ಅಹಂ ಎಂಬುದು ನಾವು ಏನನ್ನೋ ಸಾಧಿಸಿದ್ದಕ್ಕಾಗಿ, ಸಿರಿವಂತರಾದದ್ದಕ್ಕಾಗಿ, ಸುಂದರ ವಾಗಿರುವುದರಿಂದಾಗಿ ಅಥವಾ ಇನ್ನಾ ವುದೋ ಕಾರಣದಿಂದಾಗಿ ನಮ್ಮಲ್ಲಿ ಉಂಟಾ ದದ್ದಲ್ಲ. ತಾಯಿಯ ಗರ್ಭದೊಳಗೆ ಒದೆ ಯಲು ಆರಂಭಿಸಿದಾಗಲೇ ಅಹಂ ಕೂಡ ಹುಟ್ಟಿಕೊಂಡಿದೆ. “ಈ ದೇಹ ನಾನು’ ಎಂಬ ಗುರುತಿಸಿಕೊಳ್ಳುವಿಕೆಯೇ ಅಹಂ. ಅದೊಂದು ಸ್ವರಕ್ಷಣೆಯ ವ್ಯವಸ್ಥೆ. ನಮ್ಮ ಈ ಪುಟ್ಟ ದೇಹದ ಜತೆಗೆ ನಮ್ಮನ್ನು ನಾವು ಗುರುತಿಸಿಕೊಂಡಿದ್ದೇವೆ. ಆದಿ- ಅಂತ್ಯಗಳು ಗೊತ್ತಿಲ್ಲದ ಈ ವಿಶಾಲ ಸೃಷ್ಟಿಯಲ್ಲಿ ನಮ್ಮ ಈ ಪುಟ್ಟ ದೇಹ ಅಸ್ತಿತ್ವ ಸ್ಥಾಪಿಸಿಕೊಳ್ಳಬೇಕು. ಆ ಅಸ್ತಿತ್ವಕ್ಕಾಗಿ ನಾವು ದೊಡ್ಡ ಮನುಷ್ಯರ ಹಾಗೆ ಬಿಂಬಿಸಿಕೊಳ್ಳುತ್ತಿದ್ದೇವೆ. ಅದಕ್ಕಾಗಿ ಅಹಂ. ಅಸ್ತಿತ್ವಕ್ಕಾಗಿ ನಾವು ಸೃಷ್ಟಿಸಿದ ಮಿಥ್ಯೆ ಅದು.
ಅಹಂ ನೆರಳು ಇದ್ದ ಹಾಗೆ. ನಮಗೆ ಭೌತಿಕ ದೇಹವಿದ್ದಷ್ಟು ಕಾಲ ನೆರಳು ಇರುತ್ತದೆ. ನೆರಳಿಗೆ ಕೆಟ್ಟದ್ದು ಅಥವಾ ಒಳ್ಳೆಯದರ ಲೇಪ ವಿಲ್ಲ. ಸೂರ್ಯ ನೆತ್ತಿಯ ಮೇಲಿದ್ದಾಗ ನೆರಳು ಸಣ್ಣದಾಗಿರುತ್ತದೆ, ಹೊತ್ತು ಕಂತುವ ಹೊತ್ತಿಗೆ ಉದ್ದನೆಯ ನೆರಳು ಬೀಳು ತ್ತದೆ. ಹೊರಗಿನ ಸಂದರ್ಭಕ್ಕೆ ಸರಿಯಾಗಿ ನೆರಳು ಉದ್ದ ಅಥವಾ ಗಿಡ್ಡ. ನಮ್ಮ ಭೌತಿಕ ಅಸ್ತಿತ್ವದ ಅವಿಭಾಜ್ಯ ಅಂಗ ವಾಗಿರುವ ಅಹಂ ಕೂಡ ಹೀಗೆಯೇ ಇರಬೇಕು.
ವೈರಾಗ್ಯ ಎಂಬ ಪದವನ್ನು ನಾವು ಕೇಳಿದ್ದೇವೆ. “ರಾಗ’ ಎಂದರೆ ಬಣ್ಣ. ಬಣ್ಣಗಳನ್ನು ಮೀರಿದ್ದು ವೈರಾಗ್ಯ, ಅಂದರೆ ಪಾರದರ್ಶಕ. ವೈರಾಗ್ಯ ವನ್ನು ಸಾಧಿಸುವುದು ಎಂದರೆ ಪಾರದರ್ಶಕ ಗುಣವನ್ನು ಹೊಂದುವುದು. ಪೂರ್ವಾ ಗ್ರಹಗಳಿಂದ ಮುಕ್ತರಾಗುವುದು. ನಾವು ಎಲ್ಲಿರುತ್ತೇವೆಯೋ ಅಲ್ಲಿಯ ಭಾಗವಾಗಿರು ತ್ತೇವೆ, ಆದರೆ ಅಲ್ಲಿಗೆ ಅಂಟಿಕೊಳ್ಳುವುದಿಲ್ಲ. ಕಮಲ ಪತ್ರದ ಹಾಗೆ. ಅದು ನೀರಿನಲ್ಲಿಯೇ ಇರುತ್ತದೆ, ಆದರೆ ನೀರಿನಿಂದ ತೋಯಿಸಿ ಕೊಳ್ಳುವುದಿಲ್ಲ. ಇದು ಸಾಧ್ಯವಾದಾಗಲೇ ಬದುಕಿನ ಆಯಾಮಗಳನ್ನು ಶೋಧಿಸಲು ಸಾಧ್ಯವಾಗುತ್ತದೆ.
