Advertisement

ನಳಿನ್‌ ಟೋಲ್‌ ಒಡೆಯುವ ಎಚ್ಚರಿಕೆ

01:00 AM Feb 26, 2019 | Team Udayavani |

ಮಂಗಳೂರು: ಪಂಪ್‌ವೆಲ್‌ ಮೇಲ್ಸೇತುವೆ ಕಾಮಗಾರಿ ಮುಗಿಯುವವರೆಗೆ ಸುಗಮ ಸಂಚಾರಕ್ಕೆ ಒತ್ತು ನೀಡಬೇಕು. ಅದಕ್ಕಾಗಿ ಜಂಕ್ಷನ್‌ ಆಸುಪಾಸಿನ ಕೆಲವು ರಸ್ತೆಗಳನ್ನು ವಾರದೊಳಗೆ ಸರಿಪಡಿಸಿ. ಇಲ್ಲವಾದರೆ ಟೋಲ್‌ಗೇಟನ್ನೇ ಒಡೆದು ಹಾಕಲಾಗುವುದು ಎಂದು ಸಂಸದ ನಳಿನ್‌ ಕುಮಾರ್‌ ಕಟೀಲು ಎಚ್ಚರಿಸಿದ್ದಾರೆ.

Advertisement

ಸೋಮವಾರ ನಡೆದ ಜಿಲ್ಲಾ ಅಭಿವೃದ್ಧಿ ಮತ್ತು ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಹೆದ್ದಾರಿ ಸಮಸ್ಯೆ ಕುರಿತು ಕೇಂದ್ರ ಭೂ ಸಾರಿಗೆ ಸಚಿವಾಲಯದ ಜಂಟಿ ಕಾರ್ಯದರ್ಶಿ ಶೀಘ್ರ ಸಭೆ ನಡೆಸಲಿದ್ದಾರೆ. ಅದಕ್ಕೆ ಮೊದಲು ಮೇಲ್ಸೇತುವೆ ಸನಿಹದ ರಸ್ತೆಗಳಿಗೆ ಡಾಮರೀಕರಣವಾಗಬೇಕು. ಎರಡೂ ಬದಿಯಲ್ಲಿಯೂ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಇಲ್ಲವಾದರೆ ಟೋಲ್‌ಗೇಟ್‌ನ್ನು ಒಡೆದು ಹಾಕ ಲಾಗುವುದು ಎಂದು ಎಚ್ಚರಿಸಿದರು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಸ್ಯಾಮ್ಸನ್‌ ವಿಜಯಕುಮಾರ್‌ ಮಾತನಾಡಿ, ಪಂಪ್‌ವೆಲ್‌ನಲ್ಲಿ ಫ್ಲೈಓವರ್‌ ತಡೆಗೋಡೆಯ ಪ್ಯಾನೆಲ್‌ ಅಳವಡಿಕೆ ಪ್ರಗತಿಯಲ್ಲಿದೆ. ತೊಕ್ಕೊಟ್ಟಿನಲ್ಲೂ ಅಂತಿಮ ಹಂತದಲ್ಲಿದೆ. ಕಾಮಗಾರಿ ನಡೆಸಲು ಹಣವಿಲ್ಲದೆ, ಗುತ್ತಿಗೆದಾರರು ಪರದಾಡುತ್ತಿದ್ದಾರೆ ಎಂದರು.

ಸೇತುವೆ ನಿರ್ಮಾಣ ಪ್ರಸ್ತಾವ
ಕೂಳೂರಿನಲ್ಲಿ ಫಲ್ಗುಣಿ ನದಿಗೆ 6 ಲೇನ್‌ನ ಹೊಸ ಸೇತುವೆ ನಿರ್ಮಾಣ ಕಾಮಗಾರಿಗೆ ಎಪ್ರಿಲ್‌ನಲ್ಲಿ ಟೆಂಡರ್‌ ಕರೆಯಲಾಗುವುದು. ಹಳೆ ಸೇತುವೆ ಇದ್ದ ಜಾಗದಲ್ಲಿ ಹೊಸ ಸೇತುವೆ ನಿರ್ಮಾಣ ಮಾಡುವ ಪ್ರಸ್ತಾವ ವಿದೆ. ಇದಕ್ಕೆ ಡಿಪಿಆರ್‌ ಸಿದ್ಧಗೊಳ್ಳುತ್ತಿದೆ ಎಂದು ಅಧಿಕಾರಿಗಳು ವಿವರಿಸಿದರು. ಜಿಲ್ಲಾಡಳಿತದ ಆದೇಶ ಬಂದ ತತ್‌ಕ್ಷಣವೇ ಘನವಾಹನ ಸಂಚಾರ ಅಸಾಧ್ಯವಾಗಿರುವ ಕೂಳೂರು ಸೇತುವೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗುವುದು ಎಂದರು.

