ಚಾಮರಾಜನಗರ: ಜಿಲ್ಲೆಯಲ್ಲಿ ತಂಬಾಕು ನಿಯಂತ್ರಣ ಕಾಯ್ದೆಯ ಬಗ್ಗೆ ಹೆಚ್ಚಿನ ಅರಿವು ಮೂಡಿಸಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್.ಆನಂದ್ ಸಲಹೆ ಮಾಡಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಜಿಲ್ಲಾ ತಂಬಾಕು ನಿಯಂತ್ರಣ ಘಟಕದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸೂಚನಾ ಫಲಕ ಅಳವಡಿಸಿ: ತಂಬಾಕು ಮಾರಾಟಮಾಡುವ ಅಂಗಡಿಗಳಲ್ಲಿ ತಂಬಾಕು ನಿಯಂತ್ರಣ ಕಾಯ್ದೆಯ ಸೂಚನಾ ಫಲಕಗಳನ್ನು ಅಳವಡಿಸುವಂತೆ ಸೂಚನೆ ನೀಡಬೇಕು. ಗ್ರಾಮ ಪಂಚಾಯಿತಿಗಳಲ್ಲಿ ಗ್ರಾಮ ಸಭೆ ನಡೆಸುವಾಗ ಸೆಕ್ಷನ್4 ಮತ್ತು 6(ಬಿ) ಕುರಿತು ವ್ಯಾಪಕ ಪ್ರಚಾರ ಮಾಡಬೇಕು ಎಂದು ತಿಳಿಸಿದರು.
ಅರಿವು ಮೂಡಿಸಿ: ಶಾಲೆಗಳಲ್ಲಿ ಬೆಳಗಿನ ಪ್ರಾರ್ಥನೆ ಕಾರ್ಯಕ್ರಮ ನೆರವೇರಿಸುವ ಮುನ್ನ ಮಕ್ಕಳಿಗೆ ತಂಬಾಕು ನಿಯಂತ್ರಣದ ಮಾಹಿತಿ ಫಲಕಗಳನ್ನು ಪ್ರದರ್ಶನ ಮಾಡುವ ಮೂಲಕ ಅರಿವು ಮೂಡಿಸಬೇಕು. ಶಾಲೆಯ ಸುತ್ತು ಗೋಡೆಗಳಲ್ಲಿ ತಂಬಾಕು ನಿಯಂತ್ರಣದ ಮಾಹಿತಿ ಚಿತ್ರ ಬಿಡಿಸಿ ಜಾಗೃತಿ ಮೂಡುವಂತೆ ಕಾರ್ಯೋನ್ಮಖರಾಗುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ತಂಬಾಕಿನಿಂದ ಕಾಯಿಲೆ: ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ನಾಗರಾಜು ಮಾತನಾಡಿ, ತಂಬಾಕು ಸೇವನೆಯಿಂದಾಗಿ ದೇಶದಲ್ಲಿ ವರ್ಷಕ್ಕೆ 70 ಲಕ್ಷ ಜನರು ಸಾವಿಗೀಡಾಗುತ್ತಿದ್ದಾರೆ. ಮದ್ಯಪಾನ, ಗುಟ್ಕಾ, ತಂಬಾಕು ಸೇವನೆಯಿಂದ ಹೃದಯ ಮತ್ತು ಶ್ವಾಸಕೋಶ ಸಂಬಂಧಿ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ವರದಿ ಸಲ್ಲಿಸಬೇಕು: ತಂಬಾಕು ನಿಯಂತ್ರಣ ಕಾಯ್ದೆಯ ಸಮರ್ಪಕ ಅನುಷ್ಠಾನಕ್ಕೆ ವಿವಿಧ ಇಲಾಖೆಗಳ ಸಹಕಾರ ಅತ್ಯಗತ್ಯವಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡಿದರೆ ಅಧಿಕಾರಿಗಳು ದಂಡ ವಿಧಿಸಬೇಕು. ಪ್ರತಿ ತಿಂಗಳು ತಂಬಾಕು ನಿಯಂತ್ರಣ ಕಾಯ್ದೆ ಕಾರ್ಯಕ್ರಮದ ಮಾಸಿಕ ಅನುಪಾಲನಾ ವರದಿ ಸಲ್ಲಿಸಬೇಕು ಎಂದು ನಾಗರಾಜು ತಿಳಿಸಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಎಂ.ಸಿ. ರವಿ, ಜಿಲ್ಲಾ ತಂಬಾಕು ನಿಯಂತ್ರಣ ಸಲಹೆಗಾರ ಪ್ರಶಾಂತ್, ಸಮಾಜ ಕಾರ್ಯಕರ್ತ ವೀರಣ್ಣ ಹಾಗೂ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.