Advertisement

60 ಕೆರೆಗಳ ನಿರ್ವಹಣೆ ಹೊಣೆ ಬಿಡಿಎಗೆ

12:00 PM Feb 27, 2017 | |

ಬೆಂಗಳೂರು: ಬೆಳ್ಳಂದೂರು, ವರ್ತೂರು ಸೇರಿದಂತೆ ನಗರದ 60 ಕೆರೆಗಳ ನಿರ್ವಹಣೆ ಹೊಣೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಹೆಗಲೇರಿದೆ. ಈ ಮೊದಲು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸುಪರ್ದಿಯಲ್ಲಿದ್ದ ಈ ಕೆರೆಗಳ ನಿರ್ವಹಣೆಯನ್ನು ಬಿಡಿಎಯಲ್ಲೇ ಮುಂದುವರಿಸಲು ನಗರಾಭಿವೃದ್ಧಿ ಇಲಾಖೆ ಇತ್ತೀಚೆಗೆ ಆದೇಶ ಹೊರಡಿಸಿದೆ. 

Advertisement

ಜತೆಗೆ ಕೊಳಚೆ ನೀರು, ನೊರೆ, ಬೆಂಕಿಯಿಂದಾಗಿ ಸದಾ ಸುದ್ದಿಯಲ್ಲಿರುವ ಬೆಳ್ಳಂದೂರು ಮತ್ತು ವರ್ತೂರು ಕೆರೆಗಳ ಸಮಗ್ರ ಅಭಿವೃದ್ಧಿ ಕಾಮಗಾರಿಗಾಗಿ ಪ್ರಾಧಿಕಾರದ ಆಯುಕ್ತರ ನೇತೃತ್ವದಲ್ಲಿ “ಮೇಲುಸ್ತುವಾರಿ ಸಮಿತಿ’ ರಚಿಸಲು ತೀರ್ಮಾನಿಸಲಾಗಿದೆ. 

ಬೆಳ್ಳಂದೂರು ಮತ್ತು ವರ್ತೂರು ಕೆರೆಗಳ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದಂತೆ ಬೆಂಗಳೂರು ಅಭಿವೃದ್ಧಿ ಹಾಗೂ ನಗರ ಯೋಜನಾ ಸಚಿವ ಕೆ.ಜೆ. ಜಾರ್ಜ್‌ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಈ ಕುರಿತು ನಗರಾಭಿವೃದ್ಧಿ ಇಲಾಖೆ ಅಧಿಸೂಚನೆ ಹೊರಡಿಸಿದೆ. ಬೆನ್ನಲ್ಲೇ, ಬೆಳ್ಳಂದೂರು ಕೆರೆ ಅಭಿವೃದ್ಧಿಗೆ ಸಂಬಂಧಿಸಿದ ಕಾಮಗಾರಿಗಳಿಗೆ ಬಿಡಿಎ ಟೆಂಡರ್‌ ಕೂಡ ಕರೆದಿದೆ.  

ಗೊಂದಲಕ್ಕೆ ತೆರೆ: ಈ ಮೊದಲು 60 ಕೆರೆಗಳೂ ಬಿಬಿಎಂಪಿ ಸುಪರ್ದಿಯಲ್ಲಿದ್ದವು. ಆದರೆ, ಕೆರೆಗಳ ನಿರ್ವಹಣೆ ಹೊಣೆ ಯಾರಿಗೆ ಎಂಬ ಗೊಂದಲ ಉಂಟಾಗಿತ್ತು. ಈಗ ಅದಕ್ಕೆ ತೆರೆಬಿದ್ದಿದೆ. ಕೆರೆಗಳ ಒಡೆತನ ಸರ್ಕಾರದ್ದಾಗಿದ್ದು, ಅಗತ್ಯಬಿದ್ದಾಗ ಹಿಂಪಡೆಯುವ ಅಥವಾ ಮರುಹಂಚಿಕೆ ಮಾಡುವ ಹಕ್ಕು ಸರ್ಕಾರದ್ದೇ ಆಗಿರುತ್ತದೆ. ಕೆರೆಗಳನ್ನು ಪುನರುಜ್ಜೀವನ, ಸಂರಕ್ಷಣೆ ಮತ್ತು ಅಭಿವೃದ್ಧಿ ಉದ್ದೇಶಕ್ಕಾಗಿ ಮಾತ್ರ ಅವುಗಳನ್ನು ಹಸ್ತಾಂತರಿಸಲಾಗಿದೆ. 

