Advertisement

ದಾರಿ ತಪ್ಪಿಸುವ ಸಂಘಟನೆಗಳ ಬಗ್ಗೆ ಎಚ್ಚರ ವಹಿಸಿ: ಸಿಎಂ

11:25 AM May 17, 2017 | |

ಬೆಂಗಳೂರು: ಕೆಲ ರಾಜಕೀಯ ಪ್ರೇರಿತ ವಿದ್ಯಾರ್ಥಿ ಸಂಘಟನೆಗಳು ಯುವಜನತೆಯ ದಿಕ್ಕು ತಪ್ಪಿಸುತ್ತಿದ್ದು, ಈ ಬಗ್ಗೆ ಯುವ ಜನಾಂಗ ಎಚ್ಚರಿಕೆಯಿಂದ ಇರಬೇಕು ಎಂದು ಸಿಎಂ ಸಿದ್ದರಾಮಯ್ಯ ಕಿವಿಮಾತು ಹೇಳಿದರು.

Advertisement

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾ ಖೆಯ ರಾಷ್ಟ್ರೀಯ ಸೇವಾ ಯೋಜನೆ ಕೋಶ, ಬೆಂಗಳೂರು ವಿವಿ ಎನ್‌ಎಸ್‌ಎಸ್‌ ಘಟಕ ಹಾಗೂ ನಿಮ್ಹಾನ್ಸ್‌ ಸಂಸ್ಥೆ ಸಹಯೋಗದಲ್ಲಿ ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಎನ್‌ಎಸ್‌ಎಸ್‌ ರಾಜ್ಯ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

ಸಮಾಜದಲ್ಲಿ ಸಾಮರಸ್ಯ ಭಾವನೆಯನ್ನು ಕದಡುವ ಹಾಗೂ ಯುವಜನರನ್ನು ದಾರಿ ತಪ್ಪಿಸುವ ಹಲವು ವಿದ್ಯಾರ್ಥಿ ಸಂಘಟನೆಗಳು ಅಸ್ತಿತ್ವದಲ್ಲಿವೆ. ಇಂತಹ ಸಂಘಟನೆಗಳಿಂದ ಯುವಕರು ದೂರವಿರಬೇಕು. ಸಹನೆ, ಸಹಿಷ್ಣುತೆಯನ್ನು ಬೆಳೆಸಿಕೊಂಡು ಎಲ್ಲರೊಂದಿಗೆ ಅನ್ಯೋನ್ಯತೆಯಿಂದ ಬದುಕುವ ಎನ್‌ಎಸ್‌ಎಸ್‌ನಂತಹ ಚಟುವಟಿಕೆಯಲ್ಲಿ ಸಕ್ರಿಯವಾಗಿ ತೊಡಗಿಸಿ ಕೊಳ್ಳಬೇಕು. ಈ ನಿಟ್ಟಿನಲ್ಲಿ ವಿಶ್ವವಿದ್ಯಾಲಯಗಳ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿದರು.

ಹುಟ್ಟಿದಾಗ ಪ್ರತಿ ಮಗುವು ವಿಶ್ವಮಾನವತೆ ಯನ್ನೇ ಹೊಂದಿರುತ್ತದೆ. ಆದರೆ ಬೆಳೆಯುತ್ತಾ ಅಲ್ಪ ಮಾನವತೆ ಬೆಳೆಸಿಕೊಳ್ಳುತ್ತದೆ ಎಂದು ರಾಷ್ಟ್ರ ಕವಿ ಕುವೆಂಪು ಹೇಳಿದ್ದರು. ಹುಟ್ಟುವಾಗ ಯಾರೊಬ್ಬರೂ ಇಂತಹುದೇ ಜಾತಿಯಲ್ಲಿ ಹುಟ್ಟಬೇಕು ಎಂದು ಅರ್ಜಿ ಹಾಕಿಕೊಂಡಿರುವು ದಿಲ್ಲ. ಹಾಗೆಂದು ಜಾತಿಯ ಹಣೆಪಟ್ಟಿಯನ್ನೇ ಕಟ್ಟಿಕೊಂಡು ಕೊನೆಯವರೆಗೂ ಜಾತಿಯಲ್ಲೇ ಸಾಯಬೇಕೆಂದೇನೂ ಇಲ್ಲ. ನಾವೆಲ್ಲರೂ ಮನುಷ್ಯರಾಗುವತ್ತ ವ್ಯಕ್ತಿತ್ವ ರೂಪಿಸಿಕೊಳ್ಳ ಬೇಕು.

ಬಾಯಲ್ಲಿ ವಚನವನ್ನು ಹೇಳುತ್ತಲೇ ಜಾತೀಯತೆ ಮಾಡುವ ಜನರಿದ್ದಾರೆ. “ನನಗಾಗಿ ಅಲ್ಲ, ನಿಮಗಾಗಿ’ ಧ್ಯೇಯದೊಂದಿಗೆ ಬದು ಕುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಹೇಳಿದರು. ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಪ್ರಮೋದ್‌ ಮಧ್ವರಾಜ್‌, “ರಾಜ್ಯದಲ್ಲಿ ಎನ್‌ಎಸ್‌ಎಸ್‌ ಸ್ವಯಂಸೇವಕರ ಸಂಖ್ಯೆ ಮೂರು ಲಕ್ಷದಿಂದ ಐದು ಲಕ್ಷಕ್ಕೇರಿದ್ದು, ಇನ್ನೊಂದು ವರ್ಷದಲ್ಲಿ 10 ಲಕ್ಷ ಮೀರುವ ಗುರಿ ಇದೆ.

