲಸ ಮಾಡುವ ಪೌರಕಾರ್ಮಿಕರ ಗುತ್ತಿಗೆ ಪದ್ಧತಿಯನ್ನು ರದ್ದುಗೊಳಿಸಿತ್ತು. ಅಲ್ಲದೆ ಪೌರಕಾರ್ಮಿಕರ ಅನುಕೂಲಕ್ಕಾಗಿ ಹಲವು ಯೋಜನೆಗಳನ್ನು ಜಾರಿಗೊಳಿಸಿತ್ತು. ಆದರೆ, ಸರ್ಕಾರ ಈ ಆದೇಶವನ್ನು ನೀಡಿ ಒಂದು ವರ್ಷವಾದರೂ ಮೈಸೂರು ಮಹಾನಗರ ಪಾಲಿಕೆಯಲ್ಲಿ ಇದನ್ನು ಅನುಷ್ಠಾನಗೊಳಿಸಿಲ್ಲ.

ಈ ಕುರಿತಂತೆ ಸಚಿವರು, ಜಿಲ್ಲಾಧಿಕಾರಿಗಳು ಸೇರಿದಂತೆ ಹಲವರಿಗೆ ಮನವಿ ಸಲ್ಲಿಸಿದರೂ, ಈವರೆಗೂ ಯಾವ ಸ್ಪಂದನೆಯೂ ಲಭಿಸಿಲ್ಲ. ಹೀಗಾಗಿ ಪೌರಕಾರ್ಮಿಕರ ಬೇಡಿಕೆಗಳ ಈಡೇರಿಕೆಗೆ ಹೋರಾಟ ಮಾಡುವ ಅನಿವಾರ್ಯತೆ ಎದುರಾಗಿದೆ ಎಂದು ಮಹಾಸಂಘದ ರಾಜ್ಯಾಧ್ಯಕ್ಷ ನಾರಾಯಣ್‌ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 

15 ದಿನಗಳ ಗಡುವು: ಪೌರಕಾರ್ಮಿಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸೆ.19ರಂದು ಮೈಸೂರಿನಲ್ಲಿ ಸಾಂಕೇತಿಕ ಪ್ರತಿಭಟನೆ ಆಯೋಜಿಸಲಾಗಿದೆ. ನಂತರ ಪೌರಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಸರ್ಕಾರಕ್ಕೆ 15 ದಿನಗಳ ಗಡುವು ನೀಡಲಾಗುವುದು. ಈ ಅವಧಿಯಲ್ಲಿ ಸರ್ಕಾರದಿಂದ ಯಾವ ಸ್ಪಂದನೆ ಲಭಿಸದಿದ್ದಲ್ಲಿ, ದಸರಾ ಬಹಿಷ್ಕರಿಸಿ ಅ.3ರಿಂದ ಸ್ವತ್ಛತಾ ಕಾರ್ಯ ಸ್ಥಗಿತಗೊಳಿಸಿ ಹೋರಾಟ ನಡೆಸಲಾಗುವುದು ಎಂದು ಹೇಳಿದರು.

ಅವೈಜ್ಞಾನಿಕ ಆದೇಶ: ಮತ್ತೂಂದೆಡೆ ರಾಜ್ಯ ಸರ್ಕಾರ ಪ್ರತಿ 700 ಜನಸಂಖ್ಯೆಗೆ ಒಬ್ಬ ಪೌರಕಾರ್ಮಿಕರನ್ನು ನೇಮಿಸಿ ಕೆಲಸ ನಿರ್ವಹಿಸಬೇಕೆಂಬ ಆದೇಶ ಹೊರಡಿಸಿದೆ. ಸರ್ಕಾರದ ಈ ಆದೇಶ ಅವೈಜ್ಞಾನಿಕವಾಗಿದ್ದು, ಇದನ್ನು ಜಾರಿಗೊಳಿಸಿದರೆ ಮೈಸೂರು ಪಾಲಿಕೆಯಲ್ಲಿ 400 ಮಂದಿ ಕೆಲಸ ಕಳೆದುಕೊಳ್ಳುವ ಸಾಧ್ಯತೆ ಇದೆ.

