ಸಮಯ ಇರುವುದೇ ಪಾಸ್ ಮಾಡಲು ಎಂಬ ಮನಸ್ಥಿತಿಯ ನಾನು, ಸಮಯಕ್ಕೆ ಅತಿ ಮಹತ್ವ ಕೊಡುವ ನಿನ್ನನ್ನು ಅದು ಹೇಗೆ ಇಷ್ಟಪಟ್ಟೆನೆಂದು ನನಗೇ ಆರ್ಥವಾಗುತ್ತಿಲ್ಲ. ಭಾವನೆಗಳಿಗೆ ಸೋಲುವ ನಾನು, ವಾಸ್ತವದ ಚೌಕಟ್ಟಿನೊಳಗೆ ಬಂಧಿಯಾಗಿರುವ ನೀನು, ಭಲೇ ಜೋಡಿ ಕಣೋ ನಮ್ಮದು!
ಡಿಯರ್ ನನ್ನವನೆ,
ಮದುವೆಗೆ ಮುಂಚೆ ಎಲ್ಲ ಹೆಣ್ಮಕ್ಕಳಿಗೂ ತನ್ನ ಹುಡುಗನ ಬಗ್ಗೆ ರಾಶಿ ರಾಶಿ ಕನಸುಗಳಿರುತ್ತವೆ. ಮರುಳು ಮಾತುಗಳಿಂದ ಕಚಗುಳಿಯಿಡಬೇಕು, ನನ್ನ ಮಾತನ್ನು ಲಕ್ಷಗೊಟ್ಟು ಕೇಳಬೇಕು, ನಾನು ಬಯಸಿದ್ದನ್ನು ಆಕಾಶ, ಭೂಮಿ ಒಂದು ಮಾಡಿಯಾದರೂ ತಂದು ಕೊಡಬೇಕು, ಲೇಟಾದಾಗ ಕ್ಷಮೆ ಕೇಳಬೇಕು, ದಿನದ ಹೆಚ್ಚಿನ ಸಮಯವನ್ನು ನನ್ನೊಂದಿಗೇ ಕಳೆಯಬೇಕು, ಸರ್‌ಪ್ರೈಸ್ ಆಗಿ ಗಿಫ್ಟ್ ಕೊಟ್ಟು ಚಕಿತಗೊಳಿಸಬೇಕು, ನನ್ನ ಫೋನ್ ಕರೆಗಾಗಿ ಕಾಯ್ತಾ ಇರಬೇಕು, ಒಂದೇ ರಿಂಗ್‌ಗೆ ಫೋನ್ ಎತ್ತಬೇಕು, ವಾಟ್ಸಾಪ್‌ನಲ್ಲಿ ಕಚಗುಳಿ ಇಡುವ ಜೋಕುಗಳನ್ನು, ಮೆಸೇಜುಗಳನ್ನು ಕಳಿಸುತ್ತಾ ನಾನು ಕೊಡುವ ಉತ್ತರಕ್ಕಾಗಿ ಹಾತೊರೆಯಬೇಕು, ವಾರಕ್ಕೊಮ್ಮೆಯಾದರೂ ಲಾಂಗ್ ಡ್ರೆ„ವ್ ಹೋಗಬೇಕು, ಇಬ್ಬರೂ ಕೈಕೈ ಹಿಡಿದು ಸಮಯದ ಪರಿವೆ ಇಲ್ಲದೆ ಸುತ್ತಬೇಕು… ಹೀಗೆ ಸಾವಿರಾರು ಹುಚ್ಚು ಆಸೆಗಳಿರುತ್ತವೆ. ನನಗೂ ಅಂಥ ಆಸೆಗಳಿವೆ.
ಆದ್ರೆ, ನೀನೂ ಇದ್ದೀಯ! ಮಾತೆಂದರೆ ಏಕ್ ಮಾರ್ ದೋ ತುಕಡಾ ಥರ. ಸಿಟ್ಟಂತೂ ಮೂಗಿನ ತುದಿಯಲ್ಲಿ ಪರ್ಮನೆಂಟ್ ಆಗಿ ಮನೆ ಮಾಡಿ ಕೂತಿರುತ್ತೆ. ದೂರ್ವಾಸ ಮುನಿಯ ಅಪರಾವತಾರ ನೀನು. ನನ್ನ ಹುಟ್ಟು ಹಬ್ಬವೂ ನೆನಪಿರುವುದಿಲ್ಲ. ನಾನಾಗಿಯೇ ನೆನಪು ಮಾಡಿದರೂ ವಿಶ್ ಮಾಡಿ ಸುಮ್ಮನಾಗ್ತಿàಯ. ಗಿಫ್ಟ್ ಕೊಡಿಸಬೇಕೆಂದು ನಿಂಗೆ ಅರ್ಥವೇ ಆಗುವುದಿಲ್ಲ. ಬಾಯಿಬಿಟ್ಟು ಕೇಳಿದರೆ, ನಿನ್ನ ಪರ್ಸು ತೋರಿಸಿ- “ಇಷ್ಟರೊಳಗೆ ನೀನು ಏನು ಬೇಕಾದರೂ ತಗೋ. ಇದಕ್ಕಿಂತ ಹೆಚ್ಚಿನ ಬೆಲೆಯದ್ದನ್ನು ನಿರೀಕ್ಷಿಸಬೇಡ. ಸಾಲ ಮಾಡಿ ಗಿಫ್ಟ್ ಕೊಡಿಸಲು ನನಗಿಷ್ಟವಿಲ್ಲ’ ಅಂತೀಯಲ್ಲಾ, ಆಗ ಸಿಟ್ಟು ನೆತ್ತಿಗೇರಿದರೂ, ನಿನ್ನ ನೇರ ಮಾತುಗಳಿಗೆ ಸೋತು ಹೋಗುತ್ತೇನೆ.
