ಸೇಡಂ: ಕನ್ನಡಕ್ಕೆ ಮೊದಲ ಕೃತಿ ನೀಡಿದ್ದು ನಮ್ಮ ರಾಷ್ಟ್ರಕೂಟರ ನೆಲ ಎಂಬ ಹಿರಿಮೆ ಸೇರಿದಂತೆ ಹತ್ತು ಹಲವು ಐತಿಹಾಸಿಕ ಸಂಗತಿಗಳಿವೆ ನಮ್ಮ ನೆಲದ ಇತಿಹಾಸವನ್ನು ರಾಜ್ಯದ ಎಲ್ಲರೂ ಅರಿತುಕೊಳ್ಳುವಂತಾಗಬೇಕು ಎಂದು ಮಕ್ಕಳ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷೆ ಆರತಿ ಕಡಗಂಚಿ ಅಭಿಪ್ರಾಯಪಟ್ಟರು.
ಪಟ್ಟಣದ ಬ್ರಹ್ಮಾಕುಮಾರಿ ಆಶ್ರಮದಲ್ಲಿ ಕವಿರಾಜ ಪ್ರಕಾಶನ, ಶಕ್ತಿ ಗೆಳೆಯರ ಬಳಗ ಹಾಗೂ ಇಷ್ಟಸಿದ್ಧಿ ವಿನಾಯಕ ಭಕ್ತ ಮಂಡಳಿ ಆಯೋಜಿಸಿದ್ದ ಸಾಹಿತಿ ಡಾ|ಎಂ.ಜಿ. ದೇಶಪಾಂಡೆ ಅವರ “ಕಾಗಿಣಾ ತೀರದ ಧ್ವನಿಗಳ ತರಂಗಗಳು’ ಅವಲೋಕನ ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಉತ್ತರ ಕರ್ನಾಟಕದ ಭಾಗದ ಬಹುತೇಖ ಪ್ರದೇಶದಲ್ಲಿ ಕನ್ನಡ ಸಾಹಿತ್ಯ ಶ್ರೀಮಂತಿಕೆಯಿಂದ ಕೂಡಿದೆ. ಆದರೆ ಅದನ್ನು ಆಸ್ತಿಯಂತೆ ಕಾಪಾಡಿಕೊಂಡು ಮುಂದಿನ ಪೀಳಿಗೆಗೆ ಪರಿಚಯಿಸುವ ಜವಾಬ್ದಾರಿ ಈ ನೆಲದ ಪ್ರತಿಯೊಬ್ಬರ ಮೇಲಿದೆ. ಸಾಹಿತ್ಯ ಎಂದರೆ ದಕ್ಷಿಣ ಭಾಗದಲ್ಲಿ ಮಾತ್ರ ಕಾಣಲು ಸಾಧ್ಯ ಎನ್ನುವಷ್ಟರ ಮಟ್ಟಿಗೆ ಸಮಾಜ ನಿಂತಿದೆ. ಆದರೆ ಕಲ್ಯಾಣ ಕರ್ನಾಟಕರ ಐತಿಹಾಸಿಕ ಸಾಹಿತ್ಯ ರಾಜ್ಯದಲ್ಲಿ ಗಮನ ಸೆಳೆಯುವಂತಹ ಕೆಲಸ ನಾವೇಲ್ಲರು ಮಾಡಬೇಕಾಗಿದೆ. ಅದಕ್ಕಾಗಿ ಕಲಬುರಗಿ ಜಿಲ್ಲೆಯಲ್ಲಿಯೇ ಸದಾ ಚಟುವಟಿಕೆಯಿಂದ ಕೂಡಿರುವ ಸೇಡಂ ನೆಲದ ಸಾಹಿತಿಗಳು ಒಟ್ಟಾಗಿ ಇಂತಹ ಕೆಲಸಕ್ಕೆ ಮುಂದಾಗಬೇಕು ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಹಿರಿಯ ಸಾಹಿತಿ ಗುರುಶಾಂತಯ್ಯ ಭಂಟನೂರ, ರಾಜ್ಯ ಮಟ್ಟದಲ್ಲಿ ಹೆಸರು ಮಾಡಿದ ಅನೇಕ ಸಾಹಿತಿಗಳು ರಾಷ್ಟ್ರಕೂಟರ ನೆಲದಲ್ಲಿ ಇದ್ದಾರೆ. ನಮ್ಮ ಭಾಗ ಹಿಂದುಳಿದಿದೆ ಎಂದು ಹೇಳಿ ಹೇಳಿ ನಮ್ಮನ್ನು ಇನ್ನೂ ಹಿಂದಿಡುವ ಕೆಲಸ ನಡೆಯುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ರಾಜಯೋಗಿನಿ ಬ್ರಹ್ಮಾಕುಮಾರಿ ಕಲಾವತಿ, ಉದ್ಯಮಿ ಓಂಪ್ರಕಾಶ ಲಡ್ಡಾ, ಶಿಕ್ಷಕ ರಾಜು ಟಿ, ಲೇಖಕ ಡಾ|ಎಂ.ಜಿ.ದೇಶಪಾಂಡೆ, ಇಷ್ಟಸಿದ್ಧಿ ವಿನಾಯಕ ಭಕ್ತ ಮಂಡಳಿಯ ಶಿವಶರಣಪ್ಪ ಚಂದನಕೇರಾ ಇದ್ದರು. ಶಾರದಾ ಸಂಗೀತ ಪಾಠಶಾಲೆಯ ಅಂಜನಾದೇವಿ ಭೋವಿ ಸಂಗಡಿಗರು ಪಾರ್ಥಿಸಿದರು. ಬಸವರಾಜ ರೇವಗೊಂಡ ಸ್ವಾಗತಿಸಿದರು. ಸಂತೋಷಕುಮಾರ ತೊಟ್ನಳ್ಳಿ ನಿರೂಪಿಸಿದರು. ವಿಜಯಭಾಸ್ಕರ ರೆಡ್ಡಿ ವಂದಿಸಿದರು.