“ನಾನು ಅಬ್ರಾಡ್‌ಗೆ ಹೋಗುತ್ತೇನೆ. ನೀನು ಬರ್ತಿಯಾಂದ್ರೆ ಬಾ ಇಲ್ಲಾಂದ್ರೆ ಈ ಮನೆಯಲ್ಲೇ ಸಾಯಿ …’ ಎಂದು ತಂದೆ, ತನ್ನ ಮಗಳಿಗೆ ಬೈದು ಹೋಗುತ್ತಾನೆ. ಮಗಳು ಒಂದು ಕ್ಷಣ ಯೋಚಿಸಿ, ಮೇಲೆ ಫ್ಯಾನ್‌ನತ್ತ ಮುಖ ಮಾಡುತ್ತಾಳೆ. ಕಟ್ ಮಾಡಿದರೆ, ಆ ಮನೆಗೆ ಹೊಸ ಯುವಕ ಬಾಡಿಗೆಗೆ ಬರುತ್ತಾನೆ. ಅಲ್ಲಿಂದ ಹಾರರ್ ಸಿನಿಮಾವೆಂದು ಹೇಳಿಕೊಂಡು ಬಂದ “ಮನೆ ನಂ.67′ ಆರಂಭವಾಗುತ್ತದೆ.
ಹಾರರ್ ಸಿನಿಮಾಗಳು ಹೆಚ್ಚುತ್ತಿದ್ದಂತೆ ಗುಣಮಟ್ಟ ಕುಸಿಯುತ್ತಿದೆ. ಒಂದು ಮನೆ ಹಾಗೂ ವಿಚಿತ್ರ ಹಾವಭಾವ ಕೊಡುವ ಕಲಾವಿದರು, ರೀರೆಕಾರ್ಡಿಂಗ್ ಅಬ್ಬರವಿದ್ದರೆ ಸಾಕು ಎಂಬಂತೆ ಹಾರರ್ ಸಿನಿಮಾಗಳು ಬರುತ್ತಿವೆ. “ಮನೆ ನಂ.67′ ಕೂಡಾ ಈ ಸಾಲಿಗೆ ಸೇರುವ ಸಿನಿಮಾ. ಏನೇ ಅಬ್ಬರ, ಅರಚಾಟವಿದ್ದರೂ ಹಾರರ್ ಸಿನಿಮಾಗಳಲ್ಲಿ ಸಸ್ಪೆನ್ಸ್ ಎಂಬುದು ತುಂಬಾ ಮುಖ್ಯ.
ಮನೆಯಲ್ಲಿನ ದೆವ್ವದಾಟದ ಹಿಂದಿನ ರಹಸ್ಯವೇನು ಎಂಬುದನ್ನು ಕೊನೆವರೆಗೆ ಹಿಡಿದಿಟ್ಟು ತೋರಿಸಿದರೆ, ಪ್ರೇಕ್ಷಕರಿಗೆ ಕೊಂಚ ರೋಚಕತೆ ಸಿಗಬಹುದು. ಆದರೆ, “ಮನೆ ನಂ.67′ ಚಿತ್ರದಲ್ಲಿ ನಿಮಗೆ ಮೊದಲ ದೃಶ್ಯದಲ್ಲೇ ನಿರ್ದೇಶಕರು ಇಡೀ ಕಥೆಯ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ. “ಈ ಮನೆಯಲ್ಲೇ ಸಾಯಿ’ ಎಂಬ ತಂದೆಯ ಮಾತಿಗೆ ಬೇಸರಗೊಂಡ ಮಗಳು ಫ್ಯಾನ್‌ನತ್ತ ನೋಡುವ ಮೂಲಕ ಇಡೀ ಕಥೆಯ ರಹಸ್ಯ ಬಿಚ್ಚಿಟ್ಟಿದ್ದಾರೆ.
ಮುಂದಿನದ್ದನ್ನು ಪ್ರೇಕ್ಷಕ ಸುಲಭವಾಗಿ ಊಹಿಸಿಕೊಂಡು ಹೋಗುತ್ತಾನೆ. ಮುಖ್ಯವಾಗಿ ಈ ಸಿನಿಮಾದಲ್ಲಿ ಒಂದು ಗಟ್ಟಿಕಥೆ ಎಂಬುದೇ ಇಲ್ಲ. ಮನೆಯೊಂದರಲ್ಲಿ ಯುವಕನೊಬ್ಬ ಚಿತ್ರವಿಚಿತ್ರವಾಗಿ ವರ್ತಿಸುವುದನ್ನೇ ಇಡೀ ಸಿನಿಮಾದುದ್ದಕ್ಕೂ ಕಟ್ಟಿಕೊಟ್ಟಿದ್ದಾರೆ. ಉಳಿದಂತೆ ಅತ್ತಿಂದಿತ್ತ ಓಡಾಡುವ ಆಕೃತಿ, ಗೆಜ್ಜೆ ಸದ್ದು, ಹಿಂದಿನಿಂದ ಬಂದು ಯಾರೋ ತಟ್ಟಿದಂತೆ … ಹಾರರ್ ಸಿನಿಮಾಗಳ ಮಾಮೂಲಿ ಅಂಶಗಳೊಂದಿಗೆ ಸಿನಿಮಾ ಮಾಡಿ ಮುಗಿಸಿದ್ದಾರೆ.
