Advertisement

ಗಣೇಶ ಪ್ರತಿಷ್ಠಾಪನೆ ವಿರೋಧಿಸಿದರೆ ಜೋಕೆ

02:30 PM Aug 27, 2022 | Team Udayavani |

ಹುಬ್ಬಳ್ಳಿ: ಚನ್ನಮ್ಮ ವೃತ್ತ ಬಳಿಯ ಈದ್ಗಾ ಮೈದಾನದಲ್ಲಿ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಅನುಮತಿ ನೀಡಲು ಪಾಲಿಕೆ ಹಾಗೂ ಸ್ಥಳೀಯ ಶಾಸಕರು ವಿರೋಧ ಮಾಡಿದರೆ, ತೊಂದರೆ ಕೊಟ್ಟರೆ ಮುಂಬರುವ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಮತ ನೀಡುವಂತೆ ಗಣೇಶ ಮೂರ್ತಿ ಹಿಡಿದು ಮನೆ ಮನೆಗೆ ತೆರಳಿ ತಿಳಿವಳಿಕೆಯ ಅಭಿಯಾನ ಆರಂಭಿಸಬೇಕಾಗುತ್ತದೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ ತಿಳಿಸಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಸಂಬಂಧಿಸಿದಂತೆ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಸಮಿತಿ ರಚನೆ ಮಾಡಿ ನಿರ್ಣಯ ತೆಗೆದುಕೊಳ್ಳಲು ತಿಳಿಸಿದೆ. ಆ.29ರಂದು ನಿರ್ಣಯ ತಿಳಿಸಲು ಸೂಚಿಸಿದೆ. ಆದರೆ ಅನುಮತಿ ನೀಡಲು ಸಮಿತಿ ರಚನೆ ಅವಶ್ಯಕತೆ ಇರಲಿಲ್ಲ. ಕಾಲಹರಣ ಮಾಡಲು ಪಾಲಿಕೆ ಈ ರೀತಿಯ ನಾಟಕ ಮಾಡುತ್ತಿದೆ ಎಂದು ಆರೋಪಿಸಿದರು.

ಈಗಾಗಲೇ ಮಹಾಪೌರರಿಗೆ ಅನುಮತಿ ವಿಷಯದಲ್ಲಿ ಯಾವುದೇ ಕಾರಣಕ್ಕೂ ನಕಾರಾತ್ಮಕ ವರದಿ ಇರಬಾರದು ಎಂದು ಷರತ್ತು ಹಾಕಲಾಗಿದೆ. ಹಾಗೇನಾದರೂ ವ್ಯತಿರಿಕ್ತವಾದರೆ ಅದನ್ನು ವಿರೋಧಿಸಲಾಗುವುದು. ಈಗಾಗಲೇ ವಿಳಂಬವಾಗಿದೆ. ನಾವು ಈದ್ಗಾ ಮೈದಾನದಲ್ಲಿ ಪ್ರಾರ್ಥನೆ ಮಾಡಲು ವಿರೋಧ ಮಾಡಿಲ್ಲ.

ಒಂದು ವೇಳೆ ಸೋಮವಾರ ಅನುಮತಿ ನೀಡಲು ಹಿಂದೇಟು ಹಾಕಿದರೆ ಒತ್ತಾಯಪೂರ್ವಕವಾಗಿ ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಬೇಕಾಗುತ್ತದೆ. ಸರಕಾರ ನಿಷೇಧಾಜ್ಞೆ 144 ಕಲಂ ಜಾರಿಗೊಳಿಸಿದರೂ ನಮ್ಮ ಪಟ್ಟು ಬಿಡುವುದಿಲ್ಲ ಎಂದರು.

ಮನವಿ ಸಲ್ಲಿಕೆ: ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ ನೀಡುವುದಕ್ಕೆ ಪಾಲಿಕೆಯಿಂದ ರಚಿಸಲಾದ ಸಂತೋಷ ಚವ್ಹಾಣ ನೇತೃತ್ವದ ಸದನ ಸಮಿತಿಗೆ ರಾಣಿಚನ್ನಮ್ಮ ಮೈದಾನ ಗಜಾನನ ಉತ್ಸವ ಸಮಿತಿ ಸದಸ್ಯರು ಪ್ರಮೋದ ಮುತಾಲಿಕ ನೇತೃತ್ವದಲ್ಲಿ ಮನವಿ ಸಲ್ಲಿಸಿದರು. ಹನುಮಂತಸಾ ನಿರಂಜನ, ಸಂತೋಷ ಕಠಾರೆ, ಅಭಿಷೇಕ ನಿರಂಜನ, ಚಂದ್ರು ಕೋಳೂರ ಮೊದಲಾದವರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next