Advertisement

ನೂರು ಕೋಟಿ ಮೌಲ್ಯದ ಆಸ್ತಿ ವಶ

10:23 AM Nov 12, 2021 | Team Udayavani |

ಬೆಂಗಳೂರು: ಒತ್ತುವರಿದಾರರ ವಿರುದ್ಧ ತೀವ್ರ ಕಾರ್ಯಾಚರಣೆ ಮುಂದುವರಿಸಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ), ಗುರುವಾರ ಜೆಪಿ ನಗರದ ಆಲಹಳ್ಳಿಯಲ್ಲಿ ಸುಮಾರು ನೂರು ಕೋಟಿ ಮೌಲ್ಯದ ಆಸ್ತಿಯನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಯಿತು.

Advertisement

ಜೆಪಿ ನಗರ ಬಡಾವಣೆಯ ಆಲಹಳ್ಳಿ ಯಲ್ಲಿ ಬಿಡಿಎ ಸ್ವಾಧೀನಪಡಿಸಿಕೊಂಡಿದ್ದ ಸರ್ವೇ ನಂಬರ್‌ 5/7, 6/1, 6/4, 6/5, 7/2, 3, 4 ಮತ್ತು 8ರ ಅಂದಾಜು 4.20 ಎಕರೆ ಜಾಗದಲ್ಲಿ ಅನಧಿಕೃತವಾಗಿ ನಿರ್ಮಾಣಗೊಂಡಿದ್ದ 40 ಶೆಡ್‌ಗಳನ್ನು ಬಿಡಿಎ ಕಾರ್ಯನಿರ್ವಹಣಾ ಎಂಜಿನಿ ಯರ್‌ ಚುಂಚೇಗೌಡ, ಪೊಲೀಸ್‌ ವರಿಷ್ಠಾಧಿಕಾರಿ ಭಾಸ್ಕರ್‌, ಡಿವೈಎಸ್ಪಿ ರವಿಕುಮಾರ್‌ ಸೇರಿದಂತೆ 75ಕ್ಕೂ ಹೆಚ್ಚು ಪೊಲೀಸ್‌ ಸಿಬ್ಬಂದಿ ಭದ್ರತೆಯಲ್ಲಿ ಐದಕ್ಕೂ ಹೆಚ್ಚು ಜೆಸಿಬಿಗಳಿಂದ ತೆರವುಗೊಳಿಸಲಾಯಿತು.

ತೆರವುಗೊಳಿಸಿ, ಮರುವಶಕ್ಕೆ: ಉದ್ದೇಶಿತ ಜಾಗವನ್ನು ಬಿಡಿಎ, ಜೆಪಿ ನಗರ ಬಡಾವಣೆಯ 9ನೇ ಹಂತದ ನಿರ್ಮಾಣಕ್ಕಾಗಿ 1988ರಲ್ಲಿ ಸ್ವಾಧೀನಪಡಿಸಿಕೊಳ್ಳುವ ಸಂಬಂಧ ಪ್ರಾಥಮಿಕ ಅಧಿಸೂಚನೆ ಹೊರಡಿಸಿತ್ತು. ಇದಾದ ಬಳಿಕ 1997ರಲ್ಲಿ ಅಂತಿಮ ಅಧಿಸೂಚನೆ ಹೊರಡಿಸಿ ಜಾಗ ಸ್ವಾಧೀನಕ್ಕೆ ತೆಗೆದುಕೊಂಡಿತ್ತು.

ಇದನ್ನೂ ಓದಿ;- ಕೋವಿಡ್ ಲಸಿಕೆ ಪಡೆದರೆ ಸಿಗತ್ತೆ ಎಲ್‍ಇಡಿ ಟಿವಿ, ವಾಷಿಂಗ್ ಮಶೀನ್

ಆದರೆ, ಪಟ್ಟಭದ್ರ ಹಿತಾಸಕ್ತಿಗಳು ಮತ್ತು ಕೆಲವರು ತಾತ್ಕಾಲಿಕವಾಗಿ 40 ಶೆಡ್‌ಗಳನ್ನು ನಿರ್ಮಾಣ ಮಾಡಿ, ಉದ್ದೇಶಿತ ಜಾಗ ತಮ್ಮದು ಎಂಬಂತೆ ಪ್ರತಿಪಾದಿಸುತ್ತಿದ್ದರು. ಇಂತಹವರ ವಿರುದ್ಧ ಬಿಡಿಎ ಕೋರ್ಟ್‌ ಮೆಟ್ಟಿಲೇರಿತ್ತು. ತೀರ್ಪು ಪ್ರಾಧಿಕಾರದ ಪರವಾಗಿ ಬಂದ ಹಿನ್ನೆಲೆಯಲ್ಲಿ ತೆರವುಗೊಳಿಸಿ, ಮರುವಶಕ್ಕೆ ಪಡೆಯಲಾಯಿತು ಎಂದು ಪ್ರಕಟಣೆ ತಿಳಿಸಿದೆ.

Advertisement

 ಕಾನೂನು ಪ್ರಕಾರ ಆಸ್ತಿ ವಶಕ್ಕೆ: ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಬಿಡಿಎ ಅಧ್ಯಕ್ಷ ಎಸ್‌. ಆರ್‌. ವಿಶ್ವನಾಥ್‌, ಹಲವಾರು ಬಡಾವಣೆಗಳಲ್ಲಿ ಪ್ರಾಧಿಕಾರಕ್ಕೆ ಸೇರಿದ ಸಾವಿರಾರು ಕೋಟಿ ಮೌಲ್ಯದ ಆಸ್ತಿ ಗಳನ್ನು ಒತ್ತುವರಿ ಅಥವಾ ಭೂಕಬಳಿಕೆ ದಾರರು ಕಬಳಿಕೆ ಮಾಡಿದ್ದಾರೆ. ಅವರು ಎಷ್ಟೇ ಪ್ರಭಾವಿಗಳಾಗಿದ್ದರೂ ಕಾನೂನು ಪ್ರಕಾರ ಆಸ್ತಿಯನ್ನು ಮರು ಸ್ವಾಧೀನಕ್ಕೆ ತೆಗೆದುಕೊಳ್ಳಲಾಗುತ್ತದೆ ಎಂದರು.

ಬಿಡಿಎಗೆ ಸೇರಿದ ಸ್ವತ್ತುಗಳನ್ನು ವಶಪಡಿಸಿಕೊಂಡು ನಿವೇಶನಗಳನ್ನಾಗಿ ಅಭಿವೃದ್ಧಿ ಪಡಿಸಿ, ಅವುಗಳನ್ನು ಸಾರ್ವಜನಿಕರಿಗೆ ಹರಾಜಿನ ಮೂಲಕ ಹಂಚಿಕೆ ಮಾಡಬೇಕು ಎಂದು ಇತ್ತೀಚೆಗೆ ಸುಪ್ರೀಂಕೋರ್ಟ್‌ ನಿರ್ದೇಶನ ನೀಡಿದೆ. ಅದರಂತೆ ಬಿಡಿಎ ಆಸ್ತಿಗಳನ್ನು ವಶಪಡಿಸಿಕೊಂಡು ಹಂತ -ಹಂತವಾಗಿ ನಿವೇಶನಗಳನ್ನಾಗಿ ಅಭಿವೃದ್ಧಿಪಡಿಸಿ ಹರಾಜು ಪ್ರಕ್ರಿಯೆ ನಡೆಸಲಾಗುವುದು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next