Advertisement

ಸಾಮಾಜಿಕ ಜವಾಬ್ದಾರಿ ಅರಿತು ಕಾರ್ಯನಿರ್ವಹಿಸಿ

03:46 PM Apr 08, 2022 | Team Udayavani |

ಕೊಪ್ಪಳ: ಸರ್ಕಾರದ ಎಸ್‌ಸಿಪಿ, ಟಿಎಸ್‌ಪಿ ಯೋಜನೆಗಳನ್ನು ನಿರ್ದಿಷ್ಟ ಫಲಾನುಭವಿಗಳಿಗೆ ತಲುಪುವಂತೆ ಸಾಮಾಜಿಕ ಜವಾಬ್ದಾರಿ ಅರಿತು ಕಾರ್ಯ ನಿರ್ವಹಿಸಬೇಕೆಂದು ಜಿಲ್ಲಾಧಿಕಾರಿ ವಿಕಾಸ್‌ ಕಿಶೋರ್‌ ಸುರಳ್ಕರ್‌ ಹೇಳಿದರು.

Advertisement

ಜಿಲ್ಲಾಡಳಿತ, ಜಿಪಂ, ಸಮಾಜ ಕಲ್ಯಾಣ ಇಲಾಖೆ, ಎಸ್‌ಸಿಪಿ, ಟಿಎಸ್‌ಪಿ ಕೋಶದ ಸಹಯೊಗದಲ್ಲಿ ನಗರದ ಜಿಲ್ಲಾಡಳಿತ ಭವನದ ಅಡಿಟೋರಿಯಂ ಹಾಲ್‌ನಲ್ಲಿ ಎಸ್‌ಸಿಪಿ, ಟಿಎಸ್‌ಪಿ ಅಧಿನಿಯಮ 2013 ಮತ್ತು ನಿಯಮಗಳು 2017ರ ಅನುಷ್ಠಾನದ ಕುರಿತು ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳಿಗೆ ಗುರುವಾರ ನಡೆದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಜಿಲ್ಲೆಯ ಕೆಲ ಗ್ರಾಮಗಳಲ್ಲಿ ದಲಿತರಿಗೆ ದೇವಸ್ಥಾನ ಪ್ರವೇಶ ನಿರಾಕರಣೆ ಮಾಡುವುದು ವಿಷಯ ಶೋಚನೀಯ ವಿಚಾರವಾಗಿದೆ. ಇನ್ನೂ ಕೆಲವು ಹೋಟೆಲ್‌, ಕ್ಷೌರದಂಗಡಿಗಳಲ್ಲಿ ದಲಿತರಿಗೆ ಪ್ರವೇಶ ಇಲ್ಲದಿರುವುದು ಬೆಳಕಿಗೆ ಬಂದಿದೆ. ಆದ್ದರಿಂದ ಅಧಿಕಾರಿಗಳು ದಲಿತರನ್ನು ಸಾಮಾಜಿಕ ಹಾಗೂ ಆರ್ಥಿಕವಾಗಿ ಸಬಲರಾಗಿಸಲು ಎಸ್‌ಸಿಪಿ, ಟಿಎಸ್‌ಪಿ ಯೋಜನೆಗಳಲ್ಲಿ ಇರುವ ಎಲ್ಲಾ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಲು ಕಾರ್ಯನಿರ್ವಹಿಸಬೇಕು. ಸರ್ಕಾರ ನೀಡುವ ನಿರ್ದಿಷ್ಟ ಗುರಿ ಮುಟ್ಟುವುದು ಮಾತ್ರ ಅಧಿಕಾರಿಗಳ ಯೋಚನೆಯಾಗಬಾರದು. ಅದರ ಜೊತೆಗೆ ಅಧಿಕಾರಿಗಳು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು. ಅಂದಾಗ ಮಾತ್ರ ಮಹಾತ್ಮ ಗಾಂಧೀಜಿಯವರ ಗ್ರಾಮೀಣಭಿವೃದ್ಧಿ ಕನಸು ನನಸಾಗುತ್ತದೆ ಎಂದರು.