ಅಭಿವೃದ್ಧಿ ಚಟುವಟಿಕೆ ಕೈಗೆತ್ತಿಕೊಳ್ಳುವ ಮುನ್ನ ಕಂದಾಯ ಇಲಾಖೆ ಮತ್ತು ಬೆಂಗಳೂರು ಮಹಾನಗರ ಕಾರ್ಯಪಡೆಯ ಅಗತ್ಯ ನೆರವಿನೊಂದಿಗೆ ಕೆರೆಗಳ ಒತ್ತುವರಿ ತೆರವುಗೊಳಿಸಬೇಕು ಎನ್ನುವುದು ಸೇರಿದಂತೆ ಹಲವು ಷರತ್ತುಗಳನ್ನು ಇಲಾಖೆ ವಿಧಿಸಿದೆ. ಕೆರೆಗಳ ನಿರ್ವಹಣೆಗೆ ನೂರಾರು ಕೋಟಿ ರೂ. ಖರ್ಚಾಗುತ್ತದೆ. ಈ ಹಿನ್ನೆಲೆಯಲ್ಲಿ ಕೆರೆಗಳ ನಿರ್ವಹಣೆ ವಹಿಸಿಕೊಳ್ಳುವ ಸಂಬಂಧ ಬಿಬಿಎಂಪಿ ಮತ್ತು ಬಿಡಿಎಗಳ ನಡುವೆ ಮುಸುಕಿನ ಗುದ್ದಾಟ ಏರ್ಪಟ್ಟಿತ್ತು. ಹೀಗಾಗಿ ಕೆರೆಗಳ ನಿರ್ವಹಣೆ ಹೊಣೆಯನ್ನು ಯಾರಿಗೆ ನೀಡಬೇಕು ಎಂಬ ಬಗ್ಗೆ ಚರ್ಚಿಸಿ ಈ ತೀರ್ಮಾನಕ್ಕೆ ಬರಲಾಗಿದೆ.

Advertisement

ಬೆಳ್ಳಂದೂರು ಕೆರೆ- ತಜ್ಞರ ವರದಿ: ಈ ಮಧ್ಯೆ ಬೆಳ್ಳಂದೂರು ಕೆರೆ (919 ಎಕರೆ, 17 ಗುಂಟೆ) ಅತ್ಯಂತ ದೊಡ್ಡದಾಗಿದ್ದರೆ, ಬೆಂಗಳೂರು ಉತ್ತರ ತಾಲೂಕಿನ ಚಿಕ್ಕಬೆಟ್ಟಿಹಳ್ಳಿ ಕೆರೆ (1 ಎಕರೆ, 32 ಗುಂಟೆ) ಅತ್ಯಂತ ಚಿಕ್ಕದಾಗಿದೆ. ಇವೆರಡೂ ಕೆರೆಗಳಲ್ಲಿ ನೀರಿನ ಸಂಗ್ರಹ ಸಾಮರ್ಥ್ಯ ಕ್ರಮವಾಗಿ 5.5 ಹಾಗೂ 1.6 ಕ್ಯುಬಿಕ್‌ ಮೀಟರ್‌. ನಿತ್ಯ ಕ್ರಮವಾಗಿ 480 ಎಂಎಲ್‌ಡಿ ಹಾಗೂ 60-70 ಎಂಎಲ್‌ಡಿ ಕೊಳಚೆ ನೀರು ಸೇರ್ಪಡೆಗೊಳ್ಳುತ್ತಿದೆ.

