Advertisement

ಬಿಡಿಎ ತೆಕ್ಕೆಗೆ 40 ಎಕರೆಗೂ ಅಧಿಕ ಆಸ್ತಿ

12:37 AM Mar 18, 2020 | Lakshmi GovindaRaj |

ಬೆಂಗಳೂರು: ತನ್ನ ಸ್ವತ್ತಿನಲ್ಲಿ ನಿರ್ಮಿಸಿರುವ ಅನಧಿಕೃತ ಕಟ್ಟಡ, ಶೆಡ್‌ಗಳ ತೆರವು ಕಾರ್ಯಾಚರಣೆಯನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ನಡೆಸುತ್ತಿದ್ದು, ಮೂರು ವರ್ಷದಲ್ಲಿ ವಿವಿಧ ಕಡೆ ನೂರಾರು ಕೋಟಿ ರೂ. ಮೌಲ್ಯದ 40 ಎಕರೆಗೂ ಅಧಿಕ ಆಸ್ತಿ ವಶಕ್ಕೆ ಪಡೆದಿದೆ.

Advertisement

ನಗರದ ಹಲವೆಡೆ ಪ್ರಾಧಿಕಾರದ ಆಸ್ತಿಗಳಿದ್ದು, ಕೆಲ ಆಸ್ತಿಗಳು ಒತ್ತುವರಿಯಾಗಿವೆ. ಬಿಡಿಎ ಪೊಲೀಸ್‌ ದಳ ಸಹಕಾರದಲ್ಲಿ ಅಧಿಕಾರಿಗಳು ತೆರವು ಕಾರ್ಯ ನಡೆಸುತ್ತಿದ್ದು, 2017-18ನೇ ಸಾಲಿನಲ್ಲಿ ವಿವಿಧ ಬಡಾವಣೆಗಳಲ್ಲಿ 24.10 ಎಕರೆ, 2018-19ನೇ ಸಾಲಿನಲ್ಲಿ 12.24 ಎಕರೆ, 2019-20ನೇ ಸಾಲಿನಲ್ಲಿ 5 ಎಕರೆಗೂ ಅಧಿಕ ಜಾಗವನ್ನು ತೆರವುಗೊಳಿಸಿ ಪ್ರಾಧಿಕಾರದ ಸುಪರ್ದಿಗೆ ಪಡೆಯಲಾಗಿದೆ.

2017-18ನೇ ಸಾಲಿನಲ್ಲಿ ಎಚ್‌ಬಿಆರ್‌1ನೇ ಹಂತ, 5ನೇ ಬ್ಲಾಕ್‌ ಬಡಾವಣೆ, ವಿಶ್ವೇಶ್ವರಯ್ಯ ಬಡಾವಣೆ, ಬಿಟಿಎಂ 2ನೇ ಹಂತ, ಎಚ್‌ಎಸ್‌ಆರ್‌ 6ನೇ ಸೆಕ್ಟರ್‌, ಎಚ್‌ಎಸ್‌ಆರ್‌ 7ನೇ ಸೆಕ್ಟರ್‌, ಎಂಆರ್‌ಸಿಆರ್‌ ಬಡಾವಣೆ, ಬಿಟಿಎಂ ಲೇಔಟ್‌, ಎಚ್‌ಎಸ್‌ಆರ್‌ ಲೇಔಟ್‌, ಬನಶಂಕರಿ 6ನೇ ಹಂತ, ಸಾದರಮಂಗಲ ಮತ್ತು ಹೂಡಿ , ಜೆ.ಪಿ.ನಗರ 2ನೇ ಫೇಸ್‌ ಬಡಾವಣೆ, ಜ್ಞಾನಭಾರತಿ ಬಡಾವಣೆ, ಅರ್ಕಾವತಿ ಬಡಾವಣೆ , ರಾಜೀವ್‌ ಗಾಂಧಿ ಬಡಾವಣೆಗಳಲ್ಲಿ ಒತ್ತುವರಿಯಾದ ಹಲವು ಜಾಗವನ್ನು ಬಿಡಿಎ ಅಧಿಕಾರಿಗಳು ತೆರವುಗೊಳಿಸಿದ್ದಾರೆ.

2018-19ರ ಸಾಲಿನಲ್ಲಿ ಎಚ್‌.ಎಸ್‌.ಆರ್‌ 1ನೇ ಸೆಕ್ಟರ್‌, ಸರ್‌.ಎಂ.ವಿಶ್ವೇಶ್ವರಯ್ಯ ಬಡಾವಣೆ, ಚಂದ್ರಾ ಬಡಾವಣೆ, ಬನಶಂಕರಿ 3ನೇ ಹಂತ , ಕೋರಮಂಗಲ 4ನೇ ಬ್ಲಾಕ್‌, ಎಸ್‌ಎಂವಿಎಲ್‌ 7ನೇ ಬ್ಲಾಕ್‌ಗಳಲ್ಲಿ ಒತ್ತುವರಿಯಾದ ಕೆಲವು ಜಾಗವನ್ನು ತೆರವುಗೊಳಿಸಿದ್ದಾರೆ.