Advertisement

ಭಾರತ್‌ಮಾಲಾ ಯೋಜನೆಯಡಿ ಸುರತ್ಕಲ್‌-ಬಿ.ಸಿ. ರೋಡ್‌ ರಸ್ತೆಯನ್ನು 6 ಪಥದ ರಸ್ತೆಯನ್ನಾಗಿ ಅಭಿವೃದ್ಧಿಪಡಿಸುವ ಸಂಬಂಧ ಡಿಪಿಆರ್‌ ತಯಾರಿಸಲಾಗುತ್ತಿದೆ. ಮೂಲ್ಕಿ-ಬಿ.ಸಿ. ರೋಡ್‌ ವರ್ತುಲ ರಸ್ತೆ ಕಾಮಗಾರಿಯ ಡಿಪಿಆರ್‌ ತಯಾರಾಗುತ್ತಿದ್ದು, ಭೂಸ್ವಾಧೀನಕ್ಕೆ ಶೀಘ್ರ ನೋಟಿಸ್‌ ನೀಡಲಾಗುವುದು. ಕುದುರೆಮುಖ ಜಂಕ್ಷನ್‌ ನಿಂದ ಬೈಕಂಪಾಡಿ ವರೆಗೆ ರಸ್ತೆ ಅಭಿವೃದ್ಧಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಅಧಿಕಾರಿಗಳು ವಿವರಿಸಿದರು.

ಶಿರಾಡಿ ಘಾಟಿಯಲ್ಲಿ ಅಧ್ಯಯನ ನಡೆಸಿದ ಐಐಎಸ್‌ಸಿ ತಜ್ಞರು ಸಲ್ಲಿಸಿದ ವರದಿ ಆಧಾರದಲ್ಲಿ ಶಾಶ್ವತ ಪರಿಹಾರಕ್ಕೆ ಕೇಂದ್ರ ಭೂಸಾರಿಗೆ ಸಚಿವಾಲಯಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ರಾ. ಹೆ. ಕಾರ್ಯಪಾಲಕ ಎಂಜಿನಿಯರ್‌ ಸುಬ್ಬರಾಮ ಹೊಳ್ಳ ತಿಳಿಸಿದರು.

ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿ ಗೋಡು, ಡಿಸಿ ಶಶಿಕಾಂತ ಸೆಂಥಿಲ್‌, ಜಿಪಂ ಸಿಇಒ ಡಾ| ಆರ್‌. ಸೆಲ್ವಮಣಿ ಉಪಸ್ಥಿತರಿದ್ದರು.

ಮಳೆಗಾಲ ಬಳಿಕ ಬಿ.ಸಿ. ರೋಡ್‌-ಅಡ್ಡಹೊಳೆ ಕಾಮಗಾರಿ
ಭೂಸ್ವಾಧೀನ ಪ್ರಕ್ರಿಯೆ ಸರಿಯಾಗಿ ನಡೆಯದ ಕಾರಣ ಬಿ.ಸಿ. ರೋಡ್‌-ಅಡ್ಡಹೊಳೆ ಕಾಂಕ್ರೀಟ್‌ ಚತುಷ್ಪಥ ಕಾಮಗಾರಿ ನಡೆಸುವುದು ಕಷ್ಟವಾಗುತ್ತಿದೆ. ಮಳೆಗಾಲದ ಬಳಿಕವಷ್ಟೇ ಈ ಕಾಮಗಾರಿ ಮುಂದುವರಿಯಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಎಲ್‌ ಆ್ಯಂಡ್‌ ಟಿ ಕಂಪೆನಿಯ ಪ್ರತಿನಿಧಿ ಈ ಕುರಿತು ಮಾಹಿತಿ ನೀಡಿ, 41 ಹೆಕ್ಟೇರ್‌ನಷ್ಟು ಭೂ ಸ್ವಾಧೀನವಾಗದ ವಿನಾ ಕೆಲಸ ಪೂರ್ಣಗೊಳಿಸುವುದು ಸಾಧ್ಯವಾಗದು. ಸದ್ಯ 24 ಕಿರು ಸೇತುವೆ, ಎರಡು ಮಧ್ಯಮ ಸೇತುವೆ ಕೆಲಸ ಪೂರ್ತಿಗೊಳಿಸಲಾಗುವುದು ಎಂದರು.

ಆಸ್ಪತ್ರೆಗಳ ವಿರುದ್ಧ ಕ್ರಮ
ಆಯುಷ್ಮಾನ್‌ ಭಾರತ್‌-ಆರೋಗ್ಯ ಕರ್ನಾಟಕ ಯೋಜನೆಯಡಿ ಚಿಕಿತ್ಸೆ ನೀಡುವುದಕ್ಕೆ ಕೆಲವು ಆಸ್ಪತ್ರೆಗಳು ನಿರಾಕರಿಸುತ್ತಿವೆ ಎಂದು ಶಾಸಕರಾದ ಉಮಾನಾಥ ಕೋಟ್ಯಾನ್‌, ಡಿ. ವೇದವ್ಯಾಸ ಕಾಮತ್‌, ಡಾ| ವೈ. ಭರತ್‌ ಶೆಟ್ಟಿ ಹೇಳಿದರು. ಸಂಸದ ನಳಿನ್‌ ಪ್ರತಿಕ್ರಿಯಿಸಿ, ಯೋಜನೆಯಡಿ ಬರುವ 32 ಆಸ್ಪತ್ರೆಗಳ ಪ್ರಮುಖರನ್ನು ಕರೆದು ಸಭೆ ನಡೆಸಿ. ರೋಗಿಗಳಿಗೆ ಈ ಯೋಜನೆಯಡಿ ಚಿಕಿತ್ಸೆ ನೀಡದಿದ್ದರೆ, ಅಂಥ ಆಸ್ಪತ್ರೆಗಳ ವಿರುದ್ಧ ಸೂಕ್ತ ಕ್ರಮಕ್ಕೆ ಮುಂದಾಗಿ ಎಂದು ಡಿಎಚ್‌ಒ ಡಾ| ರಾಮಕೃಷ್ಣ ರಾವ್‌ ಅವರಿಗೆ ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next