ಕೆರೆಗಳಲ್ಲಿ ಸೇರಿಕೊಂಡ ರಾಸಾಯನಿಕ ವಸ್ತುಗಳಿಂದ ವಿಪರೀತ ನೊರೆ ಸೃಷ್ಟಿಯಾಗಿ, ಕೆರೆಯಲ್ಲಿ ಈಚೆಗೆ ಬೆಂಕಿ ಕೂಡ ಕಾಣಿಸಿಕೊಂಡಿತ್ತು. ತುರ್ತಾಗಿ ಈ ಎರಡೂ ಕೆರೆಗಳ ನಿರ್ವಹಣೆಯನ್ನು ಕೈಗೆತ್ತಿಕೊಳ್ಳಬೇಕು ಎಂದು ಬೆಳ್ಳಂದೂರು ಕೆರೆ ಪುನರುಜ್ಜೀವಕ್ಕೆ ಸಂಬಂಧಿಸಿದಂತೆ ರಚಿಸಲಾದ ತಜ್ಞರ ಸಮಿತಿ ಸಲ್ಲಿಸಿದ ವರದಿಯಲ್ಲಿ ಶಿಫಾರಸು ಮಾಡಲಾಗಿದೆ. ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಮಹೇಂದ್ರ ಜೈನ್‌ ನೇತೃತ್ವದಲ್ಲಿ ತಜ್ಞರ ಸಮಿತಿ ರಚಿಸಲಾಗಿತ್ತು. 

ಅಪರೂಪದ ಮೀನುಗಳ ಕಣ್ಮರೆ
ವರ್ತೂರು ಕೆರೆಯಲ್ಲಿ ವಿಪರೀತ ರಾಸಾಯನಿಕ ಅಂಶಗಳನ್ನು ಒಳಗೊಂಡಂತೆ ಸಂಸ್ಕರಿಸದ ಕೊಳಚೆ ನೀರು ಸೇರ್ಪಡೆಯಿಂದ ಪ್ರಮುಖ ಮೀನಿನ ಪ್ರಬೇಧಗಳು ಕಣ್ಮರೆಯಾಗುತ್ತಿವೆ ಎಂದು 34 ಪುಟಗಳ ವರದಿಯಲ್ಲಿ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. 

ವರ್ತೂರು ಕೆರೆಯಲ್ಲಿ ಕಾಟ್ಲಾ, ರೋಹು, ಮ್ರಿಗಲ್‌, ಆಫ್ರಿಕನ್‌ ಕ್ಯಾಟ್‌ಫಿಶ್‌, ತಿಲಾಪಿಯಾ, ಕ್ಲಾರಿಯಾಸ್‌ ಬಾಟ್ರಾಚುಸ್‌  (clarias batrachus), ಹಿಟರೊಪ್ನಿಯಾಸ್ಟಸ್‌ ಫಾಸ್ಲಿಸ್‌ ((heteropneustes fosslis), ಮಿಸ್ಟಸ್‌ ಡಿಟ್ಟಾಟಸ್‌ ((mystus ditattas), ಮೈನರ್‌ ಕಾಪ್ಸ್‌ ((minor carps) ಮೀನುಗಳಿವೆ. 1962ರಿಂದ ಈವರೆಗೆ ಈ ತಳಿಗಳು ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿವೆ ಎಂದು ವರದಿಯಲ್ಲಿ ಉಲ್ಲೇಖೀಸಲಾಗಿದೆ. 

ಸೊಳ್ಳೆಯಿಂದ ಮುಕ್ತಿಗೆ ಪ್ರತಿವರ್ಷ 697 ರೂ. 
ತಜ್ಞರ ಸಮಿತಿಯ ವರದಿಯಲ್ಲಿ ಕೆರೆಗಳು ಕಲುಷಿತಗೊಂಡಿರುವುದರಿಂದ ಸುತ್ತಲಿನ ಜನರ ಸಾಮಾಜಿಕ ಆರ್ಥಿಕತೆ ಮೇಲೂ ಪರಿಣಾಮ ಬೀರಿದೆ. ಬೆಳ್ಳಂದೂರು ಮತ್ತು ವರ್ತೂರು ಕೆರೆಗಳು ಮಲೀನಗೊಂಡಿದ್ದರಿಂದ ಸೊಳ್ಳೆಗಳ ಉತ್ಪತ್ತಿ ವಿಪರೀತ ಹೆಚ್ಚಾಗಿದೆ. ಇವುಗಳಿಂದ ಮುಕ್ತಿ ಹೊಂದಲು ಸುತ್ತಲಿನ ಪ್ರತಿ ಕುಟುಂಬಗಳು ವಾರ್ಷಿಕ ತಲಾ 697 ರೂ. 
ಖರ್ಚು ಮಾಡುತ್ತಿವೆ ಎಂದೂ ವರದಿಯಲ್ಲಿ ಉಲ್ಲೇಖೀಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next