Advertisement

ಹೀಗಾಗಿ ಐಪಿಡಿ ಸಾಲಪ್ಪ ಅವರ ವರದಿಯಂತೆ ಪ್ರತಿ 500 ಜನಕ್ಕೆ ಒಬ್ಬರಂತೆ ಪೌರಕಾರ್ಮಿಕರ ನೇಮಕ ಮಾಡಿಕೊಳ್ಳಬೇಕಿದೆ ಎಂದು ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಮಹಾಸಂಘದ ಉನ್ನತ ಸಮಿತಿ ಅಧ್ಯಕ್ಷ ಮಾರ, ಉಪಾಧ್ಯಕ್ಷ ಆರ್‌. ಶಿವಣ್ಣ, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್‌, ವಿಜಯ್‌ ಸೇರಿದಂತೆ ಇನ್ನಿತರರು ಹಾಜರಿದ್ದರು. 

ನಾಡಹಬ್ಬ ದಸರಾ ಮಹೋತ್ಸವದ ಬಗ್ಗೆ ಪೌರಕಾರ್ಮಿಕರಿಗೆ ಗೌರವವಿದ್ದು, ದಸರಾ ಯಶಸ್ಸಿಗಾಗಿ ಪೌರಕಾರ್ಮಿಕರು ಸಾಕಷ್ಟು ಶ್ರಮಿಸುತ್ತಾರೆ. ಬೇಡಿಕೆಗಳ ಈಡೇರಿಕೆಗಾಗಿ ದಸರಾ ವೇಳೆ ಹೋರಾಟ ಮಾಡುವುದು ಅನಿವಾರ್ಯವಾಗಿದೆ. ಈ ಸಂದರ್ಭದಲ್ಲಿ ಎದುರಾಗುವ ಎಲ್ಲಾ ಸಮಸ್ಯೆಗಳಿಗೆ ಸರ್ಕಾರವೇ ನೇರ ಹೊಣೆಯಾಗಲಿದೆ.
-ನಾರಾಯಣ, ರಾಜ್ಯಾಧ್ಯಕ್ಷ, ರಾಜ್ಯ ಪೌರಕಾರ್ಮಿಕರ ಮಹಾಸಂಘ
 
ಪ್ರಮುಖ ಬೇಡಿಕೆಗಳು
-ಸರ್ಕಾರ ಈಗಲಾದರೂ ಎಚ್ಚೆತ್ತು ಪೌರಕಾರ್ಮಿಕರ ಬೇಡಿಕೆಗಳಿಗೆ ಸ್ಪಂದಿಸಬೇಕು 
-ಪ್ರಮುಖವಾಗಿ ಗುತ್ತಿಗೆ ಪೌರಕಾರ್ಮಿಕ ಪದ್ಧತಿಯನ್ನು ರದ್ದು ಮಾಡಬೇಕು. 
-ಪ್ರತಿ 500 ಜನಕ್ಕೆ ಒಬ್ಬರಂತೆ ಪೌರಕಾರ್ಮಿಕರ ನೇಮಿಸಬೇಕು. 
-ಬೆಳಗಿನ ಉಪಹಾರ ಯೋಜನೆ ಜಾರಿಗೊಳಿಸಿ, ತಿಂಗಳಿಗೆ 600 ರೂ. ಹಣ ನೀಡಬೇಕು. 
-ಪೌರಕಾರ್ಮಿಕರ ಮಕ್ಕಳ ಶಿಕ್ಷಣ ಮತ್ತು ಅಭಿವೃದ್ಧಿಗೆ ಮೀಸಲಾತಿ ಹಣದಲ್ಲಿ ಶೇ.20 ಮೀಸಲಿಡಬೇಕು. 
-ಬಿಬಿಎಂಪಿ ಮಾದರಿಯಲ್ಲಿ ಅಂಬೇಡ್ಕರ್‌ ಜಯಂತಿ ವೇಳೆ 20 ಸಾವಿರ ರೂ. ಬೋನಸ್‌ ನೀಡಬೇಕು.
-ಹಬ್ಬದ ಸಂದರ್ಭದಲ್ಲಿ ಕೆಲಸ ಮಾಡುವ ಪೌರ ಕಾರ್ಮಿಕರಿಗೆ ವರ್ಷಕ್ಕೆ 30 ದಿನಗಳ ವೇತನ ನೀಡಬೇಕು.

Advertisement

Udayavani is now on Telegram. Click here to join our channel and stay updated with the latest news.

Next