ಜೀವನದಲ್ಲಿ ಉನ್ನತ ಸ್ಥಾನಕ್ಕೇರಲು ನಾವು ಅನೇಕರ ಕಾಲು ಹಿಡಿಯುತ್ತೇವೆ. ಆದರೆ ನಾವು ಒಂದು ಸ್ಥಾನಕ್ಕೆ ಏರಿದೊಡನೆ ಎಲ್ಲವನ್ನೂ ಮರೆತು ಅಹಂಕಾರದಿಂದ ವರ್ತಿಸುತ್ತೇವೆ. ನಮ್ಮ ಕಾರ್ಯ ಮುಗಿಯುವರೆಗೆ ಕಾದು ಅನಂತರ ಆ ಸಂದರ್ಭದಲ್ಲಿ ನಮಗೆ ಹೆಗಲಾದವರ ಬಗ್ಗೆ ನಿರ್ಲಕ್ಷ್ಯ ಭಾವನೆ ತಳೆಯುವುದನ್ನೂ ಅಲ್ಲಗಳೆಯುವಂತಿಲ್ಲ.
ಸಾಧನೆಯ ಶಿಖರದ ತುತ್ತ ತುದಿಯಲ್ಲಿರುವಾಗ ನಮ್ಮ ದಾರಿಯಲ್ಲಿನ ಕಲ್ಲು ಮುಳ್ಳುಗಳನ್ನು ಸರಿಸಿದವರ ಬಗ್ಗೆ ಈ ಉದಾಸೀನ ಭಾವ ಸಲ್ಲದು. ಅವರಿಂದಾಗಿಯೇ ನಾವಿಂದು ಈ ಸ್ಥಾನಕ್ಕೇರಿದ್ದೇವೆ, ಅವರಿಲ್ಲದಿದ್ದರೆ ನಮ್ಮ ಹಾದಿ ಇನ್ನಷ್ಟು ಕಠಿನವಾಗುತ್ತಿತ್ತು ಎಂಬುದರ ಒಂದು ಚಿಕ್ಕ ಅರಿವು ನಮ್ಮಲ್ಲಿದ್ದರೆ ಮಾತ್ರವೇ ಈ ಜಗತ್ತಿನಲ್ಲಿ ನಾವು ಅರ್ಥಪೂರ್ಣ ಜೀವನ ನಡೆಸುತ್ತಿದ್ದೇವೆ ಎಂದು ತಿಳಿದುಕೊಳ್ಳಬಹುದು.
ವ್ಯಕ್ತಿಯೊಬ್ಬ ಉಚ್ಚ ಸ್ಥಾನಕ್ಕೆ ಏರಬೇಕೆಂದರೆ ಅದೆಷ್ಟೋ ವ್ಯಕ್ತಿಗಳು ತ್ಯಾಗ ಮಾಡಿರುತ್ತಾರೆ. ತಮ್ಮ ಆಸೆ ಆಕಾಂಕ್ಷೆಗಳನ್ನೆಲ್ಲಾ ಬದಿಗೊತ್ತಿ ನಾವು ಜೀವನದಲ್ಲಿ ಏನಾದರೂ ಸಾಧನೆ ಮಾಡುವಂತಾಗಲಿ ಎನ್ನುವ ಹೆಬ್ಬಯಕೆಯಿಂದ ಅದಕ್ಕಾಗಿ ಜೀವ ತೇಯುವವರೂ ಇದ್ದಾರೆ. ಹೆಚ್ಚಿನವರು ಇದನ್ನು ಮರೆತು ಬದುಕುತ್ತಾರೆ. ನಾವು ಸುಸ್ಥಿತಿಯಲ್ಲಿರಲು ಸಹಕರಿಸಿದ ಈ ಸಮಾಜದ ಉದ್ಧಾರಕ್ಕೆ ಕೊಂಚ ಪಾಲು ನಮ್ಮದೂ ಇರಲಿ ಎನ್ನುವ ಭಾವನೆಯನ್ನು ಹೊಂದುವಲ್ಲಿ ಸೋಲುತ್ತಾರೆ. ಕೊಂಚ ಸ್ವಾರ್ಥ ಬಿಟ್ಟು ಯೊಚಿಸಿದಲ್ಲಿ ಮಾತ್ರವೇ ಈ ಸುಂದರ ಜಗತ್ತಿನ ಸೌಂದರ್ಯ ಸವಿಯುವುದು ಸಾಧ್ಯ. ಆದರೆ ಹೆಚ್ಚಿನವರು ಇದರಲ್ಲಿ ಸೋಲುತ್ತಿದ್ದಾರೆ. ಇಲ್ಲಿ ನಾವು ಇಂದು ವಿಜೃಂಭಿಸುತ್ತಿದ್ದೇವೆ ಎಂದರೆ ಅದಕ್ಕೆ ಕಾರಣ ಇತರರ ಭಿಕ್ಷೆ. ನಮ್ಮನ್ನು ಸಹಿಸಿಕೊಂಡು, ಕಟ್ಟಿಕೊಂಡ ಕನಸು, ಗುರಿಗಳನ್ನು ತಲುಪುವುದಕ್ಕೆ ಸಹಾಯವಾಗುವಂತೆ ಪರಿಸ್ಥಿತಿಗಳನ್ನು ನಿರ್ಮಿಸಿಕೊಟ್ಟ ಸಮಾಜದ ಸಜ್ಜನರದ್ದು. ಆದ್ದರಿಂದ ನಮ್ಮಿಂದ ಸಾಧ್ಯವಾದಷ್ಟು ಪರೋಪಕಾರದ ಗುಣವನ್ನು ನಾವು ಮೈಗೂಡಿಸಿಕೊಳ್ಳಬೇಕು. ಶತ್ರುಗಳನ್ನೂ ಮಿತ್ರರಂತೆ ಭಾವಿಸಿ ಎಲ್ಲರೊಳಗೊಂದಾಗಿ ಬದುಕು ಕಟ್ಟಿಕೊಳ್ಳುವ ಮೂಲಕ ಇತರರಿಗೂ ನೀವು ಹೀಗೆಯೇ ಬದುಕಿ ಎನ್ನುವುದನ್ನೂ ತೋರಿಸಿಕೊಡುವುದಿದೆಯಲ್ಲ ಅದೇ ನಿಜವಾದ ಬದುಕು.
•ಗಣೇಶ್ ಪವಾರ್