Advertisement

ಮುಂಜಾನೆ ರಸ್ತೆ ಬದಿ ವಾಕಿಂಗ್‌ ವೇಳೆ ಎಚ್ಚರಿಕೆ ವಹಿಸಿ

11:08 PM Mar 03, 2021 | Team Udayavani |

ಬೆಳ್ತಂಗಡಿ: ಇತ್ತೀಚಿನ ದಿನಗಳಲ್ಲಿ ಮಧುಮೇಹ, ರಕ್ತದೊತ್ತಡ, ಕೊಲೆಸ್ಟ್ರಾಲ್‌ ಸಮಸ್ಯೆ ಇರುವವರೇ ಹೆಚ್ಚು. ಮತ್ತೂಂದೆಡೆ ಸದೃಢ ದೇಹಕ್ಕೆ ವ್ಯಾಯಾಮ, ನಡಿಗೆ ಅವಶ್ಯ ಎಂಬುದು ರುಜುವಾತಾಗಿದೆ. ಹಾಗಾಗಿ ಮಂಜಾನೆ ವಾಕಿಂಗ್‌ಗೆ ಹೆಚ್ಚಿನ ಮಂದಿ ಅವಲಂಬಿತರಾಗಿದ್ದಾರೆ. ಆದರೆ ಕೆಲವರು ತಿಳಿದೋ ತಿಳಿಯದೆಯೋ ಹೆದ್ದಾರಿ ನಿಯಮ ಪಾಲಿಸದೆ ಹೆದ್ದಾರಿ ಮೇಲೆ, ಅಕ್ಕಪಕ್ಕ ಮುಂಜಾನೆ ವಾಕಿಂಗ್‌ಗೆ ಮುಂದಾಗುತ್ತಿದ್ದಾರೆ. ಇದು ಅಪಘಾತಕ್ಕೆ ಕಾರಣವಾಗುತ್ತಿದೆ. ರಸ್ತೆಗಳಲ್ಲಿ ಬೀದಿ ದೀಪ ಇಲ್ಲದ ಸ್ಥಳಗಳಲ್ಲಿ, ಮುಂಜಾನೆ ಮಂಜು ಮುಸುಕಿದ ಸಮಯ ವಾಕಿಂಗ್‌ ತೆರಳುತ್ತಿರುವುದರಿಂದ ವಾಹನ ಸವಾರರು ಆಕ್ಷೇಪ ಎತ್ತುವಂತಾಗಿದೆ.

Advertisement

ರಸ್ತೆ ಬದಿ ನಿರ್ಲಕ್ಷ್ಯದ ವಾಕಿಂಗ್‌ನಿಂದಾಗಿ ವಾಹನ ಸವಾರರು ಪೇಚಿಗೆ ಸಿಲುಕುತ್ತಿದ್ದಾರೆ. ಪಟ್ಟಣಗಳಲ್ಲಿ ಹೆಚ್ಚಿನ ಮಂದಿ ಪಾರ್ಕ್‌ಗೆ ತೆರಳಿದರೆ ಇನ್ನು ಕೆಲವರಂತೂ ರಸ್ತೆಯಲ್ಲೇ ಮುಂಜಾನೆ ವಾಕಿಂಗ್‌ ಇಟ್ಟುಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಉಜಿರೆಯ ವ್ಯಕ್ತಿಯೊಬ್ಬರು ವಾಕಿಂಗ್‌ಗೆ ತೆರಳುವಾಗ ಬೈಕ್‌ ಢಿಕ್ಕಿ ಹೊಡೆದ ಪರಿಣಾಮ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದರು. ಇದೇ ಮಾದರಿಯಲ್ಲಿ ಬಹಳಷ್ಟು ಮಂದಿ ವಾಕಿಂಗ್‌ ತೆರಳಿ ಅಪಘಾತದಿಂದ ಮೂಳೆಮುರಿತ ಸಹಿತ ಜೀವಹಾನಿಗೆ ಒಳಗಾಗಿದ್ದಾರೆ.

ಬೆಳ್ಳಂಬೆಳಗ್ಗೆ ತರಕಾರಿ, ಮೀನು ಮಾರಾಟ ಸಹಿತ ದೂರದೂರಿಗೆ ತೆರಳುವ ಬಸ್‌ಗಳ ಓಡಾಟ ಹೆಚ್ಚಿರುತ್ತದೆ. ಮುಂಜಾನೆ ಮಂಜು ಇದ್ದರಂತೂ ಪ್ರಜ್ವಲಿಸುವ ಬೆಳಕು ಅಳವಡಿಸಿದರೂ ರಸ್ತೆಯೇ ಕಾಣದ ಪರಿಸ್ಥಿತಿ ಇರುವಾಗ ರಸ್ತೆ ಹೋಕರು ಕಾಣಲು ಸಾಧ್ಯವಾಗುತ್ತಿಲ್ಲ.

ನಿದ್ದೆ ಮಂಪರಿನಲ್ಲಿ ವಾಹನ ಚಲಾವಣೆ ಸಾಧ್ಯತೆ ಇರುವುದರಿಂದ ಅಪಘಾತ ಸಂಭವಿಸಲು ಮತ್ತಷ್ಟು ಅವಕಾಶ ಮಾಡಿಕೊಟ್ಟಂತಾಗುತ್ತಿದೆ.