ಜೊತೆಯಾಗಿ ನಡೆವಾಗ, ಮೆಲ್ಲಗೆ ನಿನ್ನ ಕೈ ಒಳಗೆ ನನ್ನ ಕೈ ಬೆಸೆದರೂ, “ಮದುವೆಯ ತನಕ ಇದೆಲ್ಲ ಬೇಡ’ ಎನ್ನುವಂತೆ ಕಣ್ಣಲ್ಲೇ ಸನ್ನೆ ಮಾಡಿ, ತಲೆಯಾಡಿಸಿ ಮುಂದೆ ಹೋಗುತ್ತೀಯಲ್ಲ, ನಿನ್ನನ್ನು ಅರ್ಥ ಮಾಡಿಕೊಳ್ಳುವುದೇ ಕಷ್ಟ. ಪ್ರತಿದಿನ ಭೇಟಿಯಾದರೂ, ಇಂತಿಷ್ಟೇ ಹೊತ್ತು ಎಂದು ಟೈಮ್ ಟೇಬಲ್ ಹಾಕುವ ನಿನ್ನನ್ನು ನೋಡಿದರೆ, ಇಂಥವನನ್ನು ಪ್ರೀತಿಸಿ ತಪ್ಪು ಮಾಡಿದೆನಾ ಅಂತ ಕೆಲವೊಮ್ಮೆ ಅನ್ನಿಸುತ್ತದೆ.
ಸಮಯ ಇರುವುದೇ ಪಾಸ್ ಮಾಡಲು ಎಂಬ ಮನಸ್ಥಿತಿಯ ನಾನು, ಸಮಯಕ್ಕೆ ಅತಿ ಮಹತ್ವ ಕೊಡುವ ನಿನ್ನನ್ನು ಅದು ಹೇಗೆ ಇಷ್ಟಪಟ್ಟೆನೆಂದು ನನಗೇ ಆರ್ಥವಾಗುತ್ತಿಲ್ಲ. ಭಾವನೆಗಳಿಗೆ ಸೋಲುವ ನಾನು, ವಾಸ್ತವದ ಚೌಕಟ್ಟಿನೊಳಗೆ ಬಂಧಿಯಾಗಿರುವ ನೀನು, ಭಲೇ ಜೋಡಿ ಕಣೋ ನಮ್ಮದು! ನೀನಾಗೇ ಫೋನು ಮಾಡುವುದಿರಲಿ, ನಾನಾಗೇ ಅದೆಷ್ಟು ಸಲ ಕರೆ ಮಾಡಿದರೂ, ಆಫೀಸಿನ ಟೈಮ್‌ನಲ್ಲಿ ಉತ್ತರಿಸುವುದೇ ಇಲ್ಲ. ಹೋಗಲಿ, ಸಂಜೆಯಾದರೂ ಅದಕ್ಕಾಗಿ ಕ್ಷಮೆ ಕೇಳುತ್ತಾನೇನೋ ಅಂತ ನಾನು ಭಾವಿಸಿದ್ದರೆ ನನ್ನಂಥ ಮೂರ್ಖಳು ಮತ್ತೂಬ್ಬಳಿಲ್ಲ. ಯಾಕಂದ್ರೆ, ಅನಗತ್ಯ ಕ್ಷಮೆ ಕೇಳುವ ಜಾಯಮಾನವೇ ನಿನ್ನದಲ್ಲ. ಇದ್ದುದ್ದನ್ನು ಇದ್ದಂತೆಯೇ ಮುಲಾಜಿಲ್ಲದೆ ಹೇಳುವ ನಿನ್ನ ಗುಣವೇ ನಿನ್ನನ್ನು ಪ್ರೀತಿಸುವಂತೆ ಮಾಡಿದ್ದು.
ಅದೇನೇ ಇರಲಿ, “ಈ ಸಿಡುಕನ ಹತ್ತಿರ ಮುಂದೆ ಹೇಗೆ ಸಂಸಾರ ಮಾಡ್ತೀಯೆ?’ ಎನ್ನುವ ಗೆಳತಿಯರ ಹಾಸ್ಯಕ್ಕೆ ನನ್ನದೊಂದೇ ಉತ್ತರ. ಏನು ಗೊತ್ತಾ- “ಸಿಡುಕನಿರಬಹುದು ನನ್ನ ಚೆಲುವ…ಆದರೆ ದುಡುಕನಲ್ಲ ಗೊತ್ತಾ!’
ನೀನು ನೀನಾಗಿಯೇ ಇರು ಹುಡುಗಾ, ನನಗದೇ ಇಷ್ಟ.
-ನಳಿನಿ, ಧಾರವಾಡ