ಕೇವಲ ಹಾರರ್‌ಗಷ್ಟೇ ಸೀಮಿತವಾದರೆ ಕಷ್ಟ, ಪೋಲಿ ಹುಡುಗರನ್ನು ಸೆಳೆಯುವಂಥದ್ದು ಚಿತ್ರದಲ್ಲಿ ಇದ್ದರೆ ಚೆಂದ ಎಂಬ ಆಲೋಚನೆ ನಿರ್ದೇಶಕರಿಗೆ ಬಂದ ಕಾರಣ, ಚಿತ್ರದಲ್ಲಿ ಸಾಕಷ್ಟು ಹಸಿಬಿಸಿ ದೃಶ್ಯಗಳು, ಡಬಲ್ ಮೀನಿಂಗ್ ಸಂಭಾಷಣೆಗಳನ್ನು ಸೇರಿಸಿದ್ದಾರೆ. ಹಾರರ್ ಸಿನಿಮಾ ಎಂದಾಗ ಒಂದು ಕ್ಷಣವಾದರೂ, ಒಂದು ದೃಶ್ಯದಲ್ಲಾದರೂ ಮೈಜುಮ್ಮೆನ್ನುತ್ತದೆ.
ಆದರೆ, ಈ ಚಿತ್ರ ಅದರಿಂದ ಮುಕ್ತವಾಗಿದೆ ಮತ್ತು ನಿಮ್ಮ ತಾಳ್ಮೆಯನ್ನು ಆಗಾಗ ಪರೀಕ್ಷಿಸುತ್ತದೆ ಕೂಡಾ. ಚಿತ್ರದಲ್ಲಿ ಪ್ರತ್ಯೇಕವಾಗಿ ಕಾಮಿಡಿ ಸೀನ್ ಎಂಬುದಿಲ್ಲ. ಆದರೆ, ಕೆಲವೊಂದು ಸನ್ನಿವೇಶಗಳೇ ಆ ಜಾಗವನ್ನು ತುಂಬಿವೆ. “ನಾನು ದೆವ್ವ’ ಎಂದು ತನ್ನನ್ನು ಪರಿಚಯಿಸಿಕೊಳ್ಳುವ ಹಾಗೂ “ನನ್ನ ಪೆಂಡೆಂಟ್ ಕೊಡಿ’ ಎಂದು ಅಳುವ ದೆವ್ವ ಪ್ರೇಕ್ಷಕರಲ್ಲಿ ನಗೆ ಉಕ್ಕಿಸುತ್ತದೆ.
ಚಿತ್ರದಲ್ಲಿ ನಟಿಸಿರುವ ಸತ್ಯ ಅಜಿತ್ ನಟನೆಯಲ್ಲಿ ಇನ್ನೂ ದೂರ ಸಾಗಬೇಕಿದೆ. ಚಿತ್ರದಲ್ಲಿ ಸುಮಿತ್ರಾ ನಟಿಸಿದ್ದಾರೆ. ಆದರೆ, ಅವರು ದೆವ್ವದ ಪಾತ್ರ ಮಾಡಿರುವುದರಿಂದ ಅವರನ್ನು ಗುರುತು ಹಿಡಿಯುವ ಟಾಸ್ಕ್ ಪ್ರೇಕ್ಷಕರಿಗೆ ಕೊಟ್ಟಂತಾಗಿದೆ. ಎಲ್ಲಾ ಸಮಯದಲ್ಲೂ ಹಾವಭಾವಗಳೇ ನಟನೆ ಎನಿಸಿಕೊಳ್ಳುವುದಿಲ್ಲ.ಉಳಿದಂತೆ ಒಂದಷ್ಟು ಕಲಾವಿದರು ಹಾಗೆ ಬಂದು ಹೀಗೆ ಹೋಗುತ್ತಾರೆ.
ಚಿತ್ರ: ಮನೆ ನಂ.67
ನಿರ್ಮಾಣ: ಗಣೇಶ್
ನಿರ್ದೇಶನ: ಜೈಕುಮಾರ್
ತಾರಾಗಣ: ಸತ್ಯ ಅಜಿತ್, ವಸಂತಿ, ಸ್ವಪ್ನ, ಗಾಯತ್ರಿ, ಸುಮಿತ್ರ ಮುಂತಾದವರು
* ರವಿಪ್ರಕಾಶ್ ರೈ