ಹೆದ್ದಾರಿ ಅಕ್ಕಪಕ್ಕ ಫ‌ುಟ್‌ಪಾತ್‌ ಅವಶ್ಯ
ಬಹುತೇಕ ಹೆದ್ದಾರಿ ಅಕ್ಕಪಕ್ಕ ಪಾದಚಾರಿಗಳಿಗೆ ನಡೆದಾಡಲು ಪ್ರತ್ಯೇಕ ವ್ಯವಸ್ಥೆಯೇ ಇಲ್ಲ. ಬೆಳ್ತಂಗಡಿ ಮಾತ್ರವಲ್ಲ ಬಹುತೇಕ ಪೇಟೆಗಳಲ್ಲೇ ಪಾದಚಾರಿ ಮಾರ್ಗಗಳಿಲ್ಲ. ಇದರಿಂದ ಅಪಾಯಗಳು ಹೆಚ್ಚು ಸಂಭವಿಸುತ್ತಿವೆ. ವಾಹನ ಸವಾರರಿಗೆ ರಸ್ತೆ ಅಂಚು ಪಕ್ಕನೆ ಗೋಚರಿಸುವಂತೆ ರಿಫ್ಲೆಕ್ಟರ್‌ ಅಥವಾ ಬಿಳಿ ಪಟ್ಟಿ ಅಳವಡಿಸಬೇಕಿದೆ. ಇದನ್ನು ಹೆದ್ದಾರಿ ಇಲಾಖೆಯು ಕೆಲವೊಂದೆಡೆ ಪಾಲಿಸುತ್ತಿಲ್ಲ. ಇದು ಕೂಡ ಅಪಘಾತಕ್ಕೆ ಕಾರಣವಾಗುತ್ತಿದೆ. ಇನ್ನು ಕೆಲವರು ವಾಕಿಂಗ್‌ ಹೋಗುವಾಗ ಸಂಗೀತ ಕೇಳಿಕೊಂಡು ಇಯರ್‌ಫೋನ್‌ ಹಾಕಿ ಹೋಗುವವರೂ ಇದ್ದಾರೆ. ಇವರಿಗೆ ವಾಹನಗಳು ಹಾರ್ನ್ ಹಾಕಿದೂ ಕೇಳಿಸುವುದಿಲ್ಲ. ಈ ರೀತಿ ರಸ್ತೆ ಬದಿ ವಾಕ್‌ ಮಾಡುವುದು ಸರಿಯಲ್ಲ.

Advertisement

ಮಾರ್ಗದರ್ಶನ ಅಗತ್ಯ
ಮುಂಜಾನೆ ವಾಹನಗಳ ಭರಾಟೆ ಕಡಿಮೆ ಇದೆ ಎಂದು ವಾಕಿಂಗ್‌ ಮಾಡುವ ಪದ್ಧತಿ ಸಲ್ಲದು. ಅನಿವಾರ್ಯವಾಗಿ ವಾಕಿಂಗ್‌ಗೆ ಬಂದರೂ ರಿಫ್ಲೆಕ್ಟ್ ಆಗುವಂತ ವಸ್ತ್ರ ಧರಿಸಬೇಕಾಗಿದೆ. ಹೆಚ್ಚಿನ ಮಂದಿ ಕಂದು, ಕಪ್ಪು ಬಣ್ಣದ ವಸ್ತ್ರ ಧರಿಸಿರುತ್ತಾರೆ. ಇತ್ತೀಚೆಗೆ ನನ್ನ ವಾಹನ ಢಿಕ್ಕಿ ಆಗುವ ಸಾಧ್ಯತೆಯಿಂದ ಕೊಂಚವೇ ತಪ್ಪಿದೆ. ದ್ವಿಚಕ್ರ ಸವಾರರು ಸಾವಿಗೀಡಾಗುವ ಸಾಧ್ಯತೆ ಇದೆ. ಈ ಕುರಿತು ಸಂಬಂಧಪಟ್ಟ ಇಲಾಖೆಗಳು ಮಾರ್ಗದರ್ಶನ ನೀಡಬೇಕಿದೆ.
-ಧರಣೇಂದ್ರ, ಶಿಕ್ಷಕರು

ಹೆದ್ದಾರಿ ಸಮೀಪ ವಾಕಿಂಗ್‌ ಸಲ್ಲದು
ರಾ. ಹೆದ್ದಾರಿ ಸಮೀಪ ವಾಕಿಂಗ್‌ ತೆರಳುವವರು ನಿಯಮ ಪಾಲಿಸುವುದು ಅಗತ್ಯ. ಎಷ್ಟೋ ಹಿಟ್‌ ಆ್ಯಂಡ್‌ ರನ್‌ ಪ್ರಕರಣಗಳಲ್ಲಿ ವಾಹನ ಸಿಗದೆ ಸಿ ವರದಿ ಸಲ್ಲಿಕೆಯಾಗಿದ್ದೂ ಇದೆ. ವಾಕಿಂಗ್‌ ಮಾಡುವವರು ಕ್ರೀಡಾಂಗಣ ಅಥವಾ ಪಾರ್ಕ್‌ಗಳನ್ನೇ ಅವಲಂಬಿಸಬೇಕು. ಅನಿವಾರ್ಯವಾದಲ್ಲಿ ಒಳ ರಸ್ತೆಗಳಲ್ಲಿ ಬೀದಿ ದೀಪ ಇರುವಲ್ಲಿ ತೆರಳಬೇಕು.
-ಕುಮಾರ್‌ ಕಾಂಬ್ಳೆ, ಉಪನಿರೀಕ್ಷಕ ಬೆಳ್ತಂಗಡಿ ಸಂಚಾರಿ ಠಾಣೆ

Advertisement

Udayavani is now on Telegram. Click here to join our channel and stay updated with the latest news.

Next