Advertisement

ಸದ್ಯ ಪದವಿಪೂರ್ವ ಹಾಗೂ ಪದವಿ ಹಂತದಲ್ಲಷ್ಟೇ ಎನ್‌ಎಸ್‌ಎಸ್‌ ಚಟುವಟಿಕೆಯಿದ್ದು, ಇದನ್ನು ಪ್ರೌಢಶಾಲೆ ಹಂತಕ್ಕೂ ವಿಸ್ತರಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು. ಮುಖ್ಯಮಂತ್ರಿಗಳು ಕ್ರೀಡಾ ಕ್ಷೇತ್ರಕ್ಕೂ ಹೆಚ್ಚಿನ ಒತ್ತು ನೀಡಿದ್ದಾರೆ. ಈ ಹಿಂದೆ 145 ಕೋಟಿ ರೂ. ಇದ್ದ ಅನುದಾನವನ್ನು ಈ ಭಾರಿ 285 ಕೋಟಿ ರೂ.ಗೆ ಏರಿಕೆ ಮಾಡಿದ್ದಾರೆ. ಹಾಗೆಯೇ ಎನ್‌ಎಸ್‌ಎಸ್‌ ಚಟುವಟಿಕೆಗಳಿಗೆ 5.60 ಕೋಟಿ ರೂ. ಇದ್ದ ಅನುದಾನ ಈ ಬಾರಿ 13.65 ಕೋಟಿ ರೂ.ಗೆ ಹೆಚ್ಚಳವಾಗಿದೆ. ಆ ಮೂಲಕ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ ಹಾಗೂ ಕ್ರೀಡಾ ಚಟುವಟಿಕೆಗೆ ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ಹೇಳಿದರು.

ನಿಮ್ಹಾನ್ಸ್‌ ನಿರ್ದೇಶಕ ಬಿ.ಎನ್‌.ಗಂಗಾಧರ್‌, ನಿಮ್ಹಾನ್ಸ್‌ನ ಜನ ಆರೋಗ್ಯ ಕೇಂದ್ರವು ಯುವ ಸ್ಪಂದನ ಕಾರ್ಯಕ್ರಮವನ್ನು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಜಾರಿಗೊಳಿಸಲಾಗಿದೆ. ಭಾವನೆ ನಿರ್ವಹಣೆ, ಸಹಾನುಭೂತಿ, ಒತ್ತಡ ನಿವಾರಣೆ, ಸಮಸ್ಯೆಗಳ ಪರಿಹಾರ, ವಿಮಶಾìತ್ಮಕ ಚಿಂತನೆ ಬಗ್ಗೆ ಸಮಾಲೋಚಿಸಿ ಸ್ಪಂದಿಸುವ ಕಾರ್ಯಕ್ರಮ ದೇಶದಲ್ಲೇ ವಿನೂತನ ಎನಿಸಿದೆ ಎಂದು ಹೇಳಿದರು.

ಮುಖ್ಯಮಂತ್ರಿಗಳ ಸಂಸದೀಯ ಕಾರ್ಯ ದರ್ಶಿ ಕೆ.ಗೋವಿಂದರಾಜು, ಸಿ.ಎಸ್‌.ಶಿವಳ್ಳಿ, ವಿಧಾನ ಪರಿಷತ್‌ ಸದಸ್ಯ ಎಚ್‌.ಎಂ.ರೇವಣ್ಣ, ಬೆಂಗಳೂರು ವಿವಿ ಹಂಗಾಮಿ ಕುಲಪತಿ ಎಂ.ಮುನಿರಾಜು, ಕುಲಸಚಿವ ಬಿ.ಕೆ.ರವಿ, ರಾಜ್ಯ ಎನ್‌ಎಸ್‌ಎಸ್‌ ಅಧಿಕಾರಿ ಡಾ.ಗಣನಾಥ ಶೆಟ್ಟಿ ಎಕ್ಕಾರು ಇತರರು ಉಪಸ್ಥಿತರಿದ್ದರು.

ದೃಷ್ಟಿ ವಿಕಲಚೇತನ ಕ್ರಿಕೆಟ್‌ಪಟುಗಳಿಗೆ ತಲಾ 7 ಲಕ್ಷ ರೂ. ಬಹುಮಾನ
ಅಂಧರ ಟಿ-20 ವಿಶ್ವಕಪ್‌ ಗೆದ್ದ ಭಾರತದ ಕ್ರಿಕೆಟ್‌ ತಂಡದ ಸದಸ್ಯರಾದ ಪ್ರಕಾಶ್‌ ಜಯರಾಮಯ್ಯ ಹಾಗೂ ಆರ್‌.ಸುನೀಲ್‌ ಅವರಿಗೆ ತಲಾ ಏಳು ಲಕ್ಷ ರೂ. ನಗದು ಪುರಸ್ಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರದಾನ ಮಾಡಿದರು. ಭಾರತ ತಂಡ ಪಾಕಿಸ್ತಾನದ ವಿರುದ್ಧ ಗೆದ್ದಿತ್ತು. ತಂಡದಲ್ಲಿದ್ದ ಪ್ರಕಾಶ್‌ ಜಯರಾಮಯ್ಯ ಹಾಗೂ ಆರ್‌.ಸುನೀಲ್‌ ಉತ್ತಮ ಪ್ರದರ್ಶನ ನೀಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next