Advertisement

ಸೌಜನ್ಯದಿಂದ ವರ್ತಿಸಿ: ಸರ್ಕಾರಿವೈದ್ಯ, ಆಸ್ಪತ್ರೆ ಸಿಬ್ಬಂದಿಗೆ ಸೂಚನೆ

12:46 PM May 06, 2017 | Team Udayavani |

ಬೆಂಗಳೂರು: ರಸ್ತೆ ಅಪಘಾತ, ಅಪರಿಚಿತ ವಾಹನ ಡಿಕ್ಕಿ, ಹಾವು ಕಡಿತ ಪ್ರಕರಣ ಆಸ್ಪತ್ರೆಗೆ ಬಂದ ಸಂದರ್ಭದಲ್ಲಿ ರೋಗಿಯ ಜತೆ ಬಂದಿರುವ ವ್ಯಕ್ತಿಗಳೊಂದಿಗೆ ಸೌಜನ್ಯದಿಂದ ವರ್ತಿಸಿ ಮಾಹಿತಿ ಪಡೆದು ಧೈರ್ಯ ತುಂಬಬೇಕು. ಈ ವಿಚಾರದಲ್ಲಿ ಯಾವುದೇ ಲೋಪ ಕಂಡುಬಂದರೆ ವೈದ್ಯರು ಹಾಗೂ ಸಿಬ್ಬಂದಿ ನೇರ ಹೊಣೆಯಾಗಿರುತ್ತಾರೆ ಎಂದು ಸರ್ಕಾರ ಆದೇಶ ಹೊರಡಿಸಿದೆ.

Advertisement

ಇತ್ತೀಚೆಗೆ ಆನೇಕಲ್‌ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದ ಘಟನೆಯಿಂದ ಎಚ್ಚೆತ್ತುಕೊಂಡಿರುವ ಆರೋಗ್ಯ ಇಲಾಖೆ, ಸರ್ಕಾರಿ ಆಸ್ಪತ್ರೆಯ ವೈದ್ಯರ ಹಾಗೂ ಸಿಬ್ಬಂದಿ ವರ್ಗದ ಸನ್ನಡತೆಗೆ ಸಂಬಂಧಿಸಿದಂತೆ ಹೊಸ ಸುತ್ತೋಲೆ ಹೊರಡಿಸಿದೆ.
ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯರು, ಸಿಬ್ಬಂದಿ ವರ್ಗವು ತಮ್ಮ ಆಸ್ಪತ್ರೆಗೆ ಅಪಘಾತ ಮಾಡಿ ವಾಹನ ನಿಲ್ಲಿಸದೆ ಹೋಗಿರುವ, ರಸ್ತೆ ಅಪಘಾತ, ವಿಷ ಸೇವನೆ ಅಥವಾ ಹಾವು ಕಚ್ಚಿರುವುದು ಸೇರಿ ಮೆಡಿಕೋ ಕಾನೂನು ಪ್ರಕರಣ ಬಂದ ಸಂದರ್ಭದಲ್ಲಿ ತಕ್ಷಣವೇ ಜತೆಯಲ್ಲಿ ಬಂದವರಿಗೆ ಅಥವಾ ಸಂಬಂಧಿಕರಿಂದ ರೋಗಿಯ ಮಾಹಿತಿ ಪಡೆಯಬೇಕು.

ಅವರೊಡನೆ ಸೌಜನ್ಯ ಹಾಗೂ ಸಮಯೋಚಿತವಾಗಿ ವರ್ತಿಸಿ, ಪ್ರಕರಣವನ್ನು ಕೂಲಂಕಷವಾಗಿ ಪರಿಶೀಲಿಸಿದ ನಂತರ ರೋಗಿಯ ಜತೆಗೆ ಬಂಧವರಿಗೆ ಧೈರ್ಯ ತುಂಬಿ ಕಾನೂನಿನ ಅರಿವು ಮೂಡಿಸಿ, ಸಂಬಂಧಪಟ್ಟ ಠಾಣೆಗೆ ವರದಿ ಸಲ್ಲಿಸುವಂತೆ ನಿರ್ದೇಶಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ರೀತಿಯಲ್ಲಿ ಕ್ರಮ ವಹಿಸಬೇಕು. ಯಾವುದೇ ಲೋಪದೋಷ ಕಂಡುಬಂದಲ್ಲಿ, ಸಂಬಂಧಪಟ್ಟ ವೈದ್ಯರು ಹಾಗೂ ಸಿಬ್ಬಂದಿ ನೇರ ಹೊಣೆ ಮಾಡಿ ಅವರ ಮೇಲೆ ಶಿಸ್ತು ಕ್ರಮ ತೆಗೆದುಕೊಳ್ಳಲಾಗುತ್ತದೆ
ಎಂಬ ಎಚ್ಚರಿಕೆ ನೀಡಿದ್ದಾರೆ.

ಸುತ್ತೋಲೆ ಕಾರಣವಾದ ಘಟನೆ: ಮನೆ ಮುಂದೆ ಆಟವಾಡುತ್ತಿದ್ದ ಮಗುವಿಗೆ ಅಪರಿಚಿತ ಬೈಕ್‌ ಡಿಕ್ಕಿ ಹೊಡೆದಿತ್ತು. ಆ ಮಗು ಆನೇಕಲ್‌ ಸರ್ಕಾರಿ ಆಸ್ಪತ್ರೆಗೆ ದಾಖಲಿಸುವ ಮುನ್ನವೇ ಅಸುನೀಗಿತ್ತು. ಮಗುವಿನ ಶವವನ್ನು ಮನೆಗೆ ಸಾಗಿಸಲು
ಆ್ಯಂಬುಲೆನ್ಸ್‌ಗಾಗಿ ಮಗುವಿನ ತಂದೆ ಮಾಡಿದ ಮನವಿಯನ್ನು ಅಲ್ಲಿನ ವೈದ್ಯರು ನಿರಾಕರಿಸಿದ್ದರು. ನಂತರ ಸಂಬಂಧಿಕರೊಬ್ಬರಿಗೆ ಕರೆ ಮಾಡಿ ಬೈಕ್‌ನಲ್ಲಿ ಮಗುವಿನ ಶವವನ್ನು ಮನೆಗೆ ತೆಗೆದುಕೊಂಡು ಹೋಗಲಾಗಿತ್ತು. ಬೈಕ್‌ ಬರುವ ಅರ್ಧಗಂಟೆ ಮಗುವಿನ ಶವವನ್ನು ತಂದೆ ತನ್ನ ಹೆಗಲ ಮೇಲೆಯೇ ಹೊತ್ತುಕೊಂಡು ಬಂದಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next