ಬದುಕಿನ ಬೇರೆಬೇರೆ ಸನ್ನಿವೇಶಗಳನ್ನು ನಿಭಾಯಿಸುವುದಕ್ಕೆ ನಾವು ನೀರಿನಂತಹ ಗುಣವನ್ನು ಹೊಂದಿರಬೇಕಾಗುತ್ತದೆ. ನೀರು ತಾನಿರುವ ಪಾತ್ರೆಯ ಆಕಾರವನ್ನು ತಾಳ ಬಲ್ಲುದು. ನಾವೂ ದ್ರವದಂತಾದರೆ ಯಾವುದೇ ಪಾತ್ರವನ್ನು ನೋವು-ನಲಿವುಗಳ ಹಂಗಿಲ್ಲದೆ ನಿಭಾಯಿಸಬಹುದು.
ಆದರೆ ಈಗಿರುವ ಸಮಸ್ಯೆ- ನೆರಳೇ ನಾವು ಎಂದು ನಂಬಿರುವುದು. ಹಾಗೆ ನಂಬಿಬಿಟ್ಟಾಗ ತೆವಳಲು ಆರಂಭಿಸುತ್ತೇವೆ. ಮನೆಯೊಳಗೆ ತೊಂದರೆಯಿಲ್ಲ. ಬದುಕಿನ ಕಲ್ಲುಮುಳ್ಳಿನ ಹಾದಿಯಲ್ಲಿ ತೆವಳುವಾಗ ನೋವಾಗುತ್ತದೆ. ನಮ್ಮ ಬದುಕು ಈಗ ಹೀಗೆ ನಡೆಯುತ್ತಿದೆ.
ಸದ್ಯ ನಮ್ಮ ಬದುಕಿನ ಇಡೀ ಅನುಭವ ನಮ್ಮ ಭೌತಿಕ ದೇಹಕ್ಕೆ ಸೀಮಿತವಾಗಿದೆ. ಆದರೆ ಈ ಭೌತಿಕ ದೇಹಕ್ಕೆ ಸ್ವಂತದ್ದಾದ ಯಾವುದೇ ಉದ್ದೇಶ ಇಲ್ಲ. ಅದು ಹಣ್ಣಿನ ಸಿಪ್ಪೆಯ ಹಾಗೆ ಅಷ್ಟೇ. ಒಳಗೇನೋ ಇರುವುದರಿಂದಲೇ ಅದಕ್ಕೆ ಪ್ರಾಮುಖ್ಯ ಒದಗಿದೆ. ಒಳಗಿರುವುದು ಇಲ್ಲವಾದ ಮೇಲೆ ಈ ದೇಹ ಯಾರಿಗೂ ಬೇಡ. ಆದಷ್ಟು ಬೇಗ ಅಗ್ನಿಗರ್ಪಿಸುತ್ತಾರೆ ಅಥವಾ ಹೂತುಬಿಡುತ್ತಾರೆ. ಈ ದೇಹದ ಒಳಗಿರುವುದು ಇಂದು ಇದೆ, ಹಾಗಾಗಿ ಅದರ ಬಗ್ಗೆ ಹೆಚ್ಚು ಕಾಳಜಿ ವಹಿಸೋಣ.
ಭೌತಿಕ ದೇಹದ ಪರಿಮಿತಿಗಳನ್ನು ಮೀರದೆ ಇದ್ದರೆ, ಭೌತಿಕ ದೇಹದ ಸೀಮಿತ ಅಸ್ತಿತ್ವದಿಂದ ಪಾರಾಗದೆ ಇದ್ದರೆ ಬದುಕು ಒಂದು ಹೋರಾಟವಾಗಿಬಿಡುತ್ತದೆ. ಸಮಯ ಸಂದರ್ಭಗಳು ಚೆನ್ನಾಗಿದ್ದಾಗ ಎಲ್ಲವೂ ಸರಿಯಿರುತ್ತದೆ. ಆದರೆ ಯಾವುದೇ ಕ್ಷಣದಲ್ಲಿ ಅದು ಬದಲಾಗಬಹುದು. ಸುತ್ತಲಿನ ಎಲ್ಲವೂ ನರಕಸದೃಶವಾಗಿದ್ದಾಗಲೂ ಒಳಗೆ ಸಂತೋಷ, ಸಂತೃಪ್ತಿ, ಸೌಖ್ಯ, ನೆಮ್ಮದಿಗಳಿಂದ ಇರುವುದು ಸಾಧ್ಯವಾದರೆ ಆಗ ಬದುಕು ಎಂದರೇನು ಎಂಬುದು ನಮಗೆ ಗೊತ್ತಾಗಿದೆ ಎಂದರ್ಥ. ಇಲ್ಲವಾದರೆ ನಾವು ಭೌತಿಕ ದೇಹದ ಜೀತದಾಳುಗಳು ಮಾತ್ರ.