Advertisement

ಲೇಔಟ್‌-ನಿವೇಶನ ಬಗ್ಗೆ ಎಚ್ಚರ ವಹಿಸಿ: ಅಮರೇಗೌಡ

05:51 PM Jan 29, 2022 | Team Udayavani |

ಸಿಂಧನೂರು: ನಗರ ವ್ಯಾಪ್ತಿಯ ಕೆಲವು ಲೇಔಟ್‌ಗಳಲ್ಲಿ ಶೇ.40ರಷ್ಟು ನಿವೇಶನ ಬಿಡುಗಡೆಯಾಗಿಲ್ಲ. ಅಂತಹ ಕಡೆಗಳಲ್ಲಿ ಜಾಗ ಖರೀದಿಸುವ ಮುನ್ನ ಸಾರ್ವಜನಿಕರು ಎಚ್ಚರವಹಿಸಬೇಕು ಎಂದು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅಮರೇಗೌಡ ವಿರೂಪಾಪುರ ಹೇಳಿದರು.

Advertisement

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಫೆಬ್ರವರಿ 2, 2005ರಿಂದ ಸೆಪ್ಟೆಂಬರ್‌ 10, 2015ರ ತನಕ 42 ಲೇಔಟ್‌ಗಳಲ್ಲಿ ಶೇ.40ರಷ್ಟು ನಿವೇಶನ ಬಿಡುಗಡೆಯಾಗಿಲ್ಲ. ಇಂತಹ ಲೇಔಟ್‌ಗಳಲ್ಲಿ ಯಾರಾದರೂ ಜಾಗ ಖರೀದಿಸುವ ಮುನ್ನ ಗಮನಿಸಬೇಕು. ಹೀಗಾಗಿ, ಸಾರ್ವಜನಿಕರ ಹಿತದೃಷ್ಟಿಯಿಂದ ಮಾಹಿತಿ ಬಹಿರಂಗಪಡಿಸಲಾಗುತ್ತಿದೆ ಎಂದರು.

ಹರಾಜಿಗೆ ಆದೇಶವಾಗಬಹುದು

ಶೇ.60/40ರ ಅನುಪಾತದಲ್ಲಿ ಈ ಮೊದಲು ಪರಿವರ್ತನೆಯಾದ ಲೇಔಟ್‌ಗಳಲ್ಲಿ ನಿವೇಶನ ಬಿಡುಗಡೆಗೆ ಅವಕಾಶವಿತ್ತು. ನಂತರ ಬದಲಾಗಿತ್ತು. 2005ರ ಹಿಂದೆ ಸೌಲಭ್ಯ ಅಭಿವೃದ್ಧಿ ಪಡಿಸಿದವರಿಗೆ ಶೇ.20ರಷ್ಟು ದಂಡ ಹಾಕಲು ಆದೇಶವಿತ್ತು. ಪ್ರಕರಣ ಕೋರ್ಟ್‌ ಮೆಟ್ಟಿಲೇರಿತ್ತು. ಆಗ ಒಂದು ವರ್ಷ ಅವಕಾಶ ನೀಡಲಾಗಿತ್ತು. 2019ರ ನಂತರದಲ್ಲಿ ಶೇ.40ರಷ್ಟು ನಿವೇಶನ ಬಿಡುಗಡೆ ಮಾಡಿಕೊಳ್ಳಲು ಎಲ್ಲ ಸೌಲಭ್ಯ ಹೊಂದಿರಬೇಕು ಎಂದು ಸೂಚಿಸಲಾಗಿತ್ತು. ಯಾವುದೇ ದಂಡ ಇರಲಿಲ್ಲ. ಆದರೂ, ಇದನ್ನು ಸದ್ಬಳಕೆ ಮಾಡಿಕೊಂಡಿಲ್ಲ. ಬಳಿಕ ಶೇ.3ರಷ್ಟು, ಈಗ ಶೇ.9ರಷ್ಟು ದಂಡ ಹಾಕಲು ಅವಕಾಶವಿದೆ. ನಿಯಮ ಉಲ್ಲಂಘಿಸಿದರೆ, ಅಂತಹ ನಿವೇಶನಗಳನ್ನು ಹರಾಜು ಹಾಕಿ ಸೌಲಭ್ಯ ಕಲ್ಪಿಸಲು ಆದೇಶವಾಗಬಹುದು ಎಂದರು.

ಎಲ್ಲ ವಿವರ ಜನರ ಮುಂದೆ

Advertisement

ಸಾರ್ವಜನಿಕರಿಗೆ ಗೊತ್ತಾಗಲಿ ಎಂಬ ಕಾರಣಕ್ಕೆ ಲೇಔಟ್‌ ಮಾಲೀಕರ ಹೆಸರು, ಸರ್ವೇ ನಂಬರ್‌, ನಿವೇಶನಗಳ ಸಂಖ್ಯೆ ನೀಡಲಾಗಿದೆ. ಕೆಲವರು ನಗರಸಭೆಯಿಂದ ಫಾರಂ.3 ತಂದಿದ್ದರು. ಇಲ್ಲಿ ಪರಿಶೀಲನೆಗೆ ಕೊಟ್ಟಾಗ ಅವು ಬಿಡುಗಡೆಯಾಗದ ನಿವೇಶನವಾದ ಹಿನ್ನೆಲೆಯಲ್ಲಿ ನಿರಾಕ್ಷೇಪಣಾ ಪತ್ರ ಕೊಡಲಿಲ್ಲ. ಇಂತಹ ಸಮಸ್ಯೆಗಳನ್ನು ಉದ್ಭವ ಆಗಬಾರದು. ರಸ್ತೆ, ಕುಡಿವ ನೀರು, ವಿದ್ಯುತ್‌ ಸಂಪರ್ಕ ಸೇರಿ ಇತರ ಸೌಲಭ್ಯ ಕಲ್ಪಿಸಿ, ಶೇ.40ರಷ್ಟು ನಿವೇಶನ ಬಿಡುಗಡೆ ಮಾಡಿಸಿಕೊಳ್ಳಬೇಕು ಎಂದರು.

ಜೊತೆಗೆ ಇದೇ ವೇಳೆ ನಗರ ಯೋಜನಾ ಪ್ರಾಧಿಕಾರದಿಂದ ಸಿದ್ಧಪಡಿಸಿದ ಪ್ರಕಟಣೆ ಬಿಡುಗಡೆ ಮಾಡಿದರು. ಪ್ರಾಧಿಕಾರದ ನಾಮನಿರ್ದೇಶಿತ ಸದಸ್ಯರಾದ ಜಡಿಯಪ್ಪ ಹೂಗಾರ್‌, ನಂದಿನಿ ಮೇರನಾಳ, ರೇಣುಕಪ್ಪ ಬಸಾಪುರ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next