2019-20ನೇ ಸಾಲಿನಲ್ಲಿ ರಾಜಾಜಿನಗರ ಕೈಗಾರಿಕಾ ಬಡಾವಣೆಯ (ಸಾಣೆಗುರುವನಹಳ್ಳಿ ಗ್ರಾಮ) 10 ಕೋಟಿ ರೂ. ಮೌಲ್ಯದ 8 ಸಾವಿರ ಅಡಿ ಜಾಗ ತೆರವು, ನಾಗರಭಾವಿ ಗ್ರಾಮದ 40 ಕೋಟಿ ರೂ. ಬೆಲೆಬಾಳುವ 24 ಗುಂಟೆ ಜಾಗ ತೆರವು, ನಾಗವಾರ ಗ್ರಾಮದ 300 ಕೋಟಿ ರೂ. ಬೆಲೆಬಾಳುವ ಜಾಗ ತೆರವು ಸೇರಿದಂತೆ ಹಲವು ಜಾಗಗಳನ್ನು ತೆರವುಗೊಳಿಸಿದ್ದಾರೆ.

Advertisement

ಪ್ರಭಾವಿಗಳಿಂದ ಒತ್ತುವರಿ?: ಬಿಡಿಎ ಹಲವಾರು ವರ್ಷಗಳಿಂದ ಒತ್ತುವರಿಯಾದ ಆಸ್ತಿಗಳನ್ನು ತೆರವುಗೊಳಿಸಿ ಜಾಗದಲ್ಲಿ ಪ್ರಾಧಿಕಾರದ ಬೋರ್ಡ್‌ ಹಾಕಲಾಗುತ್ತಿದೆ. ಆದರೂ, ಒತ್ತುವರಿ ತೆರವು ಇನ್ನೂ ಬಾಕಿ ಇದೆ. ಬಿಡಿಎ ಜಾಗವನ್ನು ಕೆಲ ಪ್ರಭಾವಿ ನಾಯಕರೇ ಒತ್ತುವರಿ ಮಾಡಿಕೊಂಡಿದ್ದಾರೆ ಎಂಬ ಅನುಮಾನಗಳು ಸಾರ್ವಜನಿಕ ವಲಯದಿಂದ ವ್ಯಕ್ತವಾಗುತ್ತಿವೆ. ಕೆಲ ಆಸ್ತಿಗಳನ್ನು ತೆರವುಗೊಳಿಸಲು ಅಧಿಕಾರಿಗಳು ಪರದಾಡಬೇಕಿದ್ದು, ಕಳೆದ 3 ವರ್ಷದಲ್ಲಿ ಒತ್ತುವರಿ ತೆರವು ಪ್ರಮಾಣ ಕಡಿಮೆಯಾಗಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.

ದೊಡ್ಡ ಕಾರ್ಯಾಚರಣೆಗೆ ಚಿಂತನೆ: ಮುಂದಿನ ದಿನಗಳಲ್ಲಿ 5 ಸಾವಿರ ಕೋಟಿ ರೂ. ಮೌಲ್ಯದಷ್ಟು ಒತ್ತುವರಿ ಯಾಗಿರುವ ಜಾಗವನ್ನು ಬಿಡಿಎ ವಶಪಡಿಸಿಕೊಳ್ಳುವ ಕಾರ್ಯಾಚರಣೆಗೆ ಚಿಂತನೆ ನಡೆಸಲಾಗಿದೆ. ಈ ಸಂಬಂಧ ಸರ್ವೇ ಹಾಗೂ ಸ್ಥಳ ಗುರುತಿಸುವ ಕಾರ್ಯ ನಡೆಯುತ್ತಿದೆ. ಹಂತ -ಹಂತವಾಗಿ ತೆರವು ಮಾಡಲಾಗುವುದು ಎಂದು ಪ್ರಾಧಿಕಾರದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಒತ್ತುವರಿಯಾದ ಪ್ರಾಧಿಕಾರದ ಆಸ್ತಿ ಎಷ್ಟು ಎಂಬುದರ ಬಗ್ಗೆ ಸರ್ವೇ ನಡೆಸಲು ಅಧಿಕಾರಿಗಳಿಗೆ ತಿಳಿಸಲಾಗಿದೆ. ಒಂದು ತಿಂಗಳೊಳಗೆ ವರದಿ ನೀಡುವಂತೆ ಸೂಚನೆ ನೀಡಲಾಗಿದೆ.
-ಡಾ.ಜಿ.ಸಿ.ಪ್ರಕಾಶ್‌, ಬಿಡಿಎ ಆಯುಕ್ತ

* ಮಂಜುನಾಥ ಗಂಗಾವತಿ

Advertisement

Udayavani is now on Telegram. Click here to join our channel and stay updated with the latest news.

Next