Advertisement

ಬಿಡಿಎ ಮನೆ ಮಾರಾಟ ಹೊಣೆ ಖಾಸಗಿಗೆ

12:54 AM Jun 03, 2019 | Lakshmi GovindaRaj |

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನಗರದ ವಿವಿಧಡೆ ಈಗಾಗಲೇ ನಿರ್ಮಿಸಿರುವ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಫ್ಲಾಟ್‌ಗಳು ಮಾರಾಟವಾಗದೆ ಹಾಗೇ ಉಳಿದಿವೆ. ಆ ಹಿನ್ನೆಲೆಯಲ್ಲಿ ಮಾರುಕಟ್ಟೆಯನ್ನು ಸೃಷ್ಟಿಸಲು ವಿಫ‌ಲವಾಗಿರುವ ಬಿಡಿಎ ಇದೀಗ ಫ್ಲಾಟ್‌ಗಳ ಮಾರಾಟವನ್ನು ಖಾಸಗಿಯವರಿಗೆ ವಹಿಸುವ ಕುರಿತಂತೆ ಆಲೋಚನೆ ನಡೆಸಿದೆ. ಈ ಸಂಬಂಧ ಸದ್ಯದಲ್ಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವ ಸಾಧ್ಯತೆಯಿದೆ.

Advertisement

ದೊಡ್ಡಬನಹಳ್ಳಿ, ವಲಗೇರಹಳ್ಳಿ, ಆಲೂರು, ಕಣಮಿಣಿಕೆ, ಮಾಲಗಾಳ ಸೇರಿದಂತೆ ಬೆಂಗಳೂರಿನ ಹಲವು ಕಡೆಗಳಲ್ಲಿ ಈಗಾಗಲೇ ವಿವಿಧ ಹಂತಗಳಲ್ಲಿ 2ಬಿಎಚ್‌ಕೆ, 3ಬಿಎಚ್‌ಕೆ ಫ್ಲಾಟ್‌ಗಳನ್ನು ನಿರ್ಮಾಣ ಮಾಡಿದೆ. ಹೀಗೆ ನಿರ್ಮಾಣ ಮಾಡಲಾಗಿರುವ ಸುಮಾರು 2,302 ಫ್ಲಾಟ್‌ಗಳು ಖರೀದಿಯಾಗದೆ ಉಳಿದಿ ಕೊಂಡಿದ್ದು, ಮಾರುಕಟ್ಟೆ ಸೃಷ್ಟಿಸುವುದೇ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.

ದಾಸನಪುರ ಹೋಬಳಿಯ ಆಲೂರು ಸಮೀಪ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಮೊದಲ ಹಂತದಲ್ಲಿ ನಿರ್ಮಾಣ ಮಾಡಿರುವ 2ಬಿಎಚ್‌ಕೆಯ ಸುಮಾರು 79 ಫ್ಲಾಟ್‌ಗಳನ್ನು ಕೊಳ್ಳುವವರು ಇಲ್ಲವಾಗಿದೆ. ಇದರ ಜೊತೆಗೆ ಕೆಂಗೇರಿ ಹೋಬಳಿಯ ಕಣಮಿಣಿಕೆಯಲ್ಲಿ 2ನೇ ಹಂತದಲ್ಲಿ ನಿರ್ಮಾಣ ಮಾಡಲಾಗಿರುವ 2ಬಿಎಚ್‌ಕೆಯ 533 ಮತ್ತು 3ನೇ ಹಂತದಲ್ಲಿ ನಿರ್ಮಾಣ ಮಾಡಲಾಗಿರುವ ಸುಮಾರು 274 ಫ್ಲಾಟ್‌ಗಳು ಖರೀದಿಗೆ ಕೇಳುವವರು ಇಲ್ಲದೆ ಉಳಿದು ಕೊಂಡಿವೆ.

ಜತೆಗೆ ಕೊಮ್ಮಘಟ್ಟದಲ್ಲಿ ಮೊದಲನೇ ಹಂತದಲ್ಲಿ ನಿರ್ಮಾಣ ಮಾಡಿರುವ 447 ಮತ್ತು 2ನೇ ಹಂತದಲ್ಲಿ ನಿರ್ಮಾಣ ಮಾಡಲಾಗಿರುವ 307 ಫ್ಲಾಟ್‌ಗಳು ಬಿಕರಿಯಾಗದೆ ಹಾಗೆಯೇ ಉಳಿದು ಕೊಂಡಿದ್ದು ,ಇವುಗಳನೆಲ್ಲಾ ಹೇಗೆ ಮಾರಾಟ ಮಾಡಬೇಕು ಎಂಬ ಆಲೋಚನೆ ಬಿಡಿಎಗೆ ಶುರುವಾಗಿದೆ.

ಹಾಗೇ ಮಾಳಗಾಲದಲ್ಲಿ 2ನೇ ಹಂತದಲ್ಲಿ ನಿರ್ಮಾಣ ಮಾಡಿರುವ 123 ಫ್ಲಾಟ್‌ಗಳು, ಆಲೂರಿನಲ್ಲಿ 2ನೇ ಹಂತದಲ್ಲಿ ನಿರ್ಮಾಣ (ಟೈಪ್‌3) ಮಾಡಲಾಗಿರುವ 40 ಫ್ಲಾಟ್‌ಗಳು ಇನ್ನೂ ಖರೀದಿಯಾಗಿಲ್ಲ. ದೊಡ್ಡಬನಹಳ್ಳಿಯಲ್ಲಿ 2ನೇ ಹಂತದಲ್ಲಿ ನಿರ್ಮಾಣ ಮಾಡಲಾಗಿರುವ 139 ಫ್ಲಾಟ್‌ಗಳು ಕೂಡ ಮಾರಾಟವಾಗಿಲ್ಲ.