ಬೆಂಗಳೂರು ಎಸ್‌ಸಿಪಿ, ಟಿಎಸ್‌ಪಿ ಕೋಶದ ಅಧಿಕಾರಿ ಉರ್ಮಿಳಾ ಮಾತನಾಡಿ, ರಾಜ್ಯದಲ್ಲಿ ಎಸ್ಸಿಪಿ-ಟಿಎಸ್ಪಿ ಕಾಯ್ದೆಗೆ ಎಸ್‌ಸಿ ಮತ್ತು ಎಸ್‌ಟಿ ಜನಸಂಖ್ಯೆಗೆ ಅನುಗುಣವಾಗಿ ಅನುದಾನ ಹಂಚಿಕೆ ಮಾಡಿದೆ. ಇಡೀ ದೇಶದಲ್ಲೇ ಕರ್ನಾಟಕ ಎಸ್ಸಿಪಿ-ಟಿಎಸ್ಪಿ ಅನುದಾನ ಬಳಕೆಯಲ್ಲಿ 2ನೇ ಸ್ಥಾನದಲ್ಲಿದೆ. ಈ ಯೋಜನೆಯ ಅನುದಾನವನ್ನು ಉದ್ದೇಶಪೂರ್ವಕವಾಗಿ ಬಳಸದಿದ್ದರೆ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಎಸ್ಸಿಪಿ-ಟಿಎಸ್ಪಿ ಅನುದಾನವನ್ನು ವೈಯಕ್ತಿಕ ಅಭಿವೃದ್ಧಿಗೆ, ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ, ಶಿಕ್ಷಣ, ಆರೋಗ್ಯ, ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿಗೆ, ಕಾರ್ಮಿಕ, ದೈಹಿಕ ವಿಕಲಚೇತನರಿಗೆ ಹಾಗೂ ಎಸ್ಸಿ ಮತ್ತು ಎಸ್ಟಿ ಸಂಬಂಧಿಸಿದ ಕಾಮಗಾರಿಗಳಿಗೆ ಹಂಚಿಕೆ ಮಾಡಲಾಗುತ್ತದೆ ಎಂದರು.

ಕಾಯ್ದೆಯ ಅನುಷ್ಠಾನದ ಮೇಲ್ವಿಚಾರಣಾ ವ್ಯವಸ್ಥೆಯನ್ನು ರಾಜ್ಯ ಅಭಿವೃದ್ಧಿ ಪರಿಷತ್‌, ನೋಡಲ್‌ ಏಜೆನ್ಸಿ, ಜಿಲ್ಲಾ ಮೇಲ್ವಿಚಾರಣೆ ಸಮಿತಿ ಮತ್ತು ತಾಲೂಕು ಮೇಲ್ವಿಚಾರಣೆ ಸಮಿತಿಗಳಾಗಿ ವಿಂಗಡಿಸಲಾಗಿದೆ. ಯೋಜನೆಯ ಕೆಲಸ-ಕಾರ್ಯಗಳ ವಿವರವನ್ನು ವೆಬ್‌ ಸೈಟ್‌ನಲ್ಲಿ ಸಾರ್ವಜನಿಕರು ನೋಡುವ ಹಾಗೆ ಪಾರದರ್ಶಕತೆ ಕಾಯ್ದುಕೊಳ್ಳಬೇಕು ಎಂದು ವಿವರಿಸಿದರು.

Advertisement

ಬೆಂಗಳೂರು ನೋಡಲ್‌ ಅಧಿಕಾರಿ ವೆಂಕಟಯ್ಯ ಮಾತನಾಡಿ, ಎಸ್ಸಿಪಿ-ಟಿಎಸ್ಪಿ ಯೋಜನೆಗೆ ಸಂಬಂಧಪಟ್ಟ ಅನುದಾನವನ್ನು ಜಿಲ್ಲಾಮಟ್ಟದ ಇಲಾಖೆಗಳು ಹೇಗೆ ಬಳಕೆ ಮಾಡುತ್ತಿವೆ ಎಂದು ಅಧಿಕಾರಿಗಳೊಂದಿಗೆ ಕೃಷಿ, ಹೈನುಗಾರಿಕೆ, ವಿವಿಧ ವಿಷಯಗಳ ಬಗ್ಗೆ ಸಂವಾದ ಮಾಡಿ, ಇಲಾಖೆಗಳ ಯೋಜನೆ ಅನುಷ್ಠಾನದಲ್ಲಿ ಆಗುತ್ತಿರುವ ಸಮಸ್ಯೆಗಳ ಮಾಹಿತಿ ಪಡೆದರು.

ಬೆಂಗಳೂರು ಡಾ| ಬಿ.ಆರ್‌. ಅಂಬೇಡ್ಕರ್‌ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಸುರೇಶ ಕುಮಾರ, ಜಿಪಂ ಸಿಇಒ ಬಿ. ಫೌಜಿಯಾ ತರನ್ನುಮ್‌, ಎಡಿಸಿ ಎಂ.ಪಿ ಮಾರುತಿ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ನವೀನ್‌ ಶಿಂತ್ರೆ ಸೇರಿದಂತೆ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next