Advertisement

ವಸ್ತು ಖರೀದಿಗೆ ಮುನ್ನ ಎಚ್ಚರ ವಹಿಸಿ

01:02 PM Dec 29, 2017 | Team Udayavani |

ಬೀದರ: ಗ್ರಾಹಕರು ಯಾವುದೇ ವಸ್ತು ಖರೀದಿಸುವ ಮುನ್ನ ಎಚ್ಚರಿಕೆ ವಹಿಸಬೇಕು ಎಂದು ಆಹಾರ ನಾಗರಿಕರ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕ ಎಚ್‌. ಬಸವರಾಜ ಹೇಳಿದರು.

Advertisement

ನಗರದ ರೈತ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು
ಮಾತನಾಡಿದರು. ಮಾರುಕಟ್ಟೆ ವ್ಯವಸ್ಥೆಯಲ್ಲಿ ಗ್ರಾಹಕರು ಎದುರಿಸುತ್ತಿರುವ ಅನ್ಯಾಯಗಳನ್ನು ತಡೆಗಟ್ಟಲು ಜಿಲ್ಲಾ ಮಟ್ಟದಲ್ಲಿ ಗ್ರಾಹಕ ಮಾಹಿತಿ ಕೇಂದ್ರಗಳನ್ನು ಸ್ಥಾಪಿಸಿ ಸಾರ್ವಜನಿಕರಿಗೆ ಉಚಿತವಾಗಿ ಮಾಹಿತಿ ನೀಡಲಾಗುತ್ತಿದೆ.
ಮಾರುಕಟ್ಟೆಯಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಎದುರಾದಲ್ಲಿ ಈ ಕೇಂದ್ರ ದಿಂದ ಸಲಹೆ ಪಡೆಯಬಹುದು ಎಂದರು.

ಮಾರುಕಟ್ಟೆ ವ್ಯವಸ್ಥೆಯಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಹಿಂದಿನ ಪ್ರಧಾನಿ ರಾಜೀವ ಗಾಂಧಿ ಅವರು 1986ರಲ್ಲಿ
ಗ್ರಾಹಕರ ಹಿತರಕ್ಷಣೆ ಕಾಯ್ದೆ ಜಾರಿಗೆ ತಂದಿದ್ದರು. ಈವರೆಗೆ ಕಾಯ್ದೆಯಲ್ಲಿ ಹಲವು ಸುಧಾರಣೆಗಳಾಗಿವೆ. ಗ್ರಾಹಕರನ್ನು ಮೋಸಗೊಳಿಸುವ ಮಾರಾಟಗಾರರಿಗೆ ದಂಡ ಹಾಗೂ ಕಠಿಣ ಶಿಕ್ಷೆ ವಿಧಿಸಲು ಕಾಯ್ದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ವಿವರಿಸಿದರು.

ಸಾಮಾಜಿಕ ಕಾರ್ಯಕರ್ತ ಡಾ| ಲಕ್ಕಿ ಪ್ರಸಾದ ಮಾತನಾಡಿ, ಗ್ರಾಹಕರು ಯಾವುದೇ ವಸ್ತುಗಳನ್ನು ಖರೀದಿಸುವ ಮುನ್ನ ವಸ್ತುವಿನ ಮೇಲೆ ಐಎಸ್‌ಐ ಮುದ್ರೆ, ಎಂಆರ್‌ಪಿ ಬೆಲೆ ನಮೂದಿಸಿರುವ ಬಗ್ಗೆ ಪರಿಶೀಲಿಸಬೇಕು. ಖರೀದಿ ನಂತರ ಕಡ್ಡಾಯವಾಗಿ ರಸೀದಿ ಪಡೆಯುವ ಪರಿಪಾಠ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಗ್ರಾಹಕರ ಹಿತರಕ್ಷಣೆ ಕಾಯ್ದೆಯ ಬಗ್ಗೆ ಶಾಲೆ ಮಕ್ಕಳಲ್ಲಿ ಅರಿವು ಮೂಡಿಸಲು ಜಿಲ್ಲೆಯಾದ್ಯಂತ 20 ಕ್ಲಬ್‌ಗಳನ್ನು ರಚಿಸಲಾಗಿದೆ. ಇಂತಹ ಜಾಗೃತಿ ಕಾರ್ಯಕ್ರಮಗಳು ಇನ್ನಷ್ಟು ಹೆಚ್ಚಾಗಿ ಆಯೋಜಿಸಬೇಕಿದೆ ಎಂದರು. ವೇದಿಕೆಯ ಅಧ್ಯಕ್ಷ ಬಸವರಾಜ ಪವಾರ್‌, ಸದಸ್ಯ ಶಂಕರರಾವ್‌ ಹಾಲೇಪುರಗಿ, ರಾಜು, ವಕೀಲರಾದ ಶಂಕರನಾಗ, ಶಾಂತಿಶ್ವರ ಕೆಷ್ಕರ್‌, ವಿವಿಧ ಶಾಲೆಯ ವಿದ್ಯಾರ್ಥಿಗಳು ಹಾಗೂ ಇತರರು ಉಪಸ್ಥಿತರಿದ್ದರು. ಜಿಲ್ಲಾಡಳಿತ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಕಾನೂನು ಮಾಪನ ಶಾಸ್ತ್ರ ಇಲಾಖೆ ಹಾಗೂ ಜಿಲ್ಲಾ
ಗ್ರಾಹಕರ ಮಾಹಿತಿ ಕೇಂದ್ರದ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next