Advertisement

ಭವಿಷ್ಯದಲ್ಲಿ ಆರ್ಥಿಕ ಸಮಸ್ಯೆ: ಬಿಡಿಎ ಈಗಾಗಲೇ ನಿರ್ಮಾಣವಾಗಿರುವ 2 ಸಾವಿರಕ್ಕೂ ಹೆಚ್ಚು ಫ್ಲಾಟ್‌ಗಳು ಮಾರಾಟವಾಗದೇ ಉಳಿದಿರುವುದರಿಂದ ಬೆಂಗಳೂರು ಅಭಿವೃದ್ದಿ ಪ್ರಾಧಿಕಾರಕ್ಕೆ ಭವಿಷ್ಯತ್ತಿನಲ್ಲಿ ಆರ್ಥಿಕ ತೊಂದರೆ ಸೇರಿದಂತೆ ಹಲವು ರೀತಿಯ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ. ಈಗಾಗಲೇ ಹೊಸ ಹೊಸ ಯೋಜನೆಗಳನ್ನು ಬಿಡಿಎ ರೂಪಿಸಿದ್ದು ಆ ಯೋಜನೆಗೆ ಆರ್ಥಿಕ ಸಂಪನ್ಮೂಲ ಹೊಂದಿಕೆ ಮಾಡಿ ಕೊಳ್ಳಬೇಕಾಗಿದೆ.

ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ಬಿಡಿಎ ತಾನು ನಿರ್ಮಿಸಿರುವ ಫ್ಲಾಟ್‌ಗಳ ಮಾರಾಟವನ್ನು ಖಾಸಗಿಯವರಿಗೆ ವಹಿಸುವ ಕೊಡುವ ಕುರಿತಂತೆ ಚಿಂತನೆ ನಡೆಸಿದೆ. ಸದ್ಯದಲ್ಲೇ ಸರ್ಕಾರಕ್ಕೆ ಈ ಕುರಿತ ಪ್ರಸ್ತಾವನೆ ಸಲ್ಲಿಸುವ ಸಾಧ್ಯತೆ ಇದೆ ಎಂದು ಬಿಡಿಎನ ಹಿರಿಯ ಅಧಿಕಾರಿಯೊಬ್ಬರು “ಉದಯವಾಣಿ’ಗೆ ಮಾಹಿತಿ ನೀಡಿದ್ದಾರೆ.

ರಿಯಾಯ್ತಿ ನೀಡಿದರೂ ಪ್ರಯೋಜವಿಲ್ಲ: ಈ ಹಿಂದೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಅವರ ನೇತೃತ್ವದಲ್ಲಿ ನಡೆದ ಬಿಡಿಎ ಆಡಳಿತ ಮಂಡಳಿಯ ಸಭೆಯಲ್ಲಿ ಮೈಸೂರು ರಸ್ತೆಯ ವ್ಯಾಪ್ತಿಯ ಕೊಮ್ಮಘಟ್ಟ ಮತ್ತು ಕಣಮಿಣಿಕೆ ಬಳಿ ನಿರ್ಮಿಸಿರುವ ಅಪಾರ್ಟ್‌ಮೆಂs…ಗಳಲ್ಲಿ, ಒಂದು ಫ್ಲಾಟ್‌ ಖರೀದಿಸಿದರೆ ಶೇ.5 ಮತ್ತು ಒಂದಕ್ಕಿಂತ ಹೆಚ್ಚು ಫ್ಲಾಟ್‌ ಖರೀದಿಸಿದರೆ ಶೇ.10ರಷ್ಟು ರಿಯಾಯ್ತಿ ನೀಡಲಾಗಿತ್ತು. ಆದರೂ ನಿರೀಕ್ಷೆಯಷ್ಟು ಮಾರಾಟವಾಗಿಲ್ಲ ಎಂದು ಬಿಡಿಎ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಾರಾಟವಾಗದ ಫ್ಲಾಟ್‌ಗಳ ವಿವರ
ನಿರ್ಮಾಣ ಸ್ಥಳ ಬಾಕಿ ಫ್ಲಾಟ್‌ಗಳು
ಆಲೂರು 1ನೇ ಹಂತ 79
ಆಲೂರು 2ನೇ ಹಂತ 40
ಕಣಮಿಣಿಕೆ 2ನೇ ಹಂತ 533
ಕಣಮಿಣಿಕೆ 3ನೇ ಹಂತ 274
ಕೊಮ್ಮಘಟ್ಟ 1ನೇ ಹಂತ 447
ಕೊಮ್ಮಘಟ್ಟ 2ನೇ ಹಂತ 307
ಮಾಳಗಾಳ 2ನೇ ಹಂತ 123
ದೊಡ್ಡಬನಹಳ್ಳಿ 2ನೇ ಹಂತ 139

ಬಿಡಿಎ ನಿರ್ಮಿಸಿರುವ ಫ್ಲಾಟ್‌ಗಳ ಮಾರಾಟದ ಹೊಣೆಯನ್ನು ಖಾಸಗಿಯವರಿಗೆ ನೀಡುವ ಕುರಿತು ಚಿಂತನೆ ನಡೆಸಲಾಗಿದೆ. ಈ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಸರ್ಕಾರ ಕೈಗೊಳ್ಳುವ ತೀರ್ಮಾನದಂತೆ ಮುನ್ನಡೆಯಲಾಗುವುದು.
-ರಾಕೇಶ್‌ ಸಿಂಗ್‌, ಬಿಡಿಎ ಆಯುಕ್